ಪದವಿ ಮುಗಿಸಿದವರ ಅಥವಾ ಪದವಿ ಕೊನೆಯ ವರ್ಷದ ವಿದ್ಯಾರ್ಥಿಗಳ ತಲೆ ಗೊಂದಲದ ಗೂಡಾಗಿರುತ್ತದೆ. ಆದರೆ ಈ ಧಾವಂತದ ಯುಗದಲ್ಲಿ ನಮ್ಮ ಜೀವನ ಪಥವನ್ನು ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಇತ್ತೀಚೆಗಷ್ಟೇ ಎಂಬಿಎ - ಪಿಜಿಸಿಇಟಿ ಗೆ ಸಂಬಂಧಪಟ್ಟ ಅಧಿಸೂಚನೆ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಎಂಬಿಎ ಪ್ರವೇಶ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.
1. ತಡ ಮಾಡಬೇಡಿ ಈಗಲೇ ಆರಂಭಿಸಿ: ಸಿಎಟಿ, ಎಂಎಟಿ ಅಥವಾ ಪಿಜಿಸಿಇಟಿ, ಯಾವುದೇ ಪ್ರವೇಶ ಪರೀಕ್ಷೆ ಆಗಿರಬಹುದು. ಪರೀಕ್ಷೆಗಳಿಗಾಗಿ ಸಿದ್ಧತೆಯನ್ನು ಇಂದೇ ಆರಂಭಿಸಿ, ಸಕಾರಣವಿಲ್ಲದೆ, ತಯಾರಿಯನ್ನು ಯಾವ ಕಾರಣಕ್ಕೂ ಮುಂದೂಡಬೇಡಿ. ಉತ್ತಮ ವಿದ್ಯಾಲಯಗಳಲ್ಲಿ ಅಥವಾ ಉತ್ತಮವಾದ ಬಿ-ಸ್ಕೂಲ್‌ಗಳಲ್ಲಿ ಯಾವುದೇ ಡೊನೇಷನ್ ಇಲ್ಲದೆ ಪ್ರವೇಶ ಗಿಟ್ಟಿಸ ಬೇಕಾದಲ್ಲಿ ಇಂದಿನಿಂದಲೇ ಉತ್ತಮ ತಯಾರಿ ನಡೆಸಿ.
2. ಪಠ್ಯಕ್ರಮವನ್ನು ಡೌನ್‌ಲೋಡ್ ಮಾಡಿಕೊಳ್ಳಿ: ಯಾವ ಪರೀಕ್ಷೆಗೆ ಹಾಜರಾಗಬೇಕು? ಹೇಗೆ ತಯಾರಾಗಬೇಕು ಎಂಬುದನ್ನು ಮನಸ್ಸಿನಲ್ಲೇ ನಿರ್ಧರಿಸಿಕೊಳ್ಳಿ, ಅದರ ಪ್ರಕಾರ ಯೋಜನೆ ಮಾಡಿಕೊಳ್ಳಿ. ಮುಖ್ಯವಾಗಿ ಪಠ್ಯಕ್ರಮಕ್ಕೆ ಸಂಬಂಧಪಟ್ಟ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಿ. ವಿವಿಧ ಪರೀಕ್ಷೆಗಳ ಪಠ್ಯಕ್ರಮಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಕೂಡಲೇ ನೋಟ್ ಮಾಡಿಕೊಳ್ಳಿ ಹಾಗೂ ಅದರಂತೆ ಅಭ್ಯಾಸ ನಡೆಸಿ.
3. ಪರೀಕ್ಷೆಯ ಮಾದರಿ: ಎಲ್ಲಾ ಪ್ರವೇಶ ಪರೀಕ್ಷೆಗಳ ಮಾದರಿಯನ್ನು ತಿಳಿಯಲು ಪ್ರತಿಯೊಂದು ಪರೀಕ್ಷೆಯ (XAT, MAT, SNAP, PGCET) ವೆಬ್‌ಸೈಟ್ ಅನ್ನು ನೋಡಿಕೊಂಡು ಸಿದ್ಧರಾಗಿರಿ. ಪಠ್ಯಕ್ರಮ, ಮಾದರಿ ಪ್ರಶ್ನೆ ಪತ್ರಿಕೆ, ಆಯ್ಕೆಯ ಕ್ರಮದ ಬಗ್ಗೆ ಸರಿಯಾದ ಮಾಹಿತಿ ನಿಮ್ಮಲ್ಲಿರಲಿ.
4. ಅಧ್ಯಯನ ವಸ್ತು: ಪರೀಕ್ಷೆಗೆ ಅಧ್ಯಯನ ಪ್ರಾರಂಭಿಸುವ ಮೊದಲೇ ಸಂಬಂಧಪಟ್ಟ ಎಲ್ಲಾ ಅಧ್ಯಯನ ವಸ್ತುವನ್ನು ಸಿದ್ಧವಾಗಿಟ್ಟುಕೊಳ್ಳಿ. ಸಾಮಾನ್ಯವಾಗಿ ಎಲ್ಲಾ ಎಂಬಿಎ ಪ್ರವೇಶ ಪರೀಕ್ಷೆಗಳಲ್ಲಿ ಈ ಕೆಳಕಂಡಂತೆ ಕೆಲವೊಂದು ವಿಭಾಗಗಳಾಗುತ್ತದೆ.
l ಇಂಗ್ಲಿಷ್ ವಿಷಯದ ಬಗೆಗಿನ ಜ್ಞಾನ: ಎ. ಸಮಾನಾರ್ಥಕ ಪದ, ಬಿ. ವಿರುದ್ಧಾರ್ಥಕ ಪದ, ವಾಕ್ಯಗಳಿಗೆ ಸಿ. ಒಂದು ಶಬ್ದದಲ್ಲಿ ಉತ್ತರ ಕೊಡುವ ಸಾಮರ್ಥ್ಯ, ಡಿ. ಪಡೆನುಡಿಗಳು, ಇ. ಸಾಮಾನ್ಯ ವ್ಯಾಕರಣ, ಎಫ್. ಇಂಗ್ಲಿಷ್ ಭಾಷೆಯಲ್ಲಿನ ಉತ್ತಮ ಪುಸ್ತಕಗಳು, ಜಿ. ಸರಿಯಾದ ವಾಕ್ಯ ರಚನೆ, ಹೆಚ್. ಸಂಬಂಧ ವಾಚಕಗಳ ಬಗ್ಗೆ ಅಧ್ಯಯನ ಮಾಡಬೇಕಾಗತ್ತದೆ.
l ಸಾಮಾನ್ಯ ಜ್ಞಾನ: 1. ಭಾರತದ ವ್ಯಾಪಾರ ವ್ಯವಸ್ಥೆ, 2. ಜಾಗತಿಕ ವ್ಯಾಪಾರ ವಹಿವಾಟುಗಳ ಪರಿಸರ 3. ಪ್ರಚಲಿತ ವಿದ್ಯಮಾನಗಳು, 4. ಸಾಂಸ್ಕೃತಿಕ, ಸಾಮಾಜಿಕ ವಿದ್ಯಮಾನಗಳು, ಅರ್ಥಶಾಸ್ತ್ರ ಮೂಲ ಮ್ಯಾನೇಜ್‌ಮೆಂಟ್ ಪರಿಕಲ್ಪನೆಗಳು, ರಾಜಕೀಯ ವಿದ್ಯಮಾನಗಳು, ಕ್ರೀಡೆ, ಪ್ರಶಸ್ತಿ ಹಾಗೂ ವ್ಯಕ್ತಿಗಳು ಮತ್ತು ಅವರ ಸಾಧನೆಗಳ ಬಗ್ಗೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಸ್ತೃತವಾಗಿ ಅಧ್ಯಯನ ಮಾಡಿ.
l ಪ್ರತಿನಿತ್ಯ ಯಾವುದಾದರೊಂದು ದಿನಪತ್ರಿಕೆಯನ್ನು ಓದಲು ಮರೆಯಬೇಡಿ.
l ಮಾನಸಿಕ ಸಾಮರ್ಥ್ಯ (ರೀಸನಿಂಗ್ ಮತ್ತು ಜನರಲ್ ಇಂಟೆಲಿಜೆನ್ಸ್): ಸರಿಯಾ ವಿಚಾರ ಮಾಡಿ ಉತ್ತರ ನೀಡಬೇಕಾಗಿರುವುದರಿಂದ, ಒಗಟ್ಟಿನ ರೂಪದಲ್ಲಿರುವ ಪ್ರಶ್ನೆಗಳು (ಪಝಲ್ಸ್), ರೇಖಾ ಚಿತ್ರಗಳು, ಸಾದೃಶ್ಯಗಳು (ಅನಾಲೋಜಿಸ್) ತರ್ಕ, ಮೌಖಿಕ ಸಾಮರ್ಥ್ಯ, ವಿಶ್ಲೇಷಣಾ ಸಾಮರ್ಥ್ಯಗಳ ಬಗ್ಗೆ ಪ್ರಶ್ನೆಗಳು ಬರುವುದರಿಂದ ಸಾಕಷ್ಟು ಅಧ್ಯಯನ ನಡೆಸಿ. ಈ ವಿಭಾಗದಲ್ಲಿ ಒಬ್ಬರೇ ಕುಳಿತುಕೊಂಡು ಅಧ್ಯಯನ ಮಾಡುವುದಕ್ಕೆ ಕಷ್ಟವಾದಲ್ಲಿ ನಿಪುಣರ ಹಾಗೂ ಸ್ನೇಹಿತರ ಸಹಾಯ ಪಡೆದುಕೊಳ್ಳಲು ಹಿಂಜರಿಯಬೇಡಿ.
l ಪರಿಮಾಣಾತ್ಮಕ ವಿಶ್ಲೇಷಣೆ (ಕ್ವಾಂಟಿಟೇಟಿವ್ ಅನಾಲಿಸಿಸ್): ಅಂಕಗಣಿತ, ದತ್ತಾಂಶ ವಿಶ್ಲೇಷಣೆ, ವಿವರಣೆ ಹಾಗೂ ವ್ಯಾಖ್ಯಾನ, ಸಂಖ್ಯಾ ಶಾಸ್ತ್ರದ ಮೇಲೆ ಕೆಲವೊಂದು ಸಲ ಪ್ರಶ್ನೆಗಳು ಬರುವ ಸಾಧ್ಯತೆ ಇದೆ.
5. ಈ ಪುಸ್ತಕಗಳನ್ನು ಅಧ್ಯಯನ ಮಾಡಿ: ಲಾಜಿಕಲ್ ರೀಸನಿಂಗ್– ಎ ಮಾಡರ್ನ್ ಅಪ್ರೋಚ್ ಟು ವರ್ಬಲ್ ಅಂಡ್ ನಾನ್ ವರ್ಬಲ್ ರೀಸನಿಂಗ್– ಆರ್.ಎಸ್. ಅಗರವಾಲ್. ಮ್ಯಾಥ್‌ಮ್ಯಾಟಿಕ್ಸ್ ಫಾರ್ ಎಂಬಿಎ– ಆರ್.ಎಸ್. ಅಗರವಾಲ್
6. ಹಳೆಯ ಪ್ರಶ್ನೆ ಪತ್ರಿಕೆಯನ್ನು ಬಿಡಿಸಿ: ಅಧ್ಯಯನ ಮಾಡುತ್ತಲೇಹಳೆಯ ಪ್ರಶ್ನೆ ಪ್ರತಿಕೆಗಳಿಗೆ ಉತ್ತರಿಸಲು ಪ್ರಯತ್ನಿಸಿ. ನೀವೇನಾದರೂಹತ್ತಕ್ಕಿಂತ ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿದ್ದೇ ಆದಲ್ಲಿ ನಿಮ್ಮ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಲು ಸಾಧ್ಯವಾಗುತ್ತದೆ. ಅದಕ್ಕಿಂತ ಮಿಗಿಲಾಗಿ ನಿಮಗೆ ಹೆಚ್ಚು ವಿಶ್ವಾಸ ಹೆಚ್ಚಾಗುತ್ತದೆ.
7. ಅವಶ್ಯವಿದ್ದಲ್ಲಿ ಕೋಚಿಂಗ್ ಸೆಂಟರ್‌ಗೆ ಸೇರಿಕೊಳ್ಳಿ: ನೀವು ಅಧ್ಯಯನ ಮಾಡುವಾಗ ಕೆಲವು ವಿಷಯಗಳು ಕ್ಲಿಷ್ಟ ಅನಿಸಿದ್ದಲ್ಲಿ ಉತ್ತಮವಾದ ಕೋಚಿಂಗ್ ಸೆಂಟರ್‌ಗೆ ಸೇರಿಕೊಳ್ಳಿ, ಹಾಗೆಯೇ ನಿಮ್ಮ ಪಠ್ಯಕ್ರಮದಲ್ಲಿನ ಎಲ್ಲಾ ವಿಷಯದ ಮೇಲೂ ಕೋಚಿಂಗ್ ಸೆಂಟರ್‌ನವರು ಹೆಚ್ಚಿನ ತರಬೇತಿಯನ್ನು ನೀಡುತ್ತಾರೆಯೇ ಎಂದು ತಿಳಿದುಕೊಳ್ಳಿ.
8. ಅಣಕು ಪರೀಕ್ಷೆಗೆ ಹಾಜರಾಗಿ: ಕೆಲವು ಸಂಸ್ಥೆಗಳು ಎಂಬಿಎ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದೇ ಪರೀಕ್ಷೆ ಹತ್ತಿರ ಇರುವಾಗ ಅಣಕು ಪರೀಕ್ಷೆಗಳನ್ನು ನಡೆಸುತ್ತಾರೆ. ಅಂತಹ ಅಣಕು ಪರೀಕ್ಷೆಗಳಿಗೆ ಹೆಚ್ಚು ಯೋಚಿಸದೆ ಹೆಸರು ನೋಂದಾಯಿಸಿ.
9. ನಿತ್ಯ ವೇಳಾ ಪಟ್ಟಿ ಹಾಗೂ ಸಮಯ ನಿರ್ವಹಣೆ: ಎಲ್ಲಾ ವಿಷಯಗಳಿಗೂ ಪ್ರತಿ ನಿತ್ಯ ಒಂದು ಗಂಟೆ ಮೀಸಲಿಡಿ. ಕಷ್ಟವಾದ ವಿಷಯಗಳ ಮೇಲೆ ನಿಮ್ಮ ಅನುಕೂಲದ ಪ್ರಕಾರ ಹೆಚ್ಚು ಸಮಯ ಕಳೆಯಬಹುದು. ಯಾವುದೇ ಶಾರ್ಟ್-ಕಟ್ ವಿಧಾನಗಳಿಗೆ ಪ್ರಯತ್ನ ಪಡಬೇಡಿ.
ಕೇವಲ ಅಧ್ಯಯನ ವಸ್ತುವನ್ನು ಹುಡುಕುವುದರಲ್ಲಿಯೇ ಸಮಯ ಕಳೆಯಬೇಡಿ. ಸಮಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದಲ್ಲಿ
ನೀವು ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕಿಂಗ್ ಪಡೆಯವುದರಲ್ಲಿ ಸಂಶಯವಿಲ್ಲ.
10. ಈ ಅಧ್ಯಯನದ ವೇಳೆಯಲ್ಲಿ ಮೊಬೈಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪರೀಕ್ಷೆ ಮುಗಿಯುವವರೆಗೆ ಮಿತಗೊಳಿಸಿ.
(ಲೇಖಕರು: ಸಹಾಯಕ ಪ್ರಾಧ್ಯಾಪಕರು, ಎಂಬಿಎ ವಿಭಾಗ,ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.