ADVERTISEMENT

‘ಐಐಎಂಬಿ’ಗೆ ಸುವರ್ಣ ಸಂಭ್ರಮ 

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 23:30 IST
Last Updated 25 ಅಕ್ಟೋಬರ್ 2023, 23:30 IST
ಐಐಎಂಬಿಗೆ ಚಾಲನೆ ನೀಡುತ್ತಿರುವ ಇಂದಿರಾಗಾಂಧಿ 
ಐಐಎಂಬಿಗೆ ಚಾಲನೆ ನೀಡುತ್ತಿರುವ ಇಂದಿರಾಗಾಂಧಿ    

ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಶಿಕ್ಷಣದಲ್ಲಿ ತನ್ನದೇ ಛಾಪು ಮೂಡಿಸಿರುವ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗೆ 1973 ರ ಅಕ್ಟೋಬರ್ 28 ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಚಾಲನೆ ನೀಡಿದ್ದರು. ಅಹಮದಾಬಾದ್ ಮತ್ತು ಕೊಲ್ಕತ್ತಾದ ನಂತರ ಪ್ರಾರಂಭಗೊಂಡ ಐಐಎಂ ಸಂಸ್ಥೆ ಇದಾಗಿತ್ತು. ಹಲವು ಮಾನ್ಯತೆಗಳೊಂದಿಗೆ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ ಮ್ಯಾನೇಜ್‌ಮೆಂಟ್‌ನಲ್ಲಿ ಶಿಕ್ಷಣ ಬಯಸುವ ಅನೇಕರ ಕನಸಿನ ತಾಣವಾಗಿದೆ.

ಬೆಂಗಳೂರಿನ ಐಐಎಂ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ದೇಶದ ಆರ್ಥಿಕ ದೃಷ್ಟಿಕೋನ, ತಂತ್ರಜ್ಞಾನ, ಉದ್ಯಮದ ಅಗತ್ಯತೆಗೆ ತಕ್ಕಂತೆ ತನ್ನ ಕಲಿಕೆಯ ಸ್ವರೂಪವನ್ನು ಬದಲಿಸಿಕೊಂಡು ಬಂದಿದೆ. ಕಲಿಕಾ ಸಾಮರ್ಥ್ಯಗ ಹೆಚ್ಚಿಸುವ, ಸಂಶೋಧನೆಯನ್ನು ಉತ್ತೇಜಿಸುವ, ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕೆಲಸಗಳಲ್ಲಿ ಹಿಂದೆ ಬಿದ್ದಿಲ್ಲ. ತಂತ್ರಜ್ಞಾನದ ವಿಕಾಸದೊಂದಿಗೆ ಐಐಂಬಿಯ ಕಲಿಕೆ ಮಾರ್ಗ ಕೂಡ ಮಾರ್ಪಾಡಾಯಿತು. 90ರ ದಶಕದಲ್ಲಿ ಸಾಫ್ಟ್‌ವೇರ್‌ ಕ್ಷೇತ್ರ ಮೇಲ್ಪಂಕ್ತಿಗೆ ಬಂದಾಗ ಡೇಟಾ ಅನಾಲಿಟಿಕ್ಸ್‌ ತರಹದ ವಿಷಯಗಳನ್ನು ಪರಿಚಯಿಸಿತು. ಬೆಂಗಳೂರು ಐಟಿ ತವರಾಗುತ್ತಿದ್ದಂತೆ, 1998ರಲ್ಲಿ ವಾರಾಂತ್ಯದ ಎಂಬಿಎ ಕಾರ್ಯಕ್ರಮವಾಗಿ ಸಾಫ್ಟ್‌ವೇರ್ ಮತ್ತು ಐಟಿ ಉದ್ಯಮದ ಅಗತ್ಯಗಳನ್ನು ಕೇಂದ್ರೀಕರಿಸಿದ ವಿಶೇಷ ಕೋರ್ಸ್‌ ಪ್ರಾರಂಭಿಸಿತು. 

ದೇಶದಲ್ಲಿ ಸ್ಟಾರ್ಟಪ್‌ ಕ್ರಾಂತಿ ಪ್ರಾರಂಭವಾಗುವ ಮೊದಲೇ ಐಐಎಂಬಿ ಆ ಕ್ಷೇತ್ರದತ್ತ ದೃಷ್ಟಿ ಹಾಯಿಸಿತ್ತು. ಗೋಲ್ಡ್‌ಮನ್ ಸ್ಯಾಚ್ಸ್ 10K ಮಹಿಳಾ ಕಾರ್ಯಕ್ರಮ, ಮಹಿಳಾ ಸ್ಟಾರ್ಟ್-ಅಪ್ ಪ್ರೋಗ್ರಾಂ ಅದಕ್ಕೆ ಉದಾರಹಣೆಗಳಂತಿವೆ. ಡಿಜಿಟಲ್ ಮತ್ತು ಆನ್‌ಲೈನ್ ಕಲಿಕೆಯಲ್ಲಿಯೂ ಎಲ್ಲರಿಗಿಂತ ಮೊದಲಿತ್ತು. 2014 ರಲ್ಲಿ ತನ್ನದೇ ಆದ ಆನ್‌ಲೈನ್‌ ಕಲಿಕಾ ವೇದಿಕೆಯನ್ನು ಪ್ರಾರಂಭಿಸಿತು. ಅಂತರ್ಜಾಲ ಶಿಕ್ಷಣದ ಮೂಲಕ ಇಂದು 75 ಕೋರ್ಸ್‌ಗಳನ್ನು ನಡೆಸುತ್ತಿದೆ. 20 ಲಕ್ಷ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಒದಗಿಸಿ, ಈ ದಾಖಲಾತಿಗಳ ಸಂಖ್ಯೆಯಲ್ಲಿ ವಿಶ್ವದ ಟಾಪ್ 3 ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ.

ADVERTISEMENT

ಪ್ರಮುಖ ಕೋರ್ಸ್‌ಗಳು:

ವೃತ್ತಿಪರರ ಕೌಶಲ್ಯಾಭಿವೃದ್ಧಿಗಾಗಿ ಅಲ್ಪಾವಧಿ, ದೀರ್ಘಾವಧಿ ಕೋರ್ಸುಗಳು ಐಐಐಂಬಿಯಲ್ಲಿದೆ. ಬದಲಾಗುತ್ತಿರುವ ಔದ್ಯೋಗಿಕ ಜಗತ್ತಿನಲ್ಲಿ, ಭವಿಷ್ಯವನ್ನು ಎದುರಿಸಲು ಸಿದ್ಧರಾಗಿಸುವ ಉದ್ದೇಶ ಐಐಂಬಿಯದ್ದು. ಇಲ್ಲಿ ಪಾಠದ ಜೊತೆಗೆ ಉದ್ಯಮಕ್ಕೆ ಅಗತ್ಯ ಕೌಶಲವನ್ನು ಕಲಿಸುತ್ತದೆ. ಉದ್ಯಮದ ಪರಿಣತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಪ್ರೊ, ಇನ್ಫೋಸಿಸ್, ಒರಾಕಲ್‌ನಂತಹ ಸಂಸ್ಥೆಗಳೊಂದಿಗೆ ಐಐಎಂಬಿ ಸಕ್ರಿಯ ಸಹಯೋಗವನ್ನು ಹೊಂದಿದೆ. NSRCEL ಐಐಎಂಬಿಯ ಅಂಗಸಂಸ್ಥೆಯಾಗಿದ್ದು, ನವೋದ್ಯಮಿಗಳು, ವಾಣಿಜ್ಯ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಒದಗಿಸುತ್ತದೆ. ಇಲ್ಲಿಯವರೆಗೆ 1.5 ಶತಕೋಟಿ ಡಾಲರ್‌ ಮೌಲ್ಯದ ಸುಮಾರು 600 ಉದ್ಯಮಗಳನ್ನು ಪೋಷಿಸಲು ನೆರವಾಗಿದೆ.

ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ(ಪಿಜಿಪಿ), ಬಿಸಿನೆಸ್‌ ಅನಾಲಿಟಿಕಕ್ಸ್‌ನಲ್ಲಿ ಎಂಬಿಎ ಸೇರಿದಂತೆ 11 ವಿಷಯಗಳಲ್ಲಿ ಕೋರ್ಸುಗಳನ್ನು ನೀಡುತ್ತಿದೆ. ಸಾಮಾನ್ಯ ಜನರಿಗೂ ತಲುಪವ ದೃಷ್ಟಿಕೋನದಿಂದ ಪ್ರಾರಂಭವಾದ ಆನ್‌ಲೈನ್‌ ಶಿಕ್ಷಣ ಕೇಂದ್ರವಾದ ಐಐಎಂಬಿಎಕ್ಸ್‌ಗೆ 150 ಕ್ಕೂ ಹೆಚ್ಚು ದೇಶಗಳಿಂದ ಹತ್ತು ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ 50 ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಐಐಎಂಬಿಯಲ್ಲಿ ಕಲಿತು ಕಾರ್ಪೋರೇಟ್‌, ವ್ಯವಹಾರ ಜಗತ್ತಿನ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಅಶ್ವಥ್ ದಾಮೋದರನ್, ಅಮೆರಿಕದ ವಿತ್ತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಇವರು ಐಐಎಂಬಿಯ ಹಳೆಯ ವಿದ್ಯಾರ್ಥಿ. ಕೋಲ್ಗೇಟ್-ಪಾಮೋಲಿವ್ ಇಂಡಿಯಾ ಲಿಮಿಟೆಡ್‌ನ ಸಿಇಒ ಶ್ರೀಮತಿ ಪ್ರಭಾ ನರಸಿಂಹನ್ ಕೂಡ ಇದೇ ಸಂಸ್ಥೆಯಲ್ಲಿ ಕಲಿತು ಹೋದವರು. ಮಾಸ್ಟರ್‌ಕಾರ್ಡ್ ಇಂಟರ್‌ನ್ಯಾಶನಲ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ರಾಜಮನ್ನಾರ್‌, ಇಸ್ರೋದ ಮಾಜಿ ಅಧ್ಯಕ್ಷ ಡಾ. ಕೆ ರಾಧಾಕೃಷ್ಣನ್...ಹೀಗೆ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳ ಸಾಲಿನಲ್ಲಿ ನೂರಾರು ಸಾಧಕರು ಸಿಗುತ್ತಾರೆ. ಮಾರಿಕೋದ ವ್ಯವಸ್ಥಾಪಕ ನಿರ್ದೇಶಕ ಸೌಗತ ಗುಪ್ತಾ, ಲಖನೌನ ರೈಟ್ ವಾಕ್ ಫೌಂಡೇಶನ್‌ನ ಮೂಲಕ ಉತ್ತರ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ ಸಮೀನಾ ಬಾನೊ, ಟೀಂಲೀಸ್‌ ಸರ್ವೀಸ್‌ನ ಸಿಇಒ ಅಶೋಕ್‌ ರೆಡ್ಡಿ, ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಕೆ.ಪಿ.ಕೃಷ್ಣನ್‌ ಮೊದಲಾದವರು ಇದೇ ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳು.

‘ತ್ರೀ ಇಡಿಯಟ್ಸ್‌’ ಚಿತ್ರೀಕರಣಗೊಂಡಿದ್ದ ಕಟ್ಟಡ:

ಬನ್ನೇರುಘಟ್ಟದಲ್ಲಿರುವ ಐಐಎಂಬಿ ಕ್ಯಾಂಪಸ್ ಕಲ್ಲಿನ ಕಟ್ಟಡಗಳಿಂದಲೇ ಜನಪ್ರಿಯ. 1983ರಲ್ಲಿ ಪೂರ್ಣಗೊಂಡ ಇದರ ವಾಸ್ತುಶಿಲ್ಪಿ ಬಿ.ವಿ.ದೋಷಿ. 100 ಎಕರೆ ಕ್ಯಾಂಪಸ್‌ನಲ್ಲಿ ನಿರ್ಮಿಸಲಾದ 54,000 ಚದರ ಮೀಟರ್ ವ್ಯಾಪ್ತಿಯ ಈ ಆವರಣ 16ನೇ ಶತಮಾನದಲ್ಲಿ ಅಕ್ಬರ್ ನಿರ್ಮಿಸಿದ ಫತೇಪುರ್ ಸಿಕ್ರಿ ಪಟ್ಟಣದ ವಿನ್ಯಾಸವನ್ನು ಆಧರಿಸಿದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಈ ಪರಿಸರದಲ್ಲಿ ಬಾಲಿವುಡ್‌ನ ‘ತ್ರೀ ಇಡಿಯಟ್ಸ್‌’ ಸಿನಿಮಾ ಚಿತ್ರೀಕರಣಗೊಂಡಿತ್ತು.

ಐಐಎಂಬಿ ಕಟ್ಟಡ

ಯಾಕೆ ಜನಪ್ರಿಯ?:

ಎಂಬಿಎ ಪದವಿ ಪ್ರವೇಶ ಪರೀಕ್ಷೆ ಕ್ಯಾಟ್‌ನಲ್ಲಿ ಐಐಎಂಬಿ ಕಟ್‌ ಆಫ್‌ ಶೇ.85! ಐಐಎಂಬಿಯಿಂದ ಪದವಿ ಪಡೆದು ಹೊರಬಂದಿದ್ದೀರಿ ಎಂದರೆ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗಾವಕಾಶ ದೊಡ್ಡ ಹುದ್ದೆ ಕೈತುಂಬ ಸಂಬಳ ಖಚಿತ ಎಂಬುದನ್ನು ಹಿಂದಿನ ವಿದ್ಯಾರ್ಥಿಗಳ ಟ್ರ್ಯಾಕ್‌ ರೆಕಾರ್ಡ್‌ ಹೇಳುತ್ತಿದೆ. ಜಾಗತಿಕ ಮಟ್ಟದಲ್ಲಿ ಬಿಸಿನೆಸ್‌ ಸ್ಕೂಲ್‌ಗಳಿಗೆ ನೀಡಲಾಗುವ ಮಾನ್ಯತೆಗಳ ಪಟ್ಟಿಯಲ್ಲಿ ಐಐಎಂಬಿ ಹೆಸರು ಸಾಮಾನ್ಯ ಎಂಬಷ್ಟರ ಮಟ್ಟಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮನ್ನಣೆ ಗಳಿಸಿದೆ. ಬಿಸಿನೆಸ್‌ ಸ್ಕೂಲ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ನೀಡುವ EQUIS(ಯೂರೋಪಿಯನ್‌ ಕ್ವಾಲಿಟಿ ಇಂಪ್ರೂಮೆಂಟ್‌ ಸಿಸ್ಟಂ) ಮಾನ್ಯತೆ ಪಡೆದಿದೆ. ವಿವಿಧ ವಾಣಿಜ್ಯ ನಿಯತಕಾಲಿಕೆಗಳ ದೇಶದ ಜಾಗತಿಕ ಅತ್ಯುತ್ತಮ ಬಿಸಿನೆಸ್‌ ಸ್ಕೂಲ್‌ಗಳ ಪಟ್ಟಿಯಲ್ಲಿ ಐಐಎಂಬಿಗೆ ಜಾಗ ಖಾಯಂ. ಪಟ್ಟಿ ಮಾಡಬಹುದಾದಷ್ಟು ಗೌರವ ಮಾನ್ಯತೆ ಶ್ರೇಯಾಂಕಗಳನ್ನು ಪಡೆದಿರುವ ಐಐಎಂಬಿಯ ಬಲವೆಂದರೆ ಸಂಶೋಧನೆ. ಜೊತೆಗೆ ಸಂಸ್ಥೆಯ ಜನಪ್ರಿಯತೆ ಹೆಚ್ಚಿಸುವಲ್ಲಿ ಇಲ್ಲಿನ ಬೋಧನಾ ಪದ್ಧತಿ ಹಾಗೂ ಬೋಧಕ ವರ್ಗದ ಕೊಡುಗೆಯೂ ಸಾಕಷ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.