1. ಬಿ.ಎಸ್ಸಿ (ಆಹಾರ ಸಂಸ್ಕರಣೆ) ಕೋರ್ಸ್ ಯಾವ ಕರ್ನಾಟಕದ ಕಾಲೇಜುಗಳಲ್ಲಿ ಲಭ್ಯವಿದೆ? ಹಾಗೂ ಯಾವ ಕಾಲೇಜಿನಲ್ಲಿ ಮಾಡಿದರೆ ಉತ್ತಮ?
ಹೆಸರು, ಊರು ತಿಳಿಸಿಲ್ಲ.
ಜೀವನ ಶೈಲಿ ಮತ್ತು ಅಗತ್ಯಗಳು ಬದಲಾಗಿರುವ ಈ ಕಾಲಘಟ್ಟದಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಆಹಾರ ತಂತ್ರಜ್ಞಾನ ಕ್ಷೇತ್ರ ಮುಂಚೂಣಿಯಲ್ಲಿದೆ. ಕಚ್ಛಾ ಧಾನ್ಯಗಳು ಮತ್ತು ಇನ್ನಿತರ ಆಹಾರ ಪದಾರ್ಥಗಳ ಶುದ್ಧೀಕರಣ, ಸಂಸ್ಕರಣೆ, ಸುರಕ್ಷತೆ ಮತ್ತು ಸೂಕ್ತ ಪ್ಯಾಕಿಂಗ್ ನಂತರ, ಬಳಕೆಗೆ ಯೋಗ್ಯ ರೀತಿಯಲ್ಲಿ ಸಿದ್ಧಪಡಿಸುವ ಕಾರ್ಯಗಳಲ್ಲಿ ಆಹಾರ ತಂತ್ರಜ್ಞಾನ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದಲ್ಲಿ, ಬಿ.ಎಸ್ಸಿ/ಬಿಟೆಕ್-ಆಹಾರ ತಂತ್ರಜ್ಞಾನ (ಫುಡ್ ಟೆಕ್ನಾಲಜಿ) ಕೋರ್ಸ್ ಮಾಡಬಹುದು. ಈ ಕೋರ್ಸ್‌ಗಳು ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಹಾಸನ, ಹಾವೇರಿ ಹೀಗೆ ಆಯ್ದ ಕೆಲವು ನಗರಗಳಲ್ಲಿ ಮಾತ್ರ ಲಭ್ಯ. ದೇಶದ ಇನ್ನಿತರ ಪ್ರಮುಖ ನಗರಗಳಲ್ಲೂ ಈ ಕೋರ್ಸ್ ಮಾಡಬಹುದು. ಕರ್ನಾಟಕದಲ್ಲಿ ಬಿಟೆಕ್ ಮಾಡಲು ಸಿಇಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಬಿ.ಎಸ್ಸಿ ಮಾಡಲು ಆಯಾ ಕಾಲೇಜುಗಳ ನಿಯಮಾವಳಿಗಳಂತೆ ಪ್ರವೇಶ ಪ್ರಕ್ರಿಯೆ ಇರುತ್ತದೆ.
ಈ ಕೋರ್ಸ್ ನಂತರ, ಸರ್ಕಾರಿ ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಸೇರಿದಂತೆ ಖಾಸಗಿ ಕ್ಷೇತ್ರದ ಆಹಾರ ಪದಾರ್ಥ ಮತ್ತು ಪಾನೀಯ ತಯಾರಿಕಾ ಉದ್ದಿಮೆಗಳು, ಆಹಾರ ಸಂಬಂಧಿತ (ಸಂರಕ್ಷಕಗಳು, ಬಣ್ಣಗಳು ಮತ್ತು ಸ್ವಾದಗಳು ಇತ್ಯಾದಿ) ಉದ್ದಿಮೆಗಳು, ಕೃಷಿ ಉದ್ದಿಮೆಗಳು, ಸಾವಯವ ಉದ್ದಿಮೆಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಹಾರ ಪರೀಕ್ಷಾ ಪ್ರಯೋಗಾಲಯಗಳು ಸೇರಿದಂತೆ ವಿಪುಲವಾದ ಉದ್ಯೋಗದ ಅವಕಾಶಗಳಿವೆ.
2. ನಾನು ದ್ವಿತೀಯ ಪಿಯುಸಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎಂಜಿನಿಯರಿಂಗ್ ಜೊತೆ ಬಿ.ಎಸ್ಸಿ ಮಾಡಬಹುದೇ?
ಮಾನ್ಯ ಎನ್.ಎಸ್, ಅರಸೀಕೆರೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳ್ಳುತ್ತಿದ್ದು, ಎರಡು ಪದವಿಪೂರ್ವ ಕೋರ್ಸ್‌ಗಳನ್ನು ಏಕಕಾಲದಲ್ಲಿ ಮಾಡಬಹುದು. ಈ ಯೋಜನೆಯನ್ನು ಜಾರಿಗೆ ತರಲು ಇಚ್ಛಿಸುವ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು, ಹಾಜರಾತಿ ನೀತಿಯನ್ನು ನಿಗದಿಪಡಿಸಬಹುದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಅನುಸಾರ ವಿಜ್ಞಾನ, ಸಮಾಜ ವಿಜ್ಞಾನ, ಕಲೆ, ಮಾನವಿಕ ವಿಷಯಗಳು ಇತ್ಯಾದಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸಮಗ್ರವಾದ ಬಹು-ಶಿಸ್ತೀಯ ಶಿಕ್ಷಣದ ಅನುಭವದಿಂದ ತಮ್ಮ ಉದ್ಯೋಗಾರ್ಹತೆಯನ್ನು ಹೆಚ್ಚಿಸಿಕೊಳ್ಳಬಹುದು.
ಆದರೆ, ಒಂದೇ ವಿಭಾಗದ ಎರಡು ಕೋರ್ಸ್‌ಗಳನ್ನು ಮಾಡುವುದೇ ಅಥವಾ ವಿಭಿನ್ನ ವಿಭಾಗಗಳ ಕೋರ್ಸ್‌ಗಳನ್ನು ಮಾಡುವುದು ಉದ್ಯೋಗಾರ್ಹತೆಯ ದೃಷ್ಠಿಯಿಂದ ಸೂಕ್ತವೇ ಎಂದು ನಿರ್ಧರಿಸಿ.
3. ನಾನು ದ್ವಿತೀಯ ಪಿಯುಸಿ ಮುಗಿಸಿದ್ದು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಅಲ್ಲದೆ ಉತ್ತಮ ಆದಾಯ ಸಿಗುವ ಯಾವ ಕೋರ್ಸ್ ಮಾಡಬಹುದು?
ದೀಪ್ತಿ, ಊರು ತಿಳಿಸಿಲ್ಲ.
ವಿಜ್ಞಾನದ ವಿದ್ಯಾರ್ಥಿಗಳು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಅಲ್ಲದೆ ವಿಜ್ಞಾನ ಸಂಬಂಧಿತ ಇನ್ನಿತರ ಕೋರ್ಸ್‌ಗಳನ್ನು ಮಾಡಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಉದಾಹರಣೆಗೆ, ಬಿ.ಎಸ್ಸಿ ಕೋರ್ಸನ್ನು ಕಂಪ್ಯೂಟರ್ ಸೈನ್ಸ್ (ಅನೇಕ ಆಯ್ಕೆಗಳು), ಅರಣ್ಯ ವಿಜ್ಞಾನ, ಆಹಾರ ತಂತ್ರಜ್ಞಾನ, ಪುಷ್ಠಿ ವಿಜ್ಞಾನ, ಏರೋನಾಟಿಕಲ್, ಅಪ್ಲೈಡ್ ಫಿಸಿಕ್ಸ್, ಎಲೆಕ್ಟ್ರಾನಿಕ್ಸ್, ಹೋಟೆಲ್ ಮ್ಯಾನೇಜ್‌ಮೆಂಟ್, ಟ್ರಾವೆಲ್, ಟೂರಿಸಮ್, ಪತ್ರಿಕೋದ್ಯಮ, ಸೌಂಡ್ ಎಂಜಿನಿಯರಿಂಗ್, ಆಕ್ಚುಏರಿಯಲ್ ವಿಜ್ಞಾನ (Actuarial Science), ಮುಂತಾದ ವಿಷಯಗಳಲ್ಲಿ ಮಾಡಬಹುದು. ಅದೇ ರೀತಿ, ಬಿ.ಎಸ್ಸಿ (ಸಾಂಪ್ರದಾಯಿಕ ವಿಷಯಗಳು), ಬಿಸಿಎ, ಬಿ.ಡಿಸೈನ್ (ಫ್ಯಾಷನ್, ಪ್ರಾಡಕ್ಟ್, ವಿಎಫ್‌ಎಕ್ಸ್, ಅನಿಮೇಷನ್), ಬಿಬಿಎ, ಬಿಕಾಂ, ಬಿಫಾರ್ಮ, ಬಿಎ, ಸಿಎ, ಎಸಿಎಸ್ ಮುಂತಾದ ಕೋರ್ಸ್‌ಗಳನ್ನೂ ಮಾಡಬಹುದು. ಒಟ್ಟಾರೆ ಹೇಳುವುದಾದರೆ, ಪಿಯುಸಿ ನಂತರ, ವಿಜ್ಞಾನದ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಕೋರ್ಸ್ ಆಯ್ಕೆಗಳಿವೆ.
ಸಾಧನೆಯ ಮಾರ್ಗದಲ್ಲಿ ಆದಾಯಕ್ಕಿಂತ ವೃತ್ತಿಯಲ್ಲಿ ಸಿಗುವ ಸಂತೃಪ್ತಿ ಮುಖ್ಯವಾಗುತ್ತದೆ. ಆದ್ದರಿಂದ, ನಿಮ್ಮ ಆಸಕ್ತಿ, ಅಭಿರುಚಿಯಂತೆ, ವೃತ್ತಿ ಯೋಜನೆಯನ್ನು ಮಾಡಿ ಅದರಂತೆ ಕೋರ್ಸ್ ಆಯ್ಕೆ ಮಾಡುವುದು, ನಿಮ್ಮ ಭವಿಷ್ಯದ ದೃಷ್ಠಿಯಿಂದ ಸೂಕ್ತ.
4. ನಾನೀಗ ಬಿ.ಎಸ್ಸಿ ಎರಡನೇ ವರ್ಷದಲ್ಲಿ ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನದ ವಿಷಯಗಳನ್ನು ಓದುತ್ತಿದ್ದೇನೆ. ಮುಂದೆ ಯಾವ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ ಎಂದು ತಿಳಿಸಿ. ನನಗೆ ಸರ್ಕಾರಿ ನೌಕರಿಯ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವ ಆಸಕ್ತಿ ಹೊಂದಿದ್ದು ಮನೆಯಿಂದಲೇ ತಯಾರಿ ನಡೆಸಿರುವೆ. ಮಾರ್ಗದರ್ಶನ ನೀಡಿ.
ಹೆಸರು, ಊರು ತಿಳಿಸಿಲ್ಲ.
ಬಿ.ಎಸ್ಸಿ ನಂತರ ಹೆಚ್ಚಿನ ತಜ್ಞತೆಗಾಗಿ ಸ್ನಾತಕೋತ್ತರ/ಪಿಎಚ್.ಡಿ ಕೋರ್ಸ್ ಮಾಡಬಹುದು. ಅಥವಾ, ಸರ್ಕಾರಿ ನೌಕರಿ ಪಡೆಯಲು ಯುಪಿಎಸ್‌ಸಿ, ಕೆಪಿಎಸ್‌ಸಿ, ಎಸ್‌ಎಸ್‌ಸಿ, ಐಬಿಪಿಎಸ್, ಪೊಲೀಸ್ ಇಲಾಖೆ, ರೈಲ್ವೇಸ್ ಮುಂತಾದ ಸಂಸ್ಥೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಬಹುದು. ಇದಲ್ಲದೆ ಸರ್ಕಾರಿ ವಲಯದ ಪ್ರತಿಷ್ಠಿತ ಸಂಸ್ಥೆಗಳಾದ ಐಎಸ್‌ಆರ್‌ಒ, ಬಿಎಆರ್‌ಸಿ, ಡಿಆರ್‌ಡಿಒ, ಸಿಎಸ್‌ಐಆರ್ ಮುಂತಾದ ಸಂಸ್ಥೆಗಳಲ್ಲಿಯೂ ವೃತ್ತಿಯನ್ನು ಅರಸಬಹುದು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಯೋಜನಾ ಶಕ್ತಿ, ಏಕಾಗ್ರತೆ, ಪರಿಶ್ರಮ, ಸಮಯದ ನಿರ್ವಹಣೆ ಮತ್ತು ನಿರಂತರ ಅಭ್ಯಾಸವಿರಬೇಕು. ಸ್ವಂತ ಪರಿಶ್ರಮದಿಂದ ಐಎಎಸ್/ ಕೆಎಎಸ್ ನಂತಹ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ನಿಮ್ಮ ಸಾಮರ್ಥ್ಯ, ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸೂಕ್ತವಾದ ಕಾರ್ಯತಂತ್ರವನ್ನು ರೂಪಿಸಿ.
5. ನಾನು ಬಿಕಾಂ ಅಂತಿಮ ವರ್ಷದಲ್ಲಿದ್ದು, ಎಂಬಿಎ ಮಾಡಲು ನಿರ್ಧರಿಸಿದ್ದೇನೆ. ಹಾಗೂ, ನನಗೆ ಸಿಎಂಎ ಮತ್ತು ಸಿಎಫ್‌ಎ ಕೋರ್ಸ್ಗಳ ಬಗ್ಗೆಯೂ ಆಸಕ್ತಿಯಿದೆ. ಈ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿ.
ಅದಿತಿ ದೇಶ್‌ಪಾಂಡೆ, ಕೊಪ್ಪಳ.
ಎಂಬಿಎ ಕೋರ್ಸ್ ಜೊತೆಗೆ ನಿಮ್ಮ ಆದ್ಯತೆಯಂತೆ, ಹೆಚ್ಚಿನ ತಜ್ಞತೆಗಾಗಿ ಸಿಎಂಎ ಅಥವಾ ಸಿಎಫ್‌ಎ ಕೋರ್ಸ್ ಮಾಡಬಹುದು.
6. ನಾನು ದ್ವಿತೀಯ ಪಿಯುಸಿ ವ್ಯಾಸಂಗ ಮುಗಿಸಿ ಕೆಸಿಇಟಿ ಪರೀಕ್ಷೆ ಬರಿಯುತ್ತಿದ್ದೇನೆ. ಯಾವ ವೃತಿಪರ ಕೋರ್ಸ್ ಆರಿಸಿದರೆ ಉತ್ತಮ?
ಕುಸುಮ, ತುಮಕೂರು.
ಬದುಕಿನ ಪಾಠಶಾಲೆಯಲ್ಲಿ ಯಶಸ್ಸನ್ನು ಗಳಿಸಲು ಇಂತದ್ದೇ ಕೋರ್ಸ್ ಅಥವಾ ವೃತ್ತಿಯನ್ನು ಅನುಸರಿಸಬೇಕೆಂಬ ನಿಯಮವೇನಿಲ್ಲ. ಆದರೆ, ನಿಮಗೆ ಆಸಕ್ತಿಯಿರುವ, ಅಭಿರುಚಿಯಿರುವ, ಸ್ವಾಭಾವಿಕ ಪ್ರತಿಭೆಯಿರುವ ವೃತ್ತಿಯನ್ನು ಅನುಸರಿಸಿದರೆ ಯಶಸ್ಸು ಸುಲಭವೆನ್ನುವುದು ನಿರ್ವಿವಾದ. ಹಾಗಾಗಿ, ನಿಮ್ಮ ಅಭಿರುಚಿ ಮತ್ತು ಸಾವi.ರ್ಥ್ಯವನ್ನು ಅರಿಯಲು ಆಪ್ಟಿಟ್ಯೂಡ್ ಟೆಸ್ಟ್ ಮಾಡಿ, ಅದರ ಆಧಾರದ ಮೇಲೆ ಸೂಕ್ತವಾದ ವೃತ್ತಿ ಮತ್ತು ಕೋರ್ಸ್ ಆಯ್ಕೆ ಮಾಡುವುದು ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.