ಮನೆಯೆಂದರೆ ನಾಲ್ಕು ಗೋಡೆಗಳು, ಒಂದೆರಡು ಕಿಟಕಿಗಳು ಎನ್ನುವ ಕಾಲ ಈಗಿಲ್ಲ. ಇರುವಷ್ಟು ದಿನ ಇಷ್ಟದ ವಿನ್ಯಾಸದ ಮನೆ ನಮ್ಮದಾಗಬೇಕು ಎಂಬುದು ಬಹುತೇಕರ ಹಂಬಲ. ಅದರಲ್ಲೂ ಇತ್ತೀಚೆಗೆ ಒಳಾಂಗಣ ವಿನ್ಯಾಸ ಅನ್ನುವುದು ಟ್ರೆಂಡ್ ಆಗಿದೆ. ಗೋಡೆಯ ಬಣ್ಣ, ಫರ್ನಿಚರ್, ವಾರ್ಡ್‌ರೋಬ್ ಹೇಗಿದ್ದರೆ, ಯಾವ ಸ್ಥಳದಲ್ಲಿದ್ದರೆ ಅನುಕೂಲ ಎಂಬುದನ್ನು ಗಮನದಲ್ಲಿಟ್ಟು ಮನಸ್ಸಿಗೆ ಅಪ್ಯಾಯಮಾನವಾಗುವಂತೆ ಇಡೀ ಮನೆಯನ್ನು ರೂಪಿಸಿಕೊಡುವುದೇ ಒಳಾಂಗಣ ವಿನ್ಯಾಸ.
‘ಜನರು ಈಚೆಗೆ ಜೀವನ ಶೈಲಿಯ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆ. ಮನೆಯ ಒಳಾಂಗಣ ವಿನ್ಯಾಸಕ್ಕೆ ಖರ್ಚು ಮಾಡಲು ಹಿಂದೇಟು ಹಾಕುವುದಿಲ್ಲ. ಇಷ್ಟದ ಮನೆಯಲ್ಲಿ ಇಷ್ಟದ ವಿನ್ಯಾಸ ರೂಪಿಸಿಕೊಂಡರೆ ಮನೆಯಲ್ಲಿರುವವರ ಮನಸ್ಸಿಗೆ ನೆಮ್ಮದಿ. ಬೆಡ್‌ರೂಂ, ಹಿರಿಯ ನಾಗರಿಕರ ಕೋಣೆ, ಮುಖ್ಯವಾಗಿ ಪುಟ್ಟ ಮಕ್ಕಳಿಗಾಗಿಯೇ ವಿಶೇಷ ಮಾದರಿಯ ಕೋಣೆಗಳನ್ನು ವಿನ್ಯಾಸ ಮಾಡಿಸುವುದರತ್ತ ಪೋಷಕರು ಆಸಕ್ತಿ ತೋರುತ್ತಿದ್ದಾರೆ.ಇದರಿಂದಾಗಿ ಒಳಾಂಗಣ ವಿನ್ಯಾಸಕಾರರಿಗೆ ದಿನೇದಿನೇ ಬೇಡಿಕೆ ಹೆಚ್ಚುತ್ತಿದೆ’ ಎನ್ನುತ್ತಾರೆ ಬೆಂಗಳೂರಿನ ಒಳಾಂಗಣ ವಿನ್ಯಾಸಕಾರ್ತಿ ಮೇಧಾ ಹೆಗಡೆ
‘ಬಣ್ಣಗಳ ಬಗ್ಗೆ ತಿಳಿವಳಿಕೆ, ಸೌಂದರ್ಯ ಪ್ರಜ್ಞೆ, ತಂತ್ರಜ್ಞಾನದ ಬಳಕೆಯ ಜತೆಗೆ ಉತ್ತಮ ಸಂವಹನ ಕೌಲಶವನ್ನೂ ಈ ಕೋರ್ಸ್ ಬೇಡುತ್ತದೆ. ಮುಖ್ಯವಾಗಿ ಗ್ರಾಹಕರ ಅಭಿರುಚಿ ಮತ್ತು ಬಜೆಟ್‌ಗೆ ಅನುಗುಣವಾಗಿ ಒಳಾಂಗಣ ವಿನ್ಯಾಸ ಮಾಡಬೇಕಾಗುತ್ತದೆ. ವಿನ್ಯಾಸಕ್ಕೆ ಬೇಕಾದ ಸಾಮಾಗ್ರಿಗಳನ್ನು ನಾವೇ ತರುತ್ತೇವೆ. ಇದಕ್ಕಾಗಿ ಕ್ಷೇತ್ರದಲ್ಲಿ ಹೆಚ್ಚಿನ ಓಡಾಟವೂ ಇರುತ್ತದೆ. ಸರಿಯಾಗಿ ಪ್ಲಾನಿಂಗ್ ಮಾಡಿದರೆ ಶೇ 10ರಿಂದ 15ರಷ್ಟು ಲಾಭವನ್ನೂ ಗಳಿಸಬಹುದು. ಮಹಿಳೆಯರಿಗೆ ಹೇಳಿಮಾಡಿಸಿದ ಕೋರ್ಸ್ ಇದು. ಏಕೆಂದರೆ ಅಪಾರ್ಟ್‌ಮೆಂಟ್ ಅಥವಾ ಮನೆಗಳಲ್ಲಿ ಒಳಾಂಗಣ ವಿನ್ಯಾಸದ ಉಸ್ತುವಾರಿಯನ್ನು ಮಹಿಳೆಯರೇ ಹೊತ್ತಿರುತ್ತಾರೆ. ಅವರೊಂದಿಗೆ ಸಂವಹನ ನಡೆಸಿ, ಅವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡುವುದು ಮಹಿಳೆಯರಿಗೆ ಸುಲಭ. ಹಾಗಾಗಿ, ಈ ಕ್ಷೇತ್ರದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ’ ಎನ್ನುತ್ತಾರೆ ಅವರು.
ಹೆಚ್ಚಿದ ಬೇಡಿಕೆ
ಅಪಾರ್ಟ್‌ಮೆಂಟ್‌ಗಳಲ್ಲಿ ಬೇಸಿಕ್ ಸೀಲಿಂಗ್, ಬರೀ ಗೋಡೆಗಳ ಹಂತದಲ್ಲಿ ಒಳಾಂಗಣ ವಿನ್ಯಾಸ ಮಾಡಲು ಗ್ರಾಹಕರಿಂದ ಬೇಡಿಕೆ ಬರುತ್ತದೆ. ಅವರಿಗೆ 3ಡಿ ತಂತ್ರಜ್ಞಾನದ ಮೂಲಕ ವಿನ್ಯಾಸದ ಮಾದರಿಯನ್ನು ತೋರಿಸಲಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ತಮ್ಮ ಮನೆಯ ಒಳಾಂಗಣ ಹೇಗಿರುತ್ತದೆ ಎಂಬ ಸ್ಪಷ್ಟ ಪರಿಕಲ್ಪನೆ ಮೂಡುತ್ತದೆ. ಬದಲಾವಣೆಗಳಿದ್ದರೆ ಅವರೇ ಸೂಚಿಸುತ್ತಾರೆ. ಅದಕ್ಕೆ ತಕ್ಕಂತೆ ವಿನ್ಯಾಸ ರೂಪಿಸಿಕೊಡಲಾಗುತ್ತದೆ.
ಮಹಾನಗರಗಳು ಸೇರಿದಂತೆ ಸಣ್ಣಪುಟ್ಟ ಪಟ್ಟಣಗಳಲ್ಲೂ ಇತ್ತೀಚೆಗೆ ಅಪಾರ್ಟ್‌ಮೆಂಟ್ ಸಂಸ್ಕೃತಿ ರೂಪುಗೊಳ್ಳುತ್ತಿದೆ. ಇಲ್ಲೆಲ್ಲಾ ಒಳಾಂಗಣ ವಿನ್ಯಾಸಕಾರರಿಗೆ ಹೆಚ್ಚಿನ ಬೇಡಿಕೆ ಇದೆ. ಒಂದು ಅಪಾರ್ಟ್‌ಮೆಂಟ್‌ಗೆ ವಿನ್ಯಾಸ ಮಾಡಿಕೊಟ್ಟು ಅದು ಗ್ರಾಹಕರಿಗೆ ಇಷ್ಟವಾದರೆ, ಅವರೇ ಸ್ನೇಹಿತರು, ನೆರೆಹೊರೆಯವರು ಅಥವಾ ಸಂಬಂಧಿಕರಿಗೆ ಕಾಂಟ್ಯಾಕ್ಟ್ ಮಾಡಿಕೊಡುತ್ತಾರೆ. ಇದರಿಂದ ವಿನ್ಯಾಸಕಾರರಿಗೆ ಸುಲಭವಾಗಿ ಅವಕಾಶಗಳು ದೊರೆಯುತ್ತವೆ. ಕೆಲವೊಮ್ಮೆ ಬಿಲ್ಡರ್ಸ್‌ಗಳು ಕೂಡಾ ಒಳಾಂಗಣ ವಿನ್ಯಾಸಕಾರರನ್ನು ಟೈಅಪ್ ಮಾಡಿಕೊಂಡಿರುತ್ತಾರೆ.
ಕೋರ್ಸ್ ವಿವರ
ಪ್ರತಿಷ್ಠಿತ ಕಾಲೇಜುಗಳು ಒಂದು ವರ್ಷದ ಡಿಪ್ಲೊಮಾದಿಂದ ಹಿಡಿದು ಮೂರು ವರ್ಷಗಳ ಒಳಾಂಗಣ ವಿನ್ಯಾಸದ ಕೋರ್ಸ್‌ಗಳನ್ನು ನಡೆಸುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಒಳಾಂಗಣ ವಿನ್ಯಾಸದ ಕೋರ್ಸ್ ಆಫರ್ ಮಾಡುವ ಅನೇಕ ಕಾಲೇಜುಗಳಿವೆ. ದ್ವಿತೀಯ ಪಿಯುಸಿ (ಯಾವುದೇ ವಿಷಯ) ಆದವರು ನೇರವಾಗಿ ಮೂರು ವರ್ಷದ ಪದವಿ, ಯಾವುದೇ ವಿಷಯದ ಪದವಿ ಗಳಿಸಿದವರು ಒಳಾಂಗಣ ವಿನ್ಯಾಸದ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಇಲ್ಲವೇ ಒಂದು ವರ್ಷದ ಡಿಪ್ಲೊಮಾ ಪದವಿಗೆ ಸೇರಬಹುದು.
ಪ್ರಾಕ್ಟಿಕಲ್‌ಗೆ ಒತ್ತು
ಕೋರ್ಸ್‌ನಲ್ಲಿ ಉಪನ್ಯಾಸ ಮಾತ್ರವಲ್ಲದೆ ಪ್ರಾಕ್ಟಿಕಲ್ ಕಲಿಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಕೋರ್ಸ್‌ನ ಅಂತಿಮ ಹಂತದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಒಳಾಂಗಣ ವಿನ್ಯಾಸಕಾರರ ಬಳಿ ಅಪ್ರೆಂಟಿಷಿಪ್ ಇಲ್ಲವೇ ಪ್ರಾಜೆಕ್ಟ್‌ಗಳನ್ನು ಮಾಡಬೇಕಾಗುತ್ತದೆ. ಇವೆಲ್ಲವೂ ಕೋರ್ಸ್‌ನ ಅಧ್ಯಯನದ ಭಾಗವಾಗಿರುತ್ತವೆ. ಇದಲ್ಲದೆ ಅಸೈನ್‌ಮೆಂಟ್, ವಿಚಾರಗೋಷ್ಠಿ, ಸೈಟ್ ವಿಸಿಟ್, ಕಾರ್ಖಾನೆ ಭೇಟಿಯೂ ಇರುತ್ತದೆ. ಬೋಧನೆಯ ಜತೆಗೆ ಪ್ರಾಯೋಗಿಕ ಕಲಿಕೆಗೂ ಹೆಚ್ಚು ಅವಕಾಶವಿರುವ ಕೋರ್ಸ್ ಇದಾಗಿರುವುದರಿಂದ ಉದ್ಯೋಗದ ಅವಕಾಶಗಳು ಹೇರಳವಾಗಿ ದೊರೆಯುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.