ADVERTISEMENT

ILETS– ಇಂಗ್ಲಿಷ್ ಭಾಷಾ ಪರೀಕ್ಷೆ ವಿದೇಶ ವಿದ್ಯಾಭ್ಯಾಸಕ್ಕೆ ರಹದಾರಿ

ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ

ಗುರುರಾಜ್ ಎಸ್.ದಾವಣಗೆರೆ
Published 30 ಜುಲೈ 2023, 23:44 IST
Last Updated 30 ಜುಲೈ 2023, 23:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳುವವರಿಗಾಗಿ ನಡೆಸುವ ಭಾಷಾ ಪ್ರವೇಶ ಪರೀಕ್ಷೆಯಲ್ಲಿ ‘ಐಲ್ಟ್ಸ್‌’(IELTS-International English Language Testing System) ಕೂಡ ಒಂದು. ಈ ಪರೀಕ್ಷೆ ಕೇವಲ ಉನ್ನತ ಅಧ್ಯಯನಕ್ಕೆ ಮಾತ್ರವಲ್ಲ, ವಿದೇಶಗಳಲ್ಲಿ ಉದ್ಯೋಗ ಪರವಾನಗಿ ಪಡೆಯಲು ಸಹ ನೆರವಾಗುತ್ತದೆ.

ಶಿಕ್ಷಣ ಪುರವಣಿಯ ಜುಲೈ 10 ಮತ್ತು 17ರ ಸಂಚಿಕೆಯಲ್ಲಿ ಇಂಗ್ಲಿಷ್‌ ಮೂಲ ಭಾಷೆಯಾಗಿ ಮಾತನಾಡುವ ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಳ್ಳ ಬಯಸುವವರು ಎದುರಿಸಬೇಕಾದ ಇಂಗ್ಲಿಷ್ ಭಾಷಾ ಪರೀಕ್ಷೆಗಳ ಕುರಿತ ಲೇಖನಗಳು ಪ್ರಕಟವಾಗಿ ದ್ದವು. ಆ ಲೇಖನಗಳಲ್ಲಿ ಇಂಗ್ಲಿಷ್ ಭಾಷಾ ಪರೀಕ್ಷೆಗಳ ಪೈಕಿ ‘ಐಲ್ಟ್ಸ್‌’ ಕೂಡ ಎಂದು ತಿಳಿಸಲಾಗಿತ್ತು.

ಐಲ್ಟ್ಸ್‌(IELTS) ಪೂರ್ಣ ರೂಪ ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ. ಇದನ್ನು ‘ಆಯಲ್ಟ್ಸ್’ ಎಂದೂ ಉಚ್ಚರಿಸುತ್ತಾರೆ. ಇಂಗ್ಲಿಷ್ ಭಾಷೆಯನ್ನು ಓದುವ, ಬರೆಯುವ, ಕೇಳಿಸಿಕೊಳ್ಳುವ ಮತ್ತು ಮಾತನಾಡುವ ಕ್ಷಮತೆ ತಿಳಿಯಲು ಐಲ್ಟ್ಸ್‌ ಪರೀಕ್ಷೆ ನಡೆಸಲಾಗುತ್ತದೆ. ಟೊಫೆಲ್‌, ಪಿಟಿಇ ಮತ್ತು ಡುವೊಲಿಂಗೊ ಪರೀಕ್ಷೆಗಳ ಮಾದರಿಯಲ್ಲೇ ‘ಐಲ್ಟ್ಸ್‌’ ಪರೀಕ್ಷೆಯೂ ಅಭ್ಯರ್ಥಿಗಳ ವಿದೇಶ ವಿದ್ಯಾಭ್ಯಾಸದ ಕನಸುಗಳನ್ನು ನನಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಎಲ್ಲೆಲ್ಲಿ ಮಾನ್ಯತೆ ?

1989ರಿಂದ ಜಾರಿಯಲ್ಲಿರುವ ಈ ಪರೀಕ್ಷೆ ಈವರೆಗೆ ಮೂರು ಕೋಟಿ ಬಾರಿ ನಡೆದಿದೆ. ಸರಾಸರಿ ಲೆಕ್ಕದಂತೆ ವಾರಕ್ಕೆ 60 ಸಾವಿರ ಜನ ಐಲ್ಟ್ಸ್‌ ಪರೀಕ್ಷೆ ಬರೆಯುತ್ತಾರೆ. ವರ್ಷಕ್ಕೆ 48 ಬಾರಿ ಪರೀಕ್ಷೆ ನಡೆಯುತ್ತದೆ. ಆಸ್ಟ್ರೇಲಿಯಾ, ಕೆನಡಾ, ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಐಲ್ಟ್ಸ್‌ ಪರೀಕ್ಷಾ ಫಲಿತಾಂಶಕ್ಕೆ ಪ್ರಥಮ ಮಾನ್ಯತೆ ಇದೆ. ವಿಶ್ವದ 11 ಸಾವಿರಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಐಲ್ಟ್ಸ್‌ ಪರೀಕ್ಷೆಯನ್ನು ಮಾನ್ಯ ಮಾಡುತ್ತವೆ. ಅಮೆರಿಕ ಸಹ ಐಲ್ಟ್ಸ್‌ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸುತ್ತದೆ. ಆದರೂ ಟೊಫೆಲ್‌ಗೆ(Test of English as foreign language) ಪ್ರಥಮ ಮಾನ್ಯತೆ.

ADVERTISEMENT
ಐಲ್ಟ್ಸ್‌ನ ಅಂತರರಾಷ್ಟ್ರೀಯ ಪಾಲುದಾರಿಕೆ
ಬ್ರಿಟಿಷ್ ಕೌನ್ಸಿಲ್, ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಕೇಂಬ್ರಿಡ್ಜ್‌ ಇಂಗ್ಲಿಷ್ ಮತ್ತು ಐಡಿಪಿ (ಇಂಟರ್‌ನ್ಯಾಷನಲ್‌ ಡೆವಲಪ್‌ಮೆಂಟ್‌ ಪ್ರೊಗ್ರಾಂ), ಐಲ್ಟ್ಸ್‌-ಆಸ್ಟ್ರೇಲಿಯಾ – ಇವೆಲ್ಲ ಒಟ್ಟಿಗೆ ಸೇರಿ ಮಾನ್ಯತೆ ನೀಡುತ್ತಿರುವ ಐಲ್ಟ್ಸ್‌ ಪರೀಕ್ಷೆಗೆ ವಿಶ್ವದಾದ್ಯಂತ ಪರೀಕ್ಷಾ ಕೇಂದ್ರ ಗಳಿವೆ. ಅಮೆರಿಕದಲ್ಲೂ ಈ ಪರೀಕ್ಷೆಗೆ ಪ್ರಥಮ ಮಾನ್ಯತೆ ನೀಡುವ ಸಲುವಾಗಿ ಐಲ್ಟ್ಸ್‌– ಯುಎಸ್‌ಎ ಎಂಬ ಪ್ರತ್ಯೇಕ ಪಾಲುದಾರಿಕೆಯೇ ಇದೆ. ಪಾಲುದಾರಿಕೆ ಇರುವ ಎಲ್ಲ ಸಂಸ್ಥೆಗಳೂ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಪೂರ್ವತಯಾರಿಗಾಗಿ ಪುಸ್ತಕ, ಪ್ರಶ್ನೆ ಪತ್ರಿಕೆ ಮಾದರಿ, ಪಠ್ಯಕ್ರಮ, ಚಿತ್ರ–ವಿಡಿಯೊ ಮಾಹಿತಿ, ಅಗತ್ಯವಿದ್ದವರಿಗೆ ತರಬೇತಿಯನ್ನೂ ನೀಡುತ್ತವೆ.

ಪರೀಕ್ಷೆ ಮನುಷ್ಯರಿಂದ, ಯಂತ್ರಗಳಿಂದಲ್ಲ

ಭಾಷಾ ಪರೀಕ್ಷೆ ಬೇರೆ ವಿಷಯಗಳ ಪರೀಕ್ಷೆಯಷ್ಟು ಸುಲಭದ್ದಲ್ಲ. ಅದರಲ್ಲೂ ನಮ್ಮನ್ನು(ಅಭ್ಯರ್ಥಿಗಳನ್ನು)ಕಂಪ್ಯೂಟರ್ ಪರೀಕ್ಷಿಸುತ್ತದೆ ಎಂದರೆ ತುಂಬಾ ಒತ್ತಡ – ಆತಂಕ ಎದುರಾಗುತ್ತದೆ. ಅದನ್ನು ನಿವಾರಿಸಿ, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಸರಾಗವಾಗಿ ಎದುರಿಸುವಂತೆ ಮಾಡಲು ಐಲ್ಟ್ಸ್‌ ನಲ್ಲಿರುವ ಸಂಭಾಷಣೆ ಪರೀಕ್ಷೆಯನ್ನು ನುರಿತ ಅಧ್ಯಾಪಕರೇ ನಡೆಸುತ್ತಾರೆ. ಟೊಫೆಲ್ ಮತ್ತಿತರ ಪರೀಕ್ಷೆಗಳಲ್ಲಿ ಇದಕ್ಕೆ ಕಂಪ್ಯೂಟರ್ ಬಳಸುತ್ತಾರೆ. ಅಭ್ಯರ್ಥಿಗಳು / ವಿದ್ಯಾರ್ಥಿಗಳು ಮಾತನಾಡುವುದನ್ನು ಅಧ್ಯಾಪಕರು ಸರಿಯಾಗಿ ಗ್ರಹಿಸಿಕೊಂಡು ಅದಕ್ಕೆ ತಕ್ಕುದಾದ ಅಂಕಗಳನ್ನು ನೀಡುತ್ತಾರೆ. ಶೈಲಿ– ಉಚ್ಚಾರಣೆ, ಧ್ವನಿಯ ಏರಿಳಿತಗಳನ್ನು ಗುರುತಿಸಿ ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ.

ಪರೀಕ್ಷಾ ವಿಧಗಳು

ಪೆನ್ನು–ಪೇಪರ್ ಬಳಸಿ ಪರೀಕ್ಷೆ ಬರೆಯುವ ಹಾಗೂ ಕಂಪ್ಯೂಟರ್ ಬಳಸಿ ಉತ್ತರಿಸುವ ಎರಡೂ ಆಯ್ಕೆಗಳು ವಿದ್ಯಾರ್ಥಿಗಳಿಗೆ ಲಭ್ಯವಿವೆ. ಜೊತೆಗೆ ಆನ್‌ಲೈನ್ ಪರೀಕ್ಷಾ ಸೌಲಭ್ಯವೂ ಇದೆ. 160 ದೇಶಗಳ 1600 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸೌಲಭ್ಯವಿದೆ.

ಪ್ರಶ್ನೆ ಪತ್ರಿಕೆ ಮಾದರಿ

ಪರೀಕ್ಷೆ ತೆಗೆದುಕೊಳ್ಳುವವರು ಲಿಸನಿಂಗ್ (ಕೇಳಿಸಿಕೊಳ್ಳು ವುದು), ರೀಡಿಂಗ್(ಓದುವುದು), ರೈಟಿಂಗ್(ಬರೆಯುವುದು) ಮತ್ತು ಸ್ಪೀಕಿಂಗ್ (ಮಾತನಾಡುವುದು) – ಹೀಗೆ ನಾಲ್ಕು ವಿಭಾಗಗಳಿಗೆ ಉತ್ತರಿಸಬೇಕಾಗುತ್ತದೆ. ವಿವರಗಳು ಈ ಕೆಳಗಿನಂತಿವೆ.

ಫಲಿತಾಂಶ ಮಾನದಂಡ

ಮೇಲಿನ ನಾಲ್ಕೂ ವಿಭಾಗಗಳಲ್ಲಿ ಅಭ್ಯರ್ಥಿಯು ಉತ್ತರಿಸಿದ ಉತ್ತರಗಳ ಮೌಲ್ಯಮಾಪನವನ್ನು ಸೊನ್ನೆಯಿಂದ ಒಂಬತ್ತರವರೆ ಗಿನ ಶ್ರೇಣಿ(0–9)ಗೆ ಅನ್ವಯಿಸಲಾಗುತ್ತದೆ. ಅತ್ಯಂತ ಚೆನ್ನಾಗಿ ಉತ್ತರಿಸಿದರೆ 9 ಶ್ರೇಣಿ ಮತ್ತು ತೀರಾ ಕೆಟ್ಟದಾಗಿ ಉತ್ತರಿಸಿದವರಿಗೆ ಒಂದು ಅಥವಾ ಸೊನ್ನೆ ಶ್ರೇಣಿ ನೀಡಲಾಗುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲೇಬೇಕೆಂದು ನಿರ್ಧರಿಸಿ ರುವವರು 6.5 ರಿಂದ 7ರ ಶ್ರೇಣಿಯನ್ನು ಪಡೆಯಲೇಬೇಕು. 16 ವರ್ಷ ತುಂಬಿರುವ ವಿದ್ಯಾರ್ಥಿಗಳು ‘ಐಲ್ಟ್ಸ್‌’ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

ಐಲ್ಟ್ಸ್‌ ಪರೀಕ್ಷೆ ಕೇವಲ ಉನ್ನತ ಅಧ್ಯಯನಕ್ಕೆ ಮಾತ್ರವಲ್ಲ, ವಿದೇಶಗಳಲ್ಲಿ ಉದ್ಯೋಗ ಪರವಾನಿಗೆ ಪಡೆಯಲು ಸಹ ನೆರವಾಗುತ್ತದೆ.

ಒಂದಿಷ್ಟು ಮಾಹಿತಿ ನೆನಪಿಡಿ

  • ಐಲ್ಟ್ಸ್‌(IELTS) ಪರೀಕ್ಷೆಯ ನೋಂದಣಿ ಶುಲ್ಕ ₹16,250

  • ಪರೀಕ್ಷೆ ಫಲಿತಾಂಶ ಎರಡು ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ

  • ಫಲಿತಾಂಶದ ಬಗ್ಗೆ ನಿಮಗೆ ಸಮಾಧಾನ ಇರದೇ ಇದ್ದಲ್ಲಿ ₹ 8,745 ಶುಲ್ಕ ಸಂದಾಯ ಮಾಡಿ ಮರುಮೌಲ್ಯಮಾಪನ ಮಾಡಿಸಿಕೊಳ್ಳಬಹುದು.

  • ಪರೀಕ್ಷಾ ನೋಂದಣಿಗೆ ಮಾನ್ಯತೆ ಇರುವ ಪಾಸ್ ಪೋರ್ಟ್ ಕಡ್ಡಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.