ಹೊಸ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ. ಇತ್ತೀಚೆಗೆ ನಾನು ಭಾಗವಹಿಸುತ್ತಿರುವ ಸಂವಾದಗಳಲ್ಲಿ ಮತ್ತು ಶೈಕ್ಷಣಿಕ ಕಾರ್ಯಕ್ರಮದ ಪ್ರಶ್ನೋತ್ತರ ಅವಧಿಯಲ್ಲೂ ವಿದ್ಯಾರ್ಥಿಗಳು ಕೇಳುವ ಸಾಮಾನ್ಯ ಪ್ರಶ್ನೆ ಏನೆಂದರೆ, ‘ಉತ್ತಮವಾದ ಕಾಲೇಜನ್ನು ಆಯ್ಕೆ ಮಾಡುವುದು ಹೇಗೆ?’ಎಂದು.
ಯಾಕಿಷ್ಟು ಗೊಂದಲ ?
ಅದಕ್ಕೆ ಕಾರಣ ಇಷ್ಟೇ; ನಮ್ಮ ದೇಶದಲ್ಲಿ 55,000ಕ್ಕೂ ಹೆಚ್ಚು ಕಾಲೇಜುಗಳು ಮತ್ತು 1000ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಕರ್ನಾಟಕದಲ್ಲಿ 542ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿವೆ. 900ಕ್ಕೂ ಹೆಚ್ಚು ಎಂಬಿಎ ಕಾಲೇಜುಗಳಿವೆ. ಇದರ ನಡುವೆ ಬಹುತೇಕ ಎಲ್ಲಾ ಕೋರ್ಸ್‌ಗಳಲ್ಲೂ ಅತ್ಯಧಿಕ ಪೈಪೋಟಿ. ಹೀಗಾಗಿ ನಾವು ಯಾವ ಕಾಲೇಜಿಗೆ ಸೇರಿಸಬೇಕು? ಕಾಲೇಜುಗಳಲ್ಲಿರುವ ಸೌಕರ್ಯಗಳು, ಕೋಚಿಂಗ್ ಗುಣಮಟ್ಟಗಳನ್ನು ಗುರುತಿಸುವುದು ಹೇಗೆ? ಇಂಥ ವಿವಿಧ ಕಾರಣಗಳಿಂದ, ಕೆಲವು ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೆ ಸಿಲುಕಿದ್ದಾರೆ. ಹಾಗಾದರೆ, ಕಾಲೇಜು ಆಯ್ಕೆ ಮಾಡುವಾಗ ಯಾವ ಯಾವ ಅಂಶಗಳನ್ನು ಪರಿಗಣಿಸಬಹುದು? ಅದರ ಬಗ್ಗೆ ಈಗ ನೋಡೋಣ. ವಿದ್ಯಾರ್ಥಿಗಳ ವೃತ್ತಿಪರ ಬದುಕನ್ನು ರೂಪಿಸುವಲ್ಲಿ ಕಾಲೇಜು ಆಯ್ಕೆ ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ, ಕೌನ್ಸೆಲಿಂಗ್ ಅಥವಾ ಇನ್ನಿತರ ಪ್ರವೇಶ ಪ್ರಕ್ರಿಯೆಯಲ್ಲಿ ನೀಡುವ/ಸೂಚಿಸುವ ಕಾಲೇಜನ್ನು ವಸ್ತುನಿಷ್ಠವಾದ ಮೌಲ್ಯಮಾಪನವಿಲ್ಲದೆ ಸ್ವೀಕರಿಸಬಾರದು. ಕಾಲೇಜುಗಳ ಮೌಲ್ಯಮಾಪನಕ್ಕಾಗಿ ಈ ಅಂಶಗಳನ್ನು ಪರಿಗಣಿಸಬಹುದು:
l→ಬೋಧನೆ, ಸೌಲಭ್ಯ ಉತ್ತಮವಿರುವ, ಅಹ್ಲಾದಕರ ವಾತಾವರಣವಿರುವ, ನಾಡಿಗೆ ಉತ್ತಮ ಪ್ರತಿಭೆಗಳನ್ನು ನೀಡಿರುವ ಪ್ರತಿಷ್ಠಿತ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
l→ಇಂಥ ಕಾಲೇಜುಗಳನ್ನು ಗುರುತಿಸುವಾಗ, ಆ ಶಿಕ್ಷಣ ಸಂಸ್ಥೆಗಳ ಹಿನ್ನೆಲೆ, ಫಲಿತಾಂಶ, ಸಂಸ್ಥೆಯ ಸಂಸ್ಥಾಪಕರು, ಪ್ರವರ್ತಕರು ಮತ್ತು ನಿರ್ದೇಶಕರ ಹಿನ್ನೆಲೆ ಪರಿಶೀಲಿಸಬಹುದು. ಇದರಿಂದ ಸಂಸ್ಥೆಯ ಬಗ್ಗೆ ವಿಶ್ವಾಸಾರ್ಹತೆ ಮೂಡುತ್ತದೆ.
l→ಉತ್ತಮ ಫಲಿತಾಂಶ ಪಡೆದಿರುವ ಹಿರಿಯ ವಿದ್ಯಾರ್ಥಿಗಳಿಂದಲೂ ಅಭಿಪ್ರಾಯ ಸಂಗ್ರಹಿಸಬಹುದು. ಆ ವಿದ್ಯಾರ್ಥಿಗಳ ಪೋಷಕರ ಅನುಭವವನ್ನೂ ಪಡೆಯಬಹುದು.
l→ಮುಂದಿನ ಹಂತ, ಬೋಧನಾ ವರ್ಗ ಹೇಗಿದೆ ಎಂದು ತಿಳಿಯಬೇಕು. ವಿದ್ಯಾರ್ಥಿ/ಅಧ್ಯಾಪಕರ ಅನುಪಾತ, ಅಧ್ಯಾಪಕರ ಅನುಭವ, ಅರ್ಹತೆಗಳು, ಪ್ರಕಟಿತ ಪ್ರಬಂಧಗಳು, ಸಂಶೋಧನೆಗಳು, ಇನ್ನಿತರ ಸಾಧನೆಗಳ ವಿವರಗಳನ್ನು ಕಾಲೇಜಿನ ವೆಬ್‌ಸೈಟ್ ಮೂಲಕ ತಿಳಿದುಕೊಳ್ಳಬಹುದು. ಜಾಲತಾಣದ ಮಾಹಿತಿಯನ್ನೂ ಒರೆಗೆ ಹಚ್ಚಿ ನೋಡುವುದು ಒಳ್ಳೆಯ ಕ್ರಮ
lಸಾಂಪ್ರದಾಯಿಕ ಶಿಕ್ಷಣದ ಜೊತೆ ವಿಮರ್ಶಾತ್ಮಕ, ಪ್ರಾಯೋಗಿಕ ಮತ್ತು ಪರಿಕಲ್ಪನಾ ಶಿಕ್ಷಣವೂ ಇರಬೇಕು. ಪಠ್ಯೇತರ ಚಟುವಟಿಕೆಗಳಿರುವ ಕಾಲೇಜುಗಳು ಇಂದಿನ ಅಗತ್ಯ. ಕೌಶಲ ಅಭಿವೃದ್ಧಿಗೂ ಆದ್ಯತೆ ನೀಡಬೇಕು. ಈ ಅಂಶಗಳನ್ನೂ ಪರಿಗಣಿಸಬಹುದು.
l→ಮೂಲಸೌಕರ್ಯ ಪರಿಶೀಲಿಸುವ ವೇಳೆ, ಕೋರ್ಸ್‌ಗೆ ಅನುಗುಣವಾಗಿ ಸೌಕರ್ಯಗಳಿವೆಯೇ ಎಂದು ಪರಿಶೀಲಿಸ ಬಹುದು. ಜೊತೆಗೆ, ಸುಸಜ್ಜಿತ ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಗ್ರಂಥಾಲಯ, ಸೆಮಿನಾರ್ ಹಾಲ್‌ಗಳು/ಚರ್ಚಾ ಕೊಠಡಿಗಳು,ಹಾಸ್ಟೆಲ್ /ಕ್ಯಾಂಟಿನ್ ಸೌಲಭ್ಯ, ಪಠ್ಯೇತರ ಚಟುವಟಿಕೆಗಳಿಗಾಗಿ ಕ್ರೀಡಾ ಸೌಲಭ್ಯ ಹಾಗೂ ನೈರ್ಮಲ್ಯ ಮತ್ತು ವಾತಾವರಣವನ್ನು ಗಮನಿಸಬಹುದು.
l→ವಿಷಯವಾರು ಪರಿಣತಿಯ ಅಧ್ಯಾಪಕರು, ಪ್ರತಿ ವಿಭಾಗಕ್ಕೆ ಸಂಬಂಧಿಸಿದ ಉದ್ಯಮಗಳ ಜೊತೆ ಕಾಲೇಜುಗಳ ಸಹಯೋಗದಿಂದ ಇಂಟರ್ನ್‌ಷಿಪ್ , ಸಮ್ಮರ್ ಪ್ರಾಜೆಕ್ಟ್‌ಗಳನ್ನು ನಡೆಸುವ ವ್ಯವಸ್ಥೆ ಇರುವುದನ್ನು ಪರಿಶೀಲಿಸಬಹುದು. ಇಂಥ ಸೌಲಭ್ಯಗಳು ಕೋರ್ಸ್ ಮುಗಿದ ನಂತರ, ಭವಿಷ್ಯದಲ್ಲಿ ಉದ್ಯೋಗ ಪಡೆಯಲು ನೆರವಾಗುತ್ತವೆ.
l→ಕ್ಯಾಂಪಸ್ ಸೆಲೆಕ್ಷನ್‌ನಂತಹ ಪ್ರಕ್ರಿಯೆಗಳ ಮೇಲೂ ಗಮನಹರಿಸಬಹುದು. ಕ್ಯಾಂಪಸ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಉದ್ಯೋಗ ನೀಡಿದ ಕಂಪನಿಗಳ ಸ್ಥಿತಿ–ಗತಿ ಬಗ್ಗೆಯೂ ಯೋಚಿಸಬಹುದು.
l→ಕೋರ್ಸ್‌ಗೆ ಸಂಬಂಧಿಸಿದಂತೆ ಕಾಲೇಜುಗಳು, ಉದ್ಯಮಗಳಿಗೆ (ಮೈನಿಂಗ್, ಆಟೋಮೊಬೈಲ್, ಐಟಿ ಇತ್ಯಾದಿ) ಹತ್ತಿರವಿದ್ದಷ್ಟೂ ಪ್ರಾಯೋಗಿಕ ಕಲಿಕೆಗೆ ಸಹಾಯವಾಗುತ್ತದೆ. ಈ ಬಗ್ಗೆಯೂ ಗಮನಿಸಬಹುದು.
l→ಮೆಡಿಕಲ್ ಕೌನ್ಸಿಲ್, ಯುಜಿಸಿ, ಎಐಸಿಟಿಇ ಇತ್ಯಾದಿ ಸಂಸ್ಥೆಗಳಿಂದ ಅನುಮೋದಿತವಾಗಿರುವ ಕೋರ್ಸ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.
l→ಕಾಲೇಜುಗಳ ನಡುವಿನ ಶುಲ್ಕಗಳು ಮತ್ತು ವೆಚ್ಚಗಳನ್ನು ಹೋಲಿಸಿ ಅನುಕೂಲತೆಗಳನ್ನು ಗಮನಿಸಬೇಕು.
ವಿವೇಚನೆ ಬಳಸಿ
ಕಾಲೇಜು ಆಯ್ಕೆಯನ್ನು ಸುಲಭಗೊಳಿಸಲು, ಸಿದ್ಧಪಡಿಸಿದ ಮೌಲ್ಯಮಾಪನದ ದತ್ತಾಂಶ ಈಗ ಲಭ್ಯವಿದೆ. ಪ್ರಮುಖ ವ್ಯಾಪಾರ ಸಂಸ್ಥೆಗಳು, ನಿಯತಕಾಲಿಕೆಗಳು ಮೇಲೆ ಉಲ್ಲೇಖಿಸಿದ ಅಂಶಗಳನ್ನು ಪರಿಗಣಿಸಿ ಶ್ರೇಯಾಂಕಗಳನ್ನು ಪ್ರಕಟಿಸುತ್ತವೆ. ಆದಾಗ್ಯೂ, ಈ ಶ್ರೇಯಾಂಕಗಳು ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ. ಏಕೆಂದರೆ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಸ್ಥೆಗಳನ್ನು ಮಾತ್ರ ಒಳಗೊಂಡಿದ್ದು, ವಿದ್ಯಾರ್ಥಿಗಳು ನಿರ್ದಿಷ್ಟವಾದ ಕಾಲೇಜುಗಳ ಮಾಹಿತಿಯನ್ನು ಅವಲೋಕಿಸಲು ಅನೇಕ ಮೌಲ್ಯಮಾಪನಗಳನ್ನು ಗಮನಿಸುವುದರ ಜೊತೆಗೆ ನಿರ್ಧಾರ ಮಾಡುವಾಗ ತಮ್ಮ ವಿವೇಚನೆಯನ್ನು ಬಳಸಬೇಕಾಗುತ್ತದೆ.
ಆದರೆ, 2016ರಿಂದ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಪ್ರಕಟಿಸುತ್ತಿರುವ ರಾಷ್ಟ್ರೀಯ ಶ್ರೇಯಾಂಕ ಮಾಹಿತಿ ಚೌಕಟ್ಟಿನಿಂದ (ಎನ್‌ಐಆರ್‌ಎಫ್) ಈ ಪ್ರಕ್ರಿಯೆ ಸ್ವಲ್ಪಮಟ್ಟಿಗೆ ಸರಾಗವಾಗಿದೆ. ಶ್ರೇಯಾಂಕವನ್ನು ಪರಿಗಣಿಸುವುದರ ಜೊತೆಗೆ, ವಿಶ್ಲೇಷಣೆಯನ್ನು ಸಮಗ್ರಗೊಳಿಸಲು ಕಾಲೇಜಿನ ವೆಬ್‌ಸೈಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಮತ್ತು ಹಳೆಯ/ಹಿರಿಯ ವಿದ್ಯಾರ್ಥಿಗಳ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯುವುದು ಕೆಲವೊಮ್ಮೆ ಉಪಯುಕ್ತ.
ಅಗತ್ಯವೆನಿಸಿದರೆ, ಆಯ್ಕೆಮಾಡಿದ ಕಾಲೇಜಿಗೆ ಖುದ್ದಾಗಿ ಭೇಟಿ ನೀಡುವುದರಿಂದ ತೆಗೆದುಕೊಂಡ ನಿರ್ಧಾರದ ಸಮರ್ಥನೆಯೊಂದಿಗೆ ಭವಿಷ್ಯದ ಬಗ್ಗೆ ಭರವಸೆಯೂ ಮೂಡುತ್ತದೆ.
–ಪ್ರದೀಪ್ ವೆಂಕಟರಾಮ್
(ಲೇಖಕರು ಶಿಕ್ಷಣ ತಜ್ಞರು ಮತ್ತು ವೃತ್ತಿ ಸಲಹೆಗಾರರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.