ಮಕ್ಕಳಿಗೆ ಇತ್ತೀಚೆಗೆ ಪುಸ್ತಕಗಳನ್ನು ಓದುವ ಅಭ್ಯಾಸವೇ ಇಲ್ಲ. ಅವರ ಓದು ಪರೀಕ್ಷೆಯಲ್ಲಿ ಬರುವ ಪ್ರಶ್ನೆಗಳಿಗೆ ಶಿಕ್ಷಕರು ಬರೆಸಿದ ನೋಟ್ಸ್‌ನಿಂದ ಉತ್ತರ ಉರುಹೊಡೆಯುವುದಕ್ಕೆ ಮಾತ್ರ ಸೀಮಿತವಾಗಿದೆ. ಹೀಗಾಗಿ ಆಳವಾದ, ವ್ಯಾಪಕವಾದ ಮತ್ತು ವಿಶ್ಲೇಷಣಾತ್ಮಕವಾದ ಓದಿನಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.
ತಪ್ಪು ಯಾರದ್ದು? ಮಕ್ಕಳದ್ದೆ? ಖಂಡಿತ ಅಲ್ಲ. ಮಕ್ಕಳು ಓದುವುದಿಲ್ಲ ಎಂದರೆ ನಾವು ಅವರಿಗೆ ಓದುವ ಅಭ್ಯಾಸ ಮಾಡಿಸಿಲ್ಲ ಎಂದೇ ಅರ್ಥ.ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಮೈಗೂಡಿಸಲು, ಓದುವುದನ್ನೆ ವೇಗವಾಗಿ ಓದುವಂತೆ ಮತ್ತು ಓದಿದ್ದನ್ನು ಅರ್ಥಮಾಡಿಕೊಳ್ಳುವಂತೆ ಮಾಡಲು ಇರುವುದು ಒಂದೇ ದಾರಿ– ಪದೇ ಪದೇ ಓದಿಸುವುದು ಮತ್ತು ಅವರು ಓದಿದ್ದಾರೆಯೇ ಇಲ್ಲವೆ ಮತ್ತು ಓದಿದ್ದನ್ನು ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ಪರೀಕ್ಷಿಸುವುದು. ಅದಕ್ಕಾಗಿ ನಾವೊಂದು ಪರಿಣಾಮಕಾರಿ ಮಾರ್ಗವನ್ನು ಕಂಡುಕೊಂಡಿದ್ದೇವೆ. ಇದಕ್ಕೆ ನಾವು ಕೊಟ್ಟಿರುವ ಹೆಸರು ಸ್ಥಳದಲ್ಲೆ ಓದು- ಉತ್ತರಿಸು.
ತರಬೇತಿಯ ಸ್ವರೂಪ
ಪ್ರಾರಂಭದಲ್ಲಿ ಏಕಾಗ್ರತೆಯ ಹೆಚ್ಚಳಕ್ಕಾಗಿ ಮೂರು ನಿಮಿಷದ ಮಾನಸಿಕ ವ್ಯಾಯಾಮ ಮಾಡಿಸುತ್ತೇವೆ ಮತ್ತು ಆತ್ಮವಿಶ್ವಾಸದ ವೃದ್ಧಿಗಾಗಿ ಮೂರು ಉದ್ಘೋಷಗಳನ್ನು ಹೇಳಿಸುತ್ತೇವೆ. ಇದು ಕಡ್ಡಾಯ. ಆನಂತರ ಪ್ರತಿ ಮಗುವಿಗೂ 200– 300 ಪದಗಳ ಒಂದು ಲೇಖನದ ಜೆರಾಕ್ಸ್ ಪ್ರತಿಯನ್ನು ಕೊಡುತ್ತೇವೆ. ಹತ್ತು ನಿಮಿಷದಲ್ಲಿ ಎಷ್ಟು ಸಲ ಸಾಧ್ಯವೋ ಅಷ್ಟು ಸಲ ಲೇಖನವನ್ನು ಓದುವಂತೆ ಮಕ್ಕಳಿಗೆ ಹೇಳುತ್ತೇವೆ. ಮಕ್ಕಳು ಓದುತ್ತಿರುವಾಗ ಯಾರೂ ತಲೆಯನ್ನು ಅತ್ತಿತ್ತ ಆಡಿಸಬಾರದು, ಕಣ್ಣು ಮತ್ತು ಗಮನ ಲೇಖನದ ಮೇಲೆ ಮಾತ್ರ ಇರಬೇಕು. ಇಲ್ಲವಾದರೆ ಓದಿನ ವೇಗ ಮತ್ತು ಗ್ರಹಿಕೆ ಕಡಿಮೆಯಾಗುತ್ತದೆ ಎಂದು ಆಗಿಂದಾಗ್ಗೆ ಎಚ್ಚರಿಸುತ್ತಿರುತ್ತೇವೆ. ಹತ್ತು ನಿಮಿಷದ ಕೊನೆಯಲ್ಲಿ ಲೇಖನದ ಪ್ರತಿಗಳನ್ನು ಮಕ್ಕಳಿಂದ ವಾಪಸ್ಸು ಪಡೆಯುತ್ತೇವೆ.
ಓದುವ ವೇಗ
ಮಕ್ಕಳು ಎಷ್ಟು ಸಲ ಓದಿದ್ದಾರೆ ಎಂಬುದು ಅವರ ಓದುವ ವೇಗದ ಅಳತೆಯಾಗುತ್ತದೆ. ಎಷ್ಟೆಷ್ಟು ಮಕ್ಕಳು ಎಷ್ಟೆಷ್ಟು ಸಲ ಓದಿದ್ದಾರೆ ಎಂಬುದರ ಪಟ್ಟಿಯನ್ನು ಬೋರ್ಡ್ ಮೇಲೆ ಬರೆಯುತ್ತೇವೆ. ಆಮೇಲೆ ಅದನ್ನು ವಿಶ್ಲೇಷಿಸುತ್ತೇವೆ. ಒಬ್ಬ ಲೇಖನವನ್ನು ಒಂದೇ ಸಲ ಓದಿದ್ದಾನೆ, ಮತ್ತೊಬ್ಬ ನಾಲ್ಕು ಸಲ. ಹೀಗಿದ್ದಾಗ ಸ್ಪರ್ಧೆಯಲ್ಲಿ ಮೊದಲನೆಯವ ಎರಡನೆಯವನನ್ನು ಸರಿಗಟ್ಟುವುದು ಹೇಗೆ? ಸರಿಗಟ್ಟಬೇಕೆಂದರೆ ಮೊದಲನೆಯವನೂ ತನ್ನ ಓದುವ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಅದು ಸಾಧ್ಯವಾಗುವುದು ಏಕಾಗ್ರತೆ ಮತ್ತು ಪದ ಸಂಪತ್ತಿನ ಹೆಚ್ಚಳದಿಂದ ಹಾಗೂ ಅಭ್ಯಾಸದಿಂದ ಮಾತ್ರ ಎಂಬುದನ್ನು ಪ್ರತಿ ತರಗತಿಯಲ್ಲೂ ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಿರುತ್ತೇವೆ.
ಗ್ರಹಿಕೆಯ ಪರೀಕ್ಷೆ
ಎಷ್ಟು ವೇಗವಾಗಿ ಓದುತ್ತಾರೆ ಎಂಬುದು ಮುಖ್ಯವಾದರೂ ಅವರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅದನ್ನು ಎಷ್ಟು ತಮ್ಮ ತಲೆಯಲ್ಲಿ ದಾಖಲಿಸಿಕೊಂಡಿದ್ದಾರೆ ಎಂಬುದು ಅದಕ್ಕಿಂತ ಮುಖ್ಯ. ಜೊತೆಗೆ, ಅವರು ಓದಿದ್ದಾರೆಯೋ ಇಲ್ಲವೋ ಎಂಬುದನ್ನೂ ಖಾತರಿ ಪಡಿಸಿಕೊಳ್ಳಬೇಕಲ್ಲ. ಅದಕ್ಕೆ ಚಿಕ್ಕದೊಂದು ಪರೀಕ್ಷೆ. ಎಲ್ಲ ಮಕ್ಕಳಿಗೂ ಒಂದೊಂದು ಪ್ರಶ್ನೆ ಪತ್ರಿಕೆಯನ್ನು ವಿತರಿಸುತ್ತೇವೆ. ಅದರಲ್ಲಿ ವಿದ್ಯಾರ್ಥಿಗಳು ತಾವೇ ಮೌಲ್ಯಮಾಪನ ಮಾಡಿಕೊಳ್ಳಬಹುದಾದಂಥ ಬಹು ಆಯ್ಕೆ ಪ್ರಶ್ನೆಗಳು, ಸರಿ/ತಪ್ಪು ಗುರುತಿಸಿ, ಬಿಟ್ಟಿರುವ ಜಾಗ ತುಂಬುವ ಒಂದು ಅಂಕದ ಹತ್ತು ಪ್ರಶ್ನೆಗಳಿರುತ್ತವೆ.
ಉತ್ತರಿಸಿದ ಪಶ್ನೆ ಪತ್ರಿಕೆಗಳನ್ನು ಯಾದೃಚ್ಛಿಕವಾಗಿ ಹಂಚುತ್ತೇವೆ. ಆಗ ಅವರದ್ದು ಇವರಿಗೆ ಇವರದ್ದು ಅವರಿಗೆ ಸಿಗುತ್ತದೆ. ಒಮ್ಮೊಮ್ಮೆ ಅವರವರದ್ದನ್ನು ಅವರೇ ಮೌಲ್ಯಮಾಪನ (ಸ್ವ ಮೌಲ್ಯಮಾಪನ) ಮಾಡಿಕೊಳ್ಳುವಂತೆಯೂ ಮಾಡುತ್ತೇವೆ. ಹೇಗೆ ಮೌಲ್ಯಮಾಪನ ಮಾಡಬೇಕು ಎಂಬುದನ್ನು ಅವರಿಗೆ ವಿವರಿಸಿ, ಬೋರ್ಡ್ ಮೇಲೆ ಸರಿ ಉತ್ತರವನ್ನು ಬರೆಯುತ್ತೇವೆ. ವಿದ್ಯಾರ್ಥಿಗಳು ಎಷ್ಟೆಷ್ಟು ಅಂಕಗಳನ್ನು ತೆಗೆದುಕೊಂಡಿದ್ದಾರೆ ಎಂಬುದರ ಪಟ್ಟಿಯನ್ನು ಬೋರ್ಡ್ ಮೇಲೆ ಬರೆದು ಅದರ ವಿಶ್ಲೇಷಣೆ ಮಾಡುತ್ತೇವೆ. ಮಕ್ಕಳು ಎಷ್ಟು ಅಂಕ ಗಳಿಸಿದ್ದಾರೆ ಎಂಬುದು ಅವರು ವಿಷಯವನ್ನು ಎಷ್ಟರ ಮಟ್ಟಿಗೆ ಗ್ರಹಿಸಿದ್ದಾರೆ ಮತ್ತು ಎಷ್ಟರ ಮಟ್ಟಿಗೆ ತಲೆಯಲ್ಲಿ ದಾಖಲಿಸಿಕೊಂಡಿದ್ದಾರೆ ಎಂಬುದರ ನಿಜವಾದ ಅಳತೆಯಾಗುತ್ತದೆ. ನಾವು ಕಂಡುಕೊಂಡಂತೆ ಹೆಚ್ಚು ಸಲ ಓದಿದವರೂ ಕಡಿಮೆ ಅಂಕ ತೆಗೆದುಕೊಂಡಿರುತ್ತಾರೆ. ಕಡಿಮೆ ಸಲ ಓದಿದವರು ಹೆಚ್ಚು ಅಂಕ ತೆಗೆದುಕೊಂಡಿರುತ್ತಾರೆ. ಅಷ್ಟೆ ಅಲ್ಲ, ಏಳನೆ ತರಗತಿಯ ಕೆಲವು ವಿದ್ಯಾರ್ಥಿಗಳಿಗಿಂತ ಆರನೇ ತರಗತಿಯ ಕೆಲವು ವಿದ್ಯಾರ್ಥಿಗಳೇ ಹೆಚ್ಚು ಅಂಕ ಗಳಿಸಿರುತ್ತಾರೆ. ಇದಕ್ಕೆ ಕಾರಣ ಮೊದಲ ಗುಂಪಿನವರು ವೇಗವಾಗಿ ಓದಿದ್ದರೂ, ಮೇಲಿನ ತರಗತಿಯಲ್ಲಿ ಇದ್ದರೂ, ಏಕಾಗ್ರತೆಯಿಂದ ಓದಿರುವುದಿಲ್ಲ. ಎರಡನೆಯ ಗುಂಪಿನವರು ನಿಧಾನವಾಗಿ ಓದಿದ್ದರೂ, ಕೆಳ ಹಂತದ ತರಗತಿಯಲ್ಲಿ ಇದ್ದರೂ, ಏಕಾಗ್ರತೆಯಿಂದ ಓದಿರುತ್ತಾರೆ. ಇದರರ್ಥ ಅವರ ಏಕಾಗ್ರತೆ ಎಷ್ಟೋ ಅಷ್ಟೆ ಅಂಕಗಳು. ಆದ್ದರಿಂದಲೇ ಏಕಾಗ್ರತೆಯನ್ನು ಹೆಚ್ಚಿಸುವ ಮಾನಸಿಕ ವ್ಯಾಯಾಮವನ್ನು ಪ್ರಾರಂಭದಲ್ಲಿ ಕಡ್ಡಾಯವಾಗಿ ಮಾಡಿಸುತ್ತೇವೆ. ಈ ಪ್ರಯತ್ನದಿಂದ ಮಕ್ಕಳ ಓದುವ ಅಭ್ಯಾಸ, ಓದುವ ವೇಗ, ಗ್ರಹಿಕೆಯ ಪರಿಮಾಣ, ಚಿಂತನಶೀಲತೆ ಮತ್ತು ಓದಿನಲ್ಲಿ ಆಸಕ್ತಿ - ಎಲ್ಲದರಲ್ಲೂ ಪ್ರಗತಿ ಕಾಣುತ್ತಿದೆ.
ಎಂಥ ಲೇಖನಗಳು?
ಮಕ್ಕಳಿಗೆ ಪಠ್ಯವೆಂದರೆ ಅಪಥ್ಯ. ಅದೇ ಪಠ್ಯೇತರ ವಿಷಯವೆಂದರೆ ಆಸಕ್ತಿ ತೋರುವ ಅವಕಾಶ ಹೆಚ್ಚು. ಆದ್ದರಿಂದ ದಿನಪತ್ರಿಕೆ, ನಿಯತಕಾಲಿಕ, ಬೇರೆ ಬೇರೆ ಪುಸ್ತಕಗಳಿಂದ ಆರಿಸಿದ ಲೇಖನವನ್ನು ಕೊಡುತ್ತೇವೆ. ಅದು ಕಥೆ, ಇತಿಹಾಸ, ವಿಜ್ಞಾನ, ನಡೆ-ನುಡಿ, ಸಾಧಕರ ಪರಿಚಯ ಇತ್ಯಾದಿ ಮಕ್ಕಳು ಅತ್ಯಗತ್ಯವಾಗಿ ತಿಳಿದುಕೊಂಡಿರಲೇ ಬೇಕಾದಂತ ಯಾವುದಾದರೂ ವಿಷಯಗಳನ್ನೊಳಗೊಂಡಿರುತ್ತದೆ.
ಯಾರಿಗೆ ಮಾಡಿಸಬೇಕು?
ಈ ತರಬೇತಿಗೆ 5, 6 ಮತ್ತು 7ನೇ ತರಗತಿ ಅತ್ಯಂತ ಪ್ರಶಸ್ತವಾದ ಹಂತ. ಇಲ್ಲಿ ಅವರು ಎಷ್ಟು ಅಂಕಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯವಲ್ಲ. ಅವರುಎಸ್.ಎಸ್.ಎಲ್.ಸಿ ಮತ್ತು ಪಿಯುಸಿನಲ್ಲಿ ಎಷ್ಟು ಅಂಕಗಳನ್ನು ಗಳಿಸುತ್ತಾರೆ ಎಂಬುದೇ ಅತ್ಯಂತ ಮುಖ್ಯ. ಹೀಗಾಗಿ ಅವರನ್ನು ತಯಾರು ಮಾಡಲು ಇದು ಸರಿಯಾದ ಹಂತ ಮತ್ತು ಕ್ರಮ.
ಇತರ ಉಪಯೋಗಗಳು
ಇಲ್ಲಿ ಸಿದ್ಧ ಪ್ರಶ್ನೆಗಳು ಮತ್ತು ಸಿದ್ಧ ಉತ್ತರಗಳಿಲ್ಲ. ಮಕ್ಕಳು ಉರುಹೊಡೆಯಲು ಅವಕಾಶವೇ ಇಲ್ಲ. ಇದರಿಂದ ಉರುಹೊಡೆವ ರೋಗದಿಂದ ಮಕ್ಕಳನ್ನು ಮುಕ್ತಗೊಳಿಸಬಹುದು.
ಏಕಾಗ್ರತೆಗೆ ಮಾನಸಿಕ ವ್ಯಾಯಾಮ
ಮಕ್ಕಳ ಶೈಕ್ಷಣಿಕ ಯಶಸ್ಸಿಗೆ ಬೇರೆಲ್ಲಕ್ಕಿಂತ ಏಕಾಗ್ರತೆ ಮುಖ್ಯ. ಅದರ ವೃದ್ಧಿಗಾಗಿ ಈ ಮಾನಸಿಕ ವ್ಯಾಯಾಮ. ಬೋರ್ಡ್‌ನ ಮೇಲೆ ಎಲ್ಲರಿಗೂ ನೇರವಾಗಿ ಕಾಣುವಂತೆ ಮೂರು ನಾಲ್ಕು ಕಡೆ ಸೀಮೆ ಸುಣ್ಣದಿಂದ ಕಾಸಗಲದ ಗುರುತುಗಳನ್ನು ಮಾಡುತ್ತೇವೆ. ಮಕ್ಕಳಿಗೆ ಎದೆ ನೆಟ್ಟಗಿರುವಂತೆ ಕುಳಿತುಕೊಳ್ಳಲು ಹೇಳುತ್ತೇವೆ.
ನಸುನಗುತ್ತಾ, ದೀರ್ಘವಾಗಿ ಮತ್ತು ಸರಾಗವಾಗಿ ಉಸಿರಾಡುತ್ತಾ, ತಮ್ಮ ನೋಟಕ್ಕೆ ನೇರವಾಗಿರುವ ಯಾವುದಾದರೂ ಒಂದು ಗುರುತನ್ನು ದಿಟ್ಟಿಸಿ ನೋಡಲು ಹೇಳುತ್ತೇವೆ. ಅತ್ತಿತ್ತ ನೋಡದೆ ಕೇವಲ ಗುರುತಿನ ಮೇಲೆ ಮಾತ್ರ ಮನಸ್ಸನ್ನು ಕೇಂದ್ರೀಕರಿಸುವಂತೆ ಹೇಳುತ್ತೇವೆ. ಹೀಗೆ ಹೇಳುತ್ತೇಳುತ್ತಲೇ ಸುಮಾರು ಮೂರು ನಿಮಿಷಗಳ ಕಾಲ ಈ ಮಾನಸಿಕ ವ್ಯಾಯಾಮವನ್ನು ಮಾಡಿಸುತ್ತೇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.