ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಪ್ರವೇಶಕ್ಕಾಗಿ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್(ಜೆಇಇ) ಪಾಸ್ ಮಾಡಬೇಕು. ಪ್ರವೇಶ ಪರೀಕ್ಷೆ ವಿಧಾನ, ಕೋರ್ಸ್ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.
ದೇಶದಲ್ಲಿ ಹೋಟೆಲ್ ಉದ್ಯಮ ವಿಸ್ತಾರಗೊಂಡಿದ್ದು, ಈ ಕ್ಷೇತ್ರದ ನಿರ್ವಹಣೆಗೆ ಸಾಕಷ್ಟು ಉದ್ಯೋಗಗಳೂ ಸೃಷ್ಟಿಯಾಗಿವೆ. ಈ ಉದ್ಯಮಕ್ಕೆ ಅಗತ್ಯವಾದ ಸಿಬ್ಬಂದಿ ಅಥವಾ ನೌಕರರನ್ನು ಅಣಿಗೊಳಿಸಲು ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್‌ಮೆಂಟ್ (ಎನ್‌ಸಿಎಚ್‌ಎಂ) ಮತ್ತು ಇಂದಿರಾಗಾಂಧಿ ಮುಕ್ತ ವಿವಿ (ಇಗ್ನೊ) ಜಂಟಿಯಾಗಿ ದೇಶದಾದ್ಯಂತ 60ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಮ್ಯಾನೇಜ್‌ಮೆಂಟ್ ಕಾಲೇಜುಗಳಲ್ಲಿ ‘ಹಾಸ್ಪಿಟಾಲಿಟಿ ಆ್ಯಂಡ್ ಹೋಟೆಲ್ ಅಡ್ಮಿನಿಸ್ಟ್ರೇಷನ್ (Hospitality and Hotel Administration)’ ವಿಷಯದ ಬಿ.ಎಸ್ಸಿ ಪದವಿ ಕೋರ್ಸ್ (B.Sc HHA –) ನಡೆಸುತ್ತಿದೆ.
ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿಗಳು ‘ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ’ ನಡೆಸುವ ‘ಜಾಯಿಂಟ್ ಎಂಟ್ರೆನ್ಸ್ ಟೆಸ್ಟ್(ಜೆಇಇ) ಪರೀಕ್ಷೆ ಪಾಸ್ ಮಾಡಬೇಕು.12ನೇ ತರಗತಿ(2ನೇ ಪಿಯುಸಿ) ತೇರ್ಗಡೆಯಾದ ಮತ್ತು 2ನೇ ಪಿಯುಸಿ ಅಂತಿಮ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಈ ಪ್ರವೇಶ ಪರಿಕ್ಷೆ ತೆಗೆದುಕೊಳ್ಳಬಹುದು. ಸಾಮಾನ್ಯವಾಗಿ ಈ ಪ್ರವೇಶ ಪರೀಕ್ಷೆಗೆ ಮಾರ್ಚ್ ತಿಂಗಳ ಅಂತ್ಯದವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿರುತ್ತವೆ. ಏಪ್ರಿಲ್ ಅಥವಾ ಮೇ ತಿಂಗಳ ಕೊನೆಯಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುತ್ತದೆ.
ಜೆಇಇ–ಪ್ರಶ್ನೆ ಪತ್ರಿಕೆ ಹೀಗಿರುತ್ತದೆ
ಮೂರು ಗಂಟೆ ಅವಧಿಯ ಕಂಪ್ಯೂಟರ್ ಆಧಾರಿತ ಈ ಪ್ರವೇಶ ಪರೀಕ್ಷೆಯ ಪತ್ರಿಕೆಯಲ್ಲಿ ಒಟ್ಟು ಐದು ವಿಭಾಗಗಳಿದ್ದು, 200 ಪ್ರಶ್ನೆಗಳಿರುತ್ತವೆ. ಪ್ರತಿ ಪ್ರಶ್ನೆಗೆ 4 ಅಂಕಗಳು. ಸರಿ ಉತ್ತರಕ್ಕೆ 4 ಅಂಕ, ತಪ್ಪಾದ ಉತ್ತರಕ್ಕೆ ಒಂದು ಅಂಕ ಕಳೆಯುವ ನೆಗೆಟಿವ್ ಮಾರ್ಕಿಂಗ್ ಪದ್ಧತಿ ಇದೆ. ಪ್ರಶ್ನೆಗಳು ಈ ಕೆಳಕಂಡ ವಿಷಯಗಳನ್ನು ಆಧರಿಸಿರುತ್ತವೆ.
1. ಅಂಕಿ–ಸಂಖ್ಯೆ ಸಾಮರ್ಥ್ಯ ಮತ್ತು ಅನಾಲಿಟಿಕಲ್ ಅಪ್ಟಿಟ್ಯೂಡ್ ಟೆಸ್ಟ್ (30 ಅಂಕಗಳು) (Numerical Ability and Analytical Aptitude)
2. ರೀಸನಿಂಗ್ ಅಂಡ್ ಲಾಜಿಕಲ್ ಡಿಡಕ್ಷನ್ (30 ಅಂಕಗಳು) (Reasoning and Logical Deduction)
3. ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು(30 ಅಂಕಗಳು) (General Knowledge & Current Affairs)
4. ಇಂಗ್ಲಿಷ್ ಭಾಷಾ ಪತ್ರಿಕೆ(60 ಅಂಕಗಳು)( English Language)
5. ಆಪ್ಟಿಟ್ಯೂಡ್ ಫಾರ್ ಸರ್ವೀಸ್ ಸೆಕ್ಟರ್ (50 ಅಂಕಗಳು) (Aptitude for Service Sector)
ಕೋರ್ಸ್ ವಿವರ: ಮೂರು ವರ್ಷಗಳ (6 ಸೆಮಿಸ್ಟರ್) ಈ ಕೋರ್ಸ್‌ನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಮತ್ತು ಆತಿಥ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಪ್ರಯೋಗ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸಿಕೊಡಲಾಗುತ್ತದೆ. ಸಸ್ಯಾಹಾರ ಮತ್ತು ಮಾಂಸಾಹಾರ ಪದ್ಧತಿಯಲ್ಲಿ ಪ್ರತ್ಯೇಕ ತರಗತಿಗಳಿವೆ. ಕಲಿಯುವವರ ಅನುಕೂಲಕ್ಕೆ ತಕ್ಕಂತೆ ಹೊಸ ವಿಷಯಗಳ ಸೇರ್ಪಡೆಗೆ ಅವಕಾಶವಿದೆ. ಆಹಾರ ತಯಾರಿಕೆ, ಲೆಕ್ಕಪತ್ರ ನಿರ್ವಹಣೆ, ಹಣಕಾಸು ನಿರ್ವಹಣೆ, ಪ್ರವಾಸೋದ್ಯಮ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್, ಫುಡ್ ಅಂಡ್ ಬೆವರೇಜ್ ಸರ್ವೀಸ್, ಹೌಸ್ ಕೀಪಿಂಗ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಮಾನ ಸಂಪನ್ಮೂಲ ನಿರ್ವಹಣೆ ಮತ್ತು ಸ್ಟ್ರಾಟಜಿಕ್ ಮ್ಯಾನೇಜ್‌ಮೆಂಟ್ ವಿಷಯಗಳನ್ನು ಕಲಿಸಲಾಗುತ್ತದೆ.
ಉದ್ಯೋಗಾವಕಾಶಗಳು: ವಿಮಾನ, ರೈಲು ಮತ್ತು ನೌಕಾಯಾನ ಕ್ಷೇತ್ರಗಳಲ್ಲಿರುವ ಆತಿಥ್ಯ ಮತ್ತು ಸೇವಾ ವಿಭಾಗಗಳು, ಹೋಟೆಲ್ ಮ್ಯಾನೇಜ್‌ಮೆಂಟ್/ ಫುಡ್ ಕ್ರಾಫ್ಟ್ ಸಂಸ್ಥೆಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಜೊತೆಗೆ, ಸ್ವಯಂ ಉದ್ಯೋಗವನ್ನೂ ಆರಂಭಿಸಬಹುದು. ಹೆಚ್ಚಿನ ವಿವರಗಳಿಗೆhttps://nchmjee.nta.nic.in/ https://nta.ac.in/HotelManagementexam ಜಾಲತಾಣ ನೋಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.