ತುಮಕೂರು: ನಗರದ ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿ ಎಂ.ಜ್ಞಾನವಿ ವಾಣಿಜ್ಯ ವಿಭಾಗದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 600ಕ್ಕೆ 597 ಅಂಕ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಡಿ.ಎಲ್.ಮಂಜುನಾಥ್, ಡಿ.ಮಂಜುಳಾ ದಂಪತಿಯ ಪುತ್ರಿ ಜ್ಞಾನವಿ. ಕಾಲೇಜಿನ ಹಾಸ್ಟೆಲ್‌ನಲ್ಲಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದರು. ಪ್ರಥಮ ಪಿಯುಸಿಯಲ್ಲಿ 600ಕ್ಕೆ 600 ಅಂಕ ಗಳಿಸಿದ್ದರು.
ಜ್ಞಾನವಿ ಪೋಷಕರು ಬೀಚನಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಅವರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ, ನಿರಂತರ ಶ್ರಮದಿಂದಾಗಿ ಇಡೀ ರಾಜ್ಯದ ಜನರು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಓದಿನಲ್ಲಿ ಸದಾ ಮುಂದಿದ್ದ ಜ್ಞಾನವಿ ಮೇಲೆ ಪೋಷಕರು ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
‘ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಅಭ್ಯಾಸ ಮಾಡಿದ್ದು ನೆರವಾಯಿತು. ಯಾವುದೇ ಒಂದು ವಿಷಯವನ್ನು ಓದಲು ಕುಳಿತರೆ ಅದು ಪೂರ್ತಿಯಾಗುವ ತನಕ ಬಿಡುತ್ತಿರಲಿಲ್ಲ. ಫಲಿತಾಂಶ ನೋಡಿ ತುಂಬಾ ಖುಷಿಯಾಗಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇದೆ’ ಎಂದು ಜ್ಞಾನವಿ ನಗುತ್ತಲೇ ಮಾತನಾಡಿದರು.
‘ಕಾಲೇಜಿನಲ್ಲಿ ಪರೀಕ್ಷೆಯ ತಯಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ವಾರ್ಷಿಕ ಪರೀಕ್ಷೆಗೂ ಮುನ್ನ 8 ಪೂರ್ವಭಾವಿ ಪರೀಕ್ಷೆಗಳು ನಡೆಸಿದ್ದರು. ಇದಕ್ಕೆ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೆ. ಕೊನೆಯ ಪರೀಕ್ಷೆಗೆ ಇದರಿಂದ ಅನುಕೂಲವಾಯಿತು’ ಎಂದು ತಮ್ಮ ಯಶಸ್ಸಿನ ಗುಟ್ಟು ತಿಳಿಸಿದರು.
ಜ್ಞಾನವಿ ಚಾರ್ಟೆಡ್ ಅಕೌಟೆಂಟ್ ಆಗುವ ಕನಸು ಕಂಡಿದ್ದು, ಇದೇ ಮಾರ್ಗದಲ್ಲಿ ಸಾಗಿದ್ದಾರೆ. ವಿದ್ಯಾವಾಹಿನಿ ಕಾಲೇಜಿನಲ್ಲಿ ಚಾರ್ಟೆಡ್ ಅಕೌಟೆಂಟ್ ಕೋರ್ಸ್‌ಗೆ ದಾಖಲಾಗುವ ಇಂಗಿತ ವ್ಯಕ್ತಪಡಿಸಿದರು. ಪೋಷಕರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದೆ ಸಾಗುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ತುಮಕೂರಿಗೆ ಬಂದವರು ತಮ್ಮ ಕೆಲಸದಲ್ಲಿ ಶೇ 100ರಷ್ಟು ಯಶಸ್ಸು ಸಾಧಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.