ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ: ಕೇರಳದ ರಾಮ್‌ಸರ್ ತಾಣಗಳ ಬಗ್ಗೆ ಮಾಹಿತಿ

ಜೌಗು ಪ್ರದೇಶ ಕಲುಷಿತ, ಕೇರಳ ಸರ್ಕಾರಕ್ಕೆ ದಂಡ

ಆಯೆಷಾ ಟಿ ಫರ್ಜಾನ
Published 12 ಏಪ್ರಿಲ್ 2023, 23:00 IST
Last Updated 12 ಏಪ್ರಿಲ್ 2023, 23:00 IST
Fishing boats are docked in the Ashtamudi lake
Fishing boats are docked in the Ashtamudi lake   

ಕೇ ರಳದ ವೆಂಬನಾಡ್ ಮತ್ತು ಅಷ್ಟಮುಡಿ ಸರೋವರಗಳು ರಾಮ್‌ಸರ್ ವೆಟ್‌ಲ್ಯಾಂಡ್ಸ್‌(ಜೌಗು ಪ್ರದೇಶ ಅಥವಾ ತರಿಭೂಮಿ) ಎಂಬ ಮನ್ನಣೆಗೆ ಪಾತ್ರವಾಗಿವೆ. ಈ ಜೌಗುಪ್ರದೇಶಗಳನ್ನು ರಕ್ಷಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (NGT), ಕೇರಳ ಸರ್ಕಾರಕ್ಕೆ ₹10 ಕೋಟಿ ರೂಪಾಯಿ ದಂಡ ವಿಧಿಸಿದೆ. ತ್ಯಾಜ್ಯಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಮನೆ ತ್ಯಾಜ್ಯಗಳು ಮತ್ತು ಕಸಾಯಿಖಾನೆ ತ್ಯಾಜ್ಯವನ್ನು ನದಿಗೆ ಎಸೆಯುತ್ತಿರುವ ಕಾರಣ, ಮೇಲೆ ಉಲ್ಲೇಖಿಸಿರುವ ಎರಡೂ ಜೌಗುಪ್ರದೇಶಗಳು ಕಲುಷಿತಗೊಂಡಿವೆ ಎನ್ನುವುದು ಕೇರಳ ಸರಕಾರದ ಮೇಲಿನ ಅಪಾದನೆಯಾಗಿದೆ. ಈ ರಾಮ್‌ಸರ್ ವೆಟ್‌ಲ್ಯಾಂಡ್ಸ್‌ ಪಟ್ಟಿಯಲ್ಲಿರುವ ಎರಡು ಸರೋವರಗಳ ವೈಶಿಷ್ಟ್ಯ ಏನು? ಈ ಕುರಿತ ವಿವರ ಇಲ್ಲಿದೆ.

ವೆಂಬನಾಡ್ ಸರೋವರ

l ಇದು ಕೇರಳದ ಅತಿ ದೊಡ್ಡ ಜೌಗು ಭೂ ಪ್ರದೇಶ. ಪಶ್ಚಿಮ ಬಂಗಾಳದ ಸುಂದರ್‌ಬನದ ನಂತರ ದೇಶದಲ್ಲೇ ಎರಡನೇ ಅತಿ ದೊಡ್ಡ ಜೌಗು ಭೂ ಪ್ರದೇಶವಾಗಿದೆ.

ADVERTISEMENT

l ಸುಮಾರು 10 ನದಿಗಳು ಕೂಡಿಕೊಂಡು ವೆಂಬನಾಡ್ ಸರೋವರ ರೂಪುಗೊಂಡಿದೆ.

l ಇವುಗಳಲ್ಲಿ, ನಾಲ್ಕು ನದಿಗಳು (ಮೀನಚಿಲ್, ಮಣಿಮಾಲಾ, ಪಂಪಾ ಮತ್ತು ಅಚನ್‌ಕೋಯಿಲ್) ವೆಂಬನಾಡ್ ಸರೋವರವನ್ನು ಸಮೃದ್ಧಗೊಳಿಸುವಲ್ಲಿ ತಮ್ಮದೇ ಆದ ವಿಶೇಷ ಪಾತ್ರವಹಿಸಿವೆ.

l ಇದು ತಣ್ಣೀರ್ ಮುಕ್ಕಂ ಬಂಡ್‌ನಿಂದ ಅಲಪ್ಪುಳದವರೆಗೆ ಸುಮಾರು 60 ಕಿ.ಮೀಗಳಷ್ಟು ಚಾಚಿಕೊಂಡಿದೆ.

l ವೆಂಬನಾಡ್ ಸರೋವರದಲ್ಲಿ ಪ್ರತಿ ವರ್ಷ ಆಗಸ್ಟ್‌ ತಿಂಗಳಿನಲ್ಲಿ ನಡೆಯುವ ವೆಲ್ಲಂ ಕಳಿ (ನೆಹರೂ ಟ್ರೋಫಿ ಬೋಟ್ ರೇಸ್)ಸ್ಪರ್ಧೆಯು ಹಾವಿನಂತೆ ಉದ್ದವಾಗಿರುವ ದೋಣಿ ಸ್ಪರ್ಧೆ(Snake boat race)ಯಾಗಿದೆ. ವೆಲ್ಲಂ ಎಂದರೆ ಮಲಯಾಳಂ ಭಾಷೆಯಲ್ಲಿ ನೀರು ಎಂದರ್ಥ.

l ಕೊಮಾರಕಮ್‌ ಪಕ್ಷಿಧಾಮವು ವೆಂಬನಾಡ್ ಸರೋವರದ ದಡದಲ್ಲಿದ್ದು ಇದನ್ನು 2002ರಲ್ಲಿ ಅಂತರರಾಷ್ಟ್ರೀಯ ರಾಮ್ಸರ್‌ ಸೈಟ್(ಜೌಗುತಾಣ) ಎಂದು ಘೋಷಿಸಲಾಯಿತು.

l ವೆಂಬನಾಡ್ - ಕೋಲ್ ಪ್ರದೇಶವು ಮ್ಯಾಂಗ್ರೋವ್‌ ಕಾಡುಗಳು, ವಿವಿಧ ಜಾತಿಯ ಪಕ್ಷಿಗಳು, ಮೀನುಗಳು, ಸರೀಸೃಪಗಳು ಮತ್ತು ಉಭಯಚರಗಳು ಸೇರಿದಂತೆ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ನೆಲೆವೀಡಾಗಿದೆ.

lಈ ಸರೋವರದಲ್ಲಿ ಸುಮಾರು 150 ಜಾತಿಯ ಮೀನುಗಳಿವೆ. ಸರೋವರದ ನದಿಮುಖದ ಸ್ವರೂಪವು ಸಮೃದ್ಧ ಜೌಗು ತಾಣಗಳಿಂದ ಕೂಡಿದ್ದು ಸಿಗಡಿಗಳಿಗೆ ಉತ್ತಮ ಆವಾಸಸ್ಥಾನವಾಗಿದೆ.

l ಮಲ್ಲೆಟ್ ಮೀನು, ಕ್ಯಾಟ್ ಫಿಶ್ ಮತ್ತು ಪರ್ಲ್ ಫಿಶ್ ಕೂಡ ಇಲ್ಲಿ ಹೇರಳವಾಗಿ ಸಿಗುತ್ತವೆ. ಸಿಹಿನೀರಿನ ಸಿಗಡಿಗಳು, ಕಾಟ್ಲಾ, ರೋಹು (ಲ್ಯಾಬಿಯೋ ರೋಹಿತಾ) ಮತ್ತು ನಂದನ್ (ಅಂಬಾಸಿಸ್ ಥಾಮಸಿ)ಮುಂತಾದವು ಇಲ್ಲಿ ಕಂಡುಬರುವ ವಾಣಿಜ್ಯ ಮೌಲ್ಯದ ಇತರ ಕೆಲವು ಮೀನುಗಳಾಗಿವೆ.

l ವೆಂಬನಾಡ್ ಸರೋವರದಲ್ಲಿ ನಡೆಯುವ ಸುಣ್ಣದ ಚಿಪ್ಪಿನ ಮೀನುಗಾರಿಕೆಯು ಜನಪ್ರಿಯ ಮತ್ಸ್ಯ ಉದ್ದಿಮೆಯಾಗಿದೆ ಇಲ್ಲಿ ಆಳವಿಲ್ಲದ ನೀರಿನಲ್ಲಿ ಹೇರಳವಾಗಿರುವ ಕಪ್ಪು ಕ್ಲಾಮ್ (ವಿಲ್ಲೋರಿಟಾ ಸೈಪ್ರಿನಾಯ್ಡ್ಸ್) ಗಳು ದೊರೆಯುವುದರಿಂದ, ‌ಈ ಪ್ರದೇಶ ಪ್ರಸ್ತುತ ಸುಣ್ಣದ ಚಿಪ್ಪಿನ ಮೀನುಗಾರಿಕೆಯು ಬೃಹತ್ ಉದ್ದಿಮೆಯಾಗಿ ಬೆಳೆದುನಿಂತಿದೆ.

l ಈ ಚಿಪ್ಪುಗಳನ್ನು ಸಿಮೆಂಟ್, ರಸಗೊಬ್ಬರಗಳು ಮತ್ತು ಔಷಧೀಯ ಉತ್ಪಾದನೆಗೆ ಕಚ್ಛಾ ವಸ್ತುವಾಗಿ ಬಳಸಲಾಗುತ್ತದೆ.

l ವೆಂಬನಾಡ್ ಪರಿಸರದ ಮೇಲೆ ನಡೆದ ಬೃಹತ್ ಅತಿಕ್ರಮಣ ಮತ್ತು ವಿನಾಶದಿಂದ ಸರೋವರದ ನೀರಿನ ಧಾರಣಾ ಸಾಮರ್ಥ್ಯ 120 ವರ್ಷಗಳಲ್ಲಿ ಶೇ 85ರಷ್ಟು ಕಡಿಮೆಯಾಗಿದೆ.

ಅಷ್ಟಮುಡಿ ಸರೋವರ

l ಇದು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿದೆ.

l ಇದು ಕೇರಳದ ಪ್ರಸಿದ್ಧ ಹಿನ್ನೀರು ಪ್ರದೇಶಗಳ ಪ್ರವೇಶ ದ್ವಾರವಾಗಿದೆ. ಇಲ್ಲಿರುವ ಹೌಸ್‌ಬೋಟ್ ಸವಾರಿಗಳು
ದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಅತ್ಯಂತ ಪ್ರಸಿದ್ಧ ವಿಹಾರತಾಣವಾಗಿದೆ.

l ಸರೋವರವು 61 ಚದರ ಕಿಲೋಮೀಟರ್ ವಿಸ್ತೀರ್ಣವಿದೆ. ಎಂಟು ಶಾಖೆಗಳು ಅಥವಾ ಕಾಲುವೆಗಳನ್ನು ಹೊಂದಿರುವ ಕಾರಣ ಇದಕ್ಕೆ ಅಷ್ಟಮುಡಿ ಎಂದು ಹೆಸರಿಸಲಾಗಿದೆ.

l ಆಗಸ್ಟ್ 19, 2002 ರಂದು ರಾಮ್‌ಸರ್ ಕನ್ವೆನ್ಷನ್ ಅಡಿ ಈ ಸರೋವರವನ್ನು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶವೆಂದು ಘೋಷಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.