1. ನನ್ನ ತಮ್ಮ ಈಗ ದ್ವಿತೀಯ ಪಿಯುಸಿ ಮಾಡುತ್ತಿದ್ದು ಮುಂದೆ ಸಿಎ(ಚಾರ್ಟೆಡ್ ಅಕೌಂಟೆಂಟ್) ಮಾಡುವ ಉತ್ಸಾಹದಲ್ಲಿದ್ದಾನೆ. ದಯವಿಟ್ಟು ಈ ಕೋರ್ಸ್ ಕುರಿತ ಮಾಹಿತಿ ನೀಡಿ.
ಉದಯಚಂದ್ರ, ಕುಂದಾಪುರ.
ಪಿಯುಸಿ ಮುಗಿಸಿ ಸಿಎ ಫೌಂಡೇಷನ್ ಕೋರ್ಸ್ ಮಾಡಿ ಇಂಟರ್‌ಮೀಡಿಯೆಟ್ ಕೋರ್ಸ್‌ಗೆ ನೋಂದಾ ಯಿಸಿಕೊಳ್ಳಬೇಕು. ಜೊತೆಗೆ 3 ವರ್ಷದ ಆರ್ಟಿಕಲ್ ಟ್ರೈನಿಂಗ್‌ಗೆಸೇರಬೇಕು. ಇಂಟರ್‌ಮೀಡಿಯೆಟ್ ಪಾಸಾದ ನಂತರ ಫೈನಲ್‌ಗೆ ನೋಂದಾಯಿಸಿ, ಪರೀಕ್ಷೆಯಲ್ಲಿ ಪಾಸಾಗಬೇಕು. ಫೈನಲ್ ಪರೀಕ್ಷೆಗೆ ಮುಂಚೆ, ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್ ಮಾಡಿರಬೇಕು. ಒಟ್ಟಾರೆ, ಸಿಎ ಕೋರ್ಸ್ ಮಾಡಲು ಕನಿಷ್ಠ 5ರಿಂದ 6 ವರ್ಷ ಬೇಕಾಗುತ್ತದೆ.
ಈ ವೃತ್ತಿಯಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಂಖ್ಯಾ ಕೌಶಲ, ವಿಶ್ಲೇಷಾತ್ಮಕ ಕೌಶಲ, ಆರ್ಥಿಕ ನಿರ್ವಹಣೆ ಮತ್ತು ವ್ಯಾಪಾರೋದ್ಯಮ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಹಾಗಾಗಿ, ಈ ವೃತ್ತಿಗೆ ಬೇಕಾದ ಕೌಶಲಗಳ ಜೊತೆಗೆ ಸ್ವಾಭಾವಿಕ ಆಸಕ್ತಿ ಮತ್ತು ಅಭಿರುಚಿಯಿದ್ದರೆ, ಸಿಎ ಕೋರ್ಸ್ ಮಾಡಬಹುದು. ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಹಲವು ವರ್ಷಗಳ ಅನುಭವದ ನಂತರ ಸ್ವತಂತ್ರವಾಗಿ ಪ್ರಾಕ್ಟೀಸ್ ಮಾಡಬಹುದು. ಹೆಚ್ಚಿನ ವಿವರಗಳಿಗೆ ಪರಿಶೀಲಿಸಿ: https://icai.org/
2. ನಾನು ಸ್ನಾತಕೋತ್ತರ ಪದವಿಯ ನಂತರ, ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಬೇಕು ಎಂದುಕೊಂಡಿದ್ದೇನೆ. ಆದರೆ, ಇದರೊಂದಿಗೆ ನನಗೆ ಕುಟುಂಬಕ್ಕೂ ಆರ್ಥಿಕ ನೆರವು ನೀಡಬೇಕಾಗಿದೆ. ಈ ಕಾರಣಕ್ಕೆ, ಪರೀಕ್ಷೆ ತಯಾರಿ ನಡೆಸಲು ನನ್ನ ಆತ್ಮವಿಶ್ವಾಸ ಕಡಿಮೆಯಾಗುತ್ತಿದೆ. ನಾನು ನನ್ನ ಗುರಿ ತಲುಪಲು ಏನು ಮಾಡಬೇಕು?
ಹೆಸರು, ಊರು ತಿಳಿಸಿಲ್ಲ.
ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ. ಹಾಗಾಗಿ, ನಿಮ್ಮ ಈಗಿನ ಪರಿಸ್ಥಿತಿಯಿಂದ ಎದೆಗುಂದದೆ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಸ್ನಾತಕೋತ್ತರ ಪದವಿಯ ಅಧಾರದ ಮೇಲೆ ಪೂರ್ಣಾವಧಿ/ಅರೆಕಾಲಿಕ ಕೆಲಸಗಳನ್ನು ಮಾಡುತ್ತಾ ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗುವುದು ಅಸಂಭವವಲ್ಲ. ದೃಡವಾದ ಸಂಕಲ್ಪ, ಸಮಯದ ನಿರ್ವಹಣೆ ಮತ್ತು ಪರಿಶ್ರಮದಿಂದ, ನಿಮ್ಮ ಗುರಿಯನ್ನು ಸೇರಬಹುದು. ನೆನಪಿರಲಿ; ಮನಸ್ಸಿದ್ದರೆ ಮಾರ್ಗವೆಂಬುದು ಜನಪ್ರಿಯ ನುಡಿಗಟ್ಟು ಮಾತ್ರವಲ್ಲ; ಅದರಲ್ಲಿದೆ ಮಾನವನ ಅಂತರಾಳದಲ್ಲಿರುವ ಅಪಾರವಾದ ಶಕ್ತಿಯನ್ನು ಕೇಂದ್ರೀಕರಿಸಿ, ಗುರಿಯನ್ನು ಮುಟ್ಟುವ ಗುಟ್ಟು. ಶುಭಹಾರೈಕೆಗಳು.
3. ಬಿಎ ಕೋರ್ಸ್ ಮಾಡಿದರೆ ಮುಂದೆ ನಾವು ಯಾವ ರೀತಿಯ ಕೆಲಸಕ್ಕೆ ಸೇರಬಹುದು ತಿಳಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದೇ?
ಹೆಸರು, ಊರು ತಿಳಿಸಿಲ್ಲ.
ಸಾಮಾನ್ಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಬಿಎ ನಂತರದ ಆಯ್ಕೆಯಲ್ಲಿ ವಿಪುಲತೆಯೂ ವೈವಿಧ್ಯತೆಯೂ ಇದೆ. ಬಿಎ ನಂತರ ಯುಪಿಎಸ್‌ಸಿ, ಕೆಪಿಎಸ್‌ಸಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳನ್ನು ಪಡೆದುಕೊಳ್ಳಬಹುದು. ಹಾಗೂ, ನಿಮ್ಮ ಆಸಕ್ತಿಯ ಅನುಸಾರ ಬಿಎಸ್‌ಡಬ್ಲ್ಯು, ಎಲ್‌ಎಲ್‌ಬಿ, ಬಿಲಿಬ್, ಬಿಪಿಇಡಿ, ಸಿಎ, ಎಂಎ, ಎಂಬಿಎ ಮುಂತಾದ ಕೋರ್ಸ್‌ಗಳನ್ನು ಮಾಡಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=RW77sMi-ijY3.
4. ನಾನು ಬಿ ಫಾರ್ಮಾ ಕೊನೆಯ ವರ್ಷದಲ್ಲಿ ಓದುತ್ತಿದ್ದೇನೆ. ಉದ್ಯೋಗದ ಹಾಗೂ ಸಂಬಂಧಿತ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ತಿಳಿಸಿ.
ದಿವ್ಯಾ ವಡಗೋಲೆ, ಸದಲಗಾ.
ನಾಲ್ಕು ವರ್ಷದ ಬಿಫಾರ್ಮಾ ಕೋರ್ಸ್ ರಾಸಾಯನಿಕ ವಿಜ್ಞಾನ, ಆರೋಗ್ಯ, ಔಷದೋಪಚಾರ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಮತ್ತು ಬೇಡಿಕೆಯಲ್ಲಿರುವ ಕ್ಷೇತ್ರ. ಈ ಪದವಿಯ ನಂತರ, ಸರ್ಕಾರಿ ಮತ್ತು ಖಾಸಗಿ ವಲಯದ ಆಸ್ಪತ್ರೆಗಳು, ಫಾರ್ಮಾ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಆರೋಗ್ಯ ಮತ್ತು ಡ್ರಗ್ ಕಂಟ್ರೋಲ್ ಇಲಾಖೆಗಳು, ಪ್ರಯೋಗಾಲಯಗಳು, ಕಾಲೇಜುಗಳು, ಮೆಡಿಕಲ್ ಟ್ರಾನ್‌ಸ್ಕ್ರಿಪ್ಷನ್ ಸಂಸ್ಥೆಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವೃತ್ತಿಯ ಅವಕಾಶಗಳಿವೆ. ಉನ್ನತ ಶಿಕ್ಷಣಕ್ಕಾಗಿ, ಬಿಫಾರ್ಮಾ ಪದವಿಯ ನಂತರ ನೇರವಾಗಿ 3 ವರ್ಷದ ಡಾಕ್ಟರ್ ಅಫ್ ಫಾರ್ಮಸಿ ಕೋರ್ಸ್(ಫಾರ್ಮ್ ಡಿ) ಅಥವಾ 2 ವರ್ಷದ ಎಂಫಾರ್ಮಾ ಕೋರ್ಸ್ ಮಾಡಬಹುದು.
5. ನಾನು ವನ್ಯಜೀವಿ ಸಂರಕ್ಷಣಾ ಕ್ಷೇತ್ರದ ಕೋರ್ಸ್‌ಗಳನ್ನು ಕಲಿಯಬೇಕೆಂದಿರುವೆ. ಆದರೆ, ನಾನು ದ್ವಿತೀಯ ಪಿಯುಸಿಯಲ್ಲಿ ಮತ್ತು ಪದವಿಯಲ್ಲಿ ಜೀವಶಾಸ್ತ್ರ ಓದಿಲ್ಲ. ವನ್ಯಜೀವಿಗಳ ಸಂರಕ್ಷಣೆ ವಿಭಾಗದಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ದಯವಿಟ್ಟು ಮಾಹಿತಿ ಕೊಡಿ.
ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ.
ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟಿನ ಎಂಎಸ್‌ಸಿ ಕೋರ್ಸ್ ನಿಮಗೆ ಸೂಕ್ತವಾಗಬಹುದು. ಪ್ರವೇಶ ಪರೀಕ್ಷೆ, ಆಪ್ಟಿಟ್ಯೂಡ್ ಟೆಸ್ಟ್ ಮತ್ತು ಸಂದರ್ಶನದ ಮುಖಾಂತರ ಪ್ರವೇಶಾತಿಯಾಗುತ್ತದೆ. ಇದಲ್ಲದೆ, ದೂರ ಶಿಕ್ಷಣದ ಮುಖಾಂತರ ವನ್ಯಜೀವಿ ಸಂಬಂಧಿತ ಡಿಪ್ಲೊಮಾ ಕೋರ್ಸ್‌ಗಳನ್ನೂ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://collegedunia.com/college/19250-wildlife-institute-of-india-wii-dehradun/admission
6. ನಾನು ದ್ವಿತೀಯ ಪಿಯುಸಿ ನಂತರ, ಬಿಎ ಪದವಿಯಲ್ಲಿ (ಎಚ್‌ಕೆಎಸ್) ತೆಗೆದುಕೊಳ್ಳಬೇಕು ಎಂದುಕೊAಡಿದ್ದೇನೆ. ಈ ವಿಷಯಗಳ ಬಗ್ಗೆ ಮಾಹಿತಿ ನೀಡಿ. ಹಾಗೂ ಸೂಕ್ತವಾದ ಕಾಲೇಜುಗಳ ಮಾಹಿತಿ ತಿಳಿಸಿ.
ಅಲಿ, ದಾವಣಗೆರೆ.
ಉತ್ತಮ ಕಾಲೇಜುಗಳ ಆಯ್ಕೆಗೆ ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಫರ್ಮೇಷನ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಮತ್ತು ಇನ್ನಿತರ ಸಂಸ್ಥೆಗಳ ರ‍್ಯಾಂಕಿಂಗ್ ಮಾಹಿತಿಯನ್ನು ಪರಾಮರ್ಶಿಸಿ. ನೀವು ಬಿಎ ಪದವಿಯಲ್ಲಿ ತೆಗೆದುಕೊಳ್ಳಲು ಬಯಸುತ್ತಿರುವ ವಿಷಯಗಳ ಕುರಿತ ಸಂಪೂರ್ಣ ಮಾಹಿತಿಗಾಗಿ ಗಮನಿಸಿ:
http://davangereuniversity.ac.in/ug-syllabus/
7. ನಾನು ಬಿ.ಎಸ್‌ಸಿ ಮುಗಿಸಿ ಮುಂದೆ ಎಂ.ಎಸ್‌ಸಿ (ಫೊರೆನ್ಸಿಕ್ ಸೈನ್ಸ್) ಮಾಡುವ ಇಚ್ಛೆ ಇದೆ. ಈ ಕೋರ್ಸ್ ಹೇಗೆ ಸೇರಬಹುದು?
ಹೆಸರು, ಊರು ತಿಳಿಸಿಲ್ಲ.
ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್), ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಸ್ವಾಭಾವಿಕ ಅಸಕ್ತಿಯಿದ್ದು, ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ. ಸಾಮಾನ್ಯವಾಗಿ, ಕಾಲೇಜು/ವಿಶ್ವವಿದ್ಯಾಲಯವನ್ನು ಅವಲಂಬಿಸಿ ಪ್ರವೇಶ ಪರೀಕ್ಷೆ/ನೇರವಾದ ಪ್ರವೇಶಾತಿಯಿರುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: https://collegedunia.com/courses/master-of-science-msc-forensic-science
8. ಸರ್, ನಾನು ಎಂಜಿನಿಯರಿಂಗ್ ಪದವಿಯ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಇದೇ ಸಮಯದಲ್ಲಿ, ಕಾನೂನು ಪದವಿಯನ್ನು ಕೂಡಾ ಪಡೆಯಬೇಕೆಂದುಕೊಂಡಿರುವೆ. ಕಾನೂನು ಕಾಲೇಜುಗಳ ಬಗ್ಗೆ ಮಾಹಿತಿ ನೀಡಿ.
ಹೆಸರು, ಊರು ತಿಳಿಸಿಲ್ಲ.
ಕಾನೂನು ವೃತ್ತಿಗಾಗಿ, ಯಾವುದಾದರೂ ಪದವಿಯ ನಂತರ 3 ವರ್ಷದ ಎಲ್‌ಎಲ್‌ಬಿ ಕೋರ್ಸ್ ಮಾಡಬೇಕು.
ಸಾಮಾನ್ಯವಾಗಿ ಈ ಕೋರ್ಸಿಗೆ ಸಿಎಲ್‌ಎಟಿ/ಎಲ್‌ಎಸ್‌ಎಟಿ ಪ್ರವೇಶ ಪರೀಕ್ಷೆ ಬರೆಯಬೇಕು. ಆದರೆ, ಕೆಲವು ಕಾಲೇಜುಗಳಲ್ಲಿ ನೇರವಾಗಿಯೂ ಪ್ರವೇಶಾತಿಯಾಗುತ್ತದೆ. ಪ್ರಮುಖವಾಗಿ, ನೀವು ಮಾಡುವ ಕೋರ್ಸಿಗೆ, ಬಾರ್ ಕೌಂಸಿಲ್ ಅಫ್ ಇಂಡಿಯ ಮಾನ್ಯತೆಯಿರಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://law.careers360.com/colleges/list-of-llb-colleges-in-karnataka
9. ನಾನು 2021 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ ಸೇರ್ಪಡೆಯಾಗಿರುತ್ತೇನೆ. ಆ ಸಮಯದಲ್ಲಿ, ನಾನು ಪದವಿಯ 5 ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೆ. ಹಾಗಾಗಿ, ಈ ಸಲ 6 ನೇ ಸೆಮಿಸ್ಟರ್ ಪರೀಕ್ಷೆ ಬರೆಯಬಹುದೇ? ಇದರಿಂದ ಮುಂದೆ ಪದವಿಯ ಮಾನ್ಯತೆ ಸರಿಯಾಗಿರುವುದೇ?
ಹೆಸರು, ಊರು ತಿಳಿಸಿಲ್ಲ.
ನಮಗಿರುವ ಮಾಹಿತಿಯಂತೆ, ನಿಮ್ಮ ಇಲಾಖೆಯ ಅನುಮತಿಯನ್ನು ತೆಗೆದುಕೊಂಡು ಪರೀಕ್ಷೆಯನ್ನು ಬರೆಯಬಹುದು. ಪದವಿಯನ್ನು ಗಳಿಸಿದ ನಂತರ ಮಾನ್ಯತೆಯ ಸಮಸ್ಯೆ ಉದ್ಭವಿಸುವುದಿಲ್ಲ.
10. ನಾನು ಬಿಎಸ್‌ಸಿ(ಪಿಎಂಎಸ್) ಮುಗಿಸಿ, ಕೆಎಎಸ್‌ಗೆ ಕೋಚಿಂಗ್ ತೆಗೆದುಕೊಳ್ಳುತ್ತಿದ್ದೇನೆ. ನನಗೆ ಖಾಸಗಿಯಾಗಿ ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡಬೇಕೆಂದಿದೆ. ಈ ಬಗ್ಗೆ ಮಾಹಿತಿ ನೀಡಿ.
ಹೆಸರು, ಊರು ತಿಳಿಸಿಲ್ಲ.
ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸೇರಿದಂತೆ ಯುಜಿಸಿ ಮಾನ್ಯತೆ ಪಡೆದ ಅನೇಕ ವಿಶ್ವವಿದ್ಯಾಲಯಗಳಲ್ಲಿ, ದೂರಶಿಕ್ಷಣದ ಮೂಲಕ ಎಂ.ಎಸ್‌ಸಿ (ಭೌತಶಾಸ್ತ್ರ) ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.