ಶಾಲಾ ಮಕ್ಕಳ ಹೋಮ್‌ವರ್ಕ್ ವಿಚಾರದಲ್ಲಿ ಮೊದಲಿನಿಂದಲೂ ಸಾಕಷ್ಟು ಜಿಜ್ಞಾಸೆಗಳಿವೆ. ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಹೊರೆಯಾಗುವಷ್ಟು ಹೋಮ್‌ವರ್ಕ್ ನೀಡುತ್ತಿರುವುದು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಜೊತೆಗೆ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ ಎಂಬ ವಿಷಯದ ಮೇಲೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಮಸ್ಯೆಗೆ ಪರಿಹಾರ ಹುಡುಕುವ ತುರ್ತು ಈಗಂತೂ ಜಾಸ್ತಿಯೇ ಇದೆ ಎನ್ನಬಹುದು.
ಈ ಸಮಸ್ಯೆಯ ಪರಿಹಾರಕ್ಕೂ, ನಮ್ಮ ಸುಧಾರಿತ ಶಿಕ್ಷಣ ವ್ಯವಸ್ಥೆಗೂ ನಿಕಟ ಸಂಬಂಧವಿದೆ. ಹೇಗೆಂದರೆ ಕಳೆದ ಕೆಲವು ವರ್ಷಗಳಲ್ಲಿ ಬೋಧನಾ ಪದ್ಧತಿಯಲ್ಲಿ ಕ್ಷಿಪ್ರ ಬೆಳವಣಿಗೆಗಳಾಗಿವೆ. ವಿಧಾನಗಳು ತಂತ್ರಜ್ಞಾನವನ್ನು ಆಧರಿಸಿವೆ. ಇಂದಿನ ಕಲಿಕೆ ಬರಿಯ ಓದು, ಬರವಣಿಗೆ ಮತ್ತು ಗಣಿತ ಇವುಗಳಿಗಷ್ಟೇ ಸೀಮಿತವಾಗಿಲ್ಲ. ಮಗುವಿನ ಒಟ್ಟು ಜ್ಞಾನಾಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಮಗುವಿನ ಸಾಮರ್ಥ್ಯದ ಜೊತೆಗೆ ಅದರ ಪ್ರತಿಭೆ ಮತ್ತು ಪ್ರವೃತ್ತಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.
ಮಕ್ಕಳ ಕಲಿಕೆ ಮೋಜಿನಿಂದ ಕೂಡಿರಬೇಕು ಎಂದು ಶಿಕ್ಷಣ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಹೀಗಿದ್ದರೂ ಇಂದಿನ ಮಕ್ಕಳಿಗೆ ಕಲಿಕೆ ಎನ್ನುವುದು ಭೀತಿ ಮೂಡಿಸುವಂತಿದೆ; ಅದೊಂದು ಹೊರೆಯಾಗಿದೆ ಎಂಬ ದೂರುಗಳು ಕಡಿಮೆಯಾಗಿಲ್ಲ. ಶಾಲೆ ಮಾತ್ರವಲ್ಲ, ಮನೆಯಲ್ಲೂ ಇತರ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಲು ಆಗದಂತೆ ಅನೇಕ ಗಂಟೆಗಳ ಕಾಲ ಹೋಮ್‌ವರ್ಕ್ ಮಾಡುವುದರಲ್ಲಿ ನಿರತರಾಗಬೇಕಾಗುತ್ತದೆ.
ಪಠ್ಯಕ್ರಮದ ಹೊರೆಯನ್ನು ತಗ್ಗಿಸಲು ಶಿಕ್ಷಕರು ಹೆಚ್ಚಿನ ಪ್ರಯತ್ನ ಮಾಡಲು ಸಾಧ್ಯವಿಲ್ಲದಿದ್ದರೂ ತಮ್ಮ ವಾರ್ಷಿಕ, ಸಾಪ್ತಾಹಿಕ ಮತ್ತು ದೈನಂದಿನ ಚಟುವಟಿಕೆಗಳನ್ನು ಚೆನ್ನಾಗಿ ಯೋಜನೆ ಮಾಡಿಕೊಂಡು ಬಹಳಷ್ಟು ವ್ಯತ್ಯಾಸ ತರಬಹುದು. ಕೆಲವೊಮ್ಮೆ ಪರೀಕ್ಷೆ ಬರುವುದರೊಳಗೆ ಪಠ್ಯಕ್ರಮವನ್ನು ಪೂರ್ಣಗೊಳಿಸುವ ಭರಾಟೆಯಲ್ಲಿ, ಶಾಲೆಯ ಕೆಲಸದ ಒಂದಷ್ಟು ಭಾಗವನ್ನು ಹೋಮ್‌ವರ್ಕ್ ಆಗಿ ಸಾಗ ಹಾಕಲಾಗುತ್ತದೆ ಎಂಬುದನ್ನೂ ಇಲ್ಲಿ ಅಲ್ಲಗಳೆಯಲಾಗದು.
ಶಿಕ್ಷಕ ಏನು ಮಾಡಬೇಕು?
ಶಿಕ್ಷಕರು ತ್ವರಿತಗತಿಯಲ್ಲಿ ಪಠ್ಯಕ್ರಮ ಮುಗಿಸಲು ಪ್ರಯತ್ನಿಸಬೇಕೇ ವಿನಃ ಶಾಲೆಯ ಕೆಲಸವನ್ನು ಹೋಮ್‌ವರ್ಕ್ ರೂಪದಲ್ಲಿ ನೀಡುವುದು ಸಲ್ಲದು. ಅಂತಹ ಪಾಠ ನಿಜವಾಗಿಯೂ ಅತ್ಯುತ್ತಮ ಹೋಮ್‌ವರ್ಕ್ ಅಲ್ಲ. ವಾಡಿಕೆಯ ಕಲಿಕೆ ನಡೆಯುತ್ತಲೇ ಇರಬೇಕು; ಅದರ ಜೊತೆಗೆ ಶಿಕ್ಷಕರು ನೀಡುವ ಹೋಮ್‌ವರ್ಕ್ ಹೆಚ್ಚು ಆಸಕ್ತಿಕರ ಮತ್ತು ಸಂಶೋಧನೆ ಆಧಾರಿತವಾಗಿರಬೇಕು. ಇದಕ್ಕೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ತನ್ನದೇ ಆದ ಶಿಕ್ಷಣಕ್ಕೆ ಹಾಗೂ ಮಕ್ಕಳಿಗೆ ಪೂರಕವಾಗಿರುವಂತಹ ಕಲ್ಪನೆಯನ್ನು ಬಳಸಬೇಕು.
ಉದಾಹರಣೆಗೆ ಒಂದು ಸಾಹಿತ್ಯದ ಪಾಠ ಬೋಧಿಸಿದ ಮೇಲೆ ಆ ಪಾಠದ ಲೇಖಕ ಅಥವಾ ಕವಿಯ ಜೀವನ ಮತ್ತು ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿ ಕಂಡುಹಿಡಿಯಲು ಮಕ್ಕಳಿಗೆ ಹೇಳಬಹುದು. ಮರುದಿನ ಅವರು ತಾವು ಕಂಡುಹಿಡಿದ ಹೊಸ ವಿಷಯಗಳನ್ನು ತರಗತಿಯಲ್ಲಿ ಎಲ್ಲರೆದುರು ಓದಬಹುದು. ಇತಿಹಾಸ ಪಠ್ಯದಲ್ಲೂ ಇಂತಹ ಕ್ರಮ ಅನುಸರಿಸಬಹುದು. ಕಥೆಯ ರೂಪದಲ್ಲಿ ಬೋಧಿಸಿದ ಪಾಠ ಮಕ್ಕಳ ಮನಸ್ಸಿಗೆ ನೇರವಾಗಿ ನಾಟುತ್ತದೆ. ನಂತರ ಆ ಪಾಠದ ಬಗ್ಗೆ ಮತ್ತಷ್ಟು ಹೆಚ್ಚಿನ ಮಾಹಿತಿಯನ್ನು ಮಕ್ಕಳಿಂದ ಕಲೆ ಹಾಕುವ ಕೆಲಸ ಮಾಡಿಸಿದರೆ ಮಕ್ಕಳಲ್ಲಿ ಸಂಶೋಧನಾ ಮನೋಭಾವ ಹೆಚ್ಚಿಸಬಹುದು. ತರಗತಿಯಲ್ಲಿ ಕಲಿತ ವಿಷಯಗಳಿಗೆ ಸಂಶೋಧನೆ, ಪ್ರಾಜೆಕ್ಟ್ ಕೆಲಸ ಇತ್ಯಾದಿ ಚಟುವಟಿಕೆಗಳಿಗೆ ಸಂಬಂಧ ಕಲ್ಪಿಸಿ ಹೋಮ್‌ವರ್ಕ್ ಅನ್ನು ಮತ್ತಷ್ಟು ಆಸಕ್ತಿದಾಯಕವಾಗುವಂತೆ ಮಾಡಬಹುದು.
ಆಸಕ್ತಿ ಮೂಡಿಸಿ
ಒಂದು ಪುಸ್ತಕ ಅಥವಾ ಸಂಶೋಧನೆಯಿಂದ ಕುತೂಹಲ ಮೂಡಿ ಅದನ್ನು ಓದುವ ಮಗು ಸ್ವತಃ ಹೊಸ ವಿಷಯಗಳನ್ನು ಕಂಡು ಹಿಡಿಯುವಂತಿರಬೇಕು. ತಾನು ಏನು ಕಂಡು ಹಿಡಿದೆ ಎಂಬುದನ್ನು ಇತರರೊಂದಿಗೆ ಹಂಚಿಕೊಳ್ಳಲು ಅವರಿಗೆ ಹೆಮ್ಮೆ ಮತ್ತು ಖುಷಿ. ತಾನು ಸಂಶೋಧಿಸಿ ಅದನ್ನು ಶಾಲೆಯಲ್ಲಿ ಇತರ ಮಕ್ಕಳ ಮುಂದೆ ಹೇಳಿದರೆ ಹೆಮ್ಮೆ ಇರುತ್ತದೆ. ಹಾಗೆಯೇ, ವಿಜ್ಞಾನದ ಪಾಠ ಆದ ನಂತರ, ಮಕ್ಕಳಿಗೆ ಅಪರೂಪವಾದಂತಹ ಸಸ್ಯಗಳನ್ನು ಹುಡುಕಿ ಅದರ ಬಗ್ಗೆ ಒಂದಿಷ್ಟು ವೀಕ್ಷಣೆಗಳನ್ನು ಬರೆದಿಡಲು ಹೇಳುವುದು ಸೃಜನಶೀಲತೆಯನ್ನು ಕಲಿಸುತ್ತದೆ. ಅಪರೂಪದ ಕೀಟಗಳ ಬಗ್ಗೆ ವಿವರ ಬರೆದಿಡುವಂತೆ ಹೇಳುವುದರಿಂದ ಮಕ್ಕಳಲ್ಲಿ ಕುತೂಹಲ ಮನೋಭಾವ ಹೆಚ್ಚಿಸಬಹುದು.
ರಸಪ್ರಶ್ನೆಯ ಮಿಶ್ರಣ
ಅರ್ಥಶಾಸ್ತ್ರದ ವಿಷಯಕ್ಕೆ ಬಂದರೆ ಮಕ್ಕಳಿಗೆ ವಿವಿಧ ಸಂಸ್ಥೆಗಳು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಕಂಡುಹಿಡಿಯಲು ಸೂಚಿಸಬಹುದು. ಅಂತಹ ಕಂಪನಿಗಳ ಪಟ್ಟಿ ತಯಾರಿಸಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಉತ್ಪನ್ನಗಳ ಪಟ್ಟಿ ಮಾಡಿ, ಬೇಡಿಕೆ ಕುರಿತು ವಿವಿಧ ಕಾರಣಗಳನ್ನು ಕಂಡುಹಿಡಿಯಲು ತಿಳಿಸುವುದು. ಇದರಿಂದ ಪ್ರಸಕ್ತ ಅಂತರರಾಷ್ಟ್ರೀಯ ವ್ಯವಹಾರಗಳನ್ನು ಮತ್ತು ವಿಶ್ವದ ಮಾರುಕಟ್ಟೆಗಳ ಬಗ್ಗೆ ರಸಪ್ರಶ್ನೆಗಳನ್ನು ತಯಾರು ಮಾಡಬಹುದು. ಈ ಎಲ್ಲಾ ವಿಷಯಗಳ ಬಗ್ಗೆ ಯೋಜನೆಗಳನ್ನು ಒಂದೇ ಕಡೆ ನೆರೆಹೊರೆಯಲ್ಲಿ ಅಥವಾ ಸಮೀಪದಲ್ಲಿ ವಾಸಿಸುವ ಮಕ್ಕಳ ಗುಂಪುಗಳನ್ನಾಗಿ ಮಾಡಿ ಸೃಜನಶೀಲತೆಗೆ ಮತ್ತಷ್ಟು ಮೆರುಗು ತರಬಹುದು.
ಇಂತಹ ಹೋಮ್‌ವರ್ಕ್ ಒಂದು ಇಡೀ ವಾರದ ವ್ಯಾಪ್ತಿ ಹೊಂದಿರಲಿ. ಹೀಗೆ ಮನೆ ಅಭ್ಯಾಸದ ಕೆಲಸವು ಹೆಚ್ಚು ಸೃಜನಶೀಲವಾಗಿದ್ದರೆ ಮಕ್ಕಳು ಬಿಡುವಿಲ್ಲದೆ ಮಾಡುವುದರ ಜೊತೆಗೆ ಅದರ ಮೋಜನ್ನೂ ಅನುಭವಿಸುತ್ತಾರೆ.
ಗಣಿತದ ವಿಷಯ
ಗಣಿತದ ವಿಷಯಕ್ಕೆ ಬಂದಾಗ ವಿದ್ಯಾರ್ಥಿಗಳಿಗೆ ತಮ್ಮ ತಂದೆ ಅಥವಾ ತಾಯಿಯ ಜೊತೆಯಲ್ಲಿ ಕಿರಾಣಿ ಅಂಗಡಿಗೆ ಅಥವಾ ತರಕಾರಿ ಮಾರುಕಟ್ಟೆಗೆ ಹೋಗಲು ತಿಳಿಸಿ. ಹಾಗೆ ಹೋದಾಗ ವರ್ತಕನನ್ನು ಆತನ ವ್ಯಾಪಾರದ ಬಗ್ಗೆ ಕೇಳಿ ಅದರ ಬಗ್ಗೆ ಒಂದಿಷ್ಟು ಮಾಹಿತಿ ಬರೆದು ತಿಳಿಸಲು ಸೂಚಿಸಬಹುದು. ತರಕಾರಿ ಕೊಳ್ಳಲು ಎಷ್ಟು ವೆಚ್ಚ ಆಗುತ್ತದೆ ಮತ್ತು ಪ್ರತಿದಿನ ಆಗುವ ಮಾರಾಟ ಎಷ್ಟು ಎಂದು ಕೇಳಬಹುದು. ಅವರು ಕೊಡುವ ವಿವರಗಳ ಆಧಾರದ ಮೇಲೆ ಒಟ್ಟು ಲಾಭ ಅಥವಾ ನಷ್ಟ ಎಷ್ಟು ಎಂದು ಲೆಕ್ಕ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.