ADVERTISEMENT

ಮಗುವಿನ ಶಬ್ದ ಸಂಪತ್ತು ವೃದ್ಧಿಸಿ

ಪ.ನಾ.ಹಳ್ಳಿ ಹರೀಶ್ ಕುಮಾರ್
Published 29 ಜನವರಿ 2019, 19:30 IST
Last Updated 29 ಜನವರಿ 2019, 19:30 IST
   

ವ್ಯಕ್ತಿಯೊಬ್ಬ ತನ್ನ ಭಾಷೆಯಲ್ಲಿ ಸಂಗ್ರಹಿಸಿ ಬಳಸುತ್ತಿರುವ ಪದಗಳ ಸಂಖ್ಯೆ ಹೆಚ್ಚಾದಷ್ಟೂ ಅಭಿಪ್ರಾಯ ವ್ಯಕ್ತಪಡಿಸಲು ಅನುಕೂಲ. ಮಕ್ಕಳು ನಿರರ್ಗಳವಾಗಿ ಮಾತನಾಡಲು, ಓದಲು ಮತ್ತು ಬರೆಯಲು ಶಬ್ದ ಸಂಪತ್ತು ಅತ್ಯಂತ ಅವಶ್ಯಕ. ಶ್ರೀಮಂತ ಶಬ್ದ ಸಂಪತ್ತು ಮಗುವಿನ ಅರ್ಥೈಸುವಿಕೆ, ಮಾತು, ಓದು, ಬರಹ ಮತ್ತು ಸಂವಹನಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ.

ಶಬ್ದಗಳನ್ನು ಬಳಸುವುದು ಒಂದು ಕಲೆ. ಅದನ್ನು ನಮ್ಮ ಮಕ್ಕಳು ತಮ್ಮದಾಗಿಸಿಕೊಂಡರೆ ಉತ್ತಮ ವಾಗ್ಮಿಗಳೂ, ಬರಹಗಾರರೂ ಆಗಬಲ್ಲರು. ಕವಿಗಳಿಗೆ, ಸಾಹಿತಿಗಳಿಗೆ, ಪತ್ರಿಕೋದ್ಯಮಿಗಳಿಗೆ ಮಾತ್ರವಲ್ಲ, ಎಲ್ಲ ಉದ್ಯೋಗಗಳಲ್ಲೂ ಈ ಶಬ್ದ ಸಂಪತ್ತೇ ನಮ್ಮ ನೆರವಿಗೆ ಬರುವುದು. ಇದರ ಸಹಾಯದಿಂದ ಉದ್ಯೋಗದಲ್ಲಿ ನಮ್ಮ ಛಾಪು ಮೂಡಿಸಬಹುದು.

ಪ್ರತೀ ಶಬ್ದವನ್ನೂ ಮಗು ನಾಲ್ಕರಿಂದ ಹನ್ನೆರೆಡು ಬಾರಿ ಪದೇ ಪದೇ ಕೇಳಿದಾಗ ಮಾತ್ರವೇ ಆ ಶಬ್ದ ಬಳಕೆಯಾಗಿ ಮಗುವಿನ ಶಬ್ದ ಭಂಡಾರವನ್ನು ಸೇರುತ್ತದೆ.

ADVERTISEMENT

ವಿಧಾನಗಳು

ಮಗುವಿನ ಬೌದ್ಧಿಕ ಬೆಳವಣಿಗೆಯಲ್ಲಿ ಸಾಕಷ್ಟು ಅನುಕೂಲ ಹಾಗೂ ಅವಶ್ಯಕವಾಗಿರುವ ಶಬ್ದಗಳ ಸಂಖ್ಯೆಯನ್ನು ಹೆಚ್ಚಿಸಬೇಕಿರುವುದು ಇಂದಿನ ಅಗತ್ಯಗಳಲ್ಲೊಂದಾಗಿದ್ದು ಪಾಲಕರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಈ ಬಗ್ಗೆ ಕೆಲವು ಸರಳ ವಿಧಾನಗಳು ಇಲ್ಲಿವೆ.

ಪ್ರಬುದ್ಧ ಶಬ್ದಗಳ ಬಳಕೆ

ಮಗುವಿನ ಸಾಮಾನ್ಯ ಮಾತುಕತೆಗಳಲ್ಲಿಯೂ ಸಹ ಪ್ರಬುದ್ಧವಾದ ಶಬ್ದಗಳನ್ನು ಬಳಸುವುದು ಮತ್ತು ಅರ್ಥವಾಗದ್ದನ್ನು ಕೇಳಿ ತಿಳಿಯುವ ಗುಣವನ್ನು ರೂಢಿಸುವುದು. ಮಗು ಪ್ರಶ್ನಿಸಿದಾಗ ಅದರ ಪ್ರಶ್ನೆಯನ್ನು ಆಲಿಸಿ ಉತ್ತರಿಸುವ ಕನಿಷ್ಠ ತಾಳ್ಮೆ ನಿಮ್ಮಲ್ಲಿರಲಿ. ಮಗುವಿಗೆ ಸರಳ ಪದಸಂಪತ್ತನ್ನು ರೂಢಿಸುವ ಭರದಲ್ಲಿ ಕೆಟ್ಟ ಶಬ್ದಗಳನ್ನು ರೂಢಿಸುವುದು ಬೇಡ.

ತಪ್ಪನ್ನು ಆ ಕ್ಷಣವೇ ಸರಿಪಡಿಸಿ

ಮಗು ಶಬ್ದಗಳನ್ನು ಉಚ್ಛರಿಸುವಾಗ ಕಂಡುಬರುವ ತಪ್ಪುಗಳನ್ನು ಆ ಕ್ಷಣವೇ ತಿದ್ದಿ ಸರಿಪಡಿಸಿ. ಹೊಸ ಶಬ್ದಗಳನ್ನು ಮಗು ಅರ್ಥೈಸಿಕೊಳ್ಳುವವರೆಗೂ ತಾಳ್ಮೆಯಿಂದ ಪದೇ ಪದೇ ಉಚ್ಛರಿಸುತ್ತಿರಿ.

ಸತತ ಮಾತುಕತೆಯಲ್ಲಿ ತೊಡಗಿಸಿ

ಷಾಪಿಂಗ್, ಸ್ನಾನ, ಆಟ, ಊಟ ಮಾಡಿಸುವಾಗ, ಜೊತೆಯಲ್ಲಿ ಪ್ರಯಾಣಿಸುವಾಗ ಹೀಗೆ ದಿನನಿತ್ಯದ ಅನೇಕ ಸಂದರ್ಭಗಳಲ್ಲಿ ಮಗುವು ನಿಮ್ಮ ಮಾತುಗಳನ್ನು ಆಲಿಸಿ, ಕಲಿಯುವ ಮೂಲಕ ಶಬ್ದ ಸಂಪತ್ತು ಹೆಚ್ಚಿಸಿಕೊಳ್ಳುತ್ತಿರುತ್ತದೆ ಮತ್ತು ಕಲಿತದ್ದನ್ನು ತನ್ನ ಮಾತುಗಾರಿಕೆಯಲ್ಲಿ ಬಳಸುತ್ತಿರುತ್ತದೆ. ನೀವು ಮಗುವನ್ನು ನಿರಂತರ ಮಾತುಕತೆಯಲ್ಲಿ ತೊಡಗಿಸಿದಾಗ ಸತತ ಬಳಕೆಯಿಂದಾಗಿ ಮಗುವಿನ ಶಬ್ದ ಸಂಪತ್ತು ದೃಢವಾಗುತ್ತದೆ.

ಪದಪುಂಜಗಳೊಡನೆ ಆಟ

ಪದಬಂಧ, ಒಗಟುಗಳು, ಸ್ಕ್ರ್ಯಾಬೆಲ್, ಹ್ಯಾಂಗ್‌ಮನ್, ಸ್ಪಿನ್ನಿಂಗ್‌ವೀಲ್, ಪ್ರಬಂಧ, ಅಂತ್ಯಾಕ್ಷರಿ, ಕವಿಗೋಷ್ಠಿ, ಭಾಷಣ, ಚರ್ಚೆ, ಆಶುಭಾಷಣ ಮುಂತಾದ ಭಾಷಾ ಚಟುವಟಿಕೆಗಳ ಮೂಲಕ ಮಗುವಿನ ಶಬ್ದ ಸಂಪತ್ತನ್ನು ಉತ್ತಮಪಡಿಸಬಹುದಾಗಿದೆ.

ಓದುವುದನ್ನು ರೂಢಿಸಿ

ಮಗುವಿಗೆ ಪ್ರಾರಂಭದಲ್ಲಿ ಜೋರಾಗಿ ಓದುವ ಅಭ್ಯಾಸವನ್ನು ರೂಢಿಸುವುದರಿಂದ ಕಂಡುಬರುವ ತಪ್ಪುಗಳನ್ನು ತಿದ್ದಿ ಸರಿಪಡಿಸಲು ಸಹಾಯಕವಾಗಬಲ್ಲದು. ಆದರೆ ಮಗುವು ಓದಬೇಕಾದ ಪುಸ್ತಕದ ಆಯ್ಕೆಯು ಮಗುವಿಗೆ ಆಸಕ್ತಿದಾಯಕವಾಗಿರಬೇಕು ಮತ್ತು ಮಗುವೇ ಪುಸ್ತಕವನ್ನು ಆಯ್ದುಕೊಳ್ಳುವುದು ಉತ್ತಮ.

ಕಥೆ ಹೇಳಿ

ಮಗುವಿಗೆ ಕಥೆಗಳನ್ನು ಹೇಳುವುದನ್ನು ರೂಢಿಸುವುದರಿಂದಲೂ ಅದರ ಶಬ್ದ ಸಂಪತ್ತು ಹೆಚ್ಚಿಸಬಹುದಾಗಿದೆ. ಕಥೆ ಹೇಳುವಾಗ ಸಂದರ್ಭಾನುಸಾರ ಪ್ರಶ್ನೆಗಳ ಮೂಲಕ ಅದರ ಕಲ್ಪನಾ ಶಕ್ತಿಯನ್ನು ಹೆಚ್ಚಿಸಬಹುದಾಗಿದೆ.

ಮನೆಯ ಸಾಮಾನುಗಳಿಗೆ ಹೆಸರನ್ನು ಬರೆದು ಅಂಟಿಸಿ

ದಿನನಿತ್ಯ ಬಳಸುವ ಉಪ್ಪು, ಸಕ್ಕರೆ, ಬ್ರೆಡ್, ಬಿಸ್ಕೆಟ್ ಮುಂತಾದ ಸಾಮಗ್ರಿಗಳ ಡಬ್ಬಿಗಳ ಮೇಲೆ ಅವುಗಳ ಹೆಸರನ್ನು ಬರೆದು ಅಂಟಿಸುವ ಮೂಲಕ ಮಗುವಿಗೆ ಮನೆಯ ಸಾಮಾನುಗಳ ಬಗ್ಗೆ ತಿಳಿಸುವುದರ ಜೊತೆಗೆ ಶಬ್ದ ಬಂಢಾರವನ್ನು ಹೆಚ್ಚಿಸಲು ಸಹಕಾರಿಯಾಗಬಲ್ಲದು.

ಮಗುವು ಓದಲು ಆಸಕ್ತಿ ಹೊಂದಿದ್ದರೆ ಕಥೆ ಪುಸ್ತಕ ಅಥವಾ ಅದರ ಆಸಕ್ತಿಯ ಪುಸ್ತಕಗಳನ್ನು ಓದಿಸಿ. ಒಂದು ವೇಳೆ ಕೇಳಿ ಕಲಿಯಲು ಇಚ್ಛಿಸಿದರೆ ಕಥೆಗಳನ್ನು ಕೇಳಿಸುವ ಮೂಲಕ ಅದರ ಶಬ್ದ ಸಂಪತ್ತನ್ನು ಹೆಚ್ಚಿಸಬಹುದಾಗಿದೆ. ಮಗುವು ಅದರದ್ದೇ ಆದ ಒಂದು ವೇಗದಲ್ಲಿ ಕಲಿಯುತ್ತಿರುತ್ತದೆ. ಕಲಿಕೆಯು ಸಂಘರ್ಷವಾಗದಂತೆ ಕಲಿಸುವುದು ಬಹುಮುಖ್ಯವಾಗಿದೆ. ಮಗುವನ್ನು ನಿಮ್ಮ ಬಿಡುವಿನ ವೇಳೆಯಲ್ಲಿ ಸಮೀಪದ ಆಕರ್ಷಣೀಯ ಸ್ಥಳಗಳಿಗೆ ಕರೆದೊಯ್ಯುವ ಮೂಲಕ ಅಲ್ಲಿನ ವಸ್ತುಗಳು, ಆಗುಹೋಗುಗಳ ಬಗ್ಗೆ ಮಗುವಿನೊಂದಿಗೆ ಚರ್ಚಿಸಿರಿ. ವಾಹನಗಳಲ್ಲಿ ಸಂಚರಿಸುವಾಗ ರಸ್ತೆ ಸುರಕ್ಷತೆ, ಸಂಚಾರಿ ನಿಯಮಗಳ ಬಗ್ಗೆ ಚರ್ಚಿಸಿ. ದೂರದರ್ಶನ ಹಾಗೂ ಬಾನುಲಿ ಕಾರ್ಯಕ್ರಮಗಳನ್ನು ಕೇಳಿಸುವ ಮೂಲಕವೂ ಶಬ್ದ ಸಂಪತ್ತನ್ನು ಶ್ರೀಮಂತಗೊಳಿಸಬಹುದಾಗಿದೆ. ಮಗು ಬೆಳೆದಂತೆಲ್ಲಾ ಅದರ ಶಬ್ದ ಸಂಗ್ರಹ ಹೆಚ್ಚುತ್ತಾ ಸಾಗುವಂತಿರಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸರ ಶ್ರೀಮಂತವಾಗಿದ್ದರೆ ಇದು ಸುಲಭಕ್ಕೆ ವೃದ್ಧಿಯಾಗುತ್ತದೆ. ಮಗುವಿನ ಕುಟುಂಬ, ಮನೆಯ ಪರಿಸರ, ಸಮೂಹ ಮಾಧ್ಯಮಗಳ ಸೌಲಭ್ಯಗಳು ಅದರ ಮೇಲೆ ಪ್ರಭಾವ ಬೀರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.