ನಾವು ಚಿಕ್ಕಂದಿನಲ್ಲಿ ಕಲಿತದ್ದು ಒಂದೇ, ಶಿಕ್ಷಕರು ಅಥವಾ ಪೋಷಕರು ಹೇಳಿದ್ದನ್ನು ಕೇಳಬೇಕು, ಇಲ್ಲವಾದರೆ ಬೆತ್ತದಿಂದ ಸರಿಯಾದ ಪೆಟ್ಟು ಬೀಳುತ್ತಿತ್ತು. ಅವರು ಕಲಿಸಿದ್ದನ್ನು ಬಾಯಿಪಾಠ ಮಾಡಿ ಒಪ್ಪಿಸುವುದು, ನಂತರ ಪರೀಕ್ಷೆಯಲ್ಲಿ ಬರೆಯುವುದು. ನಾವು ಬರೆದದ್ದು ನಮಗೇ ಎಷ್ಟರ ಮಟ್ಟಿಗೆ ಅರ್ಥವಾಗುತ್ತಿತ್ತೋ ಅದು ಬೇರೆ ಮಾತು. ಅಲ್ಲಿ ವಿಮರ್ಶಾತ್ಮಕ ಚಿಂತನೆ ಇರಲಿ, ಆಲೋಚನೆಗೂ ಅವಕಾಶವಿರಲಿಲ್ಲ. ಆಗಿನ ಶಿಕ್ಷಣ ನೀತಿಯೇ ಹಾಗಿತ್ತು. ಈಗ ಎಲ್ಲವೂ ಅಲ್ಲದಿದ್ದರೂ ಒಂದಷ್ಟು ಖಂಡಿತ ಬದಲಾಗಿದೆ. ಮಕ್ಕಳು ತಾವು ಕಲಿಯುವುದನ್ನು ಅರ್ಥ ಮಾಡಿಕೊಳ್ಳಲು ಅವಕಾಶವಿದೆ. ಸರಳವಾಗಿ ಅದನ್ನೇ ವಿಮರ್ಶಾತ್ಮಕ ಚಿಂತನೆ ಎನ್ನಬಹುದು. ಚಿಕ್ಕ ಮಕ್ಕಳಲ್ಲಿ ಸ್ಪಷ್ಟವಾಗಿ ಮತ್ತು ತರ್ಕಬದ್ಧವಾಗಿ ಚಿಂತಿಸಲು ಅವಕಾಶ ನೀಡಿದಾಗ ವಿಷಯವನ್ನು ಅರ್ಥ ಮಾಡಿಕೊಳ್ಳಲು ಅವಕಾಶವಿರುತ್ತದೆ. ಮಕ್ಕಳು ವಿಷಯ ಅಥವಾ ಮಾಹಿತಿಯನ್ನು ಸುಮ್ಮನೆ ಸ್ವೀಕರಿಸುವವರಾಗಬಾರದು. ಅದರ ಬದಲು ಅವರು ಸ್ವತಂತ್ರ ಯೋಚನಾ ಶಕ್ತಿಯ ಪರಿಣಾಮವನ್ನು ಅರ್ಥ ಮಾಡಿ ಕೊಳ್ಳುವಂತಿರಬೇಕು.
ಮಕ್ಕಳ ಆಟದಲ್ಲಿ ಗಮನವಿಡಿ..
‘ಈಗಿನ ವೇಗದ ಯುಗದಲ್ಲಿ ಎಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಈ ಜಂಜಾಟದಲ್ಲಿ ನಮ್ಮ ಮಕ್ಕಳ ಆಟವೂ ಎಷ್ಟು ಮುಖ್ಯ ಎನ್ನುವುದನ್ನು ಮರೆತು ಬಿಡುತ್ತೇವೆ. ಮಕ್ಕಳು ತಮ್ಮಷ್ಟಕ್ಕೇ ಆಟವಾಡುವಾಗ ಅಲ್ಲಿ ಅವರಿಗೆ ಕೆಲವು ತೊಡಕುಗಳು ಬರಬಹುದು. ಉದಾ –ಒಂದು ಮಗು ಆಟಿಕೆಯ ಕಾರು ಅಥವಾ ರೈಲಿನಲ್ಲಿ ಆಡುವಾಗ ಬಹಳಷ್ಟು ಬಾರಿ ಅದರ ಚಕ್ರ ಕಳಚಿ ಹೋಗಬಹುದು ಅಥವಾ ಮತ್ತೆ ಯಾವುದಾದರೂ ಭಾಗ ಬಿಟ್ಟು ಹೋಗಬಹುದು. ಆಗ ಮಕ್ಕಳು ಆಶ್ರಿಯಿಸುವುದು ತಾಯಿಯನ್ನೇ, ಆದರೆ ತಾಯಿ ತಾನೇ ಎಷ್ಟು ಬಾರಿ ಅದನ್ನು ಸರಿ ಮಾಡುವುದಾಗುತ್ತದೆ. ಆಗ ತಾಯಿ ಅದನ್ನು ಹೇಗೆ ಸರಿಮಾಡಿಕೊಳ್ಳಬಹುದೆಂದು ಅರ್ಥಮಾಡಿಸಬೇಕಾಗುತ್ತದೆ. ಮೆಲ್ಲಗೆ ಆ ಮಗುವೂ ಅರ್ಥ ಮಾಡಿಕೊಳ್ಳುತ್ತದೆ. ಈ ರೀತಿ ಮುಕ್ತವಾಗಿ ಅವರನ್ನೇ ಆಟವಾಡಲು ಬಿಡಬೇಕು, ಆಗ ಅದಕ್ಕೆ ತಾನೇ ಸ್ವತಂತ್ರವಾಗಿ ಜೋಡಿಸಲೂ ಸಾಧ್ಯ ಎನ್ನುವ ಚಿಂತನೆ ಮೂಡುತ್ತದೆ’ ಎನ್ನುತ್ತಾರೆ ಆಶಾ ಇನ್ಫಿನೈಟ್ ಸಂಸ್ಥೆಯ ಶಿಕ್ಷಣ ವಿಭಾಗದ ನಿರ್ದೇಶಕಿ ಕಾಂತಿ ಅವರು.
ಕಲ್ಪನಾ ಶಕ್ತಿ ಹೆಚ್ಚಾಗ ಬೇಕೆಂದರೆ...
ಆಟವಾಡುವಾಗ ಆಗಲೀ ಅಥವಾ ಮಿಕ್ಕ ಕೆಲಸವಿರಲಿ ಮಗು ತಾನೇ ಮಾಡುವಾಗ ಅವರಲ್ಲಿ ಖಂಡಿತ ತನಗೆ ತಾನೇ ಆಲೋಚಾನಾ ಶಕ್ತಿ ಹೆಚ್ಚುತ್ತದೆ, ಬಂದ ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ ಅರ್ಥಾತ್ ವಿಮರ್ಶಾತ್ಮಕ ಚಿಂತನೆಯೂ ಮೂಡುತ್ತದೆ. ಅದು ಖಂಡಿತಾ ಅವರಿಗೆ ಮುಂದೆ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಸಹಾಯಕವಾಗುತ್ತದೆ, ತನಗೆ ತಾನೇ ಅವರಲ್ಲಿನ ಕಲ್ಪನಾ ಶಕ್ತಿ ಗರಿಗೆದರುತ್ತದೆ.
ಪ್ರಶ್ನೆ ಕೇಳು ಮಗುವೆ...
ಆಗಾಗ ಮಕ್ಕಳಿಗೆಕೆಲವು ಪ್ರಶ್ನೆಗಳನ್ನು ಕೇಳಬೇಕು ಮತ್ತು ಅವರಿಂದ ಉತ್ತರ ತರಿಸಬೇಕು. ಹಿಂದೆ ಅಜ್ಜಿಯರು ಮಕ್ಕಳಿಗೆ ರೋಚಕ ಕಥೆಗಳನ್ನು ಹೇಳುತ್ತಿದ್ದಾಗ ಮಕ್ಕಳು ಕುತೂಹಲದಿಂದ ಪ್ರಶ್ನೆ ಕೇಳುತ್ತಿದ್ದರು. ಈಗ ಅಜ್ಜಿಯರ ಕಥೆಗಳ ಬದಲು ಮಕ್ಕಳು ಹ್ಯಾರಿ ಪಾಟರ್ ಕಥೆ, ಚಲನಚಿತ್ರ ನೋಡುತ್ತಾರೆ. ಅಲ್ಲಿಯೂ ರೋಚಕತೆಗೆ, ಪ್ರಶ್ನೆಗಳಿಗೆ ಜೊತೆಗೆ ಚಿಂತನೆಗೂ ಕೊರತೆ ಇಲ್ಲ.
ಮಕ್ಕಳು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಯಾವ ರೀತಿ ಸಹಾಯ ಮಾಡಬಹುದು ಎನ್ನುವುದಕ್ಕೆ ಮನೆಯಲ್ಲೇ ಪ್ರಯತ್ನಿಸಬಹುದಾದ ಕೆಲವು ಚಟುವಟಿಕೆಗಳು
l ಕಂಡು ಹಿಡಿ: ನಿಮ್ಮ ಮಗುವಿನ ಒಂದು ಆಟದ ಸಾಮಾನನ್ನು ನಿಮ್ಮ ಬೆನ್ನ ಹಿಂದೆ ಅಡಗಿಸಿಡಿ. ನಿಮ್ಮ ಮಗುವಿಗೆ ಕೆಲವು ಸುಳಿವುಗಳನ್ನು ಕೊಡಿ. ಬೇಕಾದರೆ ಬಣ್ಣ, ಆಕಾರ ಮತ್ತು ಅದರ ಮೇಲಿನ ಡಿಸೈನ್ ಇರಬಹುದು ಆ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಬಹುದೆಂದು ಹೇಳಿ. ಒಮ್ಮೆ ಆಟವೇನೆಂದು ನಿಮ್ಮ ಮಗು ಅರ್ಥ ಮಾಡಿಕೊಂಡರೆ ಆ ಮಗುವಿಗೆ ಊಹಿಸಲು ಸ್ವಲ್ಪ ಸಹಾಯ ಮಾಡಿ. ಈ ರೀತಿ ಅದರ ಊಹಾ ಶಕ್ತಿಯನ್ನು ಚುರುಕುಗೊಳಿಸಬಹುದು.
l ಅಡುಗೆ ಆಟ: ನಮ್ಮ ಬಾಲ್ಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮಕ್ಕಳಿಗೆ ಆಡಲು ಪುಟ್ಟ ಪುಟ್ಟ ಅಡುಗೆಮನೆಯ ಪಾತ್ರೆ, ಪರಿಕರಗಳಿರುತ್ತಿದ್ದವು. ಅವುಗಳನ್ನಿಟ್ಟುಕೊಂಡು ಅಡುಗೆ ಆಟ ಆಡಿ ಎಲ್ಲರಿಗೂ ಕೊಡುತ್ತಿದ್ದೆವು. ಈ ಅಡುಗೆ ಆಟದಿಂದ ಮಗುವಿನ ಕಲ್ಪನಾ ಶಕ್ತಿ ಹೆಚ್ಚಾಗುತ್ತದೆ.
l ಫೋಟೊ ಆಲ್ಬಮ್ ತೋರಿಸಿ: ಎಲ್ಲರ ಮನೆಯಲ್ಲೂ ಇರುವ ಪ್ರತಿಯೊಂದು ಫೋಟೊ ಹಿಂದೆ ಒಂದು ಕಥೆ ಇರುತ್ತದೆ. ನೀವು ಅದನ್ನು ವಿವರಿಸಿದಾಗ ಅವರ ಮನದಲ್ಲಿ ಪ್ರಶ್ನೆಗಳು ಏಳುತ್ತವೆ. ಮತ್ತು ನಿಮ್ಮ ಕುಟುಂಬದ ಪರಿಚಯವೂ ಆಗುತ್ತದೆ.
ಭವಿಷ್ಯತ್ತಿನಲ್ಲಿ ಉದ್ಯೋಗಕ್ಕಾಗಿ ಹೊಸ ಹೊಸ ಕೌಶಲಗಳು ಅಗತ್ಯ. ಆದ್ದರಿಂದ ಮಕ್ಕಳನ್ನು ಚಿಕ್ಕಂದಿನಿಂದ ತಯಾರು ಮಾಡಿ, ಅವರ ಬುದ್ಧಿಮತ್ತೆಯನ್ನು ಚುರುಕುಗೊಳಿಸುವ ಆಶಯ ಹಿರಿಯರದು. ಆದರೆ ಮಕ್ಕಳಲ್ಲಿ ಈ ವಿಮರ್ಶಾತ್ಮಕ ಚಿಂತನೆಯನ್ನು ಮೂಡಿಸುವುದು ಸುಲಭವೇನಲ್ಲ. ಆದರೂ ಪ್ರಯತ್ನ ನಮ್ಮದು, ಈ ಬಗ್ಗೆ ಯೋಚಿಸುವಾಗ ‘ಮೆಟಾಕಾಗ್ನಿಷನ್’ ಎಂಬ ಪದ ನೆನಪಾಗುತ್ತದೆ. ಅರಿವಿನ ಬಗ್ಗೆ ಯೋಚಿಸಲು ಹೆಚ್ಚು ಅನೌಪಚಾರಿಕವಾಗಿ ಚಿಂತನೆಯ ಬಗ್ಗೆ ಯೋಚಿಸಲು ಸಾಧ್ಯವೇನೋ. ಒಟ್ಟಾರೆ ಈ ಚಿಂತನೆಯನ್ನು ಮೂಡಿಸಿಕೊಳ್ಳುವುದು ಮಕ್ಕಳಿಗಿರಲಿ, ದೊಡ್ಡವರಿಗೂ ಸುಲಭವಲ್ಲ. ಇದು ಬಹಳ ಕಷ್ಟಸಾಧ್ಯವಾದರೂ, ಅಸಾಧ್ಯವಾದುದು ಏನೂ ಇಲ್ಲ ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.