ಪರೀಕ್ಷಾಕೊಠಡಿಯಲ್ಲಿ ಆತಂಕಿತರಾಗಿ ಕುಳಿತುಕೊಳ್ಳುವ ವಿದ್ಯಾರ್ಥಿಗಳನ್ನು ಕಂಡಾಗೆಲ್ಲ ಮೊದಲಿಗೆ ಈ ವ್ಯವಸ್ಥೆಯ ಪರಿಶೀಲನೆ ಆಗಬೇಕು ಎನಿಸುತ್ತದೆ. ಆದರೆ ಕೆಲವು ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ತಮ್ಮ ಲೇಖನಾಯುಧಗಳನ್ನು ಮಸೆದು ಖುಷಿಯಾಗಿ ಕುಳಿತಿರುವುದನ್ನೂ ಕಂಡಿದ್ದೇನೆ.
ವಿದ್ಯಾರ್ಥಿಗಳ ಆತಂಕಕ್ಕೆ ಮುಖ್ಯ ಕಾರಣ ಅಪಯಶಸ್ಸಿನ ಭಯ. ನಿರೀಕ್ಷಿತ ಪ್ರಶ್ನೆಗಳು ಬಾರದಿದ್ದರೆ? ಕಡಿಮೆ ಅಂಕ ಬಂದರೆ? ಫೇಲಾದರೆ? ಅಂದರೆ ಮುಂದಿನ ಪರಿಣಾಮಗಳ ಬಗ್ಗೆ ಚಿಂತಾಕ್ರಾಂತರಾಗುತ್ತಾರೆ. ಪರೀಕ್ಷೆ ಇರುವುದು ವಿದ್ಯಾರ್ಥಿಗಳನ್ನು ಬೆದರಿಸಲು ಅಲ್ಲ. ಕಲಿಕಾಮಟ್ಟದ ಮೌಲ್ಯಮಾಪನ ನಡೆಯಲು ಪ್ರಸ್ತುತದಲ್ಲಿ ಈ ಪದ್ಧತಿ ಜಾರಿಯಲ್ಲಿದೆ. ಆದರೆ ವಿದ್ಯಾರ್ಥಿಗಳು ಗಮನಿಸಬೇಕಾದ ಮುಖ್ಯ ಅಂಶವೆಂದರೆ, ದಿನೇ ದಿನೇ ಪರೀಕ್ಷೆಗಳು ವಿದ್ಯಾರ್ಥಿಸ್ನೇಹಿಯಾಗುತ್ತಿವೆ. ಸೆಮಿಸ್ಟರ್ ಪದ್ಧತಿ, ಪ್ರಶ್ನಪತ್ರಿಕೆಯಲ್ಲಿ ಸರಳತೆ ಜಾರಿಯಾಗಿದೆ. ನೆನಪಿಗಿಂತ ವಿಷಯದ ಕೌಶಲದ ಪ್ರತಿಬಿಂಬ ಪಡೆಯುವ ಪರೀಕ್ಷಾಕ್ರಮಕ್ಕೆ ಒತ್ತು ನೀಡಲಾಗುತ್ತಿದೆ. ಆದುದರಿಂದ ಮೊದಲಿಗೆ ಈ ಭಯವನ್ನು ಬಿಡಬೇಕು.
ಪರೀಕ್ಷೆಗೆ ವರ್ಷಾರಂಭದಿಂದಲೂ ತಯಾರಿ ನಡೆಸಬೇಕು ಎಂಬ ಸೂಚನೆ ತಲೆತಲಾಂತರದಿಂದ ಇದೆ. ಆದರೆ ಕಲಿಕೆಯ ಗುಟ್ಟಿರುವುದು ಕೇವಲ ಸಾತತ್ಯದಿಂದಲ್ಲ. ಇದಕ್ಕೆ ಮುಖ್ಯವಾಗಿ ಏಕಾಗ್ರತೆ ಬೇಕು. ಮನಸ್ಸಿನ ಗ್ರಹಣಶಕ್ತಿ ಬಲವಾಗಿದ್ದರೆ ಯಾವುದೇ ವಿಷಯವನ್ನು ಕೆಲವೇ ಗಂಟೆಗಳಲ್ಲಿ ಕರಗತ ಮಾಡಿಕೊಳ್ಳಬಹುದು. ಏಕಾಗ್ರತೆ ಬರುವುದು ಅಭ್ಯಾಸದಿಂದ! ಅಂದರೆ ಸುತ್ತಿ ಸುಳಿಯುವ ಮನಸ್ಸನ್ನು ಕಲಿಕೆಯ ವಿಷಯದಲ್ಲಿ ಕಟ್ಟಿಹಾಕಿದರೆ ಅದು ಅನಿವಾರ್ಯವಾಗಿ ಅದರಲ್ಲಿ ಮುಳುಗಿ ಒಳಗಿನ ಮುತ್ತುರತ್ನಗಳನ್ನು ಮೇಲೆತ್ತಿ ತರುತ್ತವೆ. ಆಗ ನಮಗೆ ಕಲಿಕೆಯ ಆನಂದದ ಅರಿವಾಗುತ್ತದೆ. ಕುಳಿತಲ್ಲಿ ಕುಳಿತುಕೊಳ್ಳುವ ಅಭ್ಯಾಸ ಇದಕ್ಕೂ ಮುನ್ನಿನದು. ದೇಹದ ಚಡಪಡಿಕೆ ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಹಾಗೇ ಮನಸ್ಸಿನ ಚಡಪಡಿಕೆ ದೇಹದ ಮೇಲೂ ಪರಿಣಾಮ ಬೀರುತ್ತದೆ. ಕಲಿಕೆಯ ಶಿಸ್ತು ಹೊರಗಿನಿಂದ ಆರೋಪಿತವಾಗುವಂಥದ್ದಲ್ಲ, ಒಳಗಿನಿಂದ ವಿಕಾಸವಾಗಬೇಕು. ಅದೇ ಸಾಧನೆ. ಹೀಗೆಂದು ಇದು ಕೇವಲ ಯೋಗಿಗಳ ಸ್ವತ್ತಲ್ಲ; ಪ್ರತಿಯೊಬ್ಬ ವಿದ್ಯಾಕಾಂಕ್ಷಿಯ ಸ್ವತ್ತು. ಮೊದಲಿಗೆ ಬಲವಾದ ಸಂಕಲ್ಪ ಮಾಡಬೇಕು. ‘ಈ ದಿನ ಒಂದು ಘಂಟೆ ಅವಧಿಯಲ್ಲಿ ನಾನು ಈ ವಿಷಯದ ಇಂತಹ ಅಧ್ಯಾಯವನ್ನು ಕರಗತ ಮಾಡಿಕೊಳ್ಳುತ್ತೇನೆ’ ಎಂಬ ಸಂಕಲ್ಪ ಮಾಡಿ ಕುಳಿತ ಬಳಿಕ ಅಲ್ಲಾಡದಂತೆ ಕುಳಿತು ಅಧ್ಯಯನ ಮಾಡಬೇಕು. ಆರಂಭದಲ್ಲಿ ಕಷ್ಟವಾದೀತು. ಆದರೆ ಕನಿಷ್ಠ ದಿನಕ್ಕೆ ಒಂದು ಘಂಟೆಯಷ್ಟಾದರೂ ಏಕಾಗ್ರತೆಯಿಂದ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಪ್ರಥಮಶ್ರೇಣಿ ಖಚಿತ.
ಕೊರತೆಯೇಕೆ?
ಮನಸ್ಸಿನ ಸ್ವಭಾವವೇ ನಿಂತಲ್ಲಿ ನಿಲ್ಲದೆ ಸುತ್ತುವುದು. ಜೊತೆಗೆ ಅದಕ್ಕೆ ಇಂದ್ರಿಯಗಳ (ಕಣ್ಣು, ಕಿವಿ, ಮೂಗು, ನಾಲಗೆ, ಸ್ಪರ್ಶಗಳ) ಸೆಳೆತ ಬೇರೆ. ಆಧುನಿಕ ಯುಗದಲ್ಲಂತೂ ಇವು ಮತ್ತೂ ಜಾಗೃತವೂ ಸೂಕ್ಷ್ಮವೂ ಆಗಿ ವರ್ತಿಸುತ್ತಿವೆ. ಹಿಂದೆ ದೂರದ ದೃಶ್ಯ ನೋಡಲು ಅಲ್ಲಿಗೇ ಹೋಗಬೇಕಿತ್ತು. ಆದರೆ ಇಂದು ಅದನ್ನು ಅಂಜನ ಹಾಕಿದಂತೆ ನಮ್ಮ ಅಂಗೈಯ ಮೊಬೈಲ್ ಕೆಲವೇ ಸೆಕಂಡುಗಳಲ್ಲಿ ನಮ್ಮ ಮುಂದಿಡುತ್ತದೆ. ಬೇಕಾದ ಹಾಡು ಕೇಳಲು ಸಾಧ್ಯ; ಸಿನೆಮಾಕ್ಕೆ ಕೂಡ ಚಿತ್ರಮಂದಿರದ ಹಂಗಿಲ್ಲ. ಬೇಕಾದ ತಿನಿಸುಗಳಿಗೆ ಕುಳಿತಲ್ಲಿಂದಲೇ ಅಪ್ಪಣೆ ನೀಡಬಹುದು. ಇಂದು ಎಲ್ಲರೂ ಮಹಾರಾಜರೇ! ‘ಯಾರಲ್ಲಿ?’ ಎಂದರೆ, ‘ಏನಪ್ಪಣೆ?’ ಎಂದು ನೂರು ಆ್ಯಪ್‌ಗಳು ಕೈಕಟ್ಟಿ ನಿಲ್ಲುತ್ತವೆ. ಇಷ್ಟೆಲ್ಲ ಸವಲತ್ತುಗಳಿರುವಾಗ ವಿದ್ಯಾರ್ಥಿಗಳ ತಪೋಭಂಗ ಸಹಜವೇ. ಇನ್ನು ಸಾಮಾಜಿಕ ಮಾಧ್ಯಮಗಳು ಕೆದಕಿ ಕೆಣಕಿ ಹಣಕಿ ಸ್ಟೇಟಸ್ ಹಾಕಿಸಲು ತವಕಿಸುತ್ತವೆ. ಇಂತಹ ಸಂದರ್ಭದಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಬಲ್ಲವನೇ ಆಧುನಿಕ ಋಷಿ.
ಪರಿಹಾರವೇನು?
ಸೆಳೆತಗಳಿವೆ, ಏಕಾಗ್ರತೆ ಕಷ್ಟ – ಎನಿಸುವಾಗ ಕಗ್ಗದ ಈ ಪದ್ಯ ನೆನಪಿಸಿಕೊಳ್ಳೋಣ.
ಏಸು ಸಲ ತಪವಗೈದೇಸು ಬನ್ನವನಾಂತು ।
ಕೌಶಿಕಂ ಬ್ರಹ್ಮರ್ಷಿಪದಕರ್ಹನಾದನ್ ।।
ಘಾಸಿಪಡುತಿನ್ನೊಮ್ಮೆ ಮತ್ತೊಮ್ಮೆ ಮರಮರಳಿ ।
ಲೇಸಾಗಿಸಾತ್ಮವನು – ಮಂಕುತಿಮ್ಮ ।।
ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು ಎಂಬ ನಂಬಿಕೆ ಇರಲಿ. ಕೆಲವು ಪ್ರಾಯೋಗಿಕ ಅಂಶಗಳನ್ನು ಮನದಟ್ಟು ಮಾಡಿಕೊಂಡು ಆಚರಣೆಗೆ ತರುವುದರಿಂದ ಪರೀಕ್ಷಾ ಆತಂಕದಿಂದ ಪಾರಾಗಬಹುದು.
1. ಪರೀಕ್ಷಾ ಭಯ ಎನ್ನುವುದು ಪೂರ್ವಸಿದ್ಧತೆಯ ಕೊರತೆಯ ಸೂಚಕ. ಈ ಬಗೆಯ ಕೊರತೆ ಇದ್ದರೆ ಅದನ್ನು ಒಪ್ಪಿಕೊಳ್ಳೋಣ.
2. ದಿನದ ಒಟ್ಟೂ 24 ಗಂಟೆಗಳು ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದನ್ನು ಗಮನಿಸೋಣ. ಸೋರಿಕೆ ಕಂಡ ಕಡೆ ಅದನ್ನು ಭದ್ರಪಡಿಸೋಣ.
3. ಮೊಬೈಲ್, ಇಂಟರ್‌ನೆಟ್, ಟಿ. ವಿ.ಗೆ ಸಮಯವನ್ನು ನಿಗದಿಪಡಿಸೋಣ. ಪರೀಕ್ಷೆಗೆ ಹದಿನೈದು ದಿನ ಮುಂಚಿನಿಂದ ಇವುಗಳನ್ನು ಸಂಪೂರ್ಣ ನಿಷೇಧಿಸೋಣ. (ಇವುಗಳನ್ನು ಕಲಿಕೆಗಾಗಿ ಮಾತ್ರ ವಿವೇಚನೆಯಿಂದ ಬಳಸಬಹುದು; ಆದರೆ ಮಂಗಮನಸ್ಸು ಅಲ್ಲಿಂದ ರೀಲ್ಸ್‌ಗೆ ಜಿಗಿಯದಂತೆ ಜಾಗ್ರತೆ ವಹಿಸೋಣ.)
4. ಪಠ್ಯಗಳ ಸಾರಕ್ಕೆ ತಕ್ಕಂತೆ ಗಟ್ಟಿಯಾದ ಓದು, ಬರವಣಿಗೆ ಮತ್ತು ಪುನರ್ಮನನಗಳನ್ನು ಮಾಡೋಣ. ನೆನಪಿಡಿ ಟಿಪ್ಪಣಿ ತೆಗೆಯುವುದು, ಬರಹದಲ್ಲಿ ಮೂಡಿಸುವುದನ್ನು ಮಾಡಿದರೆ ಅದು ಮನಸ್ಸಿನಲ್ಲಿ ಉಳಿಯುತ್ತದೆ. 24–10–7 – ಈ ಸೂತ್ರವನ್ನು ಪಾಲಿಸಿ. ಅಂದರೆ ಓದಿದ್ದನ್ನು 24 ಗಂಟೆಯೊಳಗೆ ಮನಸ್ಸಿಗೆ ತಂದುಕೊಳ್ಳಬೇಕು; ಇದು ಹತ್ತು ನಿಮಿಷದ ಮನೋವ್ಯಾಯಾಮ, ಹೀಗೆ ಏಳು ದಿನ ಮಾಡಿದರೆ ಆ ವಿಷಯ ನಮ್ಮ ಮನಸ್ಸಿನಲ್ಲಿ ನೆಲೆ ನಿಲ್ಲುವುದು.
5. ನಿತ್ಯ ಲಘು ವ್ಯಾಯಾಮ, ಸ್ನಾನ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡೋಣ. ದೇಹದಂಡನೆ, ಉಪವಾಸ, ಅತಿಯಾದ ಚಹಾ–ಕಾಫಿಗಳ ಸೇವನೆ ಮಾಡದಿರೋಣ.
6. ಪರೀಕ್ಷಾ ಹಿಂದಿನ ದಿನವೂ ಸೇರಿದಂತೆ ಪ್ರತಿ ದಿನ ಕನಿಷ್ಠ ಎಂಟು ಗಂಟೆ ನಿದ್ರೆ ಮಾಡೋಣ. ನಿದ್ರೆಯ ಸಮಯದಲ್ಲಿ ಕಲಿತ ವಿಷಯಗಳು ಮನಸ್ಸಿನಲಿ ನೆನಪಿನ ಕೋಶಗಳಾಗಿ ಪರಿವರ್ತಿತವಾಗುತ್ತವೆ. ಆದುದರಿಂದ ನಿದ್ರೆಗೆಡದಿರೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.