ಸುದ್ದಿಯ ಹಿನ್ನೆಲೆ
ಭೂಮಿಯಿಂದ 890 ದಶಲಕ್ಷ ಕಿಲೋಮೀಟರ್ ದೂರದಲ್ಲಿರುವ ಗುರು ಗ್ರಹವು ಸೌರಮಂಡಲದ ಅತಿ ದೊಡ್ಡ ಗ್ರಹವಾಗಿದೆ. ಗಾತ್ರದಲ್ಲಿ ಭೂಮಿಗಿಂತ 11 ಪಟ್ಟು ದೊಡ್ಡದಾಗಿದೆ. ಕ್ಷುದ್ರಗ್ರಹಗಳನ್ನು ತನ್ನತ್ತ ಸೆಳೆದುಕೊಂಡು ಉಪಗ್ರಹ ಮಾಡಿಕೊಂಡ ದೈತ್ಯ ಗ್ರಹ ಇದು. ಇಂಥ ಗುರು ಗ್ರಹ ಮೂರು ಪ್ರಧಾನ ಉಪಗ್ರಹಗಳನ್ನು ಹೊಂದಿದೆ. ಅವುಗಳೆಂದರೆ ಗ್ಯಾನಿಮೇಡಾ, ಯುರೋಪ ಮತ್ತು ಕ್ಯಾಲಿಸ್ಟೊ. ಈ ಉಪಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಬಗ್ಗೆ ಪ್ರಬಲ ಶಂಕೆ ಇದೆ. ಈ ಕಾರಣದಿಂದಾಗಿ ಈ ಉಪಗ್ರಹಗಳ ಕುರಿತ ಹೆಚ್ಚಿನ ಸಂಶೋಧನೆಗಾಗಿ ಯೂರೋಪಿಯನ್ ಬಾಹ್ಯಾಕಾಶ ಏಜೆನ್ಸಿ(European Space Agency) ಜ್ಯೂಸ್ ಮಿಷನ್ (JUICE Mission) ಅನ್ನು ಗುರುವಿನ ಕಕ್ಷೆಗೆ ಕಳುಹಿಸುತ್ತಿದೆ.
ಏನಿದು ಜ್ಯೂಸ್ ಮಿಷನ್
’ಜ್ಯೂಸ್’ ಎಂದರೆ ಜ್ಯುಪಿಟರ್ ಐಸಿ ಮೂನ್ಸ್ ಎಕ್ಸ್‌ಪ್ಲೋರರ್(Jupiter Icy Moons Explorer– Juice). ಗುರುವಿನ ಚಂದ್ರಗಳ ಮೇಲ್ಮೈನಲ್ಲಿರುವ ಜೀವಿಗಳ ಕುರುಹು ಪತ್ತೆಗಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿ ಇದನ್ನು ಸಿದ್ದಪಡಿಸಿದೆ. ಏರಿಯನ್-5 ರಾಕೆಟ್ ಮೂಲಕ ಜ್ಯೂಸ್ ನೌಕೆ ನಭಕ್ಕೆ ಚಿಮ್ಮಲಿದೆ.
ಒಟ್ಟಾರೆ ₹14,270 ಕೋಟಿ ವೆಚ್ಚದ ಕಾರ್ಯಾಚರಣೆ ಇದು. 5,963 ಕೆಜಿ ತೂಕದ ನೌಕೆಯು ಬರೋಬ್ಬರಿ 8 ವರ್ಷ ಬಾಹ್ಯಾಕಾಶದಲ್ಲಿ ಪ್ರಯಾಣಿಸಿ 2031ರ ಜುಲೈನಲ್ಲಿ ಗುರು ಗ್ರಹದ ಕಕ್ಷೆಯನ್ನು ಸೇರಲಿದೆ. ಅಚ್ಚರಿ ಎಂದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಗುರುವಿನ ಕಕ್ಷೆಗೆ ‘ಯುರೋಪ ಕ್ಲಿಪ್ಪರ್’ ಎಂಬ ಬಾಹ್ಯಾಕಾಶ ನೌಕೆಯನ್ನು 2024ರ ಅಕ್ಟೋಬರ್ 10ರಂದು ಕಳುಹಿಸಲಿದೆ. ಆದರೆ ಇದು ಕೇವಲ ಆರು ವರ್ಷಗಳಲ್ಲಿ 2030ಕ್ಕೆ ಗುರುವಿನ ಕಕ್ಷೆ ತಲುಪಲಿದೆ.
ಜ್ಯೂಸ್ ಮಿಷನ್ ಪ್ರಯಾಣ ತುಸು ಭಿನ್ನವಾಗಿದೆ. ಮೊದಲು ಈ ಮಿಷನ್ ಭೂಮಿಯಿಂದ ಸೂರ್ಯನ ದಿಕ್ಕಿನಲ್ಲಿರುವ ಶುಕ್ರ ಗ್ರಹವನ್ನು ತಲುಪಿ, ಅಲ್ಲಿಂದ ಪುನಃ ಭೂಕಕ್ಷೆಗೆ ಬಂದು ನೇರವಾಗಿ ಗುರುಗ್ರಹವನ್ನು ಪ್ರವೇಶಿಸಲಿದೆ.
ಜ್ಯೂಸ್ ಕಾರ್ಯಾಚರಣೆ ಹೇಗಿರಲಿದೆ?
ಗುರುವಿನ ಉಪಗ್ರಹಗಳಾದ ಗ್ಯಾನಿಮೇಡ, ಯುರೋಪ ಮತ್ತು ಕ್ಯಾಲಿಸ್ಟೊಗಳನ್ನು ಜ್ಯೂಸ್ ಮಿಷನ್ ಸುತ್ತು ಹಾಕಲಿದೆ. ಗುರುವಿನ ಉಪಗ್ರಹಗಳಿಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಮೊಟ್ಟಮೊದಲ ಬಾಹ್ಯಾಕಾಶ ನೌಕೆ ಇದಾಗಿದೆ.
ಕ್ಯಾಲಿಸ್ಟೊ ಸುತ್ತಲೂ 21 ಬಾರಿ, ಗ್ಯಾನಿಮೇಡಾ ಸುತ್ತ 12 ಮತ್ತು ಯುರೋಪವನ್ನು ಎರಡು ಬಾರಿ ಇದು ಸುತ್ತಲಿದೆ. ಸಮೀಪದಿಂದ ಅವುಗಳ ಚಿತ್ರವನ್ನು ಸೆರೆಹಿಡಿದು ಭೂಮಿಗೆ ಕಳುಹಿಸಲಿದೆ. ಹಿಮಾವೃತ ಸಮುದ್ರಗಳ ಬಗೆಗಿನ ಸಂಶೋಧನೆಗೆ ಈ ಫೋಟೋಗಳು ನೆರವಾಗಲಿವೆ.
ಗುರುವಿನ ಉಪಗ್ರಹಗಳ ಭೌಗೋಳಿಕ ತನಿಖೆಗೆ ರಿಮೋಟ್ ಸೆನ್ಸಿಂಗ್ ನೆರವಾಗಲಿದೆ.
ಗುರು ಉಪಗ್ರಹಗಳ ಪ್ರಾಮುಖ್ಯ :
ಗುರು ಗ್ರಹದ ಮೂರು ಉಪಗ್ರಹಗಳಲ್ಲಿ ಹಿಮಾವೃತ ಸಮುದ್ರಗಳಿದ್ದು ಇವು ಭೂಮಿ ಮೇಲಿನ ಸಮುದ್ರದ ರಚನೆಯನ್ನೇ ಹೋಲುತ್ತಿವೆ ಎಂಬುದು ವಿಜ್ಞಾನಿಗಳ ಊಹೆಯಾಗಿದೆ.
ಒಂದು ವೇಳೆ ಅಲ್ಲಿ ಜೀವಿಗಳ ಕುರುಹು ಪತ್ತೆಯಾದರೆ ಅನ್ಯಗ್ರಹ ಜೀವಿಗಳ ಅಸ್ತಿತ್ವದ ಪರಿಕಲ್ಪನೆ ನೈಜತೆ ಪಡೆದುಕೊಳ್ಳುತ್ತದೆ.
ವಿಜ್ಞಾನಿಗಳು ಈ ಹಿಂದೆ ಶುಕ್ರ ಮತ್ತು ಮಂಗಳ ಗ್ರಹಗಳು ಮನುಷ್ಯರ ವಾಸ ಯೋಗ್ಯ ಸ್ಥಳವೆಂದು ಊಹಿಸಿದ್ದರು. ಆದರೆ ಅದು ಅಸಾಧ್ಯ ಎನ್ನುವುದು ಖಚಿತವಾಗುತ್ತಿದೆ. ಶುಕ್ರ ಗ್ರಹದ ತಾಪಮಾನ 475 ಡಿಗ್ರಿ ಸೆ. ಆಗಿರುವುದರಿಂದ ಅಲ್ಲಿ ಮನುಷ್ಯ ವಾಸಿಸುವುದು ಕಷ್ಟ. ಲಕ್ಷಾಂತರ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ನೀರು ಕಣ್ಮರೆಯಾಗಿರುವ ಸಂಗತಿ ಸಂಶೋಧನೆಗಳಿಂದ ತಿಳಿಯುತ್ತಿದೆ. ಈ ಕಾರಣದಿಂದ ಗುರುವಿನ ಉಪಗ್ರಹಗಳು ಭರವಸೆ ಹುಟ್ಟಿಸಿವೆ.
ಗುರು ಗ್ರಹದ ರಚನೆ
ಗುರು ಗ್ರಹವು ಸೌರಮಂಡಲದಲ್ಲಿ ಅತ್ಯಂತ ದೊಡ್ಡ ಗ್ರಹವಾಗಿದೆ. ಇದರ ವಾಯುಗೋಳವು ಜಲಜನಕ, ಮೀಥೇನ್ ಮತ್ತು ಹೀಲಿಯಂ ಗಳಿಂದ ಆವೃತವಾಗಿದೆ. ಈ ಗ್ರಹವನ್ನು ಕಂಡುಹಿಡಿದವರು ಗೆಲಿಲಿಯೋ ಗೆಲಲಿ. ಗೆಲಿಲಿಯೋ ಕಂಡು ಹಿಡಿದ ನಾಲ್ಕು ಉಪಗ್ರಹಗಳೆಂದರೆ ಕ್ಯಾಲಿಸ್ಟೊ, ಯುರೋಪ, ಗ್ಯಾನಿಮೆಡ ಮತ್ತು ಐಯೊ ಹೊ. ಇವುಗಳಲ್ಲಿ ಎಂಟು ಜೀವಂತ ಜ್ವಾಲಾಮುಖಿಗಳಿವೆ.
ಸೌರಮಂಡಲದಲ್ಲಿಯೇ ಅತ್ಯಂತ ದೊಡ್ಡದಾದಂತಹ ಉಪಗ್ರಹ ಗ್ಯಾನಿಮೇಡ. ಗುರು ಗ್ರಹವು ಅತಿ ಹೆಚ್ಚು ಗುರುತ್ವ ಹೊಂದಿರುವ ಗ್ರಹವಾಗಿದೆ. ಕಾರಣ ಇದರಲ್ಲಿ ಅತಿ ಹೆಚ್ಚು ದ್ರವ್ಯತ್ವ(ತೂಕ)ಇದೆ. ಈ ಗ್ರಹವು ಅತಿ ಕಡಿಮೆ ಅಕ್ಷ ಭ್ರಮಣೆ ಹೊಂದಿದೆ (9 ಗಂಟೆ ಮತ್ತು 56 ನಿಮಿಷ ). ಇದರ ಅಧ್ಯಯನಕ್ಕೆ ನಾಸಾ ಕಳುಹಿಸಿರುವ ಉಪಗ್ರಹ ಜುನೋ ಆಗಿದೆ.
ಉಪಸಂಹಾರ
ಚಂದ್ರನ ನೆಲದಲ್ಲಿ ಮನುಷ್ಯ ಹಲವು ಗಂಟೆಗಳು ಕಳೆದ ಕಾರಣ, ಆ ಉಪಗ್ರಹದ ಬಗ್ಗೆ ತಕ್ಕಮಟ್ಟಿಗಿನ ತಿಳಿವಳಿಕೆ ಬಂದಿದೆ. ಮಂಗಳ ಮತ್ತು ಶುಕ್ರ ಗ್ರಹಗಳ ಮೇಲೆ ಆಗಾಗ್ಗೆ ರೋವರ್ ಗಳನ್ನು ಇಳಿಸಿದ ಮೇಲೆ ಹಲವಾರು ಸಂಶೋಧನೆಗಳಾಗಿವೆ. ಆದರೆ ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರುವಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಾರಣ, ಅದು ಭೂಮಿಯಿಂದ ಸಾಕಷ್ಟು ದೂರದಲ್ಲಿದೆ. ಪ್ರಸ್ತುತ ನಾಸಾ ಕೈಗೊಳ್ಳುತ್ತಿರುವ ಸಂಶೋಧನೆಯಿಂದಲಾದರೂ ಗುರು ಗ್ರಹದ ಬಗೆಗಿನ ರಹಸ್ಯಗಳು ಹೊರಬರುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.