ಗಣಿತವೇಕೆ ಕಬ್ಬಿಣದ ಕಡಲೆ? ಈ ಪ್ರಶ್ನೆಯನ್ನು ಮುಂದಿರಿಸಿಕೊಂಡು ಮಕ್ಕಳಿಗೆ ಪ್ರಶ್ನೆ ಕೇಳಿದರೆ, ಸೂತ್ರಗಳೇ ನೆನಪಿರುವುದಿಲ್ಲ. ಒಮ್ಮೆ ಸೂತ್ರ ನೆನಪಾದರೆ ಲೆಕ್ಕಗಳನ್ನು ಪರಿಹರಿಸುತ್ತ ಹೋಗಬಹುದು. ಆದರೆ ಸೂತ್ರಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ?
ಬಹತೇಕ ಮಕ್ಕಳಿಗೆ ಐದು ಆರನೆಯ ತರಗತಿಯಿಂದಲೇ ಗಣಿತ ಕಠಿಣವೆನಿಸುತ್ತ ಹೋಗುತ್ತದೆ. ಹಾಗೆಯೇ ಸೂತ್ರಗಳನ್ನು ಆಧರಿಸಿದ ವಿಷಯಗಳಾದ ಭೌತಶಾಸ್ತ್ರವೂ ಕಠಿಣವೆನಿಸತೊಡಗುತ್ತದೆ.
ಸೂತ್ರಗಳನ್ನು ಅರಿತರೆ ಬಿಡಿಸುತ್ತ ಹೋಗುವುದು ಮಕ್ಕಳಿಗೂ ಆಸಕ್ತಿಕರ ಆಟವಾಗಿ ಬದಲಾಗುತ್ತದೆ. ಆದರೆ ಸೂತ್ರಗಳನ್ನು ಬಾಯಿಪಾಠ ಮಾಡಿಸದೇ ಕಲಿಸಬಹುದೆ?
ಬಾಯಿಪಾಠ ಮಾಡಿಸುವ ಮೊದಲು ಸೂತ್ರಗಳನ್ನು ಅರ್ಥ ಮಾಡಿಸುವುದು ಬಹಳ ಮುಖ್ಯವಾಗಿದೆ. ಹೀಗೆ ಅರ್ಥ ಮಾಡಿಸುವಾಗ ಮೂಲ ಸೂತ್ರವೇನು? ಅವುಗಳಲ್ಲಿ ಸೂಚಿಸುವ ಬೀಜಾಕ್ಷರಗಳು ಹೇಗೆ ವರ್ತಿಸುತ್ತವೆ? ಸಂಖ್ಯೆಗಳ ನಡುವಿನ ಸಂಕೇತಗಳು, ಸಂಕಲನ ಮತ್ತು ವ್ಯವಕಲನಗಳ ಚಿಹ್ನೆಗಳೊಂದಿಗೆ ಸೂತ್ರದಲ್ಲಿ ಬರುವ ಕಂಸ (), {}, ಗಳ ಅರ್ಥವನ್ನೂ ತಿಳಿಸಬೇಕು.
ಪ್ರತಿ ಸಂಖ್ಯೆಯ ಗುಣ, ಸಂಕೇತಗಳ ಅರ್ತ ಮತ್ತು ಅವುಗಳ ನಿಯಮಗಳನ್ನು ಕಲಿಸಬೇಕು. ಆಗ ಸೂತ್ರವನ್ನು ವಿವರಿಸುವುದು ಸುಲಭವಾಗುತ್ತದೆ.
ಈಗ ಬೀಜಗಣಿತದ ಸೂತ್ರಗಳು, ಭೌತಶಾಸ್ತ್ರದ ಸೂತ್ರಗಳು, ಅಂಕಗಣಿತದ ಸೂತ್ರಗಳು ಇವೆಲ್ಲವನ್ನೂ ಕಲಿಸುವ ಮೊದಲೇ ಮೂಲಗುಣಗಳನ್ನು ಹೇಳಿಕೊಡಬೇಕು. ಮಕ್ಕಳಿಗೆ ಅರ್ಥವಾಗದೇ ಇದ್ದಾಗ ಮಕ್ಕಳನ್ನೇ ರೂಪಕಗಳಾಗಿಸಿ ತಿಳಿಸಿಕೊಡಬೇಕು. ಒಮ್ಮೆ ಸೂತ್ರದ ಸ್ವರೂಪ ತಿಳಿದ ನಂತರ, ಉರುವು ಹಚ್ಚಿದರೆ ಗಣಿತವನ್ನು ಸಲೀಸಾಗಿ ಅನ್ವಯಿಸುವುದನ್ನು ಕಲಿಯುತ್ತಾರೆ.
ಅಭ್ಯಾಸ ಮಾಡಿಸಿ: ಉರು ಹೊಡೆಯುವ ಬದಲು ಬರೆಬರೆದು ತೆಗೆಯಬೇಕು. ಅಭ್ಯಾಸ ಮಾಡಿಸಿದಷ್ಟೂ ಹೆಚ್ಚು ಹೆಚ್ಚು ಮನವರಿಕೆಯಾಗುತ್ತವೆ.
ನೆನಪಿಗೂ ಮಂತ್ರ: ನೆನಪಿನಲ್ಲಿರಿಸಿಕೊಳ್ಳಲು ಸೂತ್ರಕ್ಕೆ ಅನುಗುಣವಾಗಿ ನೆನಪಿನಲ್ಲಿಡಬಹುದಾದ ಪರ್ಯಾಯ ಪದಗಳನ್ನು ಸೂಚಿಸಿ. ಅವು ಮಕ್ಕಳಿಗೆ ದಿನನಿತ್ಯದ ಬದುಕಿನಲ್ಲಿ ಬಳಸುವಂಥವಾಗಿರಬೇಕು. ಗುಣಿಸು ಪದವನ್ನು ಗುಣಕ್ಕೂ, ಕೂಡಿಸುವುದಕ್ಕೆ ಕೂಡಲು.. ಹೀಗೆ ನೆನಪಿಡುವಂಥ ಸಮೀಪದ ಪದಗಳನ್ನು ಸೂಚಿಸಬೇಕು.
ಚಿತ್ರಕ ಸ್ಮರಣೆ: ಚಿತ್ರಕಶಕ್ತಿ ಹೆಚ್ಚುವಂತೆ ಚಿತ್ರಗಳ ಮೂಲಕ ಸ್ಮರಿಸುವುದನ್ನು ಹೇಳಿಕೊಡಿ. ಈ ಅಭ್ಯಾಸಕ್ಕೆ ಮಕ್ಕಳು ತಮಗಿಷ್ಟದ ಚಿತ್ರಗಳನ್ನು ಕಲ್ಪಿಸಿಕೊಳ್ಳಲು ಮುಕ್ತರಾಗಿರಬೇಕು.
ಪರಿಸರ: ಸೂತ್ರಗಳನ್ನು ಕಲಿಯುವಾಗ ಮನೆಯ ಟೀವಿ, ರೇಡಿಯೊಗಳೆಲ್ಲ ಮೌನವಾಗಿರಲಿ. ನಿಮ್ಮ ಮೊಬೈಲ್ ಫೋನ್ ಸಹ ದೂರವಿರಲಿ. ಯಾವುದೇ ಬಗೆಯ ಅಡೆತಡೆಗಳಿಲ್ಲದೆ ಸೂತ್ರಗಳನ್ನು ಕಲಿಯುವಂತಾಗಲಿ.
ಶ್ರವಣ, ಸ್ಮರಣ, ಮನನ: ಸೂತ್ರಗಳನ್ನು ಆಗಾಗ ವಿದ್ಯಾರ್ಥಿಗಳು ಪರಸ್ಪರ ಹೇಳಿಕೊಳ್ಳಲಿ. ಹೀಗೆ ಇನ್ನೊಬ್ಬರು ಹೇಳುವುದನ್ನು ಕೇಳಿದಾಗಲೂ ಸ್ಮರಣೆಯ ಕೋಶಕ್ಕೆ ಇಳಿಯುತ್ತವೆ. ಮನನವಾಗುವುದು ಹೀಗೆ ಕೇಳುವುದರಿಂದ. ಕೇಳಿದ್ದನ್ನು ಬರೆಯುವುದರಿಂದ.
ಕಣ್ಣಿಗೆ ಕಾಣಲಿ: ನಿಮಗೆ ಕಠಿಣವೆನಿಸುವ ಸೂತ್ರಗಳನ್ನು ಆಗಾಗ ಬರೆದು, ನಿಮ್ಮ ಓದುವ ಮೇಜಿನ ಮುಂದೆ, ನಿಮ್ಮ ಗಮನ ಸೆಳೆಯುವಲ್ಲಿ ಬರೆದು ಅಂಟಿಸಿ. ಆಗಾಗ ಅವನ್ನು ನೋಡುತ್ತ, ಹೇಳಿಕೊಳ್ಳುತ್ತ ಇದ್ದರೆ ಸೂತ್ರಗಳು ಬಾಯಿಪಾಠವಾಗುತ್ತವೆ.
ಹೀಗೆ ಮನನವಾಗಿರುವ ಸೂತ್ರಗಳನ್ನು ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಅನ್ವಯಿಸಿ, ವಿಷಯಗಳಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.