ಮಗು ತನ್ನ ಎಳೆಯ ವಯಸ್ಸಿನಲ್ಲೇ ಹೊಸ ಭಾಷೆಗಳನ್ನು ಕಲಿತರೆ ಅದನ್ನು ಸುಲಭವಾಗಿ ಮರೆಯುವುದಿಲ್ಲ. ಜೊತೆಗೆ ಆ ಭಾಷೆ ಮಗುವಿನ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿರುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಭಾಷೆ ಕಲಿಕೆ ಎಂಬುದು ಮಗುವಿನ ಮೆದುಳಿಗೆ ಸವಾಲಿದ್ದಂತೆ. ಹೊಸ ಹೊಸ ಭಾಷೆಗೆ ಮಗು ತೆರೆದುಕೊಳ್ಳುವುದರಿಂದ ಮಗುವಿನಲ್ಲಿ ತಿಳಿವಳಿಕೆ ಹೆಚ್ಚುತ್ತದೆ. ಬೇರೆ ಬೇರೆ ಭಾಷೆಗಳನ್ನು ಕಲಿತಾಗ ಒಂದೇ ವಿಷಯದ ಬಗ್ಗೆ ವಿಭಿನ್ನ ಭಾಷೆಗಳಲ್ಲಿ ಯೋಚಿಸುತ್ತದೆ. ಇದರಿಂದ ಮಗುವಿನಲ್ಲಿ ಯೋಚನಾ ಲಹರಿಯ ಗುಣಮಟ್ಟವೂ ವೃದ್ಧಿಸುತ್ತದೆ. ಭಾಷಾ ಸಮಸ್ಯೆಯನ್ನು ಸುಲಭವಾಗಿ ಎದುರಿಸುವ ಜೊತೆಗೆ ಭಿನ್ನ ಸಂಸ್ಕೃತಿಯ ಜನರೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ನೆರವಾಗುತ್ತದೆ. ಜೊತೆಗೆ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುವಾಗ ಅನೇಕ ಅವಕಾಶಗಳು ಬಹುಭಾಷೆ ಬಲ್ಲವರನ್ನು ಹುಡುಕಿಕೊಂಡು ಬರುತ್ತವೆ.
ಮಗುವಿಗೆ ಬೇರೆ ಭಾಷೆ ಕಲಿಸುವ ಮುನ್ನ ಪೋಷಕರು ಕೆಲವೊಂದು ವಿಷಯಗಳನ್ನು ಅರಿತಿರಬೇಕು. ಅದಕ್ಕಾಗಿ ಮನೆಯಲ್ಲಿಯೇ ಕೆಲವು ತಂತ್ರಗಳನ್ನು ಪಾಲಿಸಬೇಕು. ಬಿಬಿಸಿ ಪ್ರಕಟಿಸಿದ ಲೇಖನದ ಪ್ರಕಾರ, ಮಕ್ಕಳು ಹೊಸ ಭಾಷೆ ಕಲಿಯುವಾಗ ಅದರಲ್ಲೂ ವಿದೇಶಿ ಭಾಷೆಗಳನ್ನು ಕಲಿಯುವಾಗ ಆ ಭಾಷೆಯ ಪತ್ರಿಕೆಗಳನ್ನು ಓದಬೇಕು, ರೇಡಿಯೊ ಕೇಳಬೇಕು, ಜೊತೆಗೆ ಆ ಭಾಷೆ ಮಾತನಾಡುವ ಜನರ ಜೊತೆ ಮಾತನಾಡಬೇಕು. ಆಗ ನಿಮ್ಮ ಮಗುವಿನಲ್ಲಿ ನಿಮಗೇ ಅರಿವಿಲ್ಲದ ಮಟ್ಟದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ.
ಈ ತಪ್ಪುಗಳನ್ನು ಮಾಡದಿರಿ
ಹೊಸ ಭಾಷೆಗಳನ್ನು ಕಲಿಯುವವರು ಕೆಲವೊಂದು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಆ ತಪ್ಪುಗಳ ಬಗ್ಗೆ ಅವರಿಗೆ ಅರಿವಿರಬೇಕು.
ಮಕ್ಕಳು ಭಾಷೆ ಕಲಿಯುವಾಗ ಆ ಭಾಷೆಯ ಕುರಿತು ಕುತೂಹಲದ ಕೊರತೆ, ಸರಿಯಾಗಿ ಕೇಳಿಸಿಕೊಳ್ಳದೇ ಇರುವುದು, ನಾಚಿಕೆ ಹಾಗೂ ಅಭದ್ರತೆ, ಕಠಿಣ ಚಿಂತನೆಯಂತಹ ಋಣಾತ್ಮಕ ಅಭಿವ್ಯಕ್ತಿಗಳು ಕಲಿಕಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುತ್ತವೆ.
ಹೊಸ ಭಾಷೆ ಕಲಿಯುವಾಗ ಶ್ರಮ ಹಾಗೂ ಸಮಯ ತುಂಬಾ ಮುಖ್ಯ. ಭಾಷೆ ಕಲಿಕೆಯ ಬಗ್ಗೆ ನಿರ್ದಿಷ್ಟ ಹಾಗೂ ವಾಸ್ತವಿಕ ಗುರಿಗಳನ್ನು ಇರಿಸಿಕೊಳ್ಳಿ. ಅತಿಯಾದ ನಿರೀಕ್ಷೆ ಇಟ್ಟುಕೊಂಡು ಗುರಿಯನ್ನು ತಲುಪಲು ಸಾಧ್ಯವಾಗದಿದ್ದರೆ ನಿರಾಶೆಯಾಗುವುದು ಖಂಡಿತ.
ಬಹು ಭಾಷೆ ಕಲಿಕೆಯ ಲಾಭ
ಅಧ್ಯಯನವೊಂದರ ಪ್ರಕಾರ ಯಾವ ಮಗು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡುವುದೋ ಆ ಮಗುವಿನಲ್ಲಿ ಅರಿವಿನ ಸಾಮರ್ಥ್ಯ ಹಾಗೂ ಏಕಾಗ್ರತೆಯ ಮಟ್ಟ ಉತ್ತಮವಾಗಿರುತ್ತದೆ.
ಭಾರತದ ಜನಗಣತಿಯ ಪ್ರಕಾರ ದೇಶದಲ್ಲಿ ಸುಮಾರು 255 ಮಿಲಿಯನ್ ಮಂದಿ ಕನಿಷ್ಠ 2 ಭಾಷೆ ಮಾತನಾಡುತ್ತಾರೆ. ಸರಿ ಸುಮಾರು 88 ಮಿಲಿಯನ್ ಮಂದಿ ಮೂರು ಹಾಗೂ ಮೂರಕ್ಕೂ ಹೆಚ್ಚು ಭಾಷೆ ಮಾತನಾಡುತ್ತಾರೆ.
ಇದರ ಪ್ರಕಾರ ಭಾರತದಲ್ಲಿ ಭಾಷೆ ಕಲಿಕೆ ಹೊಸತಲ್ಲ, ಬದಲಾಗಿ ಇದು ಸಾಮಾನ್ಯ ಎಂಬಂತಾಗಿದೆ. ಎಳೆಯ ವಯಸ್ಸಿನಲ್ಲೇ ಮಕ್ಕಳು ಬೇರೆ ಬೇರೆ ಭಾಷೆಗಳನ್ನು ಕಲಿಯುವುದು ಸಾಮಾನ್ಯ.
ಮೊದಲು ಮಗು ಮನೆಯವರು ಹಾಗೂ ತಂದೆ–ತಾಯಿ ಮಾತನಾಡುವ ಮಾತೃಭಾಷೆಯನ್ನು ಕಲಿಯುತ್ತದೆ. ನಂತರ ಪ್ರಿಸ್ಕೂಲ್ ಅಥವಾ ಬೇಬಿಕೇರ್‌ಗೆ ಸೇರಿದಾಗ ಶೀಘ್ರವೇ ಅಲ್ಲಿನ ಸಿಬ್ಬಂದಿ ಹಾಗೂ ಮಕ್ಕಳು ಮಾತನಾಡುವ ಭಾಷೆಯನ್ನು ಕಲಿಯುತ್ತದೆ.
ಮಗು ಶಾಲೆಗೆ ಹೋಗಲು ಆರಂಭಿಸಿದಾಗ ಆಂಗ್ಲ ಭಾಷೆಯನ್ನು ಕಲಿಯುವಂತೆ ತಿಳಿಸಲಾಗುತ್ತದೆ. ಅವನು/ಅವಳು ಮುಂದಿನ ತರಗತಿಗಳಿಗೆ ಹೋದಾಗ ಪಠ್ಯಕ್ರಮದ ಅನುಸಾರ ದ್ವಿತೀಯ ಹಾಗೂ ತೃತೀಯ ಭಾಷೆಗಳನ್ನು ಕಲಿಯುವುದು ಸಾಮಾನ್ಯವಾಗುತ್ತದೆ. ಅದರೊಂದಿಗೆ ಅನೇಕ ಮಕ್ಕಳು ಫ್ರೆಂಚ್, ಜರ್ಮನ್, ಸ್ಪಾನಿಷ್, ಮ್ಯಾಂಡರಿನ್, ರಷ್ಯನ್ ಹಾಗೂ ಜಪಾನೀಸ್‌ನಂತಹ ವಿದೇಶಿ ಭಾಷೆಗಳನ್ನು ಕಲಿಯಲು ವಿಶೇಷ ತರಗತಿಗಳಿಗೆ ಸೇರುವುದು ಸಾಮಾನ್ಯವಾಗಿದೆ.
ಎಳವೆಯಲ್ಲೇ ಬಹುಭಾಷೆ ಕಲಿಸಿ
ತಜ್ಞರ ಪ್ರಕಾರ ಎಳೆ ವಯಸ್ಸಿನಲ್ಲೇ ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಭಾಷೆ ಕಲಿಯುವ ಸಾಮರ್ಥ್ಯವಿರುತ್ತದೆ. ಆದರೆ ಪೋಷಕರು ಮಕ್ಕಳಿಗೆ ಭಾಷೆ ಕಲಿಸಲು ಹಿಂಜರಿಯಬಾರದು. ಮಗುವಿನ ಭಾಷೆ ಕಲಿಕೆಯ ಆರಂಭದ ದಿನಗಳು ನಿಜಕ್ಕೂ ಅದ್ಭುತ. ಪ್ರಪಂಚದ ಯಾವುದೇ ಭಾಷೆಯ ಎರಡು ಶಬ್ದಗಳ ನಡುವಿನ ವ್ಯತ್ಯಾಸವನ್ನು ಮಗು ಗುರುತಿಸುತ್ತದೆ.
ಮಗು ಮಾತೃಭಾಷೆಯ ಶಬ್ದಗಳನ್ನು ಬಹಳ ಬೇಗ ಕಲಿತು ಬಿಡುತ್ತದೆ. ಉದಾಹರಣೆಗೆ ಹುಟ್ಟಿದ ಒಂಬತ್ತು ತಿಂಗಳೊಳಗೆ ಆಂಗ್ಲಭಾಷೆಯನ್ನು ಕೇಳುತ್ತಾ ಬೆಳೆದ ಮಗು ಮೊದಲು ಆರ್ ಹಾಗೂ ಐ ಶಬ್ದಗಳ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ. ಜಪಾನ್‌ನವರು ಈ ಎರಡು ಶಬ್ದಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಆ ಕಾರಣಕ್ಕೆ ಜಪಾನ್ ಸ್ಥಳೀಯ ವಯಸ್ಕರು ರಾಮ್ ಅನ್ನು ಲ್ಯಾಮ್ ಎಂದು ಸಂಭೋದಿಸುತ್ತಾರೆ.
ಅಧ್ಯಯನವೊಂದರ ಪ್ರಕಾರ ಒಂದು ಮಗು 7 ವರ್ಷದ ಒಳಗೆ ಕಲಿತ ಅಷ್ಟೂ ಭಾಷೆಗಳನ್ನು ಮೆದುಳಿನಲ್ಲಿ ಸಂಸ್ಕರಿಸಿಕೊಂಡಿರುತ್ತದೆ. ಬಾಲ್ಯದಲ್ಲೇ ಭಿನ್ನ ಭಾಷೆಗಳನ್ನು ಕಲಿಯುವುದರಿಂದ ಮಗುವಿಗೆ ಕೇವಲ ಶಬ್ದಗಳ ವ್ಯತ್ಯಾಸ ಮಾತ್ರ ತಿಳಿಯುವುದಲ್ಲದೇ ವ್ಯಾಕರಣ ಹಾಗೂ ವಾಕ್ಯ ರಚನೆಯ ಬಗೆಗಿನ ಸೂಕ್ಷ್ಮ ವ್ಯತ್ಯಾಸಗಳನ್ನು ಸುಲಭವಾಗಿ ಗುರುತಿಸುತ್ತದೆ. ಆದರೆ ವಯಸ್ಸಾದಂತೆ ಭಾಷೆಗಳನ್ನು ಕಲಿಯುವುದು ಕಷ್ಟ. ಜೊತೆಗೆ ಸ್ವಷ್ಟ ಉಚ್ಛಾರಣೆಯೂ ಇರುವುದಿಲ್ಲ.
ಯಾವ ಮಕ್ಕಳು ಬಾಲ್ಯದಲ್ಲಿಯೇ ಒಂದಕ್ಕಿಂತ ಹೆಚ್ಚು ಭಾಷೆಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಾರೋ ಅವರಲ್ಲಿ ಅರಿವಿನ ಮಟ್ಟ ಹೆಚ್ಚಿರುತ್ತದೆ. ಉದಾಹರಣೆಗೆ ಒಂದಕ್ಕಿಂತ ಅಧಿಕ ಭಾಷೆ ಕಲಿಯುವ ಮಕ್ಕಳಲ್ಲಿ ನೆನಪಿನಶಕ್ತಿ, ಗಮನಶಕ್ತಿ ಹೆಚ್ಚಿರುತ್ತದೆ.
ಮಾತು ನಿಧಾನಕ್ಕೆ ಕಲಿತರೆ ಚಿಂತಿಸಬೇಡಿ
ನಿಮ್ಮ ಮಗು ಒಟ್ಟಿಗೆ ಅನೇಕ ಭಾಷೆಗಳನ್ನು ಕಲಿಯುತ್ತಿದೆ ಎಂದರೆ ಆಗ ಮಗು ನಿಧಾನಕ್ಕೆ ಮಾತನಾಡಬಹುದು. ಆದರೆ ಇದರ ಬಗ್ಗೆ ಪೋಷಕರು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಮಗು ಹೊಸ ಭಾಷೆ ಕಲಿಯುವಾಗ ಎರಡೂ ಭಾಷೆಗಳ ಶಬ್ದಗಳ ಸೇರಿಸಿ ಮಾತನಾಡುತ್ತಾನೆ. ಇದಕ್ಕೆ ‘ಕೋಡ್ ಸ್ವಿಚ್ಚಿಂಗ್’ ಎನ್ನುತ್ತಾರೆ. ಆದರೆ ಅದನ್ನು ಮಗುವಿನಲ್ಲಿರುವ ಸಮಸ್ಯೆ ಎಂದು ಪರಿಗಣಿಸಬೇಡಿ. ಆ ರೀತಿ ಮಾತನಾಡುವುದರಿಂದ ಮಗುವಿನಲ್ಲಿ ಮೌಖಿಕ ಅಭಿವ್ಯಕ್ತಿಯ ಸೃಜನ ಸಂಯೋಜನೆಗೆ ನೆರವಾಗುತ್ತದೆ ಎನ್ನುವುದು ಮನೋಶಾಸ್ತ್ರಜ್ಞೆ ಸಿಂಧುಜಾ ಮನೋಹರ್ ಅವರ ಅಭಿಪ್ರಾಯ.
ಆಡುವ ಭಾಷೆ ಮೆದುಳನ್ನು ಆವರಿಸಿಕೊಳ್ಳುವ ರೀತಿ ಹೊಸ ಭಾಷೆ ಕಲಿತವರಲ್ಲಿ ಗಮನಾರ್ಹ ಬೆಳವಣೆಗೆಯನ್ನು ಸೂಚಿಸುತ್ತದೆ. ಹೊಸ ಭಾಷೆಗಳನ್ನು ಕಲಿಯುವುದರಿಂದ ಅನೇಕ ಭಾಷಾ ನಿಯಮಗಳನ್ನು ಬದಲಾಯಿಸುವ ಹಾಗೂ ವಿಭಿನ್ನ ಅಂಶಗಳನ್ನು ಸಂಯೋಜಿಸುವ ಕೌಶಲವೂ ಮಗುವಿನ ಮನಸ್ಸಿನಲ್ಲಿ ತೀಕ್ಷ್ಣಗೊಳುತ್ತದೆ. ಅದು ಕಲಿಕೆ ಹಾಗೂ ಅರಿವಿನ ಪ್ರಕ್ರಿಯೆಯ ಅಭಿವೃದ್ಧಿಗೆ ಕಾರಣವಾಗುತ್ತದೆ.
ಸಂವಹನ ಕೌಶಲ
ಮಕ್ಕಳು ಬಹು ಭಾಷೆ ಕಲಿಯುವುದರಿಂದ ಅವರಲ್ಲಿ ಭಾಷೆಗೆ ಸಂಬಂಧಿಸಿದಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಯಾವ ಮಕ್ಕಳು ಬೇರೆ ಬೇರೆ ಭಾಷೆ ಕಲಿಯುತ್ತಾರೋ ಅವರು ಭಾಷೆಯ ಕುರಿತು ಹೆಚ್ಚಿನ ಸಂವೇದನೆ ಬೆಳೆಸಿಕೊಳ್ಳುತ್ತಾರೆ, ಜೊತೆಗೆ ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಳ್ಳುತ್ತಾರೆ.
ಉತ್ತಮ ಶೈಕ್ಷಣಿಕ ಸಾಧನೆ
ಹಲವು ಅಧ್ಯಯನಗಳ ಪ್ರಕಾರ ಬಹುಭಾಷೆ ಕಲಿತಿರುವ ಮಕ್ಕಳಲ್ಲಿ ಅರಿವಿನ ಸಾಮರ್ಥ್ಯ ಹಾಗೂ ಗಮನಶಕ್ತಿ ಹೆಚ್ಚಿರುತ್ತದೆ. ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ಪರಿಕಲ್ಪನೆಯ ರಚನೆಗಳಲ್ಲಿ ಅವರು ಉತ್ತಮ ಸಾಧನೆ ಮಾಡುತ್ತಾರೆ, ಅಂತಹ ಮಕ್ಕಳು ಹೆಚ್ಚು ಕಲ್ಪನಾಶಕ್ತಿ ಹೊಂದಿರುತ್ತಾರೆ. ಅವರಲ್ಲಿ ಅಮೂರ್ತ ಕಲ್ಪನೆಗಳು ಮೂಡುತ್ತವೆ.
ಶಬ್ದಭಂಡಾರ ಹಾಗೂ ವ್ಯಾಕರಣ ನಿಯಮಗಳು ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಎರಡು ಭಾಷೆ ಕಲಿಯುವುದರಿಂದ ಮಗುವಿನಲ್ಲಿ ಅರಿವಿನ ಕೌಶಲ ಹಾಗೂ ಏಕಾಗ್ರತೆಯ ಬೆಳವಣಿಗೆಯಾಗುತ್ತದೆ.
ಆರೋಗ್ಯಕರ ಮೆದುಳು
ಅಮೆರಿಕದ ಅನ್ನಲ್ಸ್ ಆಫ್ ನ್ಯೂರಾಲಜಿಕಲ್ ಆಸೋಸಿಯೇಷನ್ ಪ್ರಕಾರ ಬಾಲ್ಯದಲ್ಲಿ ಎರಡು ಮೂರು ಭಾಷೆಗಳನ್ನು ಕಲಿಯುವ ಮಗು ಜೀವನದಲ್ಲಿ ಹೆಚ್ಚು ಅರಿವಿನ ಕೌಶಲವನ್ನು ಹೊಂದಿರುತ್ತದೆ. ಜೊತೆಗೆ ಡಿಮೆನ್ಶಿಯಾದಂತಹ ಮಾನಸಿಕ ತೊಂದರೆಗಳು ಅಂತಹ ಮಕ್ಕಳನ್ನು ಬಾಧಿಸುವುದಿಲ್ಲ.
ಆತ್ಮವಿಶ್ವಾಸ ಹೆಚ್ಚುತ್ತದೆ
ಒಂದಕ್ಕಿಂತ ಹೆಚ್ಚು ಭಾಷೆ ತಿಳಿದಿರುವುದು ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಜೊತೆಗೆ ಸಾಮಾಜಿಕವಾಗಿ ತೆರೆದುಕೊಳ್ಳಲು ಸಹಾಯ ಮಾಡುತ್ತದೆ. ರಾಜ್ಯ ಅಥವಾ ಬೇರೆ ದೇಶಕ್ಕೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆಗಳ ಬಗ್ಗೆ ಅರಿವಿದ್ದರೆ ಅಲ್ಲಿಯವರೊಂದಿಗೆ ವ್ಯವಹರಿಸಲು ಸುಲಭವಾಗುತ್ತದೆ. ಜೊತೆಗೆ ಭಾಷೆ ಬರುವುದಿಲ್ಲ ಹೇಗೋ ಏನೋ ಎಂಬ ಚಿಂತೆಯು ಕಾಡುವುದಿಲ್ಲ.
ಅವಕಾಶಗಳ ಬಾಗಿಲು ಸದಾ ತೆರೆದಿರುತ್ತದೆ
ಹಲವು ಭಾಷೆ ಕಲಿಯುವ ಮಕ್ಕಳಿಗೆ ಬೇರೆ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹಾಗೂ ಅನ್ಯ ಸಂಸ್ಕೃತಿ ಹಾಗೂ ಸಿದ್ಧಾಂತಗಳಿಗೆ ಬೆಲೆ ನೀಡುವ ಗುಣವಿರುತ್ತದೆ. ಜೊತೆಗೆ ಕೆಲಸ ಮಾಡುವಾಗ ಅಥವಾ ಓದುವಾಗ ಬೇರೆ ಬೇರೆ ಪ್ರದೇಶಗಳಿಗೆ ಹೋಗುವ ಅವಕಾಶವು ಇರುತ್ತದೆ.
ಬೇರೆ ಭಾಷೆಗಳನ್ನು ಮಾತನಾಡುವುದರಿಂದ ಆಗುವ ಉಪಯೋಗಗಳು ಹಲವು. ಭಾರತದಲ್ಲಿ ಅನೇಕ ಭಾಷೆ ಮಾತನಾಡುವ ಜನರು ನಮ್ಮ ಸುತ್ತಲೂ ಇರುತ್ತಾರೆ, ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ಬೇರೆ ಭಾಷೆ ಮಾತನಾಡುವ ಜನರ ಜೊತೆ ಸ್ನೇಹಿತರ ಜೊತೆ ಮಾತನಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ . ಹೊಸ ಪದಗಳನ್ನು ಕೇಳಿದಾಗ ಅದರ ಅರ್ಥ ತಿಳಿದುಕೊಳ್ಳುವಂತೆ ತಿಳಿಸಿ.
ಪೂರಕ ಮಾಹಿತಿ: ಪ್ರೊ.ಸುನೀಲ್‌ಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.