ಕಿಡ್ನಿ ಅಥವಾ ಮೂತ್ರಪಿಂಡ ದೇಹದಲ್ಲಿ ಹರಿಯುವ ರಕ್ತವನ್ನು ಶುದ್ಧೀಕರಿಸಿ ವಿಷಕಾರಿ ಅಂಶಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಹೀಗಾಗಿ ಕಿಡ್ನಿ ಆರೋಗ್ಯವಾಗಿದ್ದರೆ ಮಾತ್ರ, ದೇಹ ಆರೋಗ್ಯವಾಗಿರುತ್ತದೆ.
ಕಿಡ್ನಿ ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಕ್ರಮ ಸರಿ ಇರಬೇಕು. ಜೀವನ ಶೈಲಿಯೂ ಸಮರ್ಪಕವಾಗಿರಬೇಕು. ಪರಿಶುದ್ಧ, ಪೌಷ್ಟಿಕ ಆಹಾರದ ಜತೆಗೆ ನಿತ್ಯ ವ್ಯಾಯಾಮ ಅಗತ್ಯ. ಇವೆರಡನ್ನೂ ಸರಿಯಾಗಿ ಪಾಲಿಸದ ಕಾರಣ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ಬಳಲಿಕೆಯ ಪ್ರಮಾಣದಲ್ಲಿ ನಗರದವರ ಪಾಲು ಹೆಚ್ಚು ಎನ್ನಲಾಗುತ್ತಿದೆ.
ಕಿಡ್ನಿಯ ಕಾರ್ಯವೈಖರಿ: ಸ್ನಾಯುಖಂಡಗಳ ಸಂಚಲನದಿಂದ ಉಂಟಾಗುವ ಅನಗತ್ಯವಾದ ‘ಕ್ರಿಯಾಟೆನಿನ್’ ಎಂಬ ಅಂಶವನ್ನು ರಕ್ತಕ್ಕೆ ಸೇರದಂತೆ ಕಿಡ್ನಿ ತನ್ನ ಕಾರ್ಯದಕ್ಷತೆಯಿಂದ ಮೂತ್ರದ ಮುಖಾಂತರ ಹೊರಹಾಕುತ್ತದೆ. ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ರಕ್ತದಲ್ಲಿ ಈ ‘ಕ್ರಿಯಾಟೆನಿನ್’ ಅಂಶ ಜಾಸ್ತಿಯಾಗಿ ದೇಹದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ದೇಹದಲ್ಲಿನ ವಿವಿಧ ಜೀವಕೋಶಗಳ ಕ್ರಿಯೆಯಿಂದಾಗಿ ಉತ್ಪತಿಯಾಗುವ ಯೂರಿಯಾ, ನೈಟ್ರೋಜನ್ ಮತ್ತು ಯೂರಿಕ್ ಆ್ಯಸಿಡ್ ಮತ್ತಿತರ ಕಲ್ಮಶಗಳನ್ನು ಮೂತ್ರದ ಮುಖಾಂತರ ಹೊರಹಾಕಿ ದೇಹದ ಆರೋಗ್ಯ ಕಾಪಾಡುತ್ತದೆ.
ರೋಗದ ಲಕ್ಷಣಗಳು
ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ದೇಹದಲ್ಲಿ ಕಲ್ಮಶಗಳು ಹೆಚ್ಚಾಗಿ ಬೇಗನೆ ಸುಸ್ತಾಗುತ್ತದೆ. ಹಸಿವಿಲ್ಲದಿರುವುದು, ಕೆಲಸದಲ್ಲಿ ಏಕಾಗ್ರತೆ ಕೊರತೆ, ಬೆಳಗ್ಗಿನ ಹೊತ್ತುಮೊಣಕಾಲು, ಮುಖ ಊದಿಕೊಳ್ಳುತ್ತವೆ. ಮೂತ್ರದಲ್ಲಿ ರಕ್ತ ಒಸರುವುದು, ಮೂತ್ರದ ಬಣ್ಣ ಹೆಚ್ಚು ದಪ್ಪವಾಗುವುದು ಮೂತ್ರದಲ್ಲಿ ಅಲ್ಬುಮಿನ್ ಎಂಬ ಪ್ರೋಟಿನ್ ಅಂಶ ಹೆಚ್ಚಾಗುವ ಪ್ರಮುಖ ಲಕ್ಷಣಗಳು.
ಇದರ ಜತೆಗೆ, ನೊರೆಯುಕ್ತ ಮೂತ್ರ, ಮೂತ್ರದ ಪ್ರಮಾಣ ಕಡಿಮೆಯಾಗುವುದು, ರಾತ್ರಿ ಹೊತ್ತು ಹೆಚ್ಚು ಮೂತ್ರ ಬರುವುದು ಮತ್ತು ಪದೇ ಪದೇ ಮೂತ್ರ ಮಾಡುವುದು, ಹೊಟ್ಟೆಯ ಸುತ್ತ ಹಾಗೂ ಕಿಬ್ಬೊಟ್ಟೆಯ ಬಳಿ ನೋವು, ನಿದ್ರಾಹೀನತೆ, ತಲೆನೋವು, ಉಸಿರಾಟದಲ್ಲಿ ಏರುಪೇರು, ಅಧಿಕ ರಕ್ತದೊತ್ತಡ, ವಾಕರಿಕೆ, ವಾಂತಿ, ಬಾಯಿಯಲ್ಲಿ ವಿಪರೀತ ವಾಸನೆ ಮತ್ತು ಬಾಯಿ ಒಣಗಿದಂತಾಗುವುದು ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ನಿಮ್ಮ ಹೊಟ್ಟೆಯ ಎಡಭಾಗದಲ್ಲಿ ಅಥವಾ ಬಲಕ್ಕೆ ನೀವು ಅಸಹನೀಯ ನೋವು ಕಾಣಿಸುತ್ತಿದ್ದರೆ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇದು ಮೂತ್ರಪಿಂಡದ ಸಮಸ್ಯೆಯಿಂದ ಉಂಟಾಗಿರುವ ಹೊಟ್ಟೆ ನೋವು ಆಗಿರುವ ಸಾಧ್ಯತೆಯಿದೆ.
ಸಾಮಾನ್ಯವಾಗಿ ಕಿಡ್ನಿ ಸಂಬಂಧಿ ರೋಗಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯುವುದು ಕಷ್ಟವಾಗಬಹುದು. ರೋಗದ ತೀವ್ರತೆ ಹೆಚ್ಚಿದಂತೆಲ್ಲ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳಬಹುದು.
ರೋಗ ನಿಯಂತ್ರಣ ಹೇಗೆ?
* ನಿತ್ಯ ಮುಂಜಾನೆ ಜಾಗಿಂಗ್ (ರನ್ನಿಂಗ್), ಬಿರುಸುನಡಿಗೆ, ಸೈಕಲಿಂಗ್ ಅಭ್ಯಾಸದಂತಹ ದೈಹಿಕ ಕಸರತ್ತುಗಳಿಂದ ರಕ್ತದೊತ್ತಡವನ್ನು ಕಡಿಮೆ ಮಾಡಿ ಮೂತ್ರಪಿಂಡವನ್ನು ಕ್ರಿಯಾಶೀಲವಾಗಿರಿಸಬಹುದು.
* ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿ ಡಯಾಬಿಟಿಸ್‌ನಿಂದ ಮುಕ್ತವಾದಲ್ಲಿ ಕಿಡ್ನಿಯ ಸಮಸ್ಯೆಗಳು ಖಂಡಿತವಾಗಿ ಬರಲಾರದು. ದಿನಕ್ಕೆ ಏನಿಲ್ಲವೆಂದರೂ 3 ರಿಂದ 4ಲೀಟರ್ ನೀರು ಸೇವಿಸಿದ್ದಲ್ಲಿ ಕಿಡ್ನಿಯಲ್ಲಿನ ಲವಣಾಂಶ ಮತ್ತು ವಿಷಕಾರಕ ತ್ಯಾಜ್ಯಗಳು ಮೂತ್ರದೊಂದಿಗೆ ಹೊರಹೋಗುತ್ತದೆ, ಕಿಡ್ನಿಯು ಕ್ರಿಯಾಶೀಲವಾಗಿ ರುತ್ತದೆ. ನೀರಿನ ಅಥವಾ ದ್ರವ ಆಹಾರದ ಅಂಶ ಕಡಿಮೆಯಾದಂತೆ ‘ಕಿಡ್ನಿ ಸ್ಟೋನ್‘ ಸಮಸ್ಯೆ ತಲೆದೋರುವ ಸಾಧ್ಯತೆ ಇರುತ್ತದೆ.
* ಧೂಮಪಾನ, ಮಧ್ಯಪಾನದಿಂದ ದೂರವಿರುವುದು. ಇದರಿಂದ ಕಿಡ್ನಿ ಅಷ್ಟೇ ಅಲ್ಲ, ದೇಹದ ಎಲ್ಲಾ ಅಂಗಾಗಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.
* ಹೆಚ್ಚಿನ ರೋಗಗಳು ದೇಹದ ತೂಕ, ಜೀವನಶೈಲಿ, ಆಹಾರ ಪದ್ಧತಿಯ ಏರುಪೇರಿನಿಂದಾಗಿಯೇ ಬರುತ್ತವೆ. ದೇಹದ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕವನ್ನು (Bod Mass Index - BMI) ಇಟ್ಟುಕೊಂಡಲ್ಲಿ ಹೆಚ್ಚಿನ ರೋಗಗಳನ್ನು ತಡೆಯಬಹುದು.
* ವೈದ್ಯರ ಸಲಹೆ ಇಲ್ಲದೆ ಮನಸ್ಸಿಗೆ ತೋಚಿದ ಔಷಧಿ ಸೇವಿಸಬಾರದು. ಅತಿಯಾದ ನೋವು ನಿವಾರಕ ಔಷಧಗಳ ಸೇವನೆ ಕಿಡ್ನಿ ಮತ್ತು ಲಿವರ್ ಆರೋಗ್ಯಕ್ಕೆ ಮಾರಕ. ಇವುಗಳ ಬಗ್ಗೆಯೂ ಎಚ್ಚರವಿರಲಿ.
ಆರೋಗ್ಯಕ್ಕಾಗಿ ನೃತ್ಯಮಾಡಿ
‘ಕಿಡ್ನಿಯಿಂದ ಎಲ್ಲರ ಆರೋಗ್ಯ’ ಎಂಬ ವಿಷಯದ ಮೇಲೆ ಈ ವರ್ಷದ ವಿಶ್ವ ಮೂತ್ರಪಿಂಡ ದಿನವನ್ನು ಮುಡಿಪಾಗಿಡಲಾಗಿದೆ. ಏರೊಬಿಕ್ಸ್ ಹಾಗೂ ಯೋಗ ಶಿಕ್ಷಕಿ ರೇಖಾ ನವೀನ್ ಹೇಳುವಂತೆಒಂದೊಂದು ಅಂಗಾಗಕ್ಕೂ ಒಂದೊಂದು ಭಂಗಿಯ ನೃತ್ಯ ಹಾಗೂ ಯೋಗಾಸನವಿದೆಯಂತೆ.
‘ನಿಯಮಿತವಾಗಿ ನೃತ್ಯ ಮಾಡುತ್ತಿದ್ದರೆ ಕಿಡ್ನಿ ಸಮಸ್ಯೆಯಿಂದ ದೂರವಿರಬಹುದು. ಏರೊಬಿಕ್ಸ್ ಹಾಗೂ ನೃತ್ಯದಿಂದ ಹೊಟ್ಟೆ ಕೆಳಭಾಗದ ಅಂಗಾಂಗಗಳಿಗೆ ಉತ್ತಮ ವ್ಯಾಯಾಮವಾಗುತ್ತದೆ, ಇದು ಅವಗಳ ಕಾರ್ಯಕ್ಷಮತೆ ಹೆಚ್ಚಿಸುತ್ತದೆ’ ಎನ್ನುತ್ತಾರೆ.
ಹಸುಗೂಸಿಗೆ ಉಪ್ಪು ಬೇಡ..
ಹಾಲು ಕುಡಿಯುವ ಕಂದನಿಗೂ ಕಿಡ್ನಿ ಸಮಸ್ಯೆ ಆಗುವ ಅಪಾಯವಿದೆ. ಹುಟ್ಟಿದ ನಂತರವೂ ಮಗುವಿನ ಅಂಗಾಗಗಳು ಪೂರ್ಣವಾಗಿ ಬೆಳೆದಿರುವುದಿಲ್ಲ ಆರುತಿಂಗಳವರೆಗೂ ಅಂಗಾಗಗಳ ಬೆಳವಣಿಗೆ ಇರುತ್ತದೆ. ಈ ಹಂತದಲ್ಲಿ ಮಗುವಿಗೆ ಲವಣಾಂಶ, ಪ್ರೊಟಿನ್, ಕೊಬ್ಬಿನ ಅಂಶವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಆರು ತಿಂಗಳವರೆಗೆ ತಾಯಿಯ ಹಾಲು ಹೊರತುಪಡಿಸಿ ಬೇರೆ ಯಾವುದೇ ಆಹಾರ ಕೊಡಬಾದು.
ಅಂಗಾಗಳ ಸಾಮರ್ಥ್ಯಕ್ಕೂ ಮೀರಿ ಆಹಾರ ನೀಡಿದಾಗ ಅದು ಜೀರ್ಣಕ್ರಿಯೆ ಹಾಗೂ ಕಿಡ್ನಿಗೆ ತೂಂದರೆ ಮಾಡುತ್ತದೆ. ‘ಒಂದು ವರ್ಷದೊಳಗಿನ ವಗುವಿಗೆ ಉಪ್ಪು ನೀಡಬಾರದು. ಲವಣಾಂಶ ಮಗುವಿನ ಕಿಡ್ನಿ ಕೋಶಗಳನ್ನು ಹಾಳು ಮಾಡುತ್ತದೆ. ಆರು ತಿಂಗಳ ನಂತರ ಉಪ್ಪು, ಸಕ್ಕರೆ ಬದಲು ಬೆಲ್ಲ ಹಾಗೂ ಕಲ್ಲು ಸಕ್ಕರೆ ಕೂಡಬಹುದು’ ಎನ್ನುತ್ತಾರೆ ಕೂಲಂಬಿಯಾ ಏಷ್ಯಾ ಆಸ್ಪತ್ರೆಯ ಮಕ್ಕಳ ತಜ್ಞ ಅನಿಲ್ ಕುಮಾರ್.
**
‘ಕಾಲ ಕಾಲಕ್ಕೆ ವೈದ್ಯರಲ್ಲಿ ತಪಾಸಣೆ ಮಾಡಿಸುವುದು ಅತೀ ಅವಶ್ಯಕ. ನೋವಿದ್ದಾಗ ಮಾತ್ರ ವೈದ್ಯರ ಬಳಿ ಹೋಗುವ ಪರಿಪಾಠ ಒಳ್ಳೆಯದಲ್ಲ. ನೋವಿನ ಹಂತ ತಲುಪುವ ವೇಳೆಗೆ, ಕಿಡ್ನಿ ಸಂಬಂಧಿ ಕಾಯಿಲೆಗಳು ವಿಕೋಪಕ್ಕೆ ಹೋಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ’ ಎನ್ನುತ್ತಾರೆ ಅಪೋಲೊ ಆಸ್ಪತ್ರೆ ವೈದ್ಯ ಡಾ. ಕೃಷ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.