ADVERTISEMENT

ಮಕ್ಕಳು ಮಣ್ಣಲ್ಲಿ ಆಡಲಿ ಬಿಡಿ...

ಗಂಗಾಧರ ಯಲಿವಾಳ
Published 5 ಜುಲೈ 2019, 19:45 IST
Last Updated 5 ಜುಲೈ 2019, 19:45 IST
ಮಣ್ಣಿನಲ್ಲಿ ಮಕ್ಕಳ ಆಟ ಚಿತ್ರ: ತಾಜುದ್ದೀನ್‌ ಆಜಾದ್‌
ಮಣ್ಣಿನಲ್ಲಿ ಮಕ್ಕಳ ಆಟ ಚಿತ್ರ: ತಾಜುದ್ದೀನ್‌ ಆಜಾದ್‌   

ನಾವು ಚಿಕ್ಕವರಿದ್ದಾಗ ಹಲವಾರು ಆಟಿಕೆಗಳನ್ನು ಮಣ್ಣಿನಿಂದ ಮಾಡಿದ್ದು ಇವತ್ತಿಗೂ ನೆನಪಿಗೆ ಬರುತ್ತಿದೆ. ಗೆಳೆಯರ ಜೊತೆ ಚಿನ್ನಿ ದಾಂಡು, ಮರಕೋತಿ ಆಟ, ಲಗೋರಿ ಆಟವಾಡಿದ್ರೂ ಹೆಚ್ಚಾಗಿ ಮಣ್ಣಿನಲ್ಲಿ ಆಡಿದ್ದ ಆಟಗಳು ತುಂಬಾ ಸಂತಸ ತರುತ್ತವೆ. ಬೆಳಿಗ್ಗೆ ಎದ್ದ ಕೂಡಲೇ ಮನೆಯಿಂದ ಬಂದು ಬಿಡುವುದು ಮಣ್ಣಿನಲ್ಲಿ ಆಡೋಕೆ. ಮನೆಗೆ ಹೋಗಬೇಕಾದರೆ ಅಂಗಿ ಪೂರ್ತಿ ಗಲೀಜು. ಮನೆಯಲ್ಲಿ ಬೈಸಿಕೊಂಡರೂ ಮರುದಿನ ಮತ್ತೆ ಆಡಲು ಹೋಗುವುದು ಅದೇ ಮಣ್ಣಿಗೆ. ಅಮ್ಮನ ಬೈಗುಳಕ್ಕೆ ಕೊನೆಯಿರಲಿಲ್ಲ.

ಬಾಲ್ಯದಲ್ಲಿ ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಆದರೆ ಈಗ ಬರಿ ಸಿಮೆಂಟ್, ಇಟ್ಟಿಗೆ ಮತ್ತು ಡಾಂಬರ್ ರಸ್ತೆಗಳು. ಇಂತಹ ರಸ್ತೆಯಲ್ಲಿ ಆಡಿ ಬಂದ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡು ಮನೆ ಕಡೆಗೆ ಪಯಣಕ್ಕೆ ಬೆಳೆಸುತ್ತಿದ್ದರು. ಅದೇ ರೀತಿ ಇಂತಹ ರಸ್ತೆಗಳಲ್ಲಿ ನಿರಂತರವಾಗಿ ವಾಹನಗಳು ಚಲಿಸುತ್ತಿದ್ದು ಎಲ್ಲಿ ಯಾವ ಗಾಡಿ ಮೈ ಮೇಲೆ ಎಗರಿ ಬರುತ್ತೆ ಎಂದು ಹೇಳಲು ಆಗುವುದಿಲ್ಲ. ಇದೇ ಚಿಂತೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಹೊರಗೆ ಬಿಡಲು ಹಿಂಜರಿಯುತ್ತಿದ್ದಾರೆ.

ಒಂದಾನೊಂದು ಕಾಲದಲ್ಲಿ ಮಣ್ಣಿನಲ್ಲಿ ಎಷ್ಟೇ ಆಡಿದರೂ ಸುಸ್ತಾಗುತ್ತಿರಲಿಲ್ಲ. ಆದರೆ ಆಧುನಿಕ ಯುಗದ ಮಕ್ಕಳು ಮಣ್ಣಿನಲ್ಲಿ ಕಾಲಿಟ್ಟರೆ ಎಲ್ಲಿ ಕರಗಿ ಹೋಗುತ್ತಾರೊ ಅನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ. ಮಣ್ಣಿನಲ್ಲಿ ಆಡೋಕೆ ಹೊರಟರೆ ಸಾಕು ಒಂದೇ ಕ್ಷಣದಲ್ಲಿ ಅಲರ್ಜಿ ಶುರುವಾಗಿ ಬಿಡುವುದು. ಆದರೆ ವಾಸ್ತವವೇ ಬೇರೆ. ಮಣ್ಣಿನಲ್ಲಿ ಮಕ್ಕಳು ಆಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ADVERTISEMENT

ಮಣ್ಣು ಫಲವತ್ತತೆಯ ಸಂಕೇತ. ಇದರಿಂದಾಗಿ ಉತ್ತಮ ಗುಣಮಟ್ಟದ ಬೆಳೆಗಳನ್ನೂ ಬೆಳೆದು ಎಷ್ಟೋ ಹಸಿದವರಿಗೆ ಅನ್ನ ನೀಡಬಹುದು. ರೈತನ ಪಾಲಿಗೆ ಮಣ್ಣೆಂದರೆ ಬಂಗಾರವಿದ್ದಂತೆ. ಕುಸ್ತಿಪಟುವಿಗೆ ಮಣ್ಣೇ ವಿಜಯದ ಪ್ರತೀಕ. ಕಬಡ್ಡಿ ಪಂದ್ಯದಲ್ಲಂತೂ ಮಣ್ಣನ್ನು ಹಣೆಗೆ ಹಚ್ಚಿಯೇ ಮುಂದುವರೆಯುತ್ತಾರೆ. ಮನೆ ಕಟ್ಟಲಿ ಅಥವಾ ಕಟ್ಟಡ ನಿರ್ಮಿಸಲಿ; ಮಣ್ಣು ಅವಶ್ಯವಾಗಿ ಬೇಕೆ ಬೇಕು. ಈ ಗೆಜೆಟ್ ಯುಗದಲ್ಲಿ ಮಣ್ಣು ಮಾಡರ್ನ್ ಆಗಿ ಮಾರ್ಪಟ್ಟಿದೆ.

ಮಣ್ಣಿನಲ್ಲಿ ಮಾಡಿರುವ ಮಡಿಕೆಯಲ್ಲಿ ನೀರು ಕುಡಿದರೆ ಅದೆಂತಾ ತೃಪ್ತಿ. ಅದೇ ಫ್ರಿಜ್‌ನಲ್ಲಿ ಇಟ್ಟಿದ್ದು ಎಷ್ಟೇ ತಣ್ಣಗೆ ಇದ್ದರೂ ದಾಹ ತಿರುವುದಿಲ್ಲ. ಬೇಸಿಗೆಯಲ್ಲಿ ಈಗಲೂ ಜನರು ಮಡಿಕೆಯ ಮೋರೆ ಹೋಗುತ್ತಿದ್ದಾರೆ. ಇದರಿಂದಾಗಿ ತಮ್ಮ ಮೈಯಲ್ಲಿ ಇರುವ ತಾಪವನ್ನು ಕಡಿಮೆ ಮಾಡುತ್ತಿದ್ದಾರೆ.

ದೋಣಿ, ಆಟಿಕೆಗಳು, ವಿಗ್ರಹ, ಮೈದಾನ, ಹೊಲದಲ್ಲಿ ಮಣ್ಣು ಇರಲೇಬೇಕು. ಈಗಲೂ ನೀವು ನೋಡಬಹುದು. ನಾಗರಪಂಚಮಿ ಬಂದರೆ ಮಣ್ಣಿನಲ್ಲಿ ಮಾಡಿರುವ ನಾಗಪ್ಪ, ಗಣೇಶ ಚತುರ್ಥಿಯಲ್ಲಿ ಗಣೇಶ ಮೂರ್ತಿಗಳು ಹಾಗೂ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಮಣ್ಣಿನಿಂದ ಮಾಡಿದ ಬಸವಣ್ಣನನ್ನು ಪೂಜಿಸಲಾಗುತ್ತದೆ. ಮೊದಲಿನಿಂದಲೂ ಮಣ್ಣಿಗೆ ತನ್ನದೆ ಆದ ಮಹತ್ವವಿದೆ. ಬಾಲ ಕೃಷ್ಣನು ಆಟವಾಡುತ್ತಾ ಮಣ್ಣನ್ನು ಬಾಯಿಯಲ್ಲಿ ಹಾಕಿಕೊಂಡಾಗ ಯಶೋದೆ ಚಿಂತೆಯಿಂದ ಬಾಯಿ ತೆರೆಯಲು ಹೇಳಿ, ಬಾಯಲ್ಲಿ ಬ್ರಹ್ಮಾಂಡ ಕಂಡು ಮೂರ್ಛೆ ಹೋಗುತ್ತಾಳೆ.

ಹೀಗೆ ದಿನಗಳು ಕಳೆದಂತೆ ಜಗತ್ತಿನಲ್ಲಿ ಮಣ್ಣು ಮಾಯವಾಗುತ್ತಿದೆ. ಮುಂದೊಂದು ದಿನ ಬಂಗಾರದ ಹಾಗೆ ಮಣ್ಣನ್ನು ಮಾರುವ ಸಮಯ ಬಂದರೂ ಆಶ್ಚರ್ಯವಿಲ್ಲ. ಮಣ್ಣೆಂದರೆ ಭೂಮಿ ತಾಯಿ ಸ್ವರೂಪ. ಅದಕ್ಕೆ ಒಳ್ಳೆಯ ಫಸಲು ಬಂದರೆ, ಮತ್ತು ಮನೆ ಕಟ್ಟುವ ಮುನ್ನ ಮಣ್ಣನ್ನು ಪೂಜಿಸುತ್ತಾರೆ. ಆದರೆ ಇಂತಹ ಮಣ್ಣಿಗೆ ಇವತ್ತಿನ ಕಾಲದಲ್ಲಿ ಬೆಲೆಯಿಲ್ಲದಂತಾಗಿದೆ. ಮಕ್ಕಳಂತೂ ಯಾವಾಗಲೂ ವಿಡಿಯೋ ಗೇಮ್ಸ್‌ ಆಡುತ್ತ ಕುಳಿತಿರುತ್ತಾರೆ. ಹೊರಗಡೆ ಬಂದು ಮಣ್ಣಿನಲ್ಲಿ ಆಟ ಆಡುವುದನ್ನು ಮರೆತೇ ಬಿಟ್ಟಿದ್ದಾರೆ.

ಮಣ್ಣು ಸ್ವಾಭಾವಿಕ ವಸ್ತು. ಇದರಲ್ಲಿ ಖನಿಜಾಂಶವುಳ್ಳ ವಿವಿಧ ಗಾತ್ರದ ಅನೇಕ ಪದರುಗಳಿವೆ. ಮೂಲ ಬಂಡೆಗಳಿಂದ ಮಣ್ಣಾಗುವ ಪ್ರತಿಕ್ರಿಯೆಯಲ್ಲಿ ಹವಾಗುಣವು ಮೊದಲನೆಯ ಪಾತ್ರ ವಹಿಸುತ್ತದೆ. ಮಣ್ಣಿನಲ್ಲಿ ಹಲವಾರು ವಿಧಗಳು. ಅದರಲ್ಲಿ ಮೆಕ್ಕಲು ಮಣ್ಣು, ಕಪ್ಪು ಮಣ್ಣು, ಕೆಂಪು ಮಣ್ಣು, ಜಂಬಿಟ್ಟಿಗೆ ಮಣ್ಣು, ಮರುಭೂಮಿ ಮಣ್ಣು, ಪರ್ವತ ಮಣ್ಣು ಇವೆಲ್ಲ ಮಣ್ಣು ತನ್ನದೇ ಆದ ಪ್ರಾಮುಖ್ಯತೆ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.