ADVERTISEMENT

ಎಜುಕೇಷನ್: ಇಂಟಿಗ್ರೇಟೆಡ್ ಪದವಿ ಪ್ರವೇಶಕ್ಕೆ ಅರ್ಜಿ

ರೀಜನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಜುಕೇಷನ್

ಬೇಂದ್ರೆ ಮಂಜುನಾಥ್‌ ಕೆ.ಟಿ.ಹಳ್ಳಿ
Published 8 ಮೇ 2022, 19:30 IST
Last Updated 8 ಮೇ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇಶದ ವಿವಿಧ ಭಾಗಗಳಲ್ಲಿರುವ ರೀಜನಲ್‌ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್‌ ಸಂಸ್ಥೆಗಳಲ್ಲಿನ ವಿವಿಧ ಇಂಟಿಗ್ರೇಟೆಡ್ ಪದವಿ ಕೋರ್ಸ್‌ಗಳ ‍ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಆನ್‌ಲೈನ್‌ನಲ್ಲೇ ಅರ್ಜಿಗಳನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸಲು ಕೊನೆ ದಿನ ಜೂನ್ 30, 2022

ಈ ಶಿಕ್ಷಣ ಸಂಸ್ಥೆಗಳಲ್ಲಿ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಬಿ.ಎಸ್ಸಿ, ಬಿ.ಇಡಿ / ಬಿ.ಎ‌, ಬಿ.ಇಡಿ, ಎರಡು ವರ್ಷಗಳ ಬಿ.ಇಡಿ / ಎಂ.ಇಡಿ, ಶಿಕ್ಷಣದಲ್ಲಿ ಎಂ.ಫಿಲ್, ಆರು ವರ್ಷಗಳ ಇಂಟಿಗ್ರೇಟೆಡ್ ಎಂ.ಎಸ್ಸಿ.ಇಡಿ., ಒಂದು ವರ್ಷದ ಮಾರ್ಗದರ್ಶನ ಮತ್ತು ಆಪ್ತ ಸಲಹೆ ಡಿಪ್ಲೊಮಾ ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶವಿದೆ.

ADVERTISEMENT

ವಿದ್ಯಾರ್ಹತೆ : ದ್ವಿತೀಯ ಪಿಯುಸಿ/12ನೇ ತರಗತಿಯಲ್ಲಿ ಶೇ 50 ರಷ್ಟು ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು 4 ವರ್ಷಗಳ ಇಂಟಿಗ್ರೇಟೆಡ್ ಶಿಕ್ಷಣ ಪದವಿಗೆ ಅರ್ಜಿಸಲ್ಲಿಸಬಹುದು. ಬಿ.ಇಡಿ. ಕೋರ್ಸ್‌ ಪ್ರವೇಶಕ್ಕೆ ಅಭ್ಯರ್ಥಿಗಳು ಪದವಿ ಪರೀಕ್ಷೆಗಳಲ್ಲಿ ಶೇ 50 ರಷ್ಟು ಅಂಕಗಳಿಸಿರಬೇಕು.

ಪಠ್ಯಕ್ರಮ : ಪ್ರವೇಶ ಪರೀಕ್ಷೆಯಲ್ಲಿ, ಅಭ್ಯರ್ಥಿಗಳ ಶೈಕ್ಷಣಿಕ ಹಿನ್ನೆಲೆಯಲ್ಲಿ ಅವರು ಈಗಾಗಲೇ ಓದಿರುವ ಪಠ್ಯಕ್ರಮಕ್ಕೆ ಅನುಗುಣವಾದ ಪ್ರಶ್ನೆಗಳಿರುತ್ತವೆ. ಜೊತೆಗೆ ಇಂಗ್ಲಿಷ್ ಭಾಷಾ ನೈಪುಣ್ಯ (Language Proficiency) - 20 ಪ್ರಶ್ನೆಗಳು, ಬೋಧನಾ ಮನೋಭಾವ/ಅಭಿರುಚಿ (Teaching Aptitude/Attitude) - 30 ಪ್ರಶ್ನೆಗಳು ಮತ್ತು ತಾರ್ಕಿಕ ಸಾಮರ್ಥ್ಯ (Reasoning Ability) ಕುರಿತ 30 ಪ್ರಶ್ನೆಗಳಿರುತ್ತವೆ.

ಒಟ್ಟು 120 ನಿಮಿಷಗಳಲ್ಲಿ 80 ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಿದ್ದು ಪ್ರತಿ ಸರಿ ಉತ್ತರಕ್ಕೆ 2 ಅಂಕಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ 0.5 ಅಂಕಗಳನ್ನು ಕಳೆಯಲಾಗುತ್ತದೆ. ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಹಿಂದಿನ ವರ್ಷಗಳ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಲಭ್ಯವಿದ್ದು ಅಭ್ಯರ್ಥಿಗಳನ್ನು ಅವುಗಳನ್ನು ಪರಾಮರ್ಶಿಸಬಹುದು.

ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು, ಉತ್ತಮ ಶಿಕ್ಷಕರನ್ನು ತರಬೇತಿಗೊಳಿಸಲು, ರಾಷ್ಟ್ರೀಯಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (NCERT) ಅಂಗಸಂಸ್ಥೆಯಾಗಿ 1963ರಲ್ಲಿ ರೀಜನಲ್ ಕಾಲೇಜ್ ಆಫ್ ಎಜುಕೇಶನ್ ಅಸ್ತಿತ್ವಕ್ಕೆ ಬಂತು. ಅಜ್ಮೀರ್, ಜಮ್ಮು-ಕಾಶ್ಮೀರ, ಭೋಪಾಲ್, ಭುವನೇಶ್ವರ್, ಮೈಸೂರು, ಶಿಲ್ಲಾಂಗ್‌ಗಳಲ್ಲಿ ಈ ಕೇಂದ್ರಗಳಿವೆ. ಈಗ ಅವುಗಳನ್ನು ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ಎಂದು ಮರು ನಾಮಕರಣ ಮಾಡಲಾಗಿದೆ.

ಮೈಸೂರಿನಲ್ಲಿ ಸೀಟುಗಳ ಲಭ್ಯತೆ

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಲಕ್ಷದ್ವೀಪ, ಪುದುಚೆರಿ ಮತ್ತು ತಮಿಳುನಾಡುಗಳ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿರುವ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್‌ನಲ್ಲಿ ಬಿ.ಎಸ್ಸಿ, ಬಿ.ಇಡಿ ಕೋರ್ಸ್‌ನ ಭೌತವಿಜ್ಞಾನ ಗುಂಪು ಮತ್ತು ಜೀವವಿಜ್ಞಾನ ಗುಂಪಿಗೆ ತಲಾ 44 ಸೀಟುಗಳಿವೆ. ಬಿ.ಎ, ಬಿ.ಇಡಿ, ಕೋರ್ಸ್‌ಗೆ 44 ಸೀಟುಗಳಿವೆ. ಎಂ.ಎಸ್ಸಿ, ಎಂ.ಇಡಿ (Mathematics, Chemistry, Physics)) ಕೋರ್ಸಿನ ಪ್ರತಿಯೊಂದು ವಿಷಯಕ್ಕೆ 18 ಸೀಟುಗಳಿವೆ. ಬಿ.ಇಡಿ ಕೋರ್ಸಿನ ವಿಜ್ಞಾನ ಹಾಗೂ ಗಣಿತ ಗುಂಪಿಗೆ 28 ಮತ್ತು ಸಮಾಜವಿಜ್ಞಾನ ಹಾಗೂ ಭಾಷೆಗಳ ಗುಂಪಿಗೆ 27 ಸೀಟುಗಳಿವೆ. ಎಂ.ಇಡಿ ಕೋರ್ಸಿಗೆ 35 ಸೀಟುಗಳಿವೆ.

ಆಯ್ಕೆ ವಿಧಾನ

ಅಭ್ಯರ್ಥಿಗಳ ಆಯ್ಕೆಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಶೇ 60 ಮತ್ತು ಅಭ್ಯರ್ಥಿಗಳ ಶೈಕ್ಷಣಿಕ ಪರೀಕ್ಷೆಯ ಅಂಕಗಳಿಗೆ ಶೇ‌ 40 ಪ್ರಾಶಸ್ತ್ಯ ನೀಡಲಾಗುವುದು. ಕೌನ್ಸೆಲಿಂಗ್ ಮೂಲಕ ಸೀಟುಗಳ ಹಂಚಿಕೆ ನಡೆಯುತ್ತದೆ. ಆಯ್ಕೆಯಾದ ಆಭ್ಯರ್ಥಿಗಳಿಗೆ ಸ್ಕಾಲರ್‌ಶಿಪ್ ಮತ್ತು ಹಾಸ್ಟೆಲ್ ಸೌಲಭ್ಯವಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ: www.riemysore.ac.in
https://cee.ncert.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.