ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿನ ಭಾರಿ ಕುಸಿತ ಚರ್ಚೆಗೆ ಗ್ರಾಸವಾದರೂ, ಇದುವರೆಗೆ ಹೆಚ್ಚು ಫಲಿತಾಂಶ ಪಡೆಯಲು ಅನುಸರಿಸುತ್ತಿದ್ದ ವಾಮಮಾರ್ಗಗಳನ್ನು ಅನಾವರಣಗೊಳಿಸಿದೆ.
ಕಳೆದೆರಡು ದಶಕಗಳಿಂದ ‘ಹೆಚ್ಚಿನ ಫಲಿತಾಂಶ’ ಎಂಬ ಪ್ರತಿಷ್ಠೆಯ ಬೆನ್ನು ಹತ್ತಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಶಿಕ್ಷಕರು, ಶಿಕ್ಷಕರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಅಂಕಗಳ ಭ್ರಮಾ ಲೋಕದಲ್ಲಿ ತೇಲಿಸಿದ್ದರು ಎಂಬ ಸತ್ಯವನ್ನು ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸಿದ ‘ವೆಬ್‌ಕಾಸ್ಟಿಂಗ್’ ವ್ಯವಸ್ಥೆ ಬಿಚ್ಚಿಟ್ಟಿದೆ.
2023ರ ಮಾರ್ಚ್–ಏಪ್ರಿಲ್‌ನಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಆರೋಪದ ಮೇಲೆ 100ಕ್ಕೂ ಹೆಚ್ಚು ಶಿಕ್ಷಕರನ್ನು ಅಮಾನತು ಮಾಡಲಾಗಿತ್ತು. ವಿಜಯಪುರ, ಯಾದಗಿರಿ, ಬೆಳಗಾವಿ, ಚಿತ್ರದುರ್ಗ, ಬೀದರ್, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅತಿಹೆಚ್ಚು ನಕಲು ನಡೆದಿತ್ತು. ಕಳೆದ ವರ್ಷದ ಫಲಿತಾಂಶ ಬಂದಾಗ ನಕಲು ನಡೆದಿದ್ದ ಬಹುತೇಕ ಜಿಲ್ಲೆಗಳು ಫಲಿತಾಂಶದ ಜಿಲ್ಲಾವಾರು ಪಟ್ಟಿಯಲ್ಲಿ ಭಾರಿ ಜಿಗಿತ ಕಂಡಿದ್ದವು. ಪರೀಕ್ಷೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳುತ್ತಿದ್ದ ಉಡುಪಿ, ದಕ್ಷಿಣ ಕನ್ನಡದಂತಹ ಜಿಲ್ಲೆಗಳು ಕುಸಿತ ಕಂಡಿದ್ದವು. ಹಾಗಾಗಿ, 2024ರಲ್ಲಿ ನಡೆಯುವ ಪರೀಕ್ಷೆಯಲ್ಲಿ ನಕಲು, ವ್ಯವಹಾರಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕ್ರಮಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪರೀಕ್ಷಾ ಮಂಡಳಿಗೆ ಸೂಚಿಸಿತ್ತು.
2024ರ ಪರೀಕ್ಷೆಗಳನ್ನು ಅತ್ಯಂತ ವ್ಯವಸ್ಥಿತವಾಗಿ, ನಕಲಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ ನಡೆಸಲು ನಿರ್ಧರಿಸಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಳೆದ ಆಗಸ್ಟ್‌ನಲ್ಲೇ ಎರಡು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಸಾಮೂಹಿಕವಾಗಿ ನಕಲು ಮಾಡಲು ಅವಕಾಶ ನೀಡುವ ಮೂಲಕ ವಾಮಮಾರ್ಗಗಳಿಂದ ಹೆಚ್ಚು ಫಲಿತಾಂಶ ಪಡೆಯುತ್ತಿದ್ದ ಪರೀಕ್ಷಾ ಕೇಂದ್ರಗಳನ್ನು ರದ್ದು ಮಾಡುವುದು, ಅಂತಹ ವಿದ್ಯಾರ್ಥಿಗಳಿಗೆ ಸಮೀಪದ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಪ್ರತಿ ಪರೀಕ್ಷಾ ಕೇಂದ್ರಗಳಲ್ಲೂ ವೆಬ್‌ಕಾಸ್ಟಿಂಗ್ ಅಳವಡಿಸುವುದು. ಎರಡನೇ ಕ್ರಮ ಸಾಕಷ್ಟು ಟೀಕೆಗೆ ಒಳಗಾದರೂ ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.
ಅಕ್ರಮಗಳನ್ನು ತಡೆಯಲು ತೆಗೆದುಕೊಂಡ ಕ್ರಮಗಳಿಂದಾಗಿ ಫಲಿತಾಂಶ ಕಳೆದ ಬಾರಿಗಿಂತ ಶೇಕಡ 30ರಷ್ಟು ಕುಸಿತವಾಗಿತ್ತು. ಪರೀಕ್ಷೆ ಬರೆದಿದ್ದ 8.59 ಲಕ್ಷ ವಿದ್ಯಾರ್ಥಿಗಳಲ್ಲಿ 3.97 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಇದರಿಂದ ವಿದ್ಯಾರ್ಥಿಗಳ ಮನೋಬಲ ಕುಗ್ಗುವ ಸಾಧ್ಯತೆ ಇದೆ ಎಂದು ಮನಗಂಡ ಶಿಕ್ಷಣ ಇಲಾಖೆ ಕೃಪಾಂಕಗಳ ನಿಯಮಗಳನ್ನು ಬದಲಾಯಿಸಿ, 1.69 ಲಕ್ಷ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿದೆ.
‘ಶಿಕ್ಷಣ ಪೂರೈಸಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿ ಕೆಇಎಸ್ (ಕರ್ನಾಟಕ ಶಿಕ್ಷಣ ಸೇವೆ) ತೇರ್ಗಡೆಯಾಗಿ 1999ರಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಹೋದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವೂ ಆಗಿದ್ದ ಶಾಲೆಯ ಫಲಿತಾಂಶ ಸುತ್ತಲ ಇತರೆ ಶಾಲೆಗಳಿಗಿಂತ ಉತ್ತಮವಾಗಿತ್ತು. ಸಾಮೂಹಿಕ ನಕಲು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂಬ ಮಾಹಿತಿ ಕೇಳಿ ಆಶ್ವರ್ಯದ ಜತೆಗೆ, ಕೋಪವೂ ಬಂದಿತ್ತು. ಕೆಲ ಶಿಕ್ಷಕರ ವಿರೋಧದ ಮಧ್ಯೆಯೂ ಆ ವರ್ಷ ನಕಲು ಮಾಡಿಸಲು ಅವಕಾಶ ಕೊಡಲಿಲ್ಲ. ಅದುವರೆಗೂ ಶೇ 100 ಫಲಿತಾಂಶ ಪಡೆಯುತ್ತಿದ್ದ ಶಾಲೆ ಒಮ್ಮೆಲೇ ಶೇ 49ಕ್ಕೆ ಕುಸಿದಿತ್ತು.
‘ಎರಡು ಮೂರು ವರ್ಷ ಅಧಿಕಾರಿಗಳ ಕಿರಿಕಿರಿ ಸಹಿಸಲ ಸಾಧ್ಯವಾಗಿತ್ತು. ಏಕ ವಚನದ ಪ್ರಯೋಗವನ್ನೂ ಮಾಡಿದ್ದರು. ಪೋಷಕರು ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕಿದ್ದರು. ಆದರೂ, ಎದೆಗುಂದದೆ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ, ಕಠಿಣ ಪರಿಶ್ರಮ ಹಾಗೂ ಪಾಠದ ಗುಣಮಟ್ಟಕ್ಕೆ ಗಮನಕೊಟ್ಟ ಕಾರಣ ಫಲಿತಾಂಶ ಕ್ರಮೇಣ ವೃದ್ಧಿಸಿತು. ಈಗ ಇಲಾಖೆಯೇ ಪಾರದರ್ಶಕ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿರುವುದು ಹೆಮ್ಮೆ ತಂದಿದೆ’ ಎಂದು ಮುಖ್ಯ ಶಿಕ್ಷಕಿಯೊಬ್ಬರು ‘ಪ್ರಜಾವಾಣಿ‘ ಜತೆ ಅನಿಸಿಕೆ ಹಂಚಿಕೊಂಡರು.
‘ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಿಸಲು ಒಪ್ಪದ ಪ್ರಾಮಾಣಿಕ ಶಿಕ್ಷಕರು ಅಥವಾ ಶಿಕ್ಷಕಿಯರನ್ನು ಪರೀಕ್ಷಾ ಕೇಂದ್ರದಿಂದ ಹೊರಗೆ ಕಳುಹಿಸಿ ನಕಲು ಮಾಡಿಸುವ ಪರಿಪಾಟ ಮಂಡ್ಯ ಜಿಲ್ಲೆಯ ಹಲವು ಕಡೆಗಳಲ್ಲಿ ನಡೆಯುತ್ತಿದೆ’ ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.
ವರ್ಷ;ಫಲಿತಾಂಶ (ಶೇಕಡವಾರು)
2018–19; 73.70
2019–20; 71.80
2020–21; 99.99
2021–22; 85.13
2022–23; 83.89
2023–24; 73.40
ಏನಿದು ವೆಬ್‌ಕಾಸ್ಟಿಂಗ್?
ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಹೀಗೆ ಅಳವಡಿಸಿದ ಕ್ಯಾಮೆರಾಗಳ ಐಪಿ ಸಂಖ್ಯೆಗಳನ್ನು (ಇಂಟರ್‌ನೆಟ್ ಪ್ರೋಟೊಕಾಲ್ ನಂಬರ್) ಬಳಸಿಕೊಂಡು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿದ ನಿಯಂತ್ರಣ ಕೊಠಡಿಗಳಲ್ಲಿ ಕುಳಿತು ಅಧಿಕಾರಿಗಳು ಎಲ್ಲ ಕೇಂದ್ರಗಳ ಚಟುವಟಿಕೆ ವೀಕ್ಷಿಸಬಹುದು. ಪರೀಕ್ಷಾ ಅಕ್ರಮ ಕಂಡುಬಂದರೆ ತಕ್ಷಣ ಆ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗುತ್ತದೆ. ಜತೆಗೆ, ಅಕ್ರಮಕ್ಕೆ ಸಹಕರಿಸಿದ ಕೊಠಡಿ ಮೇಲ್ವಿಚಾರಕರ ಮೇಲೆ ಕ್ರಮ ಜರುಗಿಸಲಾಗುತ್ತದೆ.
ವೆಬ್‌ಕಾಸ್ಟಿಂಗ್‌ನತ್ತ ಸಿಬಿಎಸ್‌ಇ ಒಲವು
ಕರ್ನಾಟಕದಲ್ಲಿ 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಳಸಿದ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಸಹ ಒಲವು ತೋರಿದೆ. ಹಾಗೆಯೇ, ಇತರೆ ಹಲವು ರಾಜ್ಯಗಳು ಶಿಕ್ಷಣ ಇಲಾಖೆಯಿಂದ ಮಾಹಿತಿ ಪಡೆದಿವೆ.
ಕೃಪಾಂಕಕ್ಕೂ ಇತಿಶ್ರೀ
ವೆಬ್‌ಕಾಸ್ಟಿಂಗ್‌ನಿಂದ ಫಲಿತಾಂಶದಲ್ಲಾದ ಭಾರಿ ಪ್ರಮಾಣದಲ್ಲಿ ಕುಸಿತ ತಡೆಯಲು ಗರಿಷ್ಠ 20ರವರೆಗೆ ಈ ಬಾರಿ ಕೃಪಾಂಕ ನೀಡಲಾಗಿದೆ. 2024–25ನೇ ಸಾಲಿನಿಂದ ಶಿಕ್ಷಕರು ವಾಮಮಾರ್ಗಗಳನ್ನು ಬಿಟ್ಟು ಗುಣಮಟ್ಟದ ಪಾಠಗಳಿಗೆ ಗಮನ ನೀಡಬೇಕು. ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಹಾಗಾಗಿ, 2025ರ ಪರೀಕ್ಷೆಯಲ್ಲಿ ಕೃಪಾಂಕ ವ್ಯವಸ್ಥೆ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಮೂರು ಪರೀಕ್ಷಾ ಪದ್ಧತಿ ಪರಿಚಯಿಸಲಾಗಿದೆ. ಕಡಿಮೆ ಅಂಕ ಪಡೆದ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಮೂರು ಪರೀಕ್ಷೆ ಬರೆದು ಹೆಚ್ಚು ಅಂಕ ಗಳಿಸಿದ ಅಂಕಪಟ್ಟಿ ಪಡೆಯಬಹುದು. ಶಾಲೆಗಳಲ್ಲೇ ಹೆಚ್ಚುವರಿ ಬೋಧನೆಗೂ ವ್ಯವಸ್ಥೆ ಮಾಡಲಾಗಿದೆ-ರಿತೇಶ್‌ಕುಮಾರ್ ಸಿಂಗ್, ಪ್ರಧಾನ ಕಾರ್ಯದರ್ಶಿ ಶಾಲಾ ಶಿಕ್ಷಣ ಇಲಾಖೆ.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ಮಗ ಎಂಜಿನಿಯರಿಂಗ್‌ನಲ್ಲಿ ವಿಫಲನಾದ. ಪ್ರೌಢಶಾಲೆಯಲ್ಲಿ ಗುಣಮಟ್ಟದ ಪಾಠ ಮಾಡದೇ ನಕಲು ಮಾಡಿಸಿದ್ದರ ಫಲ ಈಗ ಅನುಭವಿಸುತ್ತಿದ್ದೇವೆ. ಮಕ್ಕಳು ಅನುತ್ತೀರ್ಣರಾದರೂ ಪರವಾಗಿಲ್ಲ. ಪಾರದರ್ಶಕ ಪರೀಕ್ಷೆ ನಡೆಸಬೇಕು-ಅನುರಾಗ್, ಪೋಷಕ, ಚಿತ್ರದುರ್ಗ
12 ವರ್ಷಗಳ ಹಿಂದಿನ ಮಾತು. ಕೊಠಡಿಯಲ್ಲಿ ನಡೆಯುತ್ತಿದ್ದ ಸಾಮೂಹಿಕ ನಕಲು ವಿರೋಧಿಸಿದಕ್ಕೆ ಶಿಕ್ಷಕರೇ ಅವಮಾನಿಸಿದ್ದರು. ನಿಯತ್ತಿನಿಂದ ಓದಿದ್ದಕ್ಕೆ ಈಗ ಸರ್ಕಾರಿ ಅಧಿಕಾರಿಯಾಗಿರುವೆ-ಚನ್ನಬಸಪ್ಪ, ಹಳೆಯ ವಿದ್ಯಾರ್ಥಿ, ಕಲಬುರಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.