ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುವಾಗ ಪುಸ್ತಕಗಳಷ್ಟೇ ಪುಸ್ತಕಗಳಾಚೆಗಿನ ಮಾಹಿತಿ ಒದಗಿಸುವಲ್ಲಿ ಅಟ್ಲಾಸ್ ಪ್ರಮುಖ ಪರಿಕರವಾಗಿದೆ. ಚಿತ್ರ, ಕೋಷ್ಟಕ, ರೇಖಾಚಿತ್ರಗಳಷ್ಟೇ ಅಟ್ಲಾಸ್ ಕೂಡ ಒಂದು ಮುಖ್ಯ ಆಕರ. ಈ ಲೇಖನದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಅಟ್ಲಾಸ್‌ನ ಪ್ರಾಮುಖ್ಯ ಮತ್ತು ವಿವಿಧ ಪರೀಕ್ಷಾ ಸಿದ್ದತೆಯ ನಿಯಮಿತ ಓದುವಿಕೆಯಲ್ಲಿ ಅಟ್ಲಾಸ್ ಬಳಸುವ ವಿಧಾನವನ್ನು ಚರ್ಚಿಸೋಣ.
ಅಟ್ಲಾಸ್ ಎಂದರೆ
‘ಅಟ್ಲಾಸ್’ ಎಂದರೆ ನಕ್ಷೆಗಳ ಸಂಗ್ರಹ ಎಂದರ್ಥ. ಪೌರಾಣಿಕ ಗ್ರೀಕ್ ವ್ಯಕ್ತಿ ಅಟ್ಲಾಸ್‌ನಿಂದ ಈ ಪದ ಬಂದಿರಬಹುದೆಂದು ನಂಬಲಾಗಿದೆ. ಇದು ಭೂಮಿಯ ವಿವಿಧ ನಕ್ಷೆಗಳ ಸಂಗ್ರಹ. ಭಾರತ, ಅಮೆರಿಕ ಅಥವಾ ಯೂರೋಪ್‌ನಂತಹ ಭೂಮಿಯ ನಿರ್ದಿಷ್ಟ ಪ್ರದೇಶದ ನಕ್ಷೆಗಳು ಇದರಲ್ಲಿ ಲಭ್ಯ. ಅಟ್ಲಾಸ್‌ಗಳಲ್ಲಿನ ನಕ್ಷೆಗಳು ಭೌಗೋಳಿಕ ಲಕ್ಷಣಗಳು, ಪ್ರದೇಶದ ಭೂದೃಶ್ಯದ ಸ್ಥಳಾಕೃತಿ ಮತ್ತು ರಾಜಕೀಯ ಗಡಿಗಳನ್ನು ತೋರಿಸುತ್ತವೆ. ಜೊತೆಗೆ ಒಂದು ಪ್ರದೇಶದ ಹವಾಮಾನ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಅಂಕಿ–ಅಂಶಗಳನ್ನೂ ಒದಗಿಸುತ್ತವೆ.
ಅಟ್ಲಾಸ್‌ನಲ್ಲಿ ರೂಪಿಸಿರುವ ನಕ್ಷೆಗಳು ಪುಸ್ತಕಗಳ ರೂಪ ಪಡೆದಿವೆ. ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಇದು ಒಂದು ಮಾರ್ಗದರ್ಶಿ ಕೈಪಿಡಿ. ಪರೀಕ್ಷೆಯ ಸಿದ್ಧತೆಗೆ ಮಹತ್ವದ ಪೂರಕ ಸಂಪನ್ಮೂಲ.
ಪರೀಕ್ಷೆ ಸಿದ್ಧತೆಯಲ್ಲಿ ಅಟ್ಲಾಸ್
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಭೂಗೋಳದ ಪ್ರಶ್ನೆಗಳಿಗೆ ನಿಖರ ಹಾಗೂ ಸುಲಭವಾಗಿ ಉತ್ತರಿಸಲು ಅಟ್ಲಾಸ್ ನೆರವಾಗುತ್ತದೆ. ಭೂಗೋಳದ ಹೆಚ್ಚಿನ ಪ್ರಶ್ನೆಗಳು ನಕ್ಷೆ ಆಧಾರಿತ ಪ್ರಶ್ನೆಗಳಾಗಿರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ನಕ್ಷೆ/ಭೂಪಟ ಓದುವಿಕೆಯನ್ನು ಆಗಾಗ್ಗೆ ನವೀಕರಿಸಿಕೊಳ್ಳಬೇಕಾಗುತ್ತದೆ.
ವಿಶೇಷವಾಗಿ ಐ.ಎ.ಎಸ್. ಐ.ಪಿ.ಎಸ್.ನಂತಹ ನಾಗರಿಕ ಸೇವಾ ಹುದ್ದೆಗಳಿಗೆ ನಡೆಸುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಭೂಗೋಳ, ಅಂತರಾಷ್ಟ್ರೀಯ ವಿಚಾರ, ಪರಿಸರ ಮತ್ತು ವಿಪತ್ತು ನಿರ್ವಹಣೆ ಕುರಿತು ಪ್ರಶ್ನೆಗಳಿರುತ್ತವೆ. ಐ.ಎ.ಎಸ್ ಮುಖ್ಯ ಪರೀಕ್ಷೆ ಯಲ್ಲಿನ ವಿವರಣಾತ್ಮಕ ಉತ್ತರ ಬರವಣಿಗೆಗೆ ಅಟ್ಲಾಸ್‌ನಲ್ಲಿನ ನಕ್ಷೆ ಓದುವಿಕೆ ತುಂಬಾ ಸಹಾಯಕವಾಗಿರುತ್ತದೆ. ಈ ಹಿಂದಿನ ಪ್ರಿಲಿಮ್ಸ್ ಹಾಗೂ ಮೇನ್ಸ್ ಪರೀಕ್ಷೆಗಳಲ್ಲಿ ಕೇಳಿದ್ದ ಹೆಚ್ಚಿನ ಪ್ರಶ್ನೆಗಳು ಅಟ್ಲಾಸ್ ಆಧಾರಿತವಾಗಿರುವುದನ್ನು ಗಮನಿಸಬಹುದು.
ಅಟ್ಲಾಸ್ ಓದುವುದು ಹೇಗೆ?
ಅಟ್ಲಾಸ್ ಓದುವಿಕೆಯನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಒಂದು ಸ್ಥಿರ ನಕ್ಷೆಯ ಓದುವಿಕೆ ಮತ್ತು ಇನ್ನೊಂದು ಪ್ರಸ್ತುತ ವ್ಯವಹಾರಗಳ ಆಧಾರದ ಮೇಲೆ ನಕ್ಷೆ ಓದುವುದು.
ಸ್ಥಿರ ನಕ್ಷೆ ಓದುವಿಕೆ: ಇದರಲ್ಲಿ ವಿದ್ಯಾರ್ಥಿಗಳು ಅಟ್ಲಾಸ್ ಜೊತೆಗೆ ಭೌಗೋಳಿಕ ವಿಷಯವನ್ನು ಅನುಸರಿಸಬೇಕು. ಭಾರತ ಅಥವಾ ವಿಶ್ವ ಭೂಗೋಳವನ್ನು ಓದುವಾಗ ವಿದ್ಯಾರ್ಥಿಗಳು ತಮ್ಮದೇ ಆದ ಅಟ್ಲಾಸ್(ನಕ್ಷೆಯ ಪುಸ್ತಕ) ಹೊಂದಿರಬೇಕು.
ಉದಾಹರಣೆಗೆ: ಭಾರತದ ಮುಂಗಾರು ಮಾರುತಗಳ ಬಗ್ಗೆ ಅಧ್ಯಯನ ಮಾಡುವಾಗ ನಿಮ್ಮ ಅಟ್ಲಾಸ್ ಇದ್ದರೆ, ಅದರಲ್ಲಿ ಮುಂಗಾರು ಮಾರುತದಲ್ಲಿರುವ ನೈರುತ್ಯ ಮತ್ತು ಈಶಾನ್ಯ ಮಾರುತಗಳ ಬಗ್ಗೆ ನಕ್ಷೆ ಸಹಿತ ಸುಲಭವಾಗಿ ಕಲಿಯಬಹುದು. ನೈರುತ್ಯ ಮತ್ತು ಈಶಾನ್ಯದ ನಡುವಿನ ವ್ಯತ್ಯಾಸದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ಅಟ್ಲಾಸ್‌ನಲ್ಲಿ ನೀಡಿದ ಗಾಳಿಯ ಹಿಮ್ಮುಖ ಮತ್ತು ಮುಮ್ಮುಖ ಚಲನೆಯ ಗುರುತುಗಳು ಸಹಾಯ ಮಾಡುತ್ತವೆ. ಪರಿಕಲ್ಪನಾ ತಿಳುವಳಿಕೆಯ ಹೊರತಾಗಿ, ವಿದ್ಯಾರ್ಥಿಗಳು ವಿಶ್ವ ಮತ್ತು ಭಾರತೀಯ ಭೌಗೋಳಿಕತೆಗೆ ಸಂಬಂಧಿಸಿದ ಸ್ಥಿರ ನಕ್ಷೆಯ ಮಾಹಿತಿಯನ್ನು ಅಟ್ಲಾಸ್ ಮೂಲಕ ನವೀಕರಿಸಿಕೊಳ್ಳಬಹುದು. ಇದರಿಂದ ಪರೀಕ್ಷೆಯಲ್ಲಿ ನಿಖರವಾಗಿ ಉತ್ತರಿಸಲು ಸಹಾಯವಾಗುತ್ತದೆ.
ಸ್ಥಿರ ನಕ್ಷೆಯಲ್ಲಿ ಭೂಗೋಳಕ್ಕೆ ಸಬಂಧಿಸಿದ ಪ್ರಮುಖ ಸಾಗರಗಳು, ಸಮುದ್ರಗಳು, ಕೊಲ್ಲಿಗಳು, ತೊರೆಗಳು, ಪರ್ವತ ಶ್ರೇಣಿಗಳು, ಅತ್ಯುನ್ನತ ಶಿಖರಗಳು, ಮೌಂಟೇನ್ ಪಾಸ್‌ಗಳು, ಪ್ರಮುಖ ಪ್ರಸ್ಥಭೂಮಿಗಳು, ಸರೋವರಗಳು, ನದಿಗಳು, ಜಲಾನಯನ ಪ್ರದೇಶಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಜ್ವಾಲಾಮುಖಿಗಳು, ಭೂಕಂಪದ ಪ್ರದೇಶಗಳು ಹೀಗೆ ಹತ್ತಾರು ಅಂಶಗಳ ಬಗ್ಗೆ ಸ್ಪಷ್ಟ ಜ್ಞಾನ ಪಡೆಯಬಹುದು. ಇನ್ನು ರಾಜಕೀಯ ಭೂಗೋಳಕ್ಕೆ ಸಂಬಂಧಿಸಿಂತೆ ಅಂತಾರಾಷ್ಟ್ರೀಯ ಗಡಿಗಳು, ದ್ವೀಪಗಳು, ದೇಶಗಳು, ರಾಜ್ಯಗಳು, ಪ್ರಮುಖ ನಗರಗಳು, ಪ್ರಮುಖ ಕೈಗಾರಿಕಾ ಪ್ರದೇಶಗಳು ಮುಂತಾದ ಅಂಶಗಳನ್ನು ಸಹ ನಕ್ಷೆ ಆಧಾರಿತವಾಗಿ ಕಲಿಯಬಹುದು.
ವ್ಯವಹಾರಗಳ ಆಧಾರಿತ ನಕ್ಷೆ ಓದುವಿಕೆ
ವೃತ್ತಪತ್ರಿಕೆಗಳಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಓದುವಾಗ, ಯಾವಾಗಲೂ ಅಟ್ಲಾಸ್ ಅನ್ನು ಕೈಯಲ್ಲಿಟ್ಟುಕೊಂಡಿರಬೇಕು. ವಿಶೇಷವಾಗಿ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸುದ್ದಿಯಲ್ಲಿರುವ ನಗರಗಳು ಮತ್ತು ಪ್ರದೇಶಗಳನ್ನು ಅಟ್ಲಾಸ್ ಮೂಲಕ ಗುರುತಿಸಿಕೊಂಡರೆ ಕಲಿಕೆ ಪರಿಪೂರ್ಣವಾಗುತ್ತದೆ. ಪ್ರಮುಖ ಅಂತಾರಾಷ್ಟ್ರೀಯ ಸಮಸ್ಯೆಗಳಿಗೆ ನಕ್ಷೆ ಆಧಾರಿತ ಪ್ರಶ್ನೆಗಳಿಗೆ ಉತ್ತರಿಸಲು ಅಟ್ಲಾಸ್ ಹೆಚ್ಚು ಸಹಾಯ ಮಾಡುತ್ತದೆ. ಜೊತೆಗೆ ವಿವಿಧ ದೇಶಗಳ ಗಡಿ ವಿವಾದ, ಅಣೆಕಟ್ಟು ಸಮಸ್ಯೆಗಳು ಇತ್ಯಾದಿ ಭೌಗೋಳಿಕತೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಕ್ಷೆ ಆಧಾರಿತ ಪ್ರಶ್ನೆಗಳ ಸಂಭವನೀಯತೆ ಹೆಚ್ಚಿರುತ್ತದೆ.
ಈ ಕಾರಣಗಳಿಗಲ್ಲದೇ, ವಿಷಯವನ್ನು ಚೆನ್ನಾಗಿ ಗ್ರಹಿಸಲು, ದೇಶದ ರಾಜ್ಯಗಳು ಮತ್ತು ಅವುಗಳ ರಾಜಧಾನಿಗಳು, ಕೇಂದ್ರಾಡಳಿತ ಪ್ರದೇಶಗಳು, ದೇಶದ ಇತರ ಪ್ರಮುಖ ನಗರಗಳ ಮೇಲೆ ಅಧ್ಯಯನ ಗಮನ ಕೇಂದ್ರೀಕರಿಸಲು ಅಟ್ಲಾಸ್ ಪ್ರಮುಖ ಮಾಹಿತಿ ನೀಡುತ್ತದೆ. ವಿಷಯಾಧಾರಿತ ಜ್ಞಾಪಕ ತಂತ್ರಗಳನ್ನು ಉತ್ತೇಜಿಸಲು ಅಟ್ಲಾಸ್ ಆಪ್ತಮಿತ್ರ ಎನಿಸುತ್ತದೆ.
ಭೂಗೋಳವು ಪ್ರಾಥಮಿಕವಾಗಿ ಜನ, ಸಂಸ್ಕೃತಿ ಮತ್ತು ಸಮುದಾಯಗಳ ಅಧ್ಯಯನದೊಂದಿಗೆ ವ್ಯವಹರಿಸುತ್ತದೆ. ಈ ದೃಷ್ಟಿ ಕೋನಗಳ ಆಳವಾದ ಜ್ಞಾನ ಹೊಂದಲು, ವಿವಿಧ ಸ್ಥಳಗಳ ಸ್ಥಳಗಳ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ಅಟ್ಲಾಸ್ ಅಧ್ಯಯನ ತುಂಬಾ ಪ್ರಯೋಜನಕಾರಿ.
ಇತಿಹಾಸಕ್ಕೆ ಸಂಬಂಧಿದಂತೆ ವಿವಿಧ ನಾಗರಿಕತೆಗಳು, ರಾಜರ ಆಳ್ವಿಕೆಯ ಪ್ರದೇಶಗಳು, ಸಾಮ್ರಾಜ್ಯಗಳ ವಿಸ್ತರಣೆ, ಶಾಸನ ಸ್ಥಳಗಳ ಮಾಹಿತಿ, ಪುರಾತತ್ವ ಶಾಸ್ತ್ರದ ಉತ್ಖನನಗಳು, ಪ್ರಾಚೀನ ಸ್ಮಾರಕಗಳು ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ಅಟ್ಲಾಸ್ ಸ್ಪಷ್ಟವಾದ ತಿಳುವಳಿಕೆಯನ್ನು ನೀಡುತ್ತದೆ.
ಅಟ್ಲಾಸ್ ಬಳಕೆಯ ವಿಧಾನ
1. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಥಳ ಆಧಾರಿತ ಪ್ರಶ್ನೆಗಳಿರುತ್ತವೆ. ಅದಕ್ಕಾಗಿ ಅಟ್ಲಾಸ್‌ನಲ್ಲಿ ನದಿಗಳು, ಪರ್ವತಗಳು, ಸರೋವರಗಳು, ಹಿಮನದಿಗಳು ಮುಂತಾದ ಪ್ರಮುಖ ಸ್ಥಳಗಳನ್ನು ಗುರುತಿಸಿಕೊಳ್ಳಿ.
2. ಅಟ್ಲಾಸ್ ಅನ್ನು ವಿವಿಧ ಪರಿಕಲ್ಪನೆ ಆಧಾರಿತವಾಗಿ ಸಂಯೋಜಿತ ಅಧ್ಯಯನ ನಡೆಸಿ. ಒಂದು ಸ್ಥಳದ ನಾಗರಿಕತೆಯ ವಿವರಗಳು, ಲಕ್ಷಣಗಳು, ಐತಿಹಾಸಿಕ ಪುರಾವೆಗಳು, ಶಾಸನಗಳು, ಸ್ಥಳ ಪುರಾಣ, ಕೈಗಾರಿಕೆಗಳು, ರಾಜಕೀಯ ಚಟುವಟಿಕೆಗಳು, ಆರ್ಥಿಕ ಅಂಶಗಳು, ಹವಾಮಾನ ಮತ್ತು ವಾಯುಗುಣ, ರಸ್ತೆಗಳು, ಸಂಪರ್ಕ ವ್ಯವಸ್ಥೆಗಳು, ಪ್ರಚಲಿತ ಘಟನಾವಳಿಗಳು ಇತ್ಯಾದಿ ಅಂಶಗಳನ್ನು ಆಧರಿಸಿ ಒಂದೆಡೆ ಸಂಯೋಜಿತ ಮಾಹಿತಿಯನ್ನು ದಾಖಲಿಸಿಟ್ಟುಕೊಂಡರೆ ಪರೀಕ್ಷೆಗಳಲ್ಲಿ ಉತ್ತರಿಸಲು ಸುಲಭವಾಗುತ್ತದೆ.
3. ಅಟ್ಲಾಸ್‌ನಲ್ಲಿ ಮೊದಲು ವಿಶ್ವ, ನಂತರ ಖಂಡ ಮತ್ತು ದೇಶಗಳ ಮಾಹಿತಿಯನ್ನು ಅಧ್ಯಯನ ಮಾಡಿ.
4. ಸಾಗರಗಳು, ಸರೋವರಗಳು, ಕೊಲ್ಲಿಗಳು, ನದಿಗಳು, ಪರ್ವತಗಳು, ಕಣಿವೆಗಳು, ಮೈದಾನಗಳು, ಮರುಭೂಮಿಗಳು, ಸಮುದ್ರತೀರಗಳು, ಬಂದರುಗಳು ಇಂಥ ವೈಶಿಷ್ಟ್ಯಗಳನ್ನು ಒಟ್ಟಾರೆಯಾಗಿ ನೆನಪಿಟ್ಟುಕೊಳ್ಳಿ.
5. ತಮ್ಮ ಅಧ್ಯಯನ ಸ್ಥಳದಲ್ಲಿ ಯಾವಾಗಲೂ ಕೈಗೆ ಸಿಗುವಂತೆ ಅಟ್ಲಾಸ್ ಇಟ್ಟುಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.