ADVERTISEMENT

Mangrove Day 2023 | ಮ್ಯಾಂಗ್ರೋವ್‌ ಪರಿಸರ ವ್ಯವಸ್ಥೆ

ಜುಲೈ 26, ಮ್ಯಾಂಗ್ರೋವ್‌ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನ

ಪ್ರಜಾವಾಣಿ ವಿಶೇಷ
Published 26 ಜುಲೈ 2023, 23:30 IST
Last Updated 26 ಜುಲೈ 2023, 23:30 IST
mangrove forest
mangrove forest   

ಯು.ಟಿ. ಆಯಿಶ ಫರ್ಝಾನ

ಯಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿ ಇಲ್ಲಿದೆ.

ಪ್ರತಿ ವರ್ಷ ಜುಲೈ 26 ರಂದು ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ.

ADVERTISEMENT

ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ‘ವಿಶಿಷ್ಟ ಮತ್ತು ವಿಶೇಷ ಆದರೆ ದುರ್ಬಲ ಪರಿಸರ ವ್ಯವಸ್ಥೆ‘ ಎಂದು ಅರಿವು ಮೂಡಿಸಲು ಮತ್ತು ಅವುಗಳ ಸಮರ್ಪಕ ನಿರ್ವಹಣೆ, ಸಂರಕ್ಷಣೆ ಮತ್ತು ಪರಿಹಾರಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. 

ದಿನಾಚರಣೆ ಇತಿಹಾಸ

1998ರಲ್ಲಿ ಇದೇ ದಿನದಂದು, ಹೇಹೌ ಡೇನಿಯಲ್ ನ್ಯಾನೊಟೊ ಎಂಬ ಗ್ರೀನ್‌ಪೀಸ್ ಸಂಸ್ಥೆಯ ಕಾರ್ಯಕರ್ತ ಈಕ್ವೆಡಾರ್‌ನ ಮುಯಿಸ್ನೆಯಲ್ಲಿ ಮ್ಯಾಂಗ್ರೋವ್ ಜೌಗು ಪ್ರದೇಶಗಳ ಸಂರಕ್ಷಣಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾಗ ಹೃದಯಾಘಾತದಿಂದ ನಿಧನರಾದರು. ಈ ಹಿನ್ನೆಲೆಯಲ್ಲಿ ಆ ಕಾರ್ಯಕರ್ತನ ಸ್ಮರಣೆಗಾಗಿ ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ(UNESCO) ಸಾಮಾನ್ಯ ಸಮ್ಮೇಳನ 2015ರಲ್ಲಿ ಮ್ಯಾಂಗ್ರೋವ್‌ ಪರಿಸರ ವ್ಯವಸ್ಥೆಯ ಸಂರಕ್ಷಣಾ ಅಂತರರಾಷ್ಟ್ರೀಯ ದಿನವನ್ನು ಆಚರಿಸಲು ಘೋಷಿಸಿತು.

ಮ್ಯಾಂಗ್ರೋವ್ ಎಂದರೇನು?

‘ಮ್ಯಾಂಗ್ರೋವ್‘ ಎಂಬುದು ಪೋರ್ಚುಗೀಸ್ ಪದ ‘ಮ್ಯಾಂಗ್ಯೂ‘ ಮತ್ತು ಇಂಗ್ಲಿಷ್ ಪದ ‘ಗ್ರೋವ್‘ ನ ಸಂಯೋಜನೆಯಾಗಿದೆ. ಮ್ಯಾಂಗ್ರೋವ್‌ಗಳು ಪ್ರಪಂಚದ ಉಷ್ಣವಲಯದ ಮತ್ತು ಉಪೋಷ್ಣವಲಯದ ಮಧ್ಯಂತರ ಪ್ರದೇಶಗಳ ಲವಣ ಸಹಿಷ್ಣು ಸಸ್ಯಗಳಾಗಿವೆ. ಲವಣಸಹಿಷ್ಣು ಸಸ್ಯಗಳನ್ನು ಹಾಲೋಫೈಟ್ಸ್‌ ಎನ್ನುತ್ತಾರೆ.

ಕಡಲ ತೀರದಲ್ಲಿ ಕಠಿಣ ಸ್ಥಿತಿಗಳಲ್ಲಿಯೂ ಬದುಕಬಲ್ಲ, ಲವಣದ ಅಂಶ ಹೆಚ್ಚಿದ್ದರೂ ಸಹಿಸಿಕೊಳ್ಳಬಲ್ಲ, ಒಟ್ಟಾಗಿ ದಟ್ಟವಾಗಿ ಬೆಳೆಯುವ ವಿಶೇಷ ರೀತಿಯ ಕಾಡುಗಳಿಗೆ ಮ್ಯಾಂಗ್ರೋವ್ ಕಾಡು ಎಂದು ಕರೆಯುತ್ತಾರೆ. ಎರಡೂವರೆ ಕೋಟಿ ವರ್ಷಗಳ ಹಿಂದೆ ಮ್ಯಾಂಗ್ರೋವ್ ಕಾಡುಗಳ ಮೊದಲ ಪಳೆಯುಳಿಕೆ ಸಿಕ್ಕಿತ್ತು ಎಂದು ದಾಖಲಿಸಲಾಗಿದೆ.

*ಈ ಸಸ್ಯಗಳು ಕಂಡುಬರುವ ನಿರ್ದಿಷ್ಟ ಪ್ರದೇಶಗಳನ್ನು 'ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ' ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಉತ್ಪಾದಕ ಪರಿಸರ ವ್ಯವಸ್ಥೆಗಳಾಗಿದ್ದರೂ ಅತ್ಯಂತ ಸೂಕ್ಷ್ಮ ಮತ್ತು ದುರ್ಬಲವಾಗಿರುತ್ತವೆ. ಮ್ಯಾಂಗ್ರೋವ್‌ ಸಸ್ಯಗಳಲ್ಲದೆ, ಈ ಪರಿಸರ ವ್ಯವಸ್ಥೆಯು ಇತರ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೂ ಆಶ್ರಯ ನೀಡುತ್ತದೆ.

*ಇಲ್ಲಿನ ಮರಗಳು ಸಂಕೀರ್ಣ ಬೇರುಗಳನ್ನು ಹೊಂದಿವೆ. ಹೆಚ್ಚಿನ ತೇವಾಂಶವಿದ್ದು, ಲವಣದ ಅಂಶ ಹೆಚ್ಚಿರುವ ಮಣ್ಣಿನಲ್ಲಿ ಬದುಕುವ ಸಾಮರ್ಥ್ಯ ಹೊಂದಿರುತ್ತವೆ.

*ಮ್ಯಾಂಗ್ರೋವ್ ಕಾಡುಗಳು ಬಹುತೇಕ ನೀರಿನಲ್ಲಿ ಮುಳುಗಿರುವುದರಿಂದ, ಅವುಗಳ ಆವಾಸಸ್ಥಾನದಲ್ಲಿ ಆಮ್ಲಜನಕದ ಅಂಶ ಕಡಿಮೆಯಿರುತ್ತದೆ. ಹಾಗಾಗಿ ಹೊರಚಾಚಿದ ಬೇರುಗಳಿಂದಲೇ ಬದುಕಲು ಬೇಕಾಗುವ ಅನಿಲಗಳನ್ನು ಹೀರಿಕೊಳ್ಳುತ್ತವೆ. ಆ ಅನಿಲಗಳನ್ನು ಬೇರುಗಳಲ್ಲೇ ಹಿಡಿದಿಟ್ಟುಕೊಳ್ಳುವ ಈ ಮರಗಳು, ಪ್ರವಾಹದ ಸಮಯದಲ್ಲಿ ಮತ್ತೆ ಬಳಸಿಕೊಳ್ಳುತ್ತವೆ.

ಮ್ಯಾಂಗ್ರೋವ್‌ಗಳ ಪ್ರಾಮುಖ್ಯ

*ಮ್ಯಾಂಗ್ರೋವ್‌ಗಳು ಭೂಮಿ ಮತ್ತು ಸಮುದ್ರದ ನಡುವಿನ ಗಡಿಯಲ್ಲಿರುವ ಅಪರೂಪದ, ಅದ್ಭುತ ಮತ್ತು ಸಮೃದ್ಧ ಪರಿಸರ ವ್ಯವಸ್ಥೆಗಳಾಗಿವೆ.

*ಈ ಪರಿಸರ ವ್ಯವಸ್ಥೆಗಳು ವಿಶ್ವದಾದ್ಯಂತ ಕರಾವಳಿ ಸಮುದಾಯಗಳ ಯೋಗಕ್ಷೇಮ, ಆಹಾರ ಭದ್ರತೆ ಮತ್ತು ರಕ್ಷಣೆಗೆ ಕೊಡುಗೆ ನೀಡುತ್ತವೆ. ಸಮೃದ್ಧ ಜೀವವೈವಿಧ್ಯವನ್ನು ಬೆಂಬಲಿಸುತ್ತವೆ. ಮೀನು ಮತ್ತಿತರ ಜಲಚರಗಳಿಗೆ ಮತ್ತು ಇತರ ಪ್ರಾಣಿ ಪಕ್ಷಿಗಳಿಗೆ ಅಮೂಲ್ಯವಾದ ಆವಾಸಸ್ಥಾನವನ್ನು ಒದಗಿಸುತ್ತವೆ.

*ಮ್ಯಾಂಗ್ರೋವ್‌ಗಳು ಚಂಡಮಾರುತ, ಸುನಾಮಿಗಳು, ಹೆಚ್ಚುತ್ತಿರುವ ಸಮುದ್ರ ಮಟ್ಟ ಮತ್ತು ಕಡಲ ಸವೆತದ ವಿರುದ್ಧ ನೈಸರ್ಗಿಕ ರಕ್ಷಣೆಯಂತೆ ಕಾರ್ಯನಿರ್ವಹಿಸುತ್ತವೆ. ಅವುಗಳ ಮಣ್ಣು ಹೆಚ್ಚು ಪರಿಣಾಮಕಾರಿಯಾದ ಇಂಗಾಲದ ಸಿಂಕ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಕಾಡುಗಳಿಗೆ ಹೋಲಿಸಿದರೆ ಇಲ್ಲಿನ ಗಿಡಗಳು 10 ಪಟ್ಟು ಹೆಚ್ಚು ಇಂಗಾಲವನ್ನು ಸಂಗ್ರಹಿಸಿಡಬಲ್ಲವು.

*ಆದರೂ ಮ್ಯಾಂಗ್ರೋವ್‌ಗಳು ಒಟ್ಟಾರೆ ಜಾಗತಿಕ ಅರಣ್ಯ ನಷ್ಟಕ್ಕಿಂತ ಮೂರರಿಂದ ಐದು ಪಟ್ಟು ವೇಗವಾಗಿ ಕಣ್ಮರೆಯಾಗುತ್ತಿವೆ. ಹೆಚ್ಚಿನ ಮಟ್ಟದಲ್ಲಿ ಅಸ್ತಿತ್ವ ಅಳಿಸಿ ಹೋಗುವ ಆತಂಕದಲ್ಲಿವೆ. ಒಂದೊಮ್ಮೆ ಕಾಂಡ್ಲಾ ಅಥವಾ ಮ್ಯಾಂಗ್ರೋವ್‌ ಕಾಡುಗಳು ಕಣ್ಮರೆಯಾಗುವುದರಿಂದ ಗಂಭೀರ ಪಾರಿಸರಿಕ ಮತ್ತು ಸಾಮಾಜಿಕ-ಆರ್ಥಿಕ ಪರಿಣಾಮಗಳು ಉಂಟಾಗುತ್ತದೆ.

*ಮ್ಯಾಂಗ್ರೋವ್‌ಗಳು ಭೂಮಿ ಮತ್ತು ಸಮುದ್ರದ ನಡುವಿನ ಗಡಿಯಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅನೇಕ ಕರಾವಳಿ ಸಮುದಾಯಗಳಿಗೆ ರಕ್ಷಣೆ ಮತ್ತು ಆಹಾರ ಭದ್ರತೆಯನ್ನು ಒದಗಿಸುತ್ತವೆ.

*ಮಳೆನೀರಿನೊಂದಿಗೆ ಮಾಲಿನ್ಯಕಾರಕ ಅಂಶಗಳು ಸಮುದ್ರ ಸೇರುವ ಮುನ್ನವೇ, ಈ ಕಾಂಡ್ಲಾ ಕಾಡುಗಳು ಅವುಗಳನ್ನು ತೆಗೆದು ಹಾಕುವ ಮೂಲಕ ನೀರಿನ ಗುಣಮಟ್ಟವನ್ನು ರಕ್ಷಿಸುತ್ತವೆ.

ಭಾರತದಲ್ಲಿ ಮ್ಯಾಂಗ್ರೋವ್‌ಗಳು

*ಅರಣ್ಯ ಸಮೀಕ್ಷೆ ವರದಿ 2021ರ ಪ್ರಕಾರ, ದೇಶದ ಒಟ್ಟು ಮ್ಯಾಂಗ್ರೋವ್ ವ್ಯಾಪ್ತಿ 4,992 ಚದರ ಕಿ.ಮೀ. 2019 ರ ಮೌಲ್ಯಮಾಪನಕ್ಕೆ ಹೋಲಿಸಿದರೆ ಮ್ಯಾಂಗ್ರೋವ್ ಹೊದಿಕೆಯಲ್ಲಿ 17 ಚದರ ಕಿಮೀ ಹೆಚ್ಚಳವಾಗಿದೆ.

*ಮ್ಯಾಂಗ್ರೋವ್ ಹೊದಿಕೆಯಲ್ಲಿ ಹೆಚ್ಚಳವಾಗಿರುವ ಮೂರು ಅಗ್ರ ರಾಜ್ಯಗಳೆಂದರೆ ಒಡಿಶಾ (8 ಚದರ ಕಿಮೀ) ನಂತರ ಮಹಾರಾಷ್ಟ್ರ (4 ಚದರ ಕಿಮೀ) ಮತ್ತು ಕರ್ನಾಟಕ (3 ಚದರ ಕಿಮೀ).

*ಭಾರತದ ಪ್ರಮುಖ ಮ್ಯಾಂಗ್ರೋವ್‌ಗಳಲ್ಲಿ ಸುಂದರಬನ್ ತೋಪುಗಳು, ಮಹಾನದಿ ಮ್ಯಾಂಗ್ರೋವ್‌ಗಳು, ಗುಜರಾತ್‌ನ ಮ್ಯಾಂಗ್ರೋವ್‌ಗಳು, ರತ್ನಗಿರಿ ಮ್ಯಾಂಗ್ರೋವ್‌ಗಳು, ಗೋವಾ ಮ್ಯಾಂಗ್ರೋವ್‌ಗಳು, ಕಾವೇರಿ ಮ್ಯಾಂಗ್ರೋವ್‌ಗಳು, ಕೃಷ್ಣಾ-ಗೋದಾವರಿ ಮ್ಯಾಂಗ್ರೋವ್‌ಗಳು ಮತ್ತು ಅಂಡಮಾನ್ ನಿಕೋಬಾರ್ ಮ್ಯಾಂಗ್ರೋವ್‌ಗಳು ಮುಖ್ಯವಾಗಿವೆ.

*ಭಾರತದಲ್ಲಿ, ಮ್ಯಾಂಗ್ರೋವ್ ಅರಣ್ಯವು ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಆಂಧ್ರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಕಂಡುಬರುತ್ತದೆ. ಸುಂದರಬನ್ ಮ್ಯಾಂಗ್ರೋವ್ ಕಾಡುಗಳು ವಿಶ್ವದ ಅತಿದೊಡ್ಡ ಮ್ಯಾಂಗ್ರೋವ್ ಆಗಿದ್ದರೆ, ತಮಿಳುನಾಡಿನ ಪಿಚಾವರಂ ಮ್ಯಾಂಗ್ರೋವ್ ಕಾಡುಗಳು ವಿಶ್ವದಲ್ಲೇ ಎರಡನೇ ದೊಡ್ಡದಾಗಿದೆ.

ಮ್ಯಾಂಗ್ರೋವ್‌ ಅರಣ್ಯ
ಮ್ಯಾಂಗ್ರೋವ್‌ ಅರಣ್ಯ
ಮ್ಯಾಂಗ್ರೋವ್‌ ಅರಣ್ಯ (ಸಾಂದರ್ಭಿಕ ಚಿತ್ರ)

ಮ್ಯಾಂಗ್ರೋವ್ ಭೌಗೋಳಿಕ ವಿವರಗಳು

*ಮ್ಯಾಂಗ್ರೋವ್‌ ಅರಣ್ಯಗಳನ್ನು ಸಾಗರ ತಟದ ಅರಣ್ಯಗಳು ಹಾಗೂ ಜೌಗು ಅರಣ್ಯಗಳು ಎನ್ನುತ್ತಾರೆ. ಅಷ್ಬೇ ಅಲ್ಲ ಉಬ್ಬರವಿಳಿತ ಅರಣ್ಯಗಳು ಎಂದೂ ಕರೆಯಲಾಗುತ್ತದೆ. \

* ಈ ಪ್ರಕಾರದ ಅರಣ್ಯಗಳು ಮುಖ್ಯವಾಗಿ ನದಿ ಮುಖಜ ಪ್ರದೇಶಗಳು ಅಳಿವೆಗಳು ಮತ್ತು ಒಡೆದ ತೀರಗಳಿರುವ ಭಾಗದಲ್ಲಿ ಕಂಡುಬರುತ್ತವೆ. ಅಲ್ಲಿ ಉಬ್ಬರವಿಳಿತದ ಪ್ರಭಾವವಿರು ವುದರಿಂದ ಅವುಗಳನ್ನು ಮುಖಜ ಅಥವಾ ಉಬ್ಬರವಿಳಿತ ಅರಣ್ಯಗಳೆಂದು ಕರೆಯುತ್ತೇವೆ.

* ಸಾಗರ ತಟದ ಅರಣ್ಯಗಳು ಕರಾವಳಿಯುದ್ದಕ್ಕೂ ಹಲವಾರು ಪ್ರದೇಶಗಳಲ್ಲಿ ಕಂಡುಬರುತ್ತವೆ. ಜೌಗು ಅರಣ್ಯಗಳು ಗಂಗಾ ಮಹಾನದಿ ಗೋದಾವರಿ ಕೃಷ್ಣಾ ಮತ್ತು ಕಾವೇರಿ ನದಿಗಳ ಮುಖಜಪ್ರದೇಶಕ್ಕೆ ಸೀಮಿತವಾಗಿವೆ.

* ಈ ಅರಣ್ಯಗಳು ಸಿಹಿನೀರು ಮತ್ತು ಉಪ್ಪು ನೀರು ಎರಡರಲ್ಲೂ ಬದುಕುಳಿಯುತ್ತವೆ.

* ದಟ್ಟವಾದ ಮ್ಯಾಂಗ್ರೋವ್‌ಗಳು ಕರಾವಳಿ ತೀರದುದ್ದಕ್ಕೂ ಆಶ್ರಿತ ಅಳಿವೆಗಳು ಉಬ್ಬರದ ಒಡೆದ ತೀರಗಳು ಹಾಗೂ ಉಪ್ಪಿನಾಂಶದ ಜೌಗು ಪ್ರದೇಶಗಳು ಸೇರಿ ಒಟ್ಟು 6740 ಚ.ಕಿ.ಮೀ. ಪ್ರದೇಶವನ್ನು ಆವರಿಸಿವೆ. ಇವು ಉಪಯುಕ್ತವಾದ ಉರುವಲನ್ನು ಒದಗಿಸುತ್ತವೆ.

* ಪಶ್ಚಿಮಬಂಗಾಳ ರಾಜ್ಯಕ್ಕೆ ಸೇರಿದ ಸುಂದರಬನ ಅರಣ್ಯವು ಗಂಗಾನದಿ ಮುಖಜಭೂಮಿ ಯಲ್ಲಿದೆ. ಇಲ್ಲಿ ಸುಂದರಿ ಎಂಬ ಮರಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿರುವ ಕಾರಣಕ್ಕೆ  ಈ ಪ್ರದೇಶಕ್ಕೆ ಸುಂದರ್ ಬನ್ ಎಂಬ ಹೆಸರು ಬಂದಿದೆ.

* ಮ್ಯಾಂಗ್ರೋವ್‌ ಅರಣ್ಯಗಳು ಗಟ್ಟಿ ಮತ್ತು ಬಾಳಿಕೆಯುಳ್ಳ ಮರಗಳನ್ನು ಒದಗಿಸಿ ಕೊಡುತ್ತವೆ. ಈ ಮೂಲಕ ನಿರ್ಮಾಣ ಮತ್ತು ಕಟ್ಟಡಗಳಿಗಾಗಿ ಬೇಕಾಗುವ ಮತ್ತು ಹಡಗು ನಿರ್ಮಾಣಕ್ಕೆ ಅಗತ್ಯವಾದ ಮರಗಳನ್ನು ಪೂರೈಸುತ್ತದೆ.

* ಈ ಅರಣ್ಯಗಳಲ್ಲಿ ಕಂಡುಬರುವ ಪ್ರಮುಖ ಸಸ್ಯ ಸಂಕುಲಗಳೆಂದರೆ ಸುಂದರಿ ಬರ್ಗೇರಿಯಾ ಸೊನ್ನೇರೇಟಿಯಾಅಗರ್ ಭೆಂಡಿ ಕಿಯೋರ ನಿಷಾ ಅಮೂರ್ ರಝೋಫೋರ ಸ್ಕ್ರೂ ಪೈನ್ಸ್ ಬೆತ್ತ ಮತ್ತು ತಾಳೆಗಳಾಗಿವೆ.

* ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಪದೇ ಪದೇ ಸುನಾಮಿ ಕಾಣಿಸಿಕೊಳ್ಳುತ್ತಿದ್ದು ಈ ಉಬ್ಬರದ ಅಲೆಗಳ ಪ್ರಭಾವ ಮತ್ತು ತೀರ ಪ್ರದೇಶದ ಸವೆತವನ್ನು ನಿಯಂತ್ರಿಸಲು ಮ್ಯಾಂಗ್ರೋವ್ ಸಸ್ಯಗಳನ್ನು ತೀರ ಪ್ರದೇಶಗಳ ಉದ್ದಕ್ಕೂ ಬೆಳೆಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.