ADVERTISEMENT

ಅನುದಾನಿತ ಶಾಲೆ ‘ಐಎಂಎ’ ಕರಿನೆರಳು

ನೀನಾ ಸಿ.ಜಾರ್ಜ್
Published 27 ಜೂನ್ 2019, 19:30 IST
Last Updated 27 ಜೂನ್ 2019, 19:30 IST
ಶಿವಾಜಿನಗರದ ವಿ.ಕೆ.ಒಬೈದುಲ್ಲಾ ಶಾಲೆ
ಶಿವಾಜಿನಗರದ ವಿ.ಕೆ.ಒಬೈದುಲ್ಲಾ ಶಾಲೆ   

ಐಎಂಎ ಕಂಪೆನಿಯಿಂದ ಸಾವಿರಾರು ಹೂಡಿಕೆದಾರರು ಮೋಸ ಅನುಭವಿಸಿದ್ದು ಮಾತ್ರ ಅಲ್ಲ. ಹಲವಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಆ ಕರಿನೆರಳು ಕಾಡಿದೆ.

ಐಎಂಎ ಕಂಪೆನಿ ಶಿವಾಜಿನಗರದ ವಿ.ಕೆ.ಒಬೈದುಲ್ಲಾ ಶಾಲೆಗೆ ಅನುದಾನ ನೀಡಿತ್ತು. ಇಲ್ಲಿ ಪ್ರಾಥಮಿಕ ತರಗತಿಯಿಂದ ಹಿಡಿದು ಎಸ್ಎಸ್‌ಎಲ್‌ಸಿವರೆಗೂ 1,662 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಒಟ್ಟು 83 ಶಿಕ್ಷಕರು ಕೆಲಸ ಮಾಡುತ್ತಿದ್ದರು. ಇದರಲ್ಲಿ 13 ಶಿಕ್ಷಕರಿಗೆ ಮಾತ್ರ ಸರ್ಕಾರ ವೇತನ ನೀಡುತ್ತಿತ್ತು. ಉಳಿದ ಶಿಕ್ಷಕರಿಗೆ ಐಎಂಎ ಸಂಸ್ಥೆ ನೀಡುವ ಅನುದಾನದ ಮೂಲಕ ವೇತನ ನೀಡಲಾಗುತ್ತಿತ್ತು.

ಈಗ ಅನುದಾನ ನಿಂತ ಮೇಲೆ ಹತ್ತಾರು ಶಿಕ್ಷಕರು ಶಾಲೆ ತೊರೆದಿದ್ದಾರೆ. ಐಎಂಎ ಹಗರಣ ಬಯಲಾದ ನಂತರ ಕೆಲವು ಉರ್ದು ಶಿಕ್ಷಕರು ಶಾಲೆಗೆ ಬರುವುದನ್ನೇ ನಿಲ್ಲಿಸಿದ್ದಾರೆ. ಬೇರೆ ಬೇರೆ ಸರ್ಕಾರಿ ಶಾಲೆಯ 21 ಶಿಕ್ಷಕರನ್ನು ಸರ್ಕಾರ ಈ ಶಾಲೆಗೆ ನೇಮಕ ಮಾಡಿದೆ. ಆದರೆ ಉರ್ದು ಮಾತೃಭಾಷೆಯನ್ನು ಹೊಂದಿರುವ ಮಕ್ಕಳೇ ಇಲ್ಲಿ ಹೆಚ್ಚಿದ್ದಾರೆ. ಇಂಗ್ಲಿಷ್‌ ಮಾಧ್ಯಮ ಶಾಲೆಯಾದರೂ ಕನ್ನಡ ಬಲ್ಲ ಶಿಕ್ಷಕರ ಕಲಿಕೆಯನ್ನು ಅರ್ಥಮಾಡಿಕೊಳ್ಳುವುದು ಅವರಿಗೆ ಕಷ್ಟ ಆಗುತ್ತಿದೆ.

ADVERTISEMENT

‘ನನಗೆ ತಿಂಗಳಿಗೆ ₹17 ಸಾವಿರ ಸಂಬಳ ಇದೆ. ಈಗ ಸಂಬಳ ಸರಿಯಾದ ಸಮಯಕ್ಕೆ ಕೊಡುತ್ತಿಲ್ಲ. ನನ್ನ ಕೆಲವು ಸ್ನೇಹಿತರು ಬೇರೆ ಶಾಲೆ ಸೇರಿಕೊಂಡಿದ್ದಾರೆ. ನಾನೂ ಅವರನ್ನೇ ಅನುಸರಿಸುವ ಬಗ್ಗೆ ಯೋಚಿಸಿದ್ದೇನೆ’ ಎಂದು ಉರ್ದು ಶಿಕ್ಷಕಿ ಅಸೀಮಾ ಹೇಳಿದರು.

‘ಮೊದಲು 30 ಮಕ್ಕಳಿಗೆ ಪಾಠ ಮಾಡುತ್ತಿದ್ದೆವು. ಈಗ ಎರಡು ಕ್ಲಾಸ್ ಸೇರಿಸಲಾಗಿದೆ. 60ಕ್ಕೂ ಹೆಚ್ಚು ಮಕ್ಕಳಿಗೆ ಪಾಠ ಮಾಡಬೇಕು. ಅವರಿಗೆ ಕನ್ನಡ ಅಷ್ಟಾಗಿ ಬರುವುದಿಲ್ಲ. ನಾವು ಹೇಳುವುದು ಅರ್ಥ ಆಗದೇ ಕಷ್ಟಪಡುತ್ತಾರೆ. ನನಗೆ ಉರ್ದು ಬರುವುದಿಲ್ಲ’ ಎಂದು ಕಾಡುಗೊಂಡನಹಳ್ಳಿ ಶಾಲೆಯಿಂದ ಇಲ್ಲಿಗೆ ವರ್ಗವಾಗಿರುವ ದೈಹಿಕ ಶಿಕ್ಷಣ ವಿಭಾಗದ ಅಧ್ಯಾಪಕಿ ಚಿಕ್ಕತ್ಯಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

‘ಕನ್ನಡ ಶಿಕ್ಷಕರಾದ ನಾವು ಉರ್ದು ಭಾಷೆಯಲ್ಲಿ ಪಾಠಗಳನ್ನು ಹೇಗೆ ಹೇಳಲು ಸಾಧ್ಯ. ಇಲ್ಲಿ ಎಷ್ಟು ದಿನ ಇರಲುಸಾಧ್ಯ ಎಂಬುದು ನಮಗೆ ಗೊತ್ತಿಲ್ಲ. ಶಿಕ್ಷಣ ಇಲಾಖೆ ಈ ಬಗ್ಗೆ ಈವರೆಗೂ ಗಮನಹರಿಸಿಲ್ಲ’ ಎಂದು ಚನ್ನಸಂದ್ರ ಶಾಲೆಯಿಂದ ವರ್ಗವಾಗಿರುವ ಭಾಗ್ಯಮ್ಮ ಹೇಳಿದರು.

‘ಹೊಸ ಶಿಕ್ಷಕರು ಬಂದಾಗ ಸಾಕಷ್ಟು ವಿದ್ಯಾರ್ಥಿಗಳು ತರಗತಿಗೆ ಸರಿಯಾಗಿ ಬರುತ್ತಿಲ್ಲ. ಆಟ ಆಡಲು ಹೋಗುತ್ತಾರೆ. ಕೆಲವರು ಉರ್ದು ಬರುವ ಹೊಸ ಶಿಕ್ಷಕರನ್ನು ನೇಮಿಸುವಂತೆ ಪ್ರತಿಭಟನೆ ಕೂಡ ಮಾಡಿದರು. ಇದು ಮಾನವೀಯತೆಯಿಂದ ಯೋಚಿಸುವ ಸಮಯ’ ಎಂದು ಗಣಿತ ಶಿಕ್ಷಕ ಕೇಶವ್‌ ಹೇಳಿದರು.

ಟಿ.ಸಿ.ಗಾಗಿ ಕಾಯುತ್ತಿರುವ ಪೋಷಕರು
‘ಇಲ್ಲಿ ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ. ಆಟ ಆಡಿಕೊಂಡಿರುವಂತೆ ಮಕ್ಕಳಿಗೆ ಶಿಕ್ಷಕರೇ ಹೇಳುತ್ತಿದ್ದಾರೆ. ಇಂತಹ ಜಾಗದಲ್ಲಿ ನನ್ನ ಮಗಳನ್ನು ಓದಿಸಲು ಸಾಧ್ಯವಿಲ್ಲ’ ಎಂದು ಶಾಲೆಗೆ ಟಿ.ಸಿ (ವರ್ಗ ಪ್ರಮಾಣಪತ್ರ) ಕೇಳಲು ಬಂದಿದ್ದ ನಾಜಿರ್ ಸೈಯದ್‌ ಹೇಳಿದರು.

‘ನಾನು ಐಎಂಎದಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಗೊತ್ತಾದ ಮೇಲೆ ಈ ಶಾಲೆಯಲ್ಲಿ ಅವಕಾಶ ಸಿಕ್ಕಿತ್ತು. ಇಬ್ಬರು ಮಕ್ಕಳು ಇಲ್ಲಿ ಓದುತ್ತಿದ್ದಾರೆ. ಈಗ ಬೇರೆ ಶಾಲೆಗೆ ಸೇರಿಸುತ್ತೇನೆ. ಪತಿ ₹5 ಲಕ್ಷ ಹಣವನ್ನು ಐಎಂಎದಲ್ಲಿ ಹೂಡಿಕೆ ಮಾಡಿದ್ದರು. ಸಂಬಂಧಿಗಳು ₹5 ಲಕ್ಷ ಹೂಡಿದ್ದರು. ಎಲ್ಲಾ ಕಳೆದುಕೊಂಡು ಬೇಸರದಲ್ಲಿದ್ದೇವೆ. ಇಂತಹ ಶಾಲೆಯಲ್ಲಿ ನನ್ನ ಮಕ್ಕಳು ಓದಬಾರದು’ ಎಂದು ಸೋಫಿಯಾ ಬೇಸರ ವ್ಯಕ್ತಪಡಿಸಿದರು.

ಶಾಲೆಗೆ ಭದ್ರತೆ
ಕರ್ನಾಟಕ ಮೀಸಲು ಪೊಲೀಸ್ ಪಡೆಯ ಬೆಂಬಲದೊಂದಿಗೆ 23 ಮಂದಿ ಈ ಶಾಲೆಗೆ ಭದ್ರತೆ ಒದಗಿಸುವಲ್ಲಿ ನಿರತರಾಗಿದ್ದಾರೆ.

‘ಎರಡು ಪಾಳಿಯಲ್ಲಿ ಶಾಲೆಯನ್ನು ಕಾಯುತ್ತಿದ್ದೇವೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8ರವರೆಗೆ ಇಲ್ಲಿ ಇರುವಂತೆ ಆದೇಶ ಇದೆ. ಗಲಾಟೆ ಆದರೆ ಅದನ್ನು ತಡೆಯುವಂತೆ ನಿಯೋಜಿಸಲಾಗಿದೆ’ ಎಂದು ಹಿರಿಯ ಅಧಿಕಾರಿ ಚೌಡಯ್ಯ ಮಾಹಿತಿ ನೀಡಿದರು.

ಪರಿಣಾಮ ಇಲ್ಲ
ಸೇಂಟ್ ಜಾನ್ಸ್‌ ಚರ್ಚ್‌ ರಸ್ತೆ, ಕ್ಲೆವೆಲ್ಯಾಂಡ್‌ ಟೌನ್‌ನಲ್ಲಿರುವ ‘ನೆಹರೂ ಇಂಗ್ಲಿಷ್‌ ಹೈ ಸ್ಕೂಲ್‌’ ಕೂಡ ಐಎಂಎ ಅನುದಾನ ಪಡೆದುಕೊಂಡಿದೆ. ಆದರೆ ಈ ಶಾಲೆಯ ಮೇಲೆ ಇದು ಹೆಚ್ಚು ಪರಿಣಾಮ ಬೀರಿದಂತಿಲ್ಲ. ತರಗತಿಗಳು ಕೂಡ ಎಂದಿನಂತೆ ನಡೆಯುತ್ತಿವೆ. ಇಲ್ಲಿಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಐಎಂಎ ಅನುದಾನದ ಬಗ್ಗೆ ಮಾತನಾಡುತ್ತಿಲ್ಲ. ಶಾಲೆಯ ಬೋರ್ಡ್‌ ಮೇಲಿದ್ದ ಐಎಂಎ ಲೋಗೊವನ್ನು ಅಳಿಸಲಾಗಿದೆ. ಅದರ ಜೊತೆಗೆ ಇರುವ ವೆಬ್‌ಸೈಟ್ ಹೆಸರಿನಲ್ಲಿ ಮಾತ್ರ ಐಎಂಎ ಹೆಸರು ಕಾಣಿಸುತ್ತಿದೆ.

ಎನ್‌ಜಿಒ ಹುಡುಕಾಟದಲ್ಲಿ ಶಾಲೆ
20 ಶಿಕ್ಷಕರು ಶಿವಾಜಿನಗರದ ಶಾಲೆಯನ್ನು ತೊರೆದಿದ್ದಾರೆ. 21 ಶಿಕ್ಷಕರನ್ನು ಸರ್ಕಾರ ಇಲ್ಲಿಗೆ ವರ್ಗ ಮಾಡಿದೆ. ಐಎಂಎ ಅನುದಾನದಿಂದ ವೇತನಪಡೆಯುತ್ತಿದ್ದ ಇನ್ನೂ 18 ಶಿಕ್ಷಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ವೇತನ ಕೊಡಲು ಎನ್‌ಜಿಒ (ಸರ್ಕಾರೇತರ ಸಂಸ್ಥೆ) ನೆರವು ಪಡೆಯಲು ಯೋಚಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ ಇರುವವರಲ್ಲಿ ಎಲ್ಲರೂ ಸ್ನಾತಕೋತ್ತರ ಪದವಿ ಮಾಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.