ADVERTISEMENT

ಮುಕ್ತ ವಿ.ವಿ ಈಗ ಸಂದೇಶಮಯ

ವಿ.ವಿ.ಯಲ್ಲಿ ಸ್ಥಾಪಿತವಾಗಲಿವೆ ಕುವೆಂಪು. ಅಂಬೇಡ್ಕರ್‌, ಅಬ್ದುಲ್ ಕಲಾಂ ಸಂದೇಶ ಫಲಕಗಳು

ನೇಸರ ಕಾಡನಕುಪ್ಪೆ
Published 27 ಏಪ್ರಿಲ್ 2019, 20:00 IST
Last Updated 27 ಏಪ್ರಿಲ್ 2019, 20:00 IST
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಅಳವಡಿಸಲಾಗಿರುವ ವಿವೇಕಾನಂದರ ಫಲಕಗಳು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ ಅಳವಡಿಸಲಾಗಿರುವ ವಿವೇಕಾನಂದರ ಫಲಕಗಳು   

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಈಗ ಸಂದೇಶಮಯವಾಗಿದೆ. ಜೀವನ ಪ್ರೀತಿಯನ್ನು ಸಾರುವ ವಿವೇಕಾನಂದರ ಸಂದೇಶಗಳನ್ನು ಹೊತ್ತ ಫಲಕಗಳು ಈಗ ಆವರಣದಲ್ಲಿ ಜ್ಞಾನಕಾಂತಿ ಬೀರುತ್ತಿವೆ.

ಮುಕ್ತ ವಿ.ವಿ.ಯ ವಿವೇಕಾನಂದ ಅಧ್ಯಯನ ಪೀಠದ ವತಿಯಿಂದ ಈ ಕಾರ್ಯವನ್ನು ಮಾಡಲಾಗಿದೆ. ವಿವೇಕಾನಂದರ ಆಶಯವನ್ನು ಹೊತ್ತ ಶಿಕ್ಷಣವನ್ನು ಅಂತರಂಗ– ಬಹಿರಂಗ ಶುದ್ಧವಾಗಿರುವ, ಅಂತಃಕರಣವನ್ನು ಸಾರುವ, ಮಾನವೀಯತೆಯನ್ನು ಹೊರಸೂಸುವ 25ಕ್ಕೂ ಹೆಚ್ಚು ಫಲಕಗಳು ಈಗಾಗಲೇ ಇಲ್ಲಿ ಜೋಡಿತಗೊಂಡಿವೆ.

‘ವಿದ್ಯಾರ್ಥಿಗಳ ಮನಸು ಪ್ರೀತಿಯನ್ನು ತುಂಬಿಕೊಂಡಿರಬೇಕು. ದ್ವೇಷ, ಹೊಟ್ಟೆಕಿಚ್ಚು ಇರಲೇ ಕೂಡದು ಎನ್ನುವುದು ವಿವೇಕಾನಂದರ ಆಶಯವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಗೆಯ ಸಂದೇಶಗಳನ್ನು ಈ ಫಲಕಗಳಲ್ಲಿ ಅಳವಡಿಸಲಾಯಿತು. ವಿ.ವಿ.ಯ ಆವರಣಕ್ಕೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಆಶಯಗಳು ಮುಟ್ಟಬೇಕು. ಈ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ನಡೆಸಲಾಗಿದೆ’ ಎಂದು ಪೀಠದ ಅಧ್ಯಕ್ಷರಾದ ಡಾ.ಜ್ಯೋತಿ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿದ್ಯಾರ್ಥಿಯ ಅಂತರಂಗವನ್ನು ಅಧ್ಯಯನ ಮಾಡಬೇಕು ಎನ್ನುವುದು ವಿವೇಕಾನಂದರ ಆಶಯವಾಗಿತ್ತು. ವಿವೇಕಾನಂದರಿಂದ ಪ್ರೇರೇಪಿತರಾಗಿದ್ದ ಕುವೆಂಪು ಅವರೂ ಇದನ್ನೇ ಸಾರಿದ್ದರು. ಈ ಹಿನ್ನೆಲೆಯಲ್ಲಿ ಈ ಸಂದೇಶ ಫಲಕಗಳು ಹೆಚ್ಚು ಪ್ರಸ್ತುತವಾಗಿವೆ. ವಿದ್ಯಾರ್ಥಿಗಳಿಗೆ ಪಠ್ಯವನ್ನು ಕಲಿಸುವುದರ ಜತೆಗೆ ನೈತಿಕ ಶಿಕ್ಷಣವನ್ನೂ ನೀಡಬೇಕು ಎನ್ನುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.

ವಿವೇಕಾನಂದರು ಯಾವ ಜಾತಿಗೂ ಸೀಮಿತರಲ್ಲ. ಮನುಷ್ಯತ್ವವೇ ಅವರ ಸಾರ. ಹಾಗಾಗಿ, ವಿದ್ಯಾರ್ಥಿಗಳನ್ನು ಈ ಮೂಲಕ ವಿಶ್ವಮಾನವರನ್ನಾಗಿಸುವ ಪ್ರಯತ್ನ ನಡೆಸಿದೆ ಎಂದು ಡಾ.ಜ್ಯೋತಿ ಹೇಳಿದರು.

ಎಲ್ಲೆಲ್ಲಿ?: ವಿ.ವಿ.ಯ ಹಳೆಯ ಕಾರ್ಯಸೌಧಕ್ಕೆ ಅಂಟಿಕೊಂಡಂತೆ, ವಿಜ್ಞಾನ ಭವನದ ಎದುರಿನಿಂದ ಕಾವೇರಿ ಸಭಾಂಗಣದ ಆಜು ಬಾಜಿನವರೆಗೂ ನಾಮಫಲಕಗಳನ್ನು ಸಾಲಾಗಿ ಅಳವಡಿಸಲಾಗಿದೆ. ಹೆಚ್ಚು ವರ್ಷಗಳು ಬಾಳಿಕೆ ಬರುವಂತೆ ಉಕ್ಕು ಹಾಗೂ ಗ್ರಾನೈಟ್‌ ಕಲ್ಲನ್ನು ಬಳಸಿಕೊಂಡು ಈ ಫಲಕಗಳನ್ನು ಜೋಡಿಸಲಾಗಿದೆ.

ಮಹಾನ್‌ ಪುರುಷರ ಸೇರ್ಪಡೆ: ಆರಂಭಿಕವಾಗಿ ವಿವೇಕಾನಂದರ ಸಂದೇಶಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕುವೆಂಪು, ಅಂಬೇಡ್ಕರ್‌, ಅಬ್ದುಲ್‌ ಕಲಾಂ, ಬುದ್ಧ ಹಾಗೂ ಬಸವಣ್ಣ ಸೇರಿದಂತೆ ಹಲವರ ಸಂದೇಶಗಳುಳ್ಳ ಫಲಕಗಳನ್ನು ಅಳವಡಿಸುವ ಚಿಂತನೆ ಇದೆ ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಒಳ್ಳೆಯ ವಿಚಾರಗಳನ್ನು ತುಂಬಬೇಕು. ಅದರಿಂದ ಸಮಾಜಕ್ಕೆ ಒಳಿತಾಗುತ್ತದೆ. ಈ ಎಲ್ಲ ಮಹಾಪುರುಷರೂ ವಿದ್ಯಾರ್ಥಿಪ್ರಿಯರೇ. ಹಾಗಾಗಿ, ಈ ಮೂಲಕ ಮುಕ್ತ ವಿ.ವಿ.ಯ ಶೈಕ್ಷಣಿಕ ವ್ಯಾಪ್ತಿಯನ್ನು ಪಠ್ಯಕ್ಕೆ ಸೀಮಿತಗೊಳಿಸದೇ ನೈತಕತೆಯ ಕಡೆಗೂ ಕೊಂಡೊಯ್ಯಲಾಗಿದೆ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.