ADVERTISEMENT

ಐಡೆಂಟಿಟಿ ಅಸೆಸ್‌ಮೆಂಟ್ ಮ್ಯಾನೇಜರ್‌: ತಂತ್ರಜ್ಞಾನದ ಅರಿವು ಮುಖ್ಯ

ಆಫ್‌ಬೀಟ್‌ ವೃತ್ತಿ

ಪ್ರಜಾವಾಣಿ ವಿಶೇಷ
Published 7 ಜನವರಿ 2020, 19:30 IST
Last Updated 7 ಜನವರಿ 2020, 19:30 IST
   

ಇಂದಿನ ಕಾಲದಲ್ಲಿ ಯಾವುದೇ ಕಂಪನಿ ಅಥವಾ ಉದ್ಯಮ ಸಂಸ್ಥೆಯ ಮಾಹಿತಿಯ ಸುರಕ್ಷತೆ ಅತ್ಯಂತ ಸವಾಲಾಗಿದೆ. ಈ ಮಾಹಿತಿ ಸುರಕ್ಷತೆಯನ್ನು ನಿಭಾಯಿಸಲು ಸೂಕ್ತ ವ್ಯಕ್ತಿಯ ಅವಶ್ಯಕತೆ ಇದೆ. ಅವರಿಗೆ ಕಂಪನಿಯ ಆಡಳಿತ ವ್ಯವಹಾರಗಳು ಮತ್ತು ಮಾಹಿತಿಯ ಕುರಿತ ಸಮಗ್ರ ಜ್ಞಾನ ಹಾಗೂ ನಿರ್ವಹಣಾ ಸಾಮರ್ಥ್ಯ ತುಂಬಾ ಮುಖ್ಯ.

ಈ ಕಾರಣಕ್ಕೆ ಕಂಪನಿ ಮತ್ತು ಉದ್ಯಮ ಸಂಸ್ಥೆಗಳ ಆಡಳಿತ ವರ್ಗದಲ್ಲಿನ ಡೇಟಾ ಹಾಗೂ ಮಾಹಿತಿ ನಿರ್ವಹಣೆಗಾಗಿ ಐಡೆಂಟಿಟಿ ಹಾಗೂ ಅಸೆಸ್‌ಮೆಂಟ್‌ ಮ್ಯಾನೇಜರ್‌ಗಳನ್ನು ನೇಮಿಸಿಕೊಳ್ಳುತ್ತಾರೆ.

ಐಡೆಂಟಿಟಿ ಹಾಗೂ ಅಸೆಸ್‌ಮೆಂಟ್ ಮ್ಯಾನೇಜರ್‌ಗಳು ಕಂಪನಿಗೆ ಹೊಸದಾಗಿ ಪ್ರವೇಶ ಮಾಡುವ ಉದ್ಯೋಗಿಗಳಿಂದ ಹಿಡಿದು ಕಂಪನಿ ವ್ಯವಸ್ಥೆಯಲ್ಲಿ ಸೇರುವ ಹೊಸ ಸಾಪ್ಟ್‌ವೇರ್‌ಗಳವರೆಗೂ ಸಂಪೂರ್ಣ ಮಾಹಿತಿ ಹೊಂದಿರುತ್ತಾರೆ.ಆದರೆ ಯಾವುದೇ ಕಾರಣಕ್ಕೂ ಇವರು ಕಂಪನಿಯದ್ದಾಗಲಿ, ಉದ್ಯೋಗಿಗಳದ್ದಾಗಲಿ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುವಂತಿಲ್ಲ. ಜೊತೆಗೆ ಅದನ್ನು ದುರುಪಯೋಗ ಮಾಡಿಕೊಳ್ಳುವಂತಿಲ್ಲ.

ADVERTISEMENT

ಕಂಪನಿಯ ಉದ್ಯೋಗಿಗಳ ಪ್ರತಿದಿನದ ಡಿಜಿಟಲ್ ಸೈನ್ (ಹಾಜರಾತಿ)ನಿಂದ ಸಂಪೂರ್ಣ ತಿಂಗಳ ಕೆಲಸದ ಒಟ್ಟು ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನು ಐಡೆಂಟಿಟಿ ಮತ್ತು ಅಸೆಸ್‌ಮೆಂಟ್ ಮ್ಯಾನೇಜರ್‌ಗಳು ಮಾಡುತ್ತಾರೆ.

ಯಾಕೆ ಬೇಕು?
* ಕಂಪನಿಯ ಒಳಗೆ ಅಥವಾ ಹೊರಗಿನಿಂದ ಆಡಳಿತ ಮಂಡಳಿಯ ವಿರುದ್ಧ ಯಾವುದಾದರೂ ಅಕ್ರಮಗಳು ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು.

* ಹೊರಗಿನಿಂದ ಬರುವ ವ್ಯಕ್ತಿ, ವಸ್ತು, ಮಾಹಿತಿ, ಸಾಪ್ಟ್‌ವೇರ್‌ಗಳು, ತಾಂತ್ರಿಕ ವಿಷಯಗಳ ಬಗ್ಗೆ ತಿಳಿದು ಕಂಪನಿಗೆ ಸುರಕ್ಷತೆ ನೀಡಲು.

* ಉದ್ಯೋಗಿಗಳ ಕೆಲಸ ಹಾಗೂ ಅನುಭವಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು.

* ಡಿಜಿಟಲ್ ಅಥವಾ ತಾಂತ್ರಿಕ ನಿರ್ವಹಣೆ.

ಐಟಿ ಕ್ಷೇತ್ರದಲ್ಲಿ ಪಾತ್ರ

ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿ ತನ್ನ ವೈಯಕ್ತಿಕ ಮಾಹಿತಿ ಗೌಪ್ಯವಾಗಿರಬೇಕು ಎಂದು ಬಯಸುವುದು ಸಹಜ. ಅಂತಹ ವಿಷಯಗಳನ್ನು ಬೇರೆಯವರಿಗೆ ತಿಳಿಯದಂತೆ ಗೌಪ್ಯವಾಗಿ ಇರಿಸಿಕೊಂಡು ಕಾಪಾಡುವ ಜವಾಬ್ದಾರಿ ಐಡೆಂಟಿಟಿ ಮ್ಯಾನೇಜರ್‌ಗಳದ್ದು.

* ಕಂಪನಿಯ ಉದ್ಯೋಗಿಗಳ ಮಾಹಿತಿಗಳನ್ನು ನಿರ್ವಹಿಸುವುದು.

* ಉದ್ಯೋಗಿಗಳ ಡೇಟಾವನ್ನು ಸುರಕ್ಷಿತವಾಗಿರಿಸುವುದು.

* ಹೊರಗಿನ ವ್ಯಕ್ತಿಗಳಿಂದ ನಡೆಯುವ ಡೇಟಾ ಕಳ್ಳತನದ ಬಗ್ಗೆ ಎಚ್ಚರಿಕೆ ವಹಿಸುವುದು.

* ಡೇಟಾ ಸೋರಿಕೆಯನ್ನು ನಿಯಂತ್ರಿಸುವುದು.

* ಕಂಪನಿ ಕೆಲಸಗಾರರ ಪ್ರಮಾಣಿಕತೆಯನ್ನು ಪರಿಶೀಲಿಸುವುದು.

* ಕಂಪನಿ ಕೆಲಸಗಳ ಆಗು ಹೋಗುಗಳ ನಿರ್ವಹಣೆ.

ಮುಖ್ಯ ಕೆಲಸಗಳು

* ಪ್ರತಿ ಕೆಲಸಗಾರರ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸುವುದು.

* ಉದ್ಯೋಗಿಗಳ ಔದ್ಯೋಗಿಕ ಹಾದಿಯ ವಿಶ್ಲೇಷಣೆ.

* ಕಂಪನಿಯಲ್ಲಿನ ಉದ್ಯೋಗಿಗಳಿಗೆ ಸಮಗ್ರ ಭದ್ರತೆ ಒದಗಿಸುವುದು.

* ಉದ್ಯೋಗಿಗಳಿಂದ ಮುಖ್ಯ ಗುರುತಿನ ಮಾಹಿತಿಗಳನ್ನು ಸಂಗ್ರಹಿಸುವುದು.

ನವತಂತ್ರಜ್ಞಾನಕ್ಕೆ ತೆರೆದುಕೊಂಡ ಐಎಎಂ

ತಂತ್ರಜ್ಞಾನಗಳು ಬದಲಾದಂತೆ ಐಎಎಂ ಹುದ್ದೆ ಕೂಡ ಬದಲಾಗಿದೆ. ಐಒಟಿ ಹಾಗೂ ಬ್ಲಾಕ್ ಚೈನ್ ವಿಷಯಗಳು ತಂತ್ರಜ್ಞಾನ ಕ್ಷೇತ್ರವನ್ನು ಆವರಿಸಿದಂತೆ ಐಎಎಂನಲ್ಲೂ ಬದಲಾವಣೆ ಆರಂಭವಾಯಿತು. ಈಗ ಐಎಎಂ ಹುದ್ದೆ ಪಡೆಯಲು ತಂತ್ರಜ್ಞಾನದ ಎಲ್ಲಾ ವಿಷಯಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿರಬೇಕು.

ಕೌಶಲಗಳು

* ಇಂಟರ್ನೆ‌ಟ್ ಹಾಗೂ ಪ್ರೋಟೊಕಾಲ್‌ಗಳನ್ನು ಪರಿಣಾಮಕಾರಿಯಾಗಿ ಬಳಸಲು ತಿಳಿದಿರಬೇಕು.

* ಡೇಟಾಬೇಸ್‌ಗಳ ಬಗ್ಗೆ ಸಂಪೂರ್ಣ ಜ್ಞಾನ.

* ದಿನನಿತ್ಯದ ತಾಂತ್ರಿಕ ವಿಷಯಗಳಲ್ಲಿ ಅಪ್‌ಡೇಟ್ ಆಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.