ADVERTISEMENT

ಮಕ್ಕಳ ಶಾಲೆಯ ಆಯ್ಕೆಗೆ ಮುನ್ನ...

ಪ್ರಜಾವಾಣಿ ವಿಶೇಷ
Published 12 ಮೇ 2024, 23:30 IST
Last Updated 12 ಮೇ 2024, 23:30 IST
   

ಕೆಲವು ಪುಟ್ಟ ಮಕ್ಕಳು ಹಾಗೂ ಅವರ ಪಾಲಕರು ಕೂಡ ನಾನಾ ಕಾರಣಗಳಿಂದಾಗಿ ಶಾಲೆ ಬದಲಾವಣೆ ಬಗ್ಗೆ ಯೋಚಿಸುತ್ತಿರುತ್ತಾರೆ. ನಮ್ಮ ಮಕ್ಕಳು ಓದುವ ಶಾಲೆ ಹೇಗಿರಬೇಕು ಎಂಬುದೇ ಒಂದಿಷ್ಟು ಗೊಂದಲದ ಗೂಡಾಗುವ ಸನ್ನಿವೇಶ ಎದುರಾಗುತ್ತದೆ. ನಮ್ಮ ಮಕ್ಕಳು ಓದುವ ಶಾಲೆ ಹೇಗಿರಬೇಕು? ಎಂದು ಹಲವು ದಿಕ್ಕಿನಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.

ಮಂಡಳಿಯ ಆಯ್ಕೆ: ಕರ್ನಾಟಕ ರಾಜ್ಯ ಶಾಲಾ ಮಂಡಳಿ, ICSE, CBSE, SSC, IG, ಕೇಂಬ್ರಿಡ್ಜ್ ಆಯ್ಕೆಗಳಿವೆ. ಯಾವ ಬೋರ್ಡ್ ನಮ್ಮ ಮಗುವಿನ ಗ್ರಹಿಕಾ ಶಕ್ತಿಗೆ ಸೂಕ್ತ ಎಂಬುದನ್ನು ಗಮನಿಸಿ, ಶಾಲೆಗಳ ಹುಡುಕಾಟವನ್ನು ಆರಂಭಿಸಬೇಕಾಗುತ್ತದೆ.

ಶಾಲೆಯ ದೂರ: ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡುವ ಶಾಲೆ ಮನೆಯಿಂದ ಹತ್ತಿರ ಇರುವುದು ಸೂಕ್ತವೋ ಅಥವಾ ಶಾಲಾ ವಾಹನದಲ್ಲಿ ಬಹಳ ದೂರ ಪ್ರಯಾಣ ಮಾಡಲು ಮಕ್ಕಳು ಸಿದ್ಧರಿದ್ದಾರೆಯೇ ಎಂಬುದು ಕೂಡ ಮುಖ್ಯವಾಗಿರುತ್ತದೆ. ದೂರದ ಶಾಲೆಗಳಿಗೆ ತೆರಳುವಾಗ ಬೆಳಿಗ್ಗೆ ಬೇಗ ಎದ್ದೇಳುವ, ಸಂಜೆ ಪ್ರಯಾಣಿಸಿ ಬಂದು ಗೃಹ ಪಾಠಗಳನ್ನು ನಿರ್ವಹಿಸುವ ದೈಹಿಕ ಶಕ್ತಿ ಮತ್ತು ಮಾನಸಿಕ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಪಾಲಕರು ಗಮನಿಸಬೇಕು. ಓರಗೆಯ ಮಕ್ಕಳ ಜೊತೆಗೆ ಹೋಲಿಸಿದರೆ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ.

ADVERTISEMENT

ಆರ್ಥಿಕ ಪರಿಸ್ಥಿತಿ: ಖಾಸಗಿ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಓದಿಸುವ ತೀರ್ಮಾನ ತೆಗೆದುಕೊಂಡಿದ್ದಲ್ಲಿ, ಅಲ್ಲಿನ ಶುಲ್ಕ ನಮ್ಮ ಆರ್ಥಿಕ ಪರಿಸ್ಥಿತಿಗೆ ಸರಿ ಹೊಂದುತ್ತದೆಯೇ ಎಂದು ಯೋಚಿಸಿ. ಶುಲ್ಕ ಮಾತ್ರ ಭರಿಸದೆ, ಸಮವಸ್ತ್ರ, ಕಲಿಕಾ ಸಾಮಗ್ರಿಗಳು, ಶಾಲಾ ವಾಹನದ ಅಗತ್ಯ  ಇದ್ದರೆ ಅದರ ಶುಲ್ಕ...ಹೀಗೆ ಎಲ್ಲವೂ ಹಣದ ಆಧಾರದಲ್ಲಿ ನಡೆಯುವುದರಿಂದ ನಮ್ಮ ಬಜೆಟ್‌ಗೆ ತಕ್ಕಂತೆ ಇದ್ದು, ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಸರ್ಕಾರಿ ಶಾಲೆಯಲ್ಲಿ ಓದಿಸುವ ಯೋಚನೆ ಮಾಡಿದಲ್ಲಿ ಆರ್ಥಿಕವಾಗಿ ಹೊರೆ ಎನಿಸಲಾರದು. ಕಲಿಕಾ ಸಾಮಗ್ರಿಗಳನ್ನು ವ್ಯವಸ್ಥೆ ಮಾಡುವ, ಶಾಲಾ ವಾರ್ಷಿಕೋತ್ಸವ, ಪ್ರವಾಸ  ಇಂಥ ವಿಶೇಷ ಚಟುವಟಿಕೆಗಳಿಗೆ ಅಗತ್ಯವಾದ ಹಣ  ಹೊಂದಿಸುವ ಜವಾಬ್ದಾರಿ ಪೋಷಕರದಾಗಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ಅನೇಕ ಯೋಜನೆಗಳ ಜೊತೆಗೆ, ದಾನಿಗಳು , ವಿವಿಧ ಸಂಘ ಸಂಸ್ಥೆಗಳು ಕೂಡ ಸಹಭಾಗಿಯಾಗುತ್ತಾರೆಂಬುದನ್ನು ಪೋಷಕರು ಗಮನಿಸಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಸೂಕ್ತ ಶಾಲೆಯ ಆಯ್ಕೆ ನಮ್ಮ ಆರ್ಥಿಕ ಪರಿಸ್ಥಿತಿಗೂ ಪೂರಕವಾಗಿರುವಂತಿರಬೇಕು.

ವಿದ್ಯಾರ್ಥಿ - ಶಿಕ್ಷಕರ ಅನುಪಾತ: ಕೇವಲ ಭೌತಿಕ ಸೌಲಭ್ಯಗಳು ನಮ್ಮ ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾಗಲಾರವು. ಮಕ್ಕಳ ಕಲಿಕೆಗೆ ಹೆಚ್ಚು ಗಮನ ನೀಡಲು, ಪ್ರತಿ ಹಂತದಲ್ಲೂ ಮಾರ್ಗದರ್ಶನ ನೀಡಲು ವಿದ್ಯಾರ್ಥಿ- ಶಿಕ್ಷಕರ ಅನುಪಾತವು ಪ್ರಮುಖವಾಗುತ್ತದೆ. ಒಂದು ಉತ್ತಮ ಕಲಿಕಾ ಪರಿಸರ ಮೂಡಲು 30:1 ಅಥವಾ 40:1 ಇದ್ದರೆ ಅನುಕೂಲ. ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ತರಗತಿಯಲ್ಲಿ ಮಕ್ಕಳು ಇದ್ದರೆ ಒಬ್ಬರು ಶಿಕ್ಷಕರು ಬೋಧನಾ ಅವಧಿಯಲ್ಲಿ ಪ್ರತಿ ಮಗುವಿಗೆ ವೈಯಕ್ತಿಕ ಗಮನ ಕೊಡುವುದು ಕಷ್ಟವಾಗುತ್ತದೆ ಎಂಬುದನ್ನು ಪೋಷಕರು ಮನಗಾಣಬೇಕು. ಶಿಕ್ಷಕರ ವಿದ್ಯಾರ್ಹತೆ ಮತ್ತು ಬೋಧನಾ ಅನುಭವವನ್ನು ಕೂಡ ಗಣನೆಗೆ ತೆಗೆದುಕೊಳ್ಳಬಹುದು.

ಶಾಲೆಯ ಸಾಧನೆಗಳು: ಪ್ರತಿ ಶೈಕ್ಷಣಿಕ ವರ್ಷದ ಪರೀಕ್ಷಾ ಫಲಿತಾಂಶಗಳು, ಮಕ್ಕಳ ಕಲಿಕಾ ಗ್ರೇಡ್‌ಗಳು ಆ ಶಾಲೆಯ ಪಠ್ಯ ವಿಷಯದ ಸಾಧನೆಯ ಕೈಗನ್ನಡಿಯಾಗಿರುತ್ತದೆ. ನಿಧಾನ ಕಲಿಕೆಯ ಮಕ್ಕಳ ಶೈಕ್ಷಣಿಕ ಉನ್ನತೀಕರಣಕ್ಕೆ ಶಿಕ್ಷಕರು ತೆಗೆದುಕೊಳ್ಳುವ ವಿಶೇಷ ಕಾಳಜಿ ಮತ್ತು ಮಕ್ಕಳಿಗೆ ಕಲಿಕೆಗೆ ನೀಡುವ ಪ್ರೋತ್ಸಾಹ ಮುಖ್ಯವಾಗುತ್ತದೆ.

ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಅಥವಾ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರೆ ಮಗುವನ್ನು ದಾಖಲಾತಿ ಮಾಡುವ ಶಾಲೆಗೆ ಈ ರೀತಿಯ ಸಹಪಠ್ಯ ಚಟುವಟಿಕೆಗೆ ನೀಡುವ ಅವಕಾಶ ಮತ್ತು ಪ್ರೋತ್ಸಾಹವನ್ನು ಗಮನಿಸಿ. ಡಾ.ರಾಜ್ ಕುಮಾರ್,ಡಿ.ವಿ.ಗುಂಡಪ್ಪ , ಸಚಿನ್ ತೆಂಡೂಲ್ಕರ್ ಹೀಗೆ ಮೇರು ಪ್ರತಿಭೆಗಳು ಅಂಕ ಗಳಿಕೆಯ ಆಚೆಗೂ ಯಶಸ್ಸು ಕಂಡವರು.

ನಮ್ಮ ಮಕ್ಕಳು ಶೈಕ್ಷಣಿಕ ಸಾಧನೆ ಮಾಡುವ ಜೊತೆಗೆ ಉತ್ತಮ ಸುಸಂಸ್ಕೃತ ನಾಗರಿಕರಾಗಬೇಕು ಎಂಬುದು ನಮ್ಮ ಆದ್ಯತೆಯಾಗಬೇಕು. ಗುರು - ಹಿರಿಯರ ಮೇಲೆ ಗೌರವ, ದೇಶ - ಭಾಷೆಯ ಬಗ್ಗೆ ಆತ್ಮಾಭಿಮಾನ ಎಲ್ಲವೂ ಶಿಕ್ಷಣದ ಜತೆಯಲ್ಲಿಯೇ ಮೈಗೂಡಿಸಿಕೊಂಡು ಸಾಗಬೇಕು. ಭವಿಷ್ಯದ ತಾರೆಗಳಂತಿರುವ ಮಕ್ಕಳೊಂದಿಗೆ ಚರ್ಚಿಸಿ ಆಯ್ಕೆ ಮಾಡುವುದು ಕೂಡ ನಮ್ಮ ಕರ್ತವ್ಯವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.