ADVERTISEMENT

ಆಗಬೇಕು ಬೆಳಕಿನ ಕ್ರಾಂತಿ

ಕಲ್ಗುಂಡಿ ನವೀನ್
Published 27 ನವೆಂಬರ್ 2018, 19:45 IST
Last Updated 27 ನವೆಂಬರ್ 2018, 19:45 IST
   

ನವೆಂಬರ್‌ ತಿಂಗಳು ಎಂದರೆ ಅನೇಕ ಖಾಸಗಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಬಹುತೇಕ ಮುಗಿದು ಹೋಗಿರುವ ಸಮಯ! ಹೊಸ ದಾಖಲಾತಿಗಳಿಗೆ ಸಾಕಷ್ಟು ಒತ್ತಡಗಳಿವೆ. ದಾಖಲಾದ ಮಕ್ಕಳು ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಾಗುತ್ತಾರೆ. ಹಾಗೆಯೇ ಮುಂದಿನ ವರ್ಷ ಸರ್ಕಾರಿ ಶಾಲೆಗಳಲ್ಲಿಯೂ ದಾಖಲಾತಿ ನಡೆದು ಶಿಕ್ಷಣದ ಬೆಳಕು ಪಸರಿಸುವುದು ತೊಡಗುತ್ತದೆ.

ಸ್ವತಂತ್ರ ಬಂದ ನಂತರದಿಂದ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿ ‘ಹೊಸತು’ ಎಂಬ ಅನೇಕ ವಿಷಯಗಳು ಬಂದು ಹೋಗಿವೆ. ಉತ್ತಮ ಬೆಳವಣಿಗೆಗಳಾಗಿವೆ. ಎಪ್ಪತ್ತರ ದಶಕದಿಂದಲೇ ಕ್ರಾಂತಿಕಾರಿ ಎನಿಸಿಕೊಳ್ಳಬಹುದಾದ ಪದ್ಧತಿಗಳು ಬಂದವು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಪರಿಯೋಜನೆಗಳ ಪಟ್ಟಿಯನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಅದರ ಅನುಷ್ಠಾನ, ಫಲಪ್ರದತೆಯನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಲ್ಲ. ಮಾಂಟೆಸ್ಸರಿ ಪದ್ಧತಿ ಬಂದಿತು. ಈಗೀಗ ನಾವು ಕೇಳತೊಡಗುತ್ತಿರುವ ‘ಓಪನ್‍ ಶಾಲೆ’ಗೆ ಮೂವತ್ತು ವರ್ಷಗಳ ಇತಿಹಾಸವಿದೆ! ಆದರೆ ಇವುಗಳ ಇರುವಿಕೆ ಹಾಗೂ ಈ ಕುರಿತ ಮಾಹಿತಿ ದೇಶದ ಮೂಲೆ ಮೂಲೆಗೆ ತಲುಪಲಿಲ್ಲ, ಇದು ದುರಂತ. ಶಿಕ್ಷಣ ದೊಡ್ಡ ಪ್ರಮಾಣದಲ್ಲಿ ಬಡವರಿಗೂ ತಲುಪುವಂತಾಗಿದ್ದು ಬಿಸಿ ಊಟದಂತಹ ಕಾರ್ಯಕ್ರಮ ಜಾರಿಯಾದ ನಂತರ ಎಂಬುದು ಸಂತೋಷದ ವಿಷಯವೇನೂ ಅಲ್ಲ.

ಶಿಕ್ಷಣ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಗಳಾಗಿರುವುದು ನಿಜವಾದರೂ ಈ ನಿಟ್ಟಿನಲ್ಲಿ ಆಗಬೇಕಾದ್ದೂ ಸಾಕಷ್ಟಿದೆ. ಅದರಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಬಹಳ ಮುಖ್ಯವಾದದ್ದು. ಖಾಸಗಿ ಶಾಲೆಗಳಿಗಿಂತ ಒಂದು ಕೈ ಮಿಗಿಲಾಗಿ ಸರ್ಕಾರಿ ಶಾಲೆಗಳು ಬೆಳೆಯಬೇಕಿದೆ. ಹಸಿರು ಕ್ರಾಂತಿಯಂತೆ ‘ಬೆಳಕಿನ ಕ್ರಾಂತಿ’ ನಡೆದು ಪ್ರತಿಯೊಂದು ಮಗುವಿಗೂ ಕಾಲದ ಅತ್ಯುತ್ತಮ ಶಿಕ್ಷಣ ದೊರೆಯುವಂತಾಗಲೇಬೇಕು.

ADVERTISEMENT

ಇದು ಇಂದಿನ ಅವಶ್ಯಕತೆಯಾದರೆ ವಾಸ್ತವವೇನು ಎಂದು ನೋಡಿದಾಗ ಶಿಕ್ಷಣ ಕ್ರಮೇಣ ಏಕಮುಖವಾಗಿ ಕೇವಲ ಜೀವನನಿರ್ವಹಣೆಗೊಂದು ಉದ್ಯೋಗ ದೊರಕಿಸಿಕೊಳ್ಳಲು ಸಹಾಯವಾಗುವಲ್ಲಿಗೆ ಧ್ರುವೀಕರಣವಾಗುತ್ತಿದೆ. ಅದು ಬೇಡವೆಂದಲ್ಲ, ಶಿಕ್ಷಣದ ಪರಮ ಉದ್ದೇಶವೇ ಅದಾಗಬಾರದು. ಸುಶಿಕ್ಷಿತ ವ್ಯಕ್ತಿ ಮಾನವೀಯ ಮಿಡಿತದ ಖನಿಯಾಗಬೇಕು. ಸದ್ಗುಣ, ಸಮಾನತೆಗಿಂತಲೂ ಮಿಗಿಲಾದ ಮಾನವ ಪ್ರೀತಿ ಬದುಕಿನ ಸಹಜ ಮಿಡಿತವಾಗಬೇಕು. ಪ್ರತಿ ಶಾಲೆಯೂ ಕೇವಲ ಮಕ್ಕಳಿಗೆ ಕಲಿಸುವ ಶಾಲೆಯಾಗುವ ಬದಲಾಗಿ ಮಾನವೀಯ ಜೀವನವನ್ನು ರೂಪಿಸುವ ಶಾಲೆಯಾಗಿ ಮಾರ್ಪಾಡಾಗಬೇಕಾಗಿದೆ.

ಅದು ಸಾಧಿಸಲಾಗದ ಆದರ್ಶವೇನೂ ಅಲ್ಲ. ನಮಗೆ ಬೇಕಾದ ವಾಸ್ತವವನ್ನು ನಾವು ಸೃಷ್ಟಿ ಮಾಡಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಣದ ಫಲಾನುಭವಿಗಳಾದ/ಆಗುವ ಸಮಾಜ ಜಾಗೃತವಾಗಬೇಕು. ಸದ್ಯದ ವ್ಯವಸ್ಥೆಯಲ್ಲಿನ ಎಲ್ಲ ಹಂತಗಳಲ್ಲಿನ ದೋಷಗಳನ್ನು ಹಾಗೂ ಉತ್ತಮಾಂಶಗಳನ್ನು ಪಟ್ಟಿಮಾಡುವ ಕೆಲಸ ಆಗಬೇಕಾಗಿದೆ. ಇಲ್ಲಿ ಆರ್ಥಿಕ ಸಂಪನ್ಮೂಲಕ್ಕಿಂತಲೂ ತರಬೇತಿ ಹೊಂದಿದ, ಗುರಿಯಡೆ ಗಮನವಿಟ್ಟು ಸಾಗುವ ಶಿಕ್ಷಕ ಹಾಗೂ ಶಾಲಾ ವ್ಯವಸ್ಥಾಪಕ ವ್ಯವಸ್ಥೆ ಮುಖ್ಯವಾಗುತ್ತದೆ. ಹೌದು, ವ್ಯವಸ್ಥಾಪನ ಜಾಲಕ್ಕೂ ತರಬೇತಿಯ ಅವಶ್ಯಕತೆಯಿದೆ.

ಮತ್ತೊಂದು ಆಗಬೇಕಾಗಿರುವ ಅಂಶವೆಂದರೆ ಅಧ್ಯಯನ. ಇಪ್ಪತ್ತೈದು ವರ್ಷಗಳಿಗೆ ಒಂದು ತಲೆಮಾರು ಎಂದುಕೊಂಡರೆ ಸ್ವಾತಂತ್ರೋತ್ತರ ಭಾರತದ ಸುಮಾರು ಮೂರು ತಲೆಮಾರುಗಳು ಸದ್ಯದ ಶಿಕ್ಷಣದ ವ್ಯವಸ್ಥೆಯಲ್ಲಿ ಸಾಗಿ ಹೋಗಿದೆ. ಫಲಿತಾಂಶವೇನು? ಇದು ನಕಾರಾತ್ಮಕ ಪ್ರಶ್ನೆಯಲ್ಲ, ಶೈಕ್ಷಣಿಕ ಪ್ರಶ್ನೆ. ಅಧ್ಯಯನದಿಂದ ಏನೇನು ಬದಲಾವಣೆಗಳು ಸಾಧ್ಯವಾಗಿದೆ ಎಂಬುದನ್ನು ಅರಿಯಬೇಕಿದೆ; ಹಾಗೂ ಆ ಫಲಿತಗಳು ನಮ್ಮ ನೀತಿ ಆಯೋಗಕ್ಕೆ (ಹಿಂದಿನ ಯೋಜನಾ ಆಯೋಗ) ಮಾರ್ಗದರ್ಶಿ ಸೂತ್ರಗಳಾಗಬೇಕಿದೆ. ಮೀಸಲಾತಿಯ ದೊಡ್ಡ ದೊಡ್ಡ ಪ್ರಶ್ನೆಗಳನ್ನು ಬದಿಗಿಟ್ಟು ಕೇವಲ ಶಿಕ್ಷಣಕ್ಷೇತ್ರದಲ್ಲಿ ಮಕ್ಕಳಿಗೆ ನೀಡಲಾದ ಮೀಸಲಾತಿಯು ಆಯಾ ಸಮುದಾಯದಲ್ಲಿ ತಂದ ಆರ್ಥಿಕ ಹಾಗೂ (ಅಥವಾ ಅದಕ್ಕಿಂತಲೂ ಮುಖ್ಯವಾದ) ಸಾಮಾಜಿಕ ಬದಲಾವಣೆಯನ್ನು ಅಧ್ಯಯನ ಮಾಡಿ ಅರಿಯಬೇಕಾಗಿದೆ ಮತ್ತು ಈ ಮಾಹಿತಿಯನ್ನು ಸೂಕ್ತ ಇಲಾಖೆಗಳು ಬಳಸಿಕೊಳ್ಳಬೇಕಾಗಿದೆ. ಸಮಾನ ಅವಕಾಶದ ಮೊದಲ ಮೆಟ್ಟಿಲು ಮೀಸಲಾತಿ. ಇದು ಈ ಸುಮಾರು ಮುಕ್ಕಾಲು ಶತಮಾನದಲ್ಲಿ ಉಂಟುಮಾಡಿರುವ ಬದಲಾವಣೆಯನ್ನು ಒಂದು ಗಟ್ಟಿ ಚೌಕಟ್ಟಿನಲ್ಲಿ ಅಧ್ಯಯನ ಮಾಡಿ ಅರಿಯಬೇಕಾಗಿದೆ. ಇದು ಆಯಾ ಸಮುದಾಯಗಳ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹ ಸಹಕಾರಿಯಾಗುತ್ತದೆ. ಇದಕ್ಕೆ ಇನ್ನು ಅನೇಕ ಆಯಾಮಗಳಿವೆ.

ಮತ್ತೊಂದು ಮಹತ್ತರ ಬದಲಾವಣೆಯಾಗಬೇಕಾಗಿರುವುದು ಪಠ್ಯಕ್ರಮದ ಏಕರೂಪತೆ ಹಾಗೂ ಸಮಗ್ರತೆ. ಜ್ಞಾನವು ಸಾಗರಕ್ಕಿಂತಲೂ ದೊಡ್ಡದಾಗಿರುವಾಗ ಮೊದಲ ಹಂತಗಳಲ್ಲಿ ನಾವು ಏನನ್ನು ಅಥವಾ ಏನೇನನ್ನು ಕಲಿಸುತ್ತೇವೆ ಎಂಬುದು ಬಹುಮುಖ್ಯ ಮತ್ತು ಬಹುಮುಖ್ಯ ಸವಾಲು ಕೂಡ. ಇಲ್ಲಾಗುವ ಸಣ್ಣ ತಪ್ಪು ಅಥವಾ ಲೋಪ ಒಂದು ದೊಡ್ಡ ವಿಪ್ಪತ್ತನ್ನೇ ತರುವ ಸಾಧ್ಯತೆಯಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಪಠ್ಯಕ್ರಮವನ್ನು ನಿರೂಪಿಸಬೇಕಾಗುತ್ತದೆ. ಉದಾಹರಣೆಗಳನ್ನು ನೀಡುವುದು ಇಲ್ಲಿನ ಉದ್ದೇಶವಲ್ಲದಿದ್ದರೂ ವಿಷಯ ಸ್ಪಷ್ಟತೆಗಾಗಿ ಪರಿಶೀಲಿಸುವುದು ಯುಕ್ತ. ಹತ್ತನೇ ತರಗತಿಯ ನಂತರ ವಿದ್ಯಾರ್ಥಿ ತನಗೆ ಬೇಕಾದ ಶಾಖೆಗೆ ಹೋಗಿಬಿಡುತ್ತಾನೆ. ಪದವಿಯ ನಂತರ ಭಾರತದ ಆಡಳಿತ ಸೇವೆಯಂತಹ ಹುದ್ದೆಗೆ ಬಂದಾಗ ವಿಜ್ಞಾನ, ಅರ್ಥಶಾಸ್ತ್ರ – ಹೀಗೆ ವಿಭಿನ್ನ ನೆಲೆಗಳಲ್ಲಿ ಜವಾಬ್ದಾರಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಮೂಲಭೂತ ಶಿಕ್ಷಣ ಅಸ್ತಿಭಾರವನ್ನು ಹಾಕಿರಬೇಕು. ಸದ್ಯ ಹಾಗಿಲ್ಲದ ಕಾರಣ ಅನೇಕ ದೊಡ್ಡ ಸಮಸ್ಯೆಗಳನ್ನು ನಾವು ಆಹ್ವಾನಿಸುತ್ತಿದ್ದೇವೆ.

ಇನ್ನು ಪರೀಕ್ಷಾ ವ್ಯವಸ್ಥೆ. ಈಗಿರುವುದು ಸರಿಯಿಲ್ಲ ಎಂಬ ನೆಲೆಯಿಂದ ಹೇಳುತ್ತಿರುವುದಲ್ಲ, ಯುಕ್ತ ವ್ಯವಸ್ಥೆ ಹೇಗಿರಬಹುದು ಹಾಗೂ ಅದೆಷ್ಟು ಪ್ರಾಯೋಗಿಕ ಎಂಬುದಷ್ಟೆ ಇಲ್ಲಿನ ಜಿಜ್ಞಾಸೆ. ಸದ್ಯದ ವ್ಯವಸ್ಥೆಯಲ್ಲಿ ಸರಿಸುಮಾರು ವಾರ್ಷಿಕ ಪರೀಕ್ಷೆಯನ್ನು ಗೆದ್ದುಬಿಟ್ಟರೆ ಪಾಸಾದಂತೆಯೇ. ಇದು ತಪ್ಪಬೇಕು. ಪ್ರತಿ ಹಂತದಲ್ಲಿಯೂ ಆತಂಕ ಒತ್ತಡಕ್ಕೆ ಒಳಗಾಗದ, ಭ್ರಷ್ಟಾಚಾರ ನಡೆದರೂ ಅದರ ಪ್ರಭಾವವನ್ನು ನಗಣ್ಯವಾಗಿಸುವ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಅರ್ಥಪೂರ್ಣ ಚರ್ಚೆ–ಅಧ್ಯಯನಗಳು ನಡೆದು ನಮ್ಮ ಮಕ್ಕಳ ಸಂತೋಷವನ್ನೂ ಸೃಜನಶೀಲತೆಯನ್ನೂ ಹೆಚ್ಚಿಸುವಂಥ, ಆ ಮೂಲಕ ಸುಂದರ ಸಮಾಜವನ್ನು ಸೃಷ್ಟಿಸಬಲ್ಲಂಥ ಶಿಕ್ಷಣವನ್ನು ಪಡೆಯುವಂತಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.