ಶಿ ಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಎನ್ನುವ ವಿಚಾರದ ಬಗ್ಗೆ ಶಿಕ್ಷಕರಿಗೆ ಸ್ವಲ್ಪ ಮಾತನಾಡಲು ಹೇಳಿ. ಹೆಚ್ಚಿನ ಜನರು ಪ್ರೊಜೆಕ್ಟರ್ ಬಳಸಿ ಪವರ್ ಪಾಯಿಂಟ್ ತೋರಿಸುವುದು ಮತ್ತು ಕೈಬರಹದ ಬದಲು ಕಂಪ್ಯೂಟರಿನಲ್ಲಿ ಬರೆಯುವುದು, ಜೊತೆಗೆ ಪರದೆಯ ಮೇಲೆಯೇ ಪುಸ್ತಕಗಳನ್ನು ಇ-ರೂಪದಲ್ಲಿ ಓದುವುದು – ಇಷ್ಟನ್ನು ಮಾತ್ರವೇ ತಂತ್ರಜ್ಞಾನ ಎಂದುಕೊಳ್ಳುತ್ತಾರೆ. ಅದರ ಆಚೆಗೂ ಹಲವಾರು ತಂತ್ರಜ್ಞಾನಗಳಿವೆ. ಅವೆಲ್ಲವೂ ಬಹಳ ಸರಳ ಮತ್ತು ಉಚಿತವಾಗಿ ಸಿಗುವಂಥವು ಕೂಡ. ಅಂತಹ ಕೆಲವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1 www.classroom.google.com ಪ್ರತಿ ಒಂದು ಗಂಟೆಯ ತರಗತಿ ಕೆಲಸಕ್ಕೆ ವಿದ್ಯಾರ್ಥಿಗಳು ಸ್ವಂತವಾಗಿ ಎರಡು ಅಥವಾ ಮೂರು ಗಂಟೆಗಳಷ್ಟು ಕೆಲಸ ಮಾಡಬೇಕು. ‘ಮಾಡಬೇಕು’ ಅಂದ ತಕ್ಷಣ ವಿದ್ಯಾರ್ಥಿಗಳು ಮಾಡಿಬಿಡುತ್ತಾರೆ ಎಂದಲ್ಲವಲ್ಲ. ಅದನ್ನೂ ಹಲವಾರು ಅಸೈನ್ಮೆಂಟ್, ಮನೆಕೆಲಸ – ಇತ್ಯಾದಿಗಳ ಮೂಲಕ ಮಾಡಿಸುವುದನ್ನು ಅಧ್ಯಾಪಕರು ಮೊದಲೇ ಯೋಜಿಸಿಕೊಂಡಿರಬೇಕು. ಶಾಲೆಯಲ್ಲಿ ಇವೆಲ್ಲ ಒಂದು ಮಟ್ಟಿಗೆ ಆಗುತ್ತದೆ. ಕಾಲೇಜಿನಲ್ಲಿ ಇದು ಯಾರ ಜವಾಬ್ದಾರಿಯೂ ಅಲ್ಲ. ಪ್ರಪಂಚದ ಯಾವ ಒಳ್ಳೆಯ ವಿಶ್ವವಿದ್ಯಾಲಯವನ್ನಾದರೂ ಗಮನಿಸಿ. ಅಲ್ಲಿ ವಿದ್ಯಾರ್ಥಿಗಳಿಂದ ತುಂಬ ಕೆಲಸ ತೆಗೆಯುತ್ತಾರೆ. ಹಾಗೆಂದ ಮಾತ್ರಕ್ಕೆ, ದಿನವೆಲ್ಲಾ ವಿದ್ಯಾರ್ಥಿಗಳು ಮಾಡುವ ಕೆಲಸವನ್ನು ತಿದ್ದುವುದು, ಗಮನಿಸುವುದು ಮೇಷ್ಟ್ರಿಗೆ ಸಾಧ್ಯವಿಲ್ಲವಲ್ಲ. ಅದಕ್ಕಾಗಿ ಹಲವಾರು ತಂತ್ರಜ್ಞಾನಗಳಿವೆ. ಇದರಲ್ಲಿ ಬಹಳ ಸರಳ ಮತ್ತು ಬಹಳ ವ್ಯವಸ್ಥಿತವಾಗಿರುವುದು ‘ಗೂಗಲ್ ಕ್ಲಾಸ್ ರೂಮ್’. ಇದರಲ್ಲಿ ನಿಮ್ಮ ಜಿ–ಮೇಲ್ ಅಕೌಂಟನ್ನೇ ಉಪಯೋಗಿಸಿಕೊಂಡು ಒಂದು ಕ್ಲಾಸ್ ಅನ್ನು ತೆರೆಯಬಹುದು. ಆ ಕ್ಲಾಸಿಗೆ ತಂತಮ್ಮ ಜಿ–ಮೇಲ್ ಅಕೌಂಟ್ ಉಪಯೋಗಿಸಿಕೊಂಡು ನಿಮ್ಮ ಎಲ್ಲ ವಿದ್ಯಾರ್ಥಿಗಳೂ ನೋಂದಾಯಿಸಿಕೊಳ್ಳಬಹುದು. ಆಮೇಲೆ, ಅದರಲ್ಲಿ ಹಲವಾರು ರೀತಿಯ ಅಸೈನ್ಮೆಂಟ್‌ಗಳನ್ನು ಕೊಡಬಹುದು. ಅದಕ್ಕೆ ಒಂದು ಕೊನೆಯ ದಿನಾಂಕ ಎಂದೂ ನಿಗಡಿಮಾಡಬಹುದು. ಯಾರು ಕೆಲಸ ಮಾಡಿದ್ದಾರೆ, ಯಾರು ಮಾಡಿಲ್ಲ, ಎಲ್ಲಾ ಅದರಲ್ಲೇ ತಿಳಿಯುತ್ತದೆ. ಕ್ವಿಜ್‌ಗಳನ್ನೂ ಕೊಡಬಹುದು. ಬಹು ಆಯ್ಕೆಯ ಅಥವಾ ಸರಿ ತಪ್ಪುಮಾದರಿಯ ಪ್ರಶ್ನೆಗಳಾದರೆ ಯಾರಿಗೆ ಎಷ್ಟು ಅಂಕ ಬಂದಿದೆ ಎನ್ನುವ ಮೌಲ್ಯಮಾಪನವನ್ನೂ ಅದೇ ಮಾಡುತ್ತದೆ.
ಪದವಿ ಮಟ್ಟದ ನನ್ನ ಪ್ರತಿ ತರಗತಿಗೂ ವಿದ್ಯಾರ್ಥಿಗಳು ಇಂತಿಷ್ಟು ಓದಿಕೊಂಡು ಬರಬೇಕು. ಆದರೆ ಸುಮ್ಮನೆ ಓದಿಕೊಂಡು ಬನ್ನಿ ಎಂದರೆ ಅದನ್ನು ಪಾಲಿಸಲು ವಿದ್ಯಾರ್ಥಿಗಳೇನು ಸ್ಕೂಲುಮಕ್ಕಳಲ್ಲ. ಅದಕ್ಕೆ ಗೂಗಲ್ ಕ್ಲಾಸ್‌ರೂಂ. ಅರ್ಧ ಗಂಟೆ ಸಮಯ ವ್ಯಯಿಸಿ ವಿದ್ಯಾರ್ಥಿಗಳು ಓದಬೇಕಿರುವ ಲೇಖನದ ಬಗ್ಗೆ ಒಂದು ಐದು ಪ್ರಶ್ನೆಗಳ ಬಹು ಆಯ್ಕೆ ಉತ್ತರದ ಕ್ವಿಜ್ ಅನ್ನು ಗೂಗಲ್ ಕ್ಲಾಸ್‌ರೂಂ ಮೂಲಕ ತಯಾರು ಮಾಡುತ್ತೇನೆ. ಕ್ಲಾಸಿನ ಮೊದಲ ಐದು ನಿಮಿಷದಲ್ಲಿ ವಿದ್ಯಾರ್ಥಿಗಳು ತಮ್ಮ ಸೆಲ್ ಫೋನ್ ಬಳಸಿ ಈ ಕ್ವಿಜ್ ಅನ್ನು ಉತ್ತರಿಸುತ್ತಾರೆ. ಆರನೇ ನಿಮಿಷಕ್ಕೆ ಯಾರಿಗೆ ಎಷ್ಟು ಅಂಕ ಬಂದಿದೆಯೆಂದು ಗೂಗಲ್ ಕ್ಲಾಸ್‌ರೂಂ ನನಗೆ ತೋರಿಸುತ್ತದೆ. ತರಗತಿ ಮುಂದೆ ಸಾಗುತ್ತದೆ. ಈ ಅಂಕಗಳನ್ನು ಅವರ ಕೊನೆಯ ಪರೀಕ್ಷೆಯ ಅಂಕಗಳ ಜೊತೆ ಸೇರಿಸುತ್ತೇನೆ. ಅಲ್ಲದೆ, ಇನ್ನು ವಾರದ ಗಡುವು ನೀಡಿ ಏನೇನು ಮನೆಕೆಲಸ ಮಾಡಬೇಕೋ ಅದರ ವಿವರ, ಅದಕ್ಕೆ ಬೇಕಿರುವ ಸಹಾಯಕ ಸಾಮಗ್ರಿ, ಉಪಯೋಗವಾಗುವ ಯೂಟ್ಯೂಬ್ ವಿಡಿಯೊಗಳು – ಎಲ್ಲವನ್ನೂ ಸೇರಿಸಿ ಒಂದು ಕಾರ್ಯವನ್ನು ಯೋಜಿಸುತ್ತೇನೆ. ಗೂಗಲ್ ಕ್ಲಾಸ್‌ರೂಂ ಮೂಲಕವೇ ವಿದ್ಯಾರ್ಥಿಗಳು ತಮ್ಮ ಕೆಲಸ ಮಾಡುತ್ತಾರೆ. ಎಷ್ಟೋ ಬಾರಿ ಅವರವರ ನಡುವೆಯೇ ಮೊದಲ ಮಟ್ಟದಲ್ಲಿ ಅದನ್ನು ತಿದ್ದಿಸುವ ಕೆಲಸವೂ ಆಗುತ್ತದೆ. ಇಂತಹ ಹಲವಾರು ತಂತ್ರಜ್ಞಾನಗಳು ಉಚಿತವಾಗಿ ಲಭ್ಯವಿದೆ. www.piazza.com, www.moodle.com ಇತ್ಯಾದಿ.
2 www.turnitin.com: ಹೆಚ್ಚಿನ ವಿದ್ಯಾರ್ಥಿಗಳಿಗೆ ಬರೆಯುವುದು ಎಂದರೆ ಅಂತರ್ಜಾಲದಿಂದ ಹೆಕ್ಕಿ ತೆಗೆಯುವುದು ಎಂದಾಗಿದೆ. ಹಾಗಾಗಿ ನಾನು ಕೈಬರಹದ ಅಸೈನ್ಮೆಂಟ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ. ಕಂಪ್ಯೂಟರ್‌ನಲ್ಲಿ ಅಥವಾ ಚಿಕ್ಕ ಬರವಣಿಗೆಯಾದರೆ ಸೆಲ್ ಫೋನಿನಲ್ಲಿ ಟೈಪ್ ಮಾಡಿ ಕೊಡಬೇಕು. ಅದನ್ನು ನಾನು ಟರ್ನ್ ಇಟ್ ಇನ್ ಎನ್ನುವ ವೆಬ್‌ಸೈಟಿನ ಮೂಲಕ ಹಾಯಿಸುತ್ತೇನೆ. ಒಂದು ನಿಮಿಷದಲ್ಲಿ ಎಷ್ಟು ಕೃತಿಚೌರ್ಯ ಮತ್ತು ಎಲ್ಲೆಲ್ಲಿಂದ ಎಂದು ತಿಳಿಯುತ್ತದೆ. ಕೃತಿಚೌರ್ಯ ಮಾಡಿದ್ದರೆ ನಪಾಸು. ಇದು ನನ್ನ ವಿದ್ಯಾರ್ಥಿಗಳಿಗೆ ಮೊದಲೇ ಗೊತ್ತಿರುವುದರಿಂದ ಯಾರೂ ಅನಗತ್ಯ ಸಾಹಸ ಮಾಡುವ ಗೋಜಿಗೆ ಹೋಗುವುದಿಲ್ಲ. ಇಂಥ ನೂರಾರು ಉಚಿತ ವೆಬ್‌ಸೈಟ್‌ಗಳು ಲಭ್ಯವಿವೆ.
3 www.coursera.com ಇದು ಒಂದು ಒಳ್ಳೆಯ ಆನ್‌ಲೈನ್ ಕೋರ್ಸುಗಳ ಜಾಲತಾಣ. ಹಲವಾರು ವಿಷಯಗಳ ಬಗ್ಗೆ ಪ್ರಪಂಚದ ಹಲವಾರು ಅತ್ಯುತ್ತಮ ವಿಶ್ವವಿದ್ಯಾಲಯಗಳ ಅಧ್ಯಾಪಕರು ನಡೆಸುವ ಕೋರ್ಸುಗಳು ಇಲ್ಲಿವೆ. ಹಲವು ಉಚಿತವಾಗಿಯೂ ಲಭ್ಯವಿದೆ. ಬರಿ ಉಪನ್ಯಾಸವಲ್ಲದೆ, ಸಣ್ಣ ಪರೀಕ್ಷೆಗಳು, ಓದುವ ಸಾಮಗ್ರಿ, ದೃಶ್ಯ–ಶ್ರಾವ್ಯ ಮಾಧ್ಯಮದ ಸಾಮಗ್ರಿಗಳೂ ಸಿಗುತ್ತವೆ. ನಿಮ್ಮ ಬಿಡುವಿನ ವೇಳೆಯಲ್ಲಿ ನಿಮಗೆ ಬೇಕಾದ ವೇಗದಲ್ಲಿ ಈ ಕೋರ್ಸುಗಳನ್ನು ತೆಗೆದುಕೊಳ್ಳಬಹುದು. ನಾನು ಪಾಠ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ, ಅದರ ಮೂಲಭೂತ ವಿಚಾರಗಳ ಕುರಿತ ಒಂದೋ ಎರಡೋ ಉಚಿತ ಕೋರ್ಸುಗಳನ್ನು ನನ್ನ ವಿದ್ಯಾರ್ಥಿಗಳು ಕಡ್ಡಾಯವಾಗಿ ‘ಕೋರ್ಸ್ಎರಾ’ದಲ್ಲಿ ತೆಗೆದುಕೊಳ್ಳಬೇಕು. ಅದರಲ್ಲಿ ಅವರಿಗೆ ಸಿಗುವ ಅಂಕಗಳ ಒಂದು ಅಂಶವನ್ನು ಅಂತಿಮ ಪರೀಕ್ಷೆಯ ಅಂಕಗಳ ಜೊತೆಗೆ ಜೋಡಿಸುತ್ತೇನೆ. ಇಂಥವು ಹಲವಾರಿವೆ. www.khanacademy.org ಇಂಥದ್ದೇ ಇನ್ನೊಂದು.
4 artsandculture.google.com ಪುಸ್ತಕ ಓದುವುದರಷ್ಟೇ ಮುಖ್ಯ ಚಿತ್ರಕಲೆ ಇತ್ಯಾದಿ ಮಾಧ್ಯಮಗಳು. ಆರ್ಟ್ಸ್ ಅಂಡ್ ಕಲ್ಚರ್ ಎನ್ನುವ ಗೂಗಲ್‌ನ ಈ ಜಾಲತಾಣದಲ್ಲಿ ಪ್ರಪಂಚದ ಶ್ರೇಷ್ಠ ವಸ್ತುಸಂಗ್ರಹಾಲಯಗಳಲ್ಲಿರುವ ಕಲಾಕೃತಿಗಳ 360 ಡಿಗ್ರಿ, ಹೈ ರೆಸಲ್ಯೂಷನ್ ಚಿತ್ರಗಳಿವೆ. ಇವನ್ನು ನಾವು ಅಲ್ಲೇ ನಿಂತು ನೋಡುತ್ತಿದ್ದೇವೆ ಎನ್ನುವಂತೆ ಮೇಲೆ ಕೆಳಗೆ ಹಿಂದೆ ಮುಂದೆ ತಿರುಗಿಸಿ ನೋಡಬಹುದು. ಯೂರೋಪಿಯನ್ ಇತಿಹಾಸ, ರಾಜಕೀಯ, ಕಲಾ ಇತಿಹಾಸ, ಸಾಹಿತ್ಯ – ಇಂತಹ ಹಲವಾರು ವಿಷಯಗಳಲ್ಲಿ ಇದು ಬಳಕೆಗೆ ಬರುತ್ತದೆ.
5 gapminder.org ಇದು ಸ್ವೀಡನ್‌ನ ಹಾನ್ಸ್ ರೋಸ್ಲಿಂಗ್ ಎನ್ನುವ ಒಬ್ಬ ಪ್ರಾಧ್ಯಾಪಕ ತನ್ನ ಉಪಯೋಗಕ್ಕಾಗಿ ಮಾಡಿಕೊಂಡ ಒಂದು ಸರಳ ಅನಿಮೇಟೆಡ್ ಸಂಖ್ಯಾಶಾಸ್ತ್ರದ ಜಾಲತಾಣ. ಈಗ ಗೂಗಲ್ ತೆಕ್ಕೆಯಲ್ಲಿದೆ. ಸ್ಟಾಟಿಸ್ಟಿಕ್ಸ್ ಅನ್ನು ರೋಚಕವಾಗಿ, ಅರ್ಥಪೂರ್ಣವಾಗಿ ಬಳಸಲು ಇರುವ ಸಾಧನ. ಇದನ್ನು ಬಳಸಿ ವಿದ್ಯಾರ್ಥಿಗಳೇ ತಮ್ಮ ಸುತ್ತಮುತ್ತ ಸಿಗುವ ಸಂಖ್ಯಾ ದತ್ತಾಂಶಗಳನ್ನು ಒಂದು ಅರ್ಥಪೂರ್ಣ ಚಿತ್ರಣವನ್ನಾಗಿ ರೂಪಿಸಬಹುದು. ಇದರ ಬಘೇ ರೋಸ್ಲಿನ್ಗ್ ಕೊಟ್ಟಿರುವ ಟೆಡ್ ಟಾಕ್ ಮತ್ತು ಯೂಟ್ಯೂಬ್ ದೃಶ್ಯಗಳಿವೆ. ಅವು ತರಗತಿಯನ್ನು ಪರಿಣಾಮಕಾರಿಯಾಗಿಸುವ ಹಲವು ಸಾಧ್ಯತೆಗಳನ್ನು ತೋರಿಸುತ್ತವೆ.
6 https://storymaps.arcgis.com/en/ ಇದು ನಕ್ಷೆಗಳನ್ನು ಬಳಸಿಕೊಂಡು ಒಂದು ವಿಚಾರ, ಘಟನೆ, ಐತಿಹಾಸಿಕ ಸಾಮಗ್ರಿಯನ್ನು ತೋರಿಸುವ ಸಾಧನ. ಇದನ್ನು ಬಳಸಿ ಅಸೈನ್ಮೆಂಟ್‌ಗಳನ್ನು ಮಾಡಬಹುದು. ಅರ್ಥಶಾಸ್ತ್ರದ ಸಹೋದ್ಯೋಗಿಯೊಬ್ಬರು ಶಹರದಲ್ಲಿರುವ ರಸ್ತೆಬದಿಯ ವ್ಯಾಪಾರಿಗಳ ಸಾಮಾಜಿಕ ಹಿನ್ನೆಲೆ ಮತ್ತು ಅವರ ಆರ್ಥಿಕ ವಹಿವಾಟಿನ ರೂಪುರೇಷೆಗಳನ್ನು ತೋರಿಸುವ ಒಂದು ಯೋಜನೆಯನ್ನು ತಮ್ಮ ಪದವಿವಿದ್ಯಾರ್ಥಿಗಳಿಂದ ಮಾಡಿಸಿದ್ದರು.
7 www.prezi.com ಇನ್ನು ಪವರ್ ಪಾಯಿಂಟ್ ವಿಚಾರ. ಅದನ್ನು ಉಪಯೋಗಿಸಬೇಕು ಎಂದರೆ ಕೇವಲ ಒಂದಷ್ಟು ವಾಕ್ಯಗಳನ್ನು ಬಣ್ಣಬಣ್ಣವಾಗಿ ತೋರಿಸುವ ಬದಲು, ಒಂದು ವಿಚಾರದ ಕುರಿತ ಚಿತ್ರ, ಸಂಖ್ಯೆಗಳು, ಪರಿಕಲ್ಪನೆಗಳ ತಾರ್ಕಿಕ ಸಂಬಂಧ, ಘಟನಾವಳಿಗಳ ಕ್ರಮ – ಹೀಗೆ ಹಲವು ರೀತಿಯ ಚಲನಶೀಲ ವಿಚಾರಗಳನ್ನು ಅಡಕ ಮಾಡುವ ಒಂದು ಸಾಧನ. ಒಮ್ಮೆ ಬಳಸಿದರೆ ಮತ್ತೆ ಸುಲಭ.
8 JStor.org ಸಾವಿರಾರು ಪ್ರತಿಷ್ಠಿತ ವೃತ್ತಪತ್ರಿಕೆಗಳ ಮತ್ತು ಅದರಲ್ಲಿ ಹತ್ತಾರು ವರ್ಷಗಳಿಂದ ಪ್ರಕಟವಾಗಿರುವ ಸಂಶೋಧನಾ ಲೇಖನಗಳ ಒಂದು ಗುಡಾಣ. ಇದಕ್ಕೆ ಸಾಂಸ್ಥಿಕ ಸದಸ್ಯತ್ವದ ಅಗತ್ಯವಿದ್ದರೂ, ಆನ್‌ಲೈನ್‌ನಲ್ಲಿ ಓದಲು ಒಂದು ಉಚಿತ ರಿಜಿಸ್ಟ್ರೇಷನ್ ಮಾಡಿಕೊಂಡರೆ ಸಾಕು.
9 sci-hub.tw ಮತ್ತು libgen.io ಅಧಿಕೃತ ಜಾಲತಾಣಗಳ ಆಚೆಗೆ ಇರುವ ಸಂಶೋಧನಾ ಪತ್ರಿಕೆಗಳ ಮತ್ತು ಪುಸ್ತಕಗಳ ಕಾನೂನುಬಾಹಿರ ಬಹುದೊಡ್ಡ ಜಾಲತಾಣ. ಇದನ್ನು ಬಳಸುವುದು ಕಾನೂನುಬಾಹಿರ ಮತ್ತು ಕೆಲವು ದೇಶಗಳಲ್ಲಿ ಅಪರಾಧ. ಇದನ್ನು ಪ್ರಜ್ಞಾವಂತ ನಾಗರಿಕರಾರೂ ಬಳಸಬಾರದು. ನನ್ನ ಮಾತಿನ ಅರ್ಥ ತಿಳಿಯಿತಲ್ಲ?
10 dirtdirectory.org ಡಿಜಿಟಲ್ ರಿಸೋರ್ಸ್ ಟೂಲ್ಸ್ ಎನ್ನುವ ಈ ಜಾಲತಾಣದಲ್ಲಿ ನಿಮ್ಮ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ರೀತಿಯ ಸಂಶೋಧನೆಯನ್ನು ಹೇಳಿಕೊಡಲು ಮತ್ತು ಮಾಡಿಸಲು ಬೇಕಾಗುವ ಹಲವಾರು ಡಿಜಿಟಲ್ ಸಾಧನಗಳ ಒಂದು ಸಮಗ್ರ ಡೈರೆಕ್ಟರಿ. ಇದು ಅಲಾದೀನನ ಮಾಯಾದೀಪದಂತೆ. ಬಳಸಲು ಬರುವವರಿಗೆ ಕಾಮಧೇನು.
11 codeacademy.com ‘ಸಾಫ್ಟ್‌ವೇರ್ ಕೋಡಿಂಗ್’ ಎಂದರೆ ಅದೇನೋ ನಮ್ಮ ಅಳವಿಗೆ ನಿಲುಕದ್ದು ಎನ್ನುವ ಭಯ ನಮಗೆಲ್ಲ. ಆದರೆ ಅದನ್ನು ಸರಳವಾಗಿ ಕಲಿಯುವ ಜಾಲತಾಣ ಇದು. ನಮಗೆ ಬೇಕಾದ ಕೆಲವೊಂದು ಸಣ್ಣ ಪುಟ್ಟ ವೆಬ್‌ಸೈಟ್ ಮಾಡಿಕೊಳ್ಳಲು, ತರ್ಕಶುದ್ದವಾದ ಯೋಚನೆ ಮಾಡುವುದನ್ನು ಕಲಿಯಲು – ಹೀಗೆ ಹಲವಾರು ರೀತಿಗಳಲ್ಲಿ ಕೋಡಿಂಗ್ ವಿದ್ಯೆ ಉಪಯೋಗಕ್ಕೆ ಬರುತ್ತದೆ. ಯಾವ ವಿಷಯದ ವಿದ್ಯಾರ್ಥಿಗಳೇ ಆಗಲಿ, ಇಂದಿನ ಪ್ರಪಂಚದಲ್ಲಿ ಇಷ್ಟಾದರೂ ಕೋಡಿಂಗ್ ಕಲಿತಿರಬೇಕು.
ಈ ಎಲ್ಲ ಸಾಧನಗಳು ಸಾಧನಗಳಷ್ಟೇ. ಇದೇ ಕಲಿಕೆಯಲ್ಲ. ಇದನ್ನು ತರಗತಿಗಳಲ್ಲಿ ಬಳಸಿರುವ ಅನುಭವದ ಮೇಲೆ ಇವೆಲ್ಲ ಉಪಯುಕ್ತ ಎಂದು ಹೇಳಬಲ್ಲೆ. ಇದು ಬರೀ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಕಲಿಸುವ ಶಿಕ್ಷಕರಿಗೂ ಉಪಯುಕ್ತವಾಗಬಲ್ಲ ಸಾಧನಗಳು.
ಕೊನೆಯ ಮಾತು. ತಂತ್ರಜ್ಞಾನವನ್ನು ಬಳಸುವವರು ಅದನ್ನು ಸರಿಯಾಗಿ ಬಳಸುತ್ತಾರೆ. ಬಳಸಲು ಬರದವರು ಅದರ ಒಳಿತು–ಕೆಡುಕುಗಳ ಬಗ್ಗೆ ಮಹೋನ್ನತವಾದ ಭಾಷಣ ಮಾಡುತ್ತಾರೆ. ನೀವು ಯಾವ ಪಂಗಡ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.