ADVERTISEMENT

ಕೆಇಎ: ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆ ಫಲಿತಾಂಶ ತಾತ್ಕಾಲಿಕ ತಡೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 10:38 IST
Last Updated 12 ಆಗಸ್ಟ್ 2023, 10:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಆಗಸ್ಟ್‌ 11ರ ರಾತ್ರಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಫಾರ್ಮಸಿ ಸೇರಿದಂತೆ ಇತರೆ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಮೆರಿಟ್ ಮತ್ತು ರೋಸ್ಟರ್‌ ಪದ್ಧತಿ ಆಧಾರದ ಮೇಲೆ ಅಣಕ ಸೀಟು ಹಂಚಿಕೆಯನ್ನು ಮಾಡಿ ಫಲಿತಾಂಶ ಪ್ರಕಟಿಸಿತ್ತು.

ವೈದ್ಯಕೀಯ ಸೀಟುಗಳ ಅಣುಕು ಫಲಿತಾಂಶದಲ್ಲಿ ಗೊಂದಲಗಳಾಗಿವೆ ಎಂದು ಹಲವು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ದೂರಿದ್ದರು. ಹೆಚ್ಚಿನ ಅಂಕ ಪಡೆದಿದ್ದರೂ ವೈದ್ಯಕೀಯ ಸೀಟು ಲಭಿಸಲಿಲ್ಲ. ತಮಗಿಂತ ಕಡಿಮೆ ಅಂಕ ಗಳಿಸಿದವರಿಗೆ ಸೀಟು ಹಂಚಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.

ADVERTISEMENT

ಅಣಕು ಸೀಟು ಹಂಚಿಕೆಯ ಫಲಿತಾಂಶದಲ್ಲಿನ ಗೊಂದಲವು ಪ್ರಾಧಿಕಾರದ ಗಮನಕ್ಕೆ ಬರುತ್ತಿದ್ದಂತೆ ವೆಬ್‌ಸೈಟ್‌ನಲ್ಲಿ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಪರಿಷ್ಕೃತ ಪ್ರಕಟಣೆಯನ್ನು ಹೊರಡಿಸಿದೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆ ಫಲಿತಾಂಶದಲ್ಲಿ ಕೆಲವು ಅಭ್ಯರ್ಥಿಗಳ ಹೆಸರುಗಳು ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಹಿನ್ನೆಲೆಯಲ್ಲಿ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್‌ಗಳ ಪರಿಷ್ಕೃತ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಇಂದು ರಾತ್ರಿ(ಆ.12) 8ಕ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಅಣಕು ಸೀಟು ಹಂಚಿಕೆಯ ಫಲಿತಾಂಶದ ಲಿಂಕ್ ಸಹ ಸ್ಥಗಿತಗೊಳಿಸಲಾಗಿದೆ.

‘ಏನಾದರು ಸಮಸ್ಯೆಗಳು ಇದ್ದರೆ ಪ್ರಾಧಿಕಾರ, ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ಬರಲಿ ಎಂಬ ಉದ್ದೇಶದಿಂದ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಿದ್ದೇವೆ. ಫಲಿತಾಂಶದ ಪಟ್ಟಿಯಲ್ಲಿ ಕೆಲವು ಅಭ್ಯರ್ಥಿಗಳ ಹೆಸರುಗಳು ಸೇರ್ಪಡೆಗೊಳ್ಳದ ಹಿನ್ನೆಲೆಯಲ್ಲಿ ಪರಿಷ್ಕೃತ ಫಲಿತಾಂಶವನ್ನು ಇಂದು ರಾತ್ರಿಯೇ ಪ್ರಕಟಿಸುತ್ತೇವೆ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತ್ತೆ ಏನಾದರು ಸಮಸ್ಯೆಗಳು ಕಂಡುಬಂದಲ್ಲಿ ಪೋಷಕರು ಪ್ರಾಧಿಕಾರದ ಮೇಲ್‌ಗೆ ಕಳುಹಿಸಬಹುದು. ಬೆಳಿಗ್ಗೆಯೇ ಅವುಗಳನ್ನು ಪರಿಹರಿಸುತ್ತೇವೆ. ಕಲ್ಯಾಣ ಕರ್ನಾಟಕದ 371(ಜೆ) ಅಡಿ ಮೀಸಲಾತಿ ಪಡೆಯುವ ಕೆಲವು ವಿದ್ಯಾರ್ಥಿಗಳು ಆರ್‌ಡಿ ಸಂಖ್ಯೆಯನ್ನು ಕೆಲವರು ಆನ್‌ಲೈನ್‌ನಲ್ಲಿ ಮತ್ತೆ ಕೆಲವರು ಪ್ರಾಧಿಕಾರಕ್ಕೆ ನೇರವಾಗಿ ಬಂದು ನೀಡಿದ್ದರು. ಹೀಗಾಗಿ, ಅಣಕು ಫಲಿತಾಂಶದಲ್ಲಿ ಕೆಲವರು ಹೆಸರು ಕಂಡುಬಂದಿಲ್ಲ. ಆನ್‌ಲೈನ್‌ನಲ್ಲಿ ಆರ್‌ಡಿ ಸಂಖ್ಯೆ ನೀಡಿದ್ದರೆ ಇಂತಹ ಸಮಸ್ಯೆ ಆಗುತ್ತಿರಲಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಈ ಸಮಸ್ಯೆ ಕಂಡುಬಂದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.