ADVERTISEMENT

ಕೆಎಎಸ್ ಪ್ರಿಲಿಮ್ಸ್ ಸ್ಪೆಷಲ್: ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ

ಯು.ಟಿ. ಆಯಿಷಾ ಫರ್ಝಾನ
Published 1 ಆಗಸ್ಟ್ 2024, 0:44 IST
Last Updated 1 ಆಗಸ್ಟ್ 2024, 0:44 IST
   

ಮುಂಬರಲಿರುವ ಕೆಎಎಸ್‌ ಪೂರ್ವಭಾವಿ ಪರೀಕ್ಷೆಗೆ ಅವಶ್ಯವಿರುವ ಕೆಲವೊಂದು ಯೋಜನೆಗಳ ಬಗ್ಗೆ ಕಿರು ಮಾಹಿತಿ ನೀಡಲಾಗಿದೆ.

'ಮುಖ್ಯಮಂತ್ರಿ ರೈತ ವಿದ್ಯಾ ನಿಧಿ' 

ಉನ್ನತ ಶಿಕ್ಷಣ ಪಡೆಯುವಂತೆ ರೈತ ಮಕ್ಕಳನ್ನು ಪ್ರೋತ್ಸಾಹಿಸಲು 'ಮುಖ್ಯಮಂತ್ರಿ ರೈತ ವಿದ್ಯಾ ನಿಧಿ'  ಪರಿಚಯಗೊಂಡಿದೆ. ಇದರ ಮೂಲಕ 8, 9 ಮತ್ತು 10ನೇ ತರಗತಿಗಳಲ್ಲಿ ಓದುತ್ತಿರುವ ರೈತ ಕುಟುಂಬಗಳ ಹೆಣ್ಣುಮಕ್ಕಳಿಗೆ ಮತ್ತು 10ನೇ ತರಗತಿ  ಪೂರ್ಣಗೊಳಿಸಿದ ಮತ್ತು ರಾಜ್ಯದ ಯಾವುದೇ ನೋಂದಾಯಿತ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಕೋರ್ಸ್‌ಗಳಿಗೆ ದಾಖಲಾದ ರೈತ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಈ ವಿದ್ಯಾರ್ಥಿ ವೇತನವನ್ನು ನೇರ ಲಾಭ ವರ್ಗಾವಣೆ ಮೂಲಕ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. 

2022-23ರ ಸಾಲಿನಲ್ಲಿ 11,86,885 ವಿದ್ಯಾರ್ಥಿಗಳಿಗೆ ಡಿಬಿಟಿ ಮೂಲಕ ₹ 578.57 ಕೋಟಿ  ವರ್ಗಾಯಿಸಲಾಗಿದೆ. ಹೆಚ್ಚುವರಿಯಾಗಿ 2022-23ನೇ ಶೈಕ್ಷಣಿಕ ವರ್ಷದಿಂದ ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಮುಖ್ಯಮಂತ್ರಿ ರೈತ ವಿದ್ಯಾ ನಿಧಿ ಕಾರ್ಯಕ್ರಮವನ್ನು ವಿಸ್ತರಿಸಲಾಗಿದೆ. ಈ ವಿಸ್ತರಣೆಯ ಅಡಿಯಲ್ಲಿ 60,938 ವಿದ್ಯಾರ್ಥಿಗಳಿಗೆ ಒಟ್ಟು₹19.67 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ. ರೈತ ವಿದ್ಯಾ ನಿಧಿ ಕಾರ್ಯಕ್ರಮದ ಅನುಷ್ಠಾನವು 2023-24ನೇ ಹಣಕಾಸು ವರ್ಷಕ್ಕೆ ಮುಂದುವರಿಯುತ್ತಿದೆ.

ADVERTISEMENT
ಕುರುಬರ ಸುರಕ್ಷಾ ಯೋಜನೆ/ಕುರುಬರಿಗೆ ಅನುಗ್ರಹ ಕೊಡುಗೆ

 20ನೇ ಜಾನುವಾರು ಗಣತಿಯ ಪ್ರಕಾರ ರಾಜ್ಯದಲ್ಲಿ 110.51 ಲಕ್ಷ ಕುರಿಗಳು ಮತ್ತು 61.69 ಲಕ್ಷ ಮೇಕೆಗಳಿವೆ. ರಾಜ್ಯ ಸರ್ಕಾರವು ಕುರುಬರಿಗೆ ಕುರುಬರ ಸುರಕ್ಷಾ ಯೋಜನೆ/ಅನುಗ್ರಹ ಕೊಡುಗೆ ಯೋಜನೆ ಜಾರಿಗೊಳಿಸಿದ್ದು, ಆಕಸ್ಮಿಕವಾಗಿ ಕುರಿ, ಮೇಕೆಗಳು ಮೃತಪಟ್ಟರೆ ಈ ಯೋಜನೆಯ ಮೂಲಕ ಪರಿಹಾರ ನೀಡಲಾಗುತ್ತಿದೆ.

6 ತಿಂಗಳ ಮೇಲ್ಪಟ್ಟ ಕುರಿ ಮತ್ತು ಮೇಕೆಗಳು ಮೃತಪಟ್ಟರೆ ತಲಾ ₹5,000  ಪಾವತಿಸಲಾಗುತ್ತದೆ ಮತ್ತು 3 ರಿಂದ 6 ತಿಂಗಳ ನಡುವಿನ ವಯಸ್ಸಿನ ಕುರಿ ಮತ್ತು ಮೇಕೆಗಳಿಗೆ ₹ 3,500 ಪಾವತಿಸಲಾಗುತ್ತದೆ.

ಸಸ್ಯಸಿರಿ

ರೈತರು ಮತ್ತು ನಾಗರಿಕರಿಗೆ ನೆರವಾಗಲೆಂದು ಸಸ್ಯಸಿರಿ (ಇ-ಪೋರ್ಟಲ್) ಹೊಸ ವೆಬ್‌ಸೈಟ್ ಲೋಕಾರ್ಪಣೆಗೊಳಿಸಲಾಗಿದೆ. ತೋಟಗಳು ಮತ್ತು ನರ್ಸರಿಗಳಲ್ಲಿ ಲಭ್ಯವಾಗುವ ಕಸಿಗಳು, ಮೊಳಕೆ ಸಸಿಗಳು ಮತ್ತು ಜೈವಿಕ ಗೊಬ್ಬರಗಳ ಲಭ್ಯತೆಯ ಬಗ್ಗೆ ಮಾಹಿತಿ ನೀಡುತ್ತದೆ ಈ ವೆಬ್‌ಸೈಟ್‌. 

ರೈತ ಸಿರಿ ಯೋಜನೆ

ರಾಜ್ಯದಲ್ಲಿ ಸಿರಿಧಾನ್ಯ ಕೃಷಿಯನ್ನು ಉತ್ತೇಜಿಸಲು ರೈತ ಸಿರಿ ಯೋಜನೆಯು ಸಾವಯವ ಮತ್ತು ಸಾಂಪ್ರದಾಯಿಕವಾಗಿ ಬೆಳೆದ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತದೆ.

 ಬೆಳೆ ಸಮೀಕ್ಷೆಯ ಆಧಾರದ ಮೇಲೆ, ಈ ಕಿರುಧಾನ್ಯಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ಪ್ರತಿ ಹೆಕ್ಟೇರ್‌ಗೆ ₹ 10,000 ನೇರ ಲಾಭ ವರ್ಗಾವಣೆ (DBT) ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಯೋಜನೆಯು 2023-24 ರಲ್ಲಿಯೂ ಮುಂದುವರಿಯುತ್ತದೆ.

  • ಹೆಚ್ಚುವರಿಯಾಗಿ, ಸಿರಿಧಾನ್ಯಗಳ ಸಂಸ್ಕರಣೆ, ಗ್ರೇಡಿಂಗ್, ಮೌಲ್ಯವರ್ಧನೆ, ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಅನ್ನು ಉತ್ತೇಜಿಸಲು ಸಿರಿಧಾನ್ಯಸಂಸ್ಕರಣಾ ಯಂತ್ರಗಳಿಗೆ ಶೇ 50 ಸಬ್ಸಿಡಿ ಅಥವಾ ಗರಿಷ್ಠ ₹ 10 ಲಕ್ಷ ರೂಪಾಯಿ ಒದಗಿಸಲಾಗುತ್ತದೆ.  2023-24ರ ಅವಧಿಯಲ್ಲಿ 46,736 ಹೆಕ್ಟೇರ್ ಪ್ರದೇಶದಲ್ಲಿ 45,715 ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ.

  • ಸಿರಿಧಾನ್ಯಗಳು ಹಳೆಯ ಆಹಾರಗಳಲ್ಲಿ ಒಂದಾಗಿದೆ. ಸಿಂಧೂ ಕಣಿವೆ ನಾಗರಿಕತೆಯ ಅವಧಿಯಲ್ಲಿ ಅವುಗಳ ಬಳಕೆಯನ್ನು ಸೂಚಿಸುವ ಹಲವು ಪುರಾವೆಗಳು ಲಭ್ಯವಾಗಿದ್ದು ಭಾರತದಲ್ಲಿ ಬೆಳೆಯುತ್ತಿದ್ದ ಪ್ರಾರಂಭದ ಬೆಳೆಗಳಲ್ಲಿ ಸಿರಿಧಾನ್ಯಗಳು ಸೇರಿವೆ. ರಾಗಿ, ಜೋಳ, ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಅರ್ಕ ಮತ್ತು ಕೊರಲೆ ನಮ್ಮ ರಾಜ್ಯದಲ್ಲಿ ಬೆಳೆಯುವ ಸಿರಿಧಾನ್ಯಗಳಾಗಿವೆ.

ಪುಣ್ಯಕೋಟಿ ದತ್ತು ಯೋಜನೆ

ಡಿಸೆಂಬರ್ 2023ರ ಅಂತ್ಯದ ವೇಳೆಗೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ನಿರ್ವಹಿಸುವ ಪುಣ್ಯಕೋಟಿ ದತ್ತು ಯೋಜನೆಯು, ವೆಬ್ ಪೋರ್ಟಲ್ www.punyakoti.karahvs.in ಮೂಲಕ 209 ನೋಂದಾಯಿತ ಗೋಶಾಲೆಗಳಿಂದ ಒಟ್ಟು 2075 ಜಾನುವಾರುಗಳನ್ನು ದತ್ತು ಪಡೆದಿದೆ.

  • ಪ್ರತಿ ಜಾನುವಾರನ್ನು ದತ್ತು ಪಡೆಯಲು ವರ್ಷಕ್ಕೆ ₹ 11,000   ನೀಡಬೇಕಾಗುತ್ತದೆ ಹಾಗೂ ಈ ಸಲುವಾಗಿ ನೀಡಲ್ಪಟ್ಟ ಒಟ್ಟು ದೇಣಿಗೆ ಮೊತ್ತ ₹ 228.25 ಲಕ್ಷ. ಈ ದೇಣಿಗೆಯ ಮೊತ್ತದಲ್ಲಿ ದತ್ತು ಪಡೆದ ಜಾನುವಾರುಗಳನ್ನು ಒಂದು ವರ್ಷದ ಅವಧಿಗೆ ನೋಡಿಕೊಳ್ಳಬಹುದು.

ರಾಜ್ಯದ ಒಟ್ಟು ದೇಶೀಯ ಉತ್ಪನ್ನದಲ್ಲಿ (GSDP) ಪಶುಸಂಗೋಪನೆಯ ಪಾಲು ಶೇ 3.78%. 2022-23ರಲ್ಲಿ ಹಸು ಮತ್ತು ಎಮ್ಮೆ ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕವು ಭಾರತದ ರಾಜ್ಯಗಳಲ್ಲಿ ಹಾಲು ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲಿದೆ ಹಾಗೂ ಈ ಅವಧಿಯಲ್ಲಿ ಒಟ್ಟು 12.83 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದನೆಯಾಗಿದೆ.

ಸಮಗ್ರ ಗೋ ಸಂಕುಲ ಸಮೃದ್ಧಿ ಯೋಜನೆ
  • ‘ಸಮಗ್ರ ಗೋ ಸಂಕುಲ ಸಮೃದ್ಧಿ ಯೋಜನೆ’ಯು ಗಿರ್, ಸಾಹಿವಾಲ್, ಓಂಗೋಲ್, ಥಾರ್‌ಪಾರ್ಕರ್ ಮತ್ತು ದೇವನಿಯಂತಹ ಸ್ಥಳೀಯ ತಳಿಯ ಜಾನುವಾರುಗಳನ್ನು ಅಭಿವೃದ್ಧಿಪಡಿಸಲು ರೂಪುಗೊಳಿಸಲಾದ ಕಾರ್ಯಕ್ರಮವಾಗಿದೆ.

  • ಈ ಕಾರ್ಯಕ್ರಮವು ವೀರ್ಯ ಉತ್ಪಾದನೆಗಾಗಿ ಇಲಾಖೆಯ ಘನೀಕೃತ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ತಳಿ ಸಂತಾನೋತ್ಪತ್ತಿಗಾಗಿ ಉತ್ತಮ ಗುಣಮಟ್ಟದ ರಾಸುಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಮತ್ತು ಅವುಗಳನ್ನು ರಾಜ್ಯದ ಆಸಕ್ತ ರೈತರಿಗೆ ಪರಿಚಯಿಸುತ್ತದೆ.

  • 2023-24 ರ ಆರ್ಥಿಕ ವರ್ಷದಲ್ಲಿ, ನವೆಂಬರ್ 2023 ರವರೆಗೆ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ 1 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ರೂ. 78.72 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ.

'ಗ್ರಾಮೀಣ ನಾವೀನ್ಯ ನಿಧಿ'

ರಾಜ್ಯ ಸರ್ಕಾರವು 'ಎಲಿವೇಟ್ ಕರ್ನಾಟಕ' ಮಾದರಿಯಿಂದ ಪ್ರೇರಣೆಗೊಂಡು, ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಪ್ರಭಾವ ಬೀರುವ ಆವಿಷ್ಕಾರಗಳನ್ನು ಉತ್ತೇಜಿಸುವ ಉದ್ದೇಶದಿಂದ 'ಗ್ರಾಮೀಣ ನಾವೀನ್ಯನಿಧಿ'ಯನ್ನು ಪ್ರಾರಂಭಿಸಿದೆ. ಈ ನಿಧಿಯು ನವೀನ ಪರಿಹಾರಗಳ ಮೂಲಕ ಗ್ರಾಮೀಣ ಸಮುದಾಯಗಳಿಗೆ ವಿಶೇಷ ಅಭಿವೃದ್ಧಿ ಪ್ರಯೋಜನಗಳನ್ನು ತರುವ ಯೋಜನೆಗಳು ಮತ್ತು ಯೋಜನೆಗಳನ್ನು ಪ್ರೋತ್ಸಾಹಿಸುತ್ತದೆ.

  • ಶುದ್ಧ ಕುಡಿಯುವ ನೀರು ಮತ್ತು ರಸ್ತೆಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯಂತಹ ಗ್ರಾಮೀಣ ಸವಾಲುಗಳನ್ನು ಎದುರಿಸುವ ಸ್ಟಾರ್ಟ್‌ಅಪ್‌ಗಳು ಈ ಉದ್ದೇಶಿತ ನಿಧಿಯಿಂದ ₹ 5 ಕೋಟಿ  ಪಡೆಯಬಹುದು.

  • ಗ್ರಾಮೀಣ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಂತಹ ಕ್ಷಿಪ್ರವಾಗಿ ಮುಂದುವರಿದ ತಂತ್ರಜ್ಞಾನ ಕ್ಷೇತ್ರಗಳನ್ನು ಈ ಯೋಜನೆಯು ಬೆಂಬಲಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.