ಪಿಯುಸಿ ಅಥವಾ ಹೈಯರ್ ಸೆಕೆಂಡರಿ ಉತ್ತೀರ್ಣರಾದ ನಂತರ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್‌ನತ್ತ ಒಲವು ತೋರುವುದು ಸಹಜ. ಒಂದು ವೇಳೆ ಎಂಜಿನಿಯರಿಂಗ್ ಅಥವಾ ಮೆಡಿಕಲ್‌ನಲ್ಲಿ ತಮ್ಮ ಆಸಕ್ತಿಗೆ ಅನುಗುಣವಾದ ಕೋರ್ಸ್ ಸಿಗದಿದ್ದರೆ ಅಥವಾ ಇವೆರಡನ್ನೂ ಬಿಟ್ಟು ಬೇರೆ ಏನನ್ನಾದರೂ ಮಾಡಬೇಕು ಎಂಬ ಒಲವು ನಿಮ್ಮದಾಗಿದ್ದರೆ, ಅದೇ ರೀತಿ ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಕೂಡ ಸಾಮಾನ್ಯ ಬ್ಯಾಚುಲರ್ ಪದವಿಯ ಬದಲು ಬೇರಾವುದಾದರೂ ವಿಶೇಷ ಕೋರ್ಸ್ ಸೇರಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರೆ ಅಂಥವರಿಗೆ ಹೇಳಿ ಮಾಡಿಸಿದ ಕೋರ್ಸ್ ‘ಆನರ್ಸ್ ಪದವಿ’.
‘ಆನರ್ಸ್ ಪದವಿ’ ಸಾಮಾನ್ಯವಾಗಿ ನಾಲ್ಕು ವರ್ಷದ್ದಾಗಿರುತ್ತದೆ. ನೀವು ನಿಮ್ಮ ಆಸಕ್ತಿಯ ವಿಷಯದಲ್ಲಿ ‘ಆನರ್ಸ್ ಪದವಿ’ ಕೋರ್ಸ್ ಆಯ್ದುಕೊಂಡರೆ ನೀವು ಆ ವಿಷಯದಲ್ಲಿ ಹೆಚ್ಚಿನ ಪ್ರಾವೀಣ್ಯ ಸಾಧಿಸಲು ಸಾಧ್ಯವಾಗುತ್ತದೆ. ಮೂರು ವರ್ಷಗಳಲ್ಲಿ ಕೋರ್ಸ್‌ಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಓದಿದ ನಂತರ ನಾಲ್ಕನೇ ವರ್ಷದಲ್ಲಿ ನಿಮ್ಮ ಆಸಕ್ತಿಯ ವಿಷಯವೊಂದನ್ನೇ ವಿವರವಾಗಿ ಅಭ್ಯಸಿಸಲು ನಿಮಗೆ ಅವಕಾಶ ದೊರೆಯುತ್ತದೆ. ನೀವು ಯಾವುದಾದರೊಂದು ನಿರ್ದಿಷ್ಟ ವಿಷಯದ ಮೇಲೆ 4 ವರ್ಷ ಆನರ್ಸ್ ಪದವಿ ಹೊಂದಿದವರಾಗಿದ್ದರೆ ನಿಮಗೆ ಆ ನಿರ್ದಿಷ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಒಂದೇ ವರ್ಷದ್ದಾಗಿರುತ್ತದೆ.
ಆದರೆ, ಸಾಮಾನ್ಯ ಬ್ಯಾಚುಲರ್ ಪದವಿ ಮೂರು ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ನಿಮ್ಮ ಆಸಕ್ತಿಗೂ ಮಿಗಿಲಾಗಿ ಎಲ್ಲ ವಿಷಯಗಳನ್ನೂ ನೀವು ಸಮಾನ ಆದ್ಯತೆಯ ಮೇರೆಗೆ ಅಭ್ಯಸಿಸುವುದು ಅಗತ್ಯವಾಗಿರುತ್ತದೆ. ನಂತರ ಯಾವುದೇ ಸ್ನಾತಕೋತ್ತರ ಪದವಿ ಪಡೆಯಬೇಕೆಂದರೂ ನೀವು 2 ವರ್ಷ ಅಧ್ಯಯನ ಮಾಡುವುದು ಅಗತ್ಯವಾಗಿರುತ್ತದೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಈ ಮೂರು ವಿಭಾಗಗಳ ವಿದ್ಯಾರ್ಥಿಗಳಿಗೂ ಆನರ್ಸ್ ಪದವಿ ಪಡೆಯಲು ಈಗ ಸಾಕಷ್ಟು ಅವಕಾಶಗಳಿವೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಫಾರೆನ್ಸಿಕ್ ಸೈನ್ಸ್, ಕೃಷಿ, ತೋಟಗಾರಿಕೆ, ಭೂಗೋಳ, ಜಿಯೋ ಇನ್ಫರ್ಮ್ಯಾಟಿಕ್ಸ್, ವಿಷುಯಲ್ ಕಮ್ಯುನಿಕೇಷನ್, ಫಾರೆಸ್ಟ್ರಿ, ಮೀನುಗಾರಿಕೆ, ತೋಟಗಾರಿಕೆ ಎಂಜಿನಿಯರಿಂಗ್, ಆಹಾರ ತಂತ್ರಜ್ಞಾನ, ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಯೋಕೆಮಿಸ್ಟ್ರಿ, ಜೆನೆಟಿಕ್ಸ್, ಬಯೋಟೆಕ್ನಾಲಜಿ, ಲೈಫ್ ಸೈನ್ಸ್, ಫಿಸಿಯೋಥೆರಪಿ, ಅಪ್ಲೈಡ್ ಸೈನ್ಸಸ್, ಕಂಪ್ಯೂಟರ್ ಸೈನ್ಸ್, ಸೈಬರ್ ಭದ್ರತೆ, ಬಿ.ಎಸ್ಸಿ.–ಇಡಿ ವಿಷಯಗಳಲ್ಲಿ ಬಿ.ಎಸ್ಸಿ. ಆನರ್ಸ್ ಕೋರ್ಸ್‌ಗಳು ರಾಜ್ಯದ ಹಲವು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಲಭ್ಯ ಇವೆ.
ಇದಲ್ಲದೇ ವಿಜ್ಞಾನ ವಿದ್ಯಾರ್ಥಿಗಳು ಬಿ.ಟೆಕ್. ವಿಭಾಗದಲ್ಲೂ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್, ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್, ಸೈಬರ್ ಭದ್ರತೆ, ಬಿ.ಫಾರಂ. ವಿಷಯಗಳಲ್ಲೂ ಆನರ್ಸ್ ಪದವಿ ಪಡೆಯಲು ಅವಕಾಶವಿದೆ.
ಮಾನವ ಸಂಪನ್ಮೂಲ (HR), ಮಾರ್ಕೆಟಿಂಗ್, ಹಣಕಾಸು, ಅಂತರರಾಷ್ಟ್ರೀಯ ವ್ಯಾಪಾರ, ಪ್ರಯಾಣ ಮತ್ತು ಪ್ರವಾಸೋದ್ಯಮ, ಉದ್ಯಮಶೀಲತೆ, ಬಿಸಿನೆಸ್ ಇಂಟೆಲಿಜೆನ್ಸ್ ಮತ್ತು ಅನಾಲಿಟಿಕ್ಸ್, ಅಂತರರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್, ಬಿ.ಕಾಂ.–ಎಲ್.ಎಲ್.ಬಿ., ಆನರ್ಸ್ ಕೋರ್ಸ್‌ಗಳು ರಾಜ್ಯದ ಹಲವು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಲಭ್ಯ ಇವೆ.
ಇಂಗ್ಲಿಷ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಮನೋವಿಜ್ಞಾನ, ಪಾಕಶಾಲೆಗಳು, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ (B.Arch), ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ (BFA), ಬ್ಯಾಚುಲರ್ ಆಫ್ ಡಿಸೈನ್ (B.Des.) (ಫ್ಯಾಶನ್ ಡಿಸೈನ್), ಬ್ಯಾಚುಲರ್ ಆಫ್ ಡಿಸೈನ್ (ಜವಳಿ ವಿನ್ಯಾಸ ಮತ್ತು ಉದ್ಯಮಶೀಲತೆ), ಬ್ಯಾಚುಲರ್ ಆಫ್ ಡಿಸೈನ್ (B.Des.) (ಇಂಟೀರಿಯರ್ ಡಿಸೈನ್), ಬ್ಯಾಚುಲರ್ ಆಫ್ ಡಿಸೈನ್ (ಗೇಮ್ ಡಿಸೈನ್ ಮತ್ತು ಅನಿಮೇಷನ್) , ಬಿಎ (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ), ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಅಡುಗೆ ತಂತ್ರಜ್ಞಾನ (B.HMCT.), ಬಿ.ಎ.–ಎಲ್.ಎಲ್.ಬಿ., ಬಿಎ–ಇಡಿ, ಬಿಎ–ಇಎಲ್‌ಇಡಿ, ಆನರ್ಸ್ ಕೋರ್ಸ್‌ಗಳು ಕಲಾ ವಿಭಾಗದಲ್ಲಿ ಲಭ್ಯ ಇವೆ.
ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳು ಮಿಶ್ರ ಅಧ್ಯಯನದ ಆನರ್ಸ್ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಕೂಡ ಆಯ್ದ ಕೆಲ ಕಾಲೇಜುಗಳಲ್ಲಿ ಅವಕಾಶವಿದೆ. ಉದಾಹರಣೆಗೆ ಕಲಾ ವಿಭಾಗದ ವಿದ್ಯಾರ್ಥಿ ತಮ್ಮ ಪದವಿಯ 4ನೇ ವರ್ಷದಲ್ಲಿ ಭೌತಶಾಸ್ತ್ರ, ಗಣಿತ, ರಸಾಯನ ಶಾಸ್ತ್ರ ಹೀಗೆ ಯಾವುದಾದರೊಂದು ವಿಜ್ಞಾನ ವಿಷಯವನ್ನು ಓದಬಹುದು. ಅದೇ ರೀತಿ ಬಿ.ಎಸ್ಸಿ. ಓದುವ ವಿದ್ಯಾರ್ಥಿಗಳು ತಮ್ಮ ಪದವಿಯ 4ನೇ ವರ್ಷದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಹೀಗೆ ಯಾವುದಾದರೊಂದು ಕಲಾ ವಿಷಯವನ್ನು ಓದಬಹುದು. ಈ ಮಾದರಿಯ ಕೋರ್ಸ್ ಅನ್ನು ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪರಿಚಯಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.