ADVERTISEMENT

ಮಷಿನ್ ಲರ್ನಿಂಗ್ ಭವಿಷ್ಯದ ಉದ್ಯೋಗದಾತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 19:30 IST
Last Updated 10 ಡಿಸೆಂಬರ್ 2019, 19:30 IST
Machine Learning with technology and engineering concept. Human head (profile) with a circuit brain board inside and Machine Learning logo. Selective focusMachine Learning face logo
Machine Learning with technology and engineering concept. Human head (profile) with a circuit brain board inside and Machine Learning logo. Selective focusMachine Learning face logo   

ಮಷಿನ್ ಲರ್ನಿಂಗ್ ಅತ್ಯಂತ ಕುತೂಹಲಕಾರಿ ತಂತ್ರಜ್ಞಾನಗಳಲ್ಲಿ ಒಂದು ಎನ್ನಬಹುದು. ಹೆಸರೇ ಹೇಳುವಂತೆ ಕಲಿಕಾ ಸಾಮರ್ಥ್ಯದಲ್ಲಿ ಕಂಪ್ಯೂಟರ್‌ ಮತ್ತು ಮನುಷ್ಯರ ಮಧ್ಯೆ ಅಂತರವನ್ನು ಕಡಿಮೆ ಮಾಡಿದೆ. ಇದನ್ನು ಭವಿಷ್ಯದ ಉದ್ಯೋಗದಾತ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮಷಿನ್ ಲರ್ನಿಂಗ್ ಎನ್ನುವುದು ಸದ್ಯಕ್ಕಂತೂ ಬಹಳ ಸದ್ದು ಮಾಡುತ್ತಿರುವ ಪ್ರಚಲಿತ ಮತ್ತು ಬಹು ಬೇಡಿಕೆಯುಳ್ಳ ಅಧ್ಯಯನದ ಕ್ಷೇತ್ರ. ಡಿಜಿಟಲ್‌ ವಲಯದಲ್ಲಿ ಸಾಕಷ್ಟು ಆಸಕ್ತಿ ಮೂಡಿಸಿರುವ ಇದು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ಉದ್ಯೋಗ ಕ್ಷೇತ್ರದಲ್ಲೂ ಸಂಚಲನ ಮೂಡಿಸಿದೆ. ಹಾಗಾದರೆ ಈ ಮಷಿನ್‌ ಲರ್ನಿಂಗ್‌ ಅಂದರೆ ಏನು? ಇದಕ್ಕೂ, ಕೃತಕ ಬುದ್ಧಿಮತ್ತೆ (ಎಐ)ಗೂ ಯಾವ ಸಂಬಂಧ? ಬಿಗ್‌ ಡೇಟಾ ಇದಕ್ಕೆ ಸಂಪರ್ಕ ಕೊಂಡಿಯಾಗಿರುವುದು ಹೇಗೆ? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದರೆ ಅಚ್ಚರಿಗಳ ಸರಮಾಲೆಯೇ ಸಿಗಬಹುದು.

ಮೊದಲನೆಯದಾಗಿ ಮಷಿನ್ ಲರ್ನಿಂಗ್ ಎಂದರೆ ಕೃತಕ ಬುದ್ಧಿಮತ್ತೆಯ ಆ್ಯಪ್‌ ಎಂದು ಸರಳವಾಗಿ ಹೇಳಬಹುದು. ಕಂಪ್ಯೂಟರ್‌ಗಳಿಗೆ ಸ್ಪಷ್ಟವಾಗಿ ಪ್ರೋಗ್ರಾಮ್ ಮಾಡದೆ ನಿರ್ದಿಷ್ಟ ಡೇಟಾ ಸೆಟ್‌ನಲ್ಲಿನ ಅನುಭವಗಳು, ಅವಲೋಕನಗಳು ಮತ್ತು ಮಾದರಿಗಳನ್ನು ಆಧರಿಸಿ ಸ್ವಾಯತ್ತವಾಗಿ ಕಲಿಯುವ ಸಾಮರ್ಥ್ಯವನ್ನು ಯಂತ್ರಗಳಿಗೆ ಒದಗಿಸುವುದು. ಡೇಟಾವನ್ನು ತನ್ನಷ್ಟಕ್ಕೇ ಬಳಸುವಂತೆ ಕಂಪ್ಯೂಟರ್‌ ಪ್ರೋಗ್ರಾಮ್‌ ಅನ್ನು ಅಭಿವೃದ್ಧಿಪಡಿಸಲಾಗುವುದು. ಅಂದರೆ ಇಲ್ಲಿ ಮಾನವನ ಮಧ್ಯಸ್ಥಿಕೆ ಅಥವಾ ನೆರವಿಲ್ಲದೇ ಕಂಪ್ಯೂಟರ್‌ ತನ್ನಷ್ಟಕ್ಕೆ ಕಲಿತು, ಅದಕ್ಕೆ ಅನುಗುಣವಾಗಿ ತನ್ನ ಕ್ರಿಯೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಫಲಿತಾಂಶ ನೀಡುತ್ತದೆ.

ADVERTISEMENT

ಕೃತಕ ಬುದ್ಧಿಮತ್ತೆಯ ಮೂಲ

ಮೊದಲೇ ಹೇಳಿದಂತೆ ಮಷಿನ್‌ ಲರ್ನಿಂಗ್‌ ಎಂಬುದು ಕೃತಕ ಬುದ್ಧಿಮತ್ತೆಯ ಒಂದು ಮೂಲಾಂಶ. ಜೊತೆಗೆ ಚಾಲಕ ಶಕ್ತಿಯೂ ಹೌದು. ಗಣಕ ಯಂತ್ರ ತನಗೆ ತಾನೇ ಕಲಿತುಕೊಳ್ಳುವಂತೆ ಅದನ್ನು ಯೋಜಿಸಲಾಗುತ್ತದೆ. ನಿರ್ದಿಷ್ಟ ಕೆಲಸಗಳಲ್ಲಿ ತನ್ನ ಸಾಮರ್ಥ್ಯ‌ವನ್ನು ಹೆಚ್ಚಿಸಿಕೊಳ್ಳುವ ರೀತಿಯಲ್ಲಿ ಅದರ ಒಟ್ಟಾರೆ ಸ್ವರೂಪವಿರುತ್ತದೆ. ಬೇರುಮಟ್ಟದಲ್ಲಿ ಅದನ್ನು ನೋಡಿದರೆ ಮಷಿನ್‌ ಲರ್ನಿಂಗ್‌ ಎನ್ನುವುದು ಬಿಗ್ ಡೇಟಾಗಳ ವಿಶ್ಲೇಷಣೆ ಎನ್ನಬಹುದು. ಮಾಹಿತಿಯನ್ನು ತಾನೇ ತಾನಾಗಿ ತೆಗೆದುಕೊಳ್ಳುತ್ತದೆ ಮತ್ತು ಪ್ರೋಗ್ರಾಮ್‌ಗಳನ್ನು ರೂಪಿಸುವುದಕ್ಕೆ ಅದನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ ನಿಮ್ಮ ಭವಿಷ್ಯ, ಮುಂದಿನ ನಿಮ್ಮ ನಡೆ ಸರಿ ಇರಬಹುದು ಅಥವಾ ತಪ್ಪೇ ಇರಬಹುದು, ಆದರೆ ಅದನ್ನು ಗ್ರಹಿಸಲು ಮತ್ತು ನಿಖರವಾಗಿ ಹೇಳಲು ಅದು ಕಲಿಯುತ್ತದೆ.

ಗೂಗಲ್‌, ಅಮೆಜಾನ್‌, ನೆಟ್‌ಫ್ಲಿಕ್ಸ್‌, ಫ್ಲಿಪ್‌ಕಾರ್ಟ್‌, ಮೈಂತ್ರಾದಂಥ ಆನ್‌ಲೈನ್‌ ವ್ಯಾಪಾರಿ ಸಂಸ್ಥೆಗಳು ಗಣಕದಲ್ಲಿ ನಿಮ್ಮ ಹುಡುಕಾಟ, ಖರೀದಿ, ಅದರ ಚರಿತ್ರೆಯ ಅಂಕಿ– ಅಂಶ ಮತ್ತು ದಾಖಲೆಗಳನ್ನಿಟ್ಟುಕೊಂಡು ನಿಮಗೆ ಏನು ಇಷ್ಟ ಎಂಬುದನ್ನು ಊಹೆ ಮಾಡುತ್ತವೆ. ನಿಮ್ಮ ಅಭಿರುಚಿ, ಖರ್ಚು ಮಾಡುವ ನಿಮ್ಮ ಸಾಮರ್ಥ್ಯ‌ ಎಲ್ಲವನ್ನೂ ಅಳೆದು ತೂಗಿ ಇಂಥದ್ದೇ ಕೆಲವು ಸಂಸ್ಥೆಗಳಿಗೆ ನಿಮ್ಮ ಖರೀದಿ ಚಹರೆಯನ್ನು ರವಾನಿಸುತ್ತವೆ. ಪ್ರತಿನಿತ್ಯ ನಿಮ್ಮ ಇ–ಮೇಲ್ ಇನ್‌ಬಾಕ್ಸ್‌ಗೆ ಬಂದು ಬೀಳುವ ಸಾಮಗ್ರಿ, ನಾನಾ ತರಹದ ಸೇವೆಗಳ ಸೇವಾದಾತರ ವಿವರಗಳು ಎಲ್ಲವೂ ನೀವು ಜಾಲಾಡಿದ್ದರ ಫಲ. ನಿಮ್ಮ ಕಂಪ್ಯೂಟರ್‌ನ ಮೌಸ್‌ನ ಪ್ರತಿಯೊಂದು ಚಲನೆ, ನಿಲುಗಡೆಯ ಮೇಲೆ ಹದ್ದಿನ ಕಣ್ಣಿರುತ್ತದೆ.

ಲಿಂಕ್ಡ್‌ಇನ್‌ ಸಮೀಕ್ಷೆ ಪ್ರಕಾರ ನಂ.1 ಉದ್ಯೋಗ ‘ಮಷಿನ್‌ ಲರ್ನಿಂಗ್‌ ಎಂಜಿನಿಯರ್‌’. ಕಂಪ್ಯೂಟರ್‌ ಪ್ರೋಗ್ರಾಮ್‌ಗಳನ್ನು ಅಧ್ಯಯನ ನಡೆಸುವ ಬುದ್ಧಿಶಾಲಿ ಕೆಲಸವಿದು. ಉದಾಹರಣೆಗೆ ಸ್ವಯಂ ಚಾಲಿತ ಕಾರ್‌ನಂತೆ ಮಷಿನ್‌ ಲರ್ನಿಂಗ್‌ ಎಂಜಿನಿಯರ್‌ ಕಾರ್ಯನಿರ್ವಹಿಸುತ್ತಾನೆ. ಉದಾಹರಣೆಗೆ ನಮ್ಮ ಬ್ಯಾಂಕ್‌ಗಳಿಗೆ ಆನ್‌ಲೈನ್‌ ವಂಚನೆ ಅಥವಾ ಮನಿ ಲಾಂಡರಿಂಗ್‌ ಬಗ್ಗೆ ತಕ್ಷಣ ಹೇಗೆ ಗೊತ್ತಾಗುತ್ತದೆ ಎಂದು ನೀವು ಕೇಳಿದರೆ ಇದರ ಹಿಂದೆ ಮಷಿನ್‌ ಲರ್ನಿಂಗ್‌ ಎಂಜಿನಿಯರ್‌ಗಳ ಚಾಕಚಕ್ಯತೆಯಿರುತ್ತದೆ.

ದತ್ತಾಂಶ ವಿಶ್ಲೇಷಣೆ

ಮತ್ತೊಂದು ಉದಾಹರಣೆ ತೆಗೆದುಕೊಂಡರೆ 2018 ಆಗಸ್ಟ್‌ನಿಂದ 2019ರ ಆಗಸ್ಟ್‌ವರೆಗೆ ಇಂಟರ್‌ನೆಟ್‌ ಬಳಸಿ ಶೋಧ ಕಾರ್ಯಾಚರಣೆ ಮಾಡುವವರ ಸಂಖ್ಯೆ 450 ಕೋಟಿ. ಪ್ರತಿ ಸೆಕೆಂಡ್‌ಗೆ ಏನಿಲ್ಲವೆಂದರೂ 35 ಸಾವಿರ ಸರ್ಚ್‌ಗಳ ಸಂಸ್ಕರಣೆ ನಡೆಯುತ್ತಿರುತ್ತದೆ. ದಿನವೊಂದಕ್ಕೆ 350 ಕೋಟಿ. ವರ್ಷಕ್ಕೆ 1.2 ಲಕ್ಷ ಕೋಟಿ. ಪ್ರತಿವರ್ಷ ಮನುಷ್ಯ ಸಂಕುಲ ಆನ್‌ಲೈನ್‌ನಲ್ಲಿ ವ್ಯಯಿಸುವ ಕಾಲವನ್ನು ಒಟ್ಟು ಮಾಡಿದರೆ ಒಂದು ಶತಕೋಟಿ ವರ್ಷವಾಗುತ್ತದೆ! ಇದರ ಅರ್ಥ ಪ್ರತಿಯೊಬ್ಬರ ಹುಡುಕಾಟದ ಜಾಡು ಹಿಡಿದು ಅವರು ಹೀಗೆಯೇ ಎಂದು ಕಣಿ ಹೇಳುವುದಕ್ಕೆ ಎಷ್ಟೊಂದು ಕಷ್ಟ ಎಂಬುದನ್ನು ಊಹೆ ಮಾಡಿ. ಮಷಿನ್‌ ಲರ್ನಿಂಗ್‌ ಒತ್ತಾಸೆಯಿಂದ ಈ ಅಗಾಧ ದತ್ತಾಂಶಗಳನ್ನು ವಿಶ್ಲೇಷಿಸಬಹುದು.

ಮಷಿನ್‌ ಲರ್ನಿಂಗ್‌ನ ಬಳಕೆ ಮತ್ತು ಅನ್ವಯದ ಸಾಧ್ಯತೆ ದಿನೇ ದಿನೇ ಹೆಚ್ಚುತ್ತಲೇ ಸಾಗುತ್ತಿದೆ. ಮನುಷ್ಯ ಶ್ರಮದ ಯಾಂತ್ರೀಕರಣ, ಸಂಪರ್ಕ ವ್ಯವಸ್ಥೆಯ ನವೀಕರಣ, ನಿತ್ಯದ ಕೆಲಸಗಳಲ್ಲಿ ಮಷಿನ್‌ ಲರ್ನಿಂಗ್‌ನ ಪಾತ್ರ ಅಗಾಧವಾಗಿದೆ.

ಮಷಿನ್‌ ಲರ್ನಿಂಗ್‌ ಭವಿಷ್ಯದ ಬಹು ದೊಡ್ಡ ಉದ್ಯೋಗದಾತ ಎಂಬುದರಲ್ಲಿ ಎರಡು ಮಾತಿಲ್ಲ. ಡಿಜಿಟಲ್ ಯುಗದಲ್ಲಿ ಖಚಿತವಾಗಿಯೂ ಇದು ಅತಿ ದೊಡ್ಡ ಗೇಮ್‌ ಚೇಂಜರ್ ಎಂಬ ಗುಮಾನಿಯೇ ಬೇಡ. ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಒಂದು ಸಂಸ್ಥೆಯ ಪ್ರಕಾರ ಮುಂದಿನ 10 ವರ್ಷಗಳಲ್ಲಿ ಈ ಕ್ಷೇತ್ರದ ವಹಿವಾಟು 15 ಶತಕೋಟಿ ಡಾಲರ್ ತಲುಪುವ ನಿರೀಕ್ಷೆ ಇದೆ.

ಮಷಿನ್‌ ಲರ್ನಿಂಗ್‌ ಮತ್ತು ಕೃತಕ ಬುದ್ಧಿಮತ್ತೆ ಒಂದೇ ನಾಣ್ಯದ ಎರಡು ಮುಖಗಳು. ಸದ್ಯದ ಮಟ್ಟಿಗೆ ವಿಶ್ವಮಟ್ಟದಲ್ಲಿ ಗ್ರಾಹಕ ಸೇವಾ (ಕಸ್ಟಮರ್ ಸರ್ವೀಸ್) ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಂಪನಿಗಳ ಒಳಗಡೆ ಇವೆರಡರ ಬಳಕೆ ಹೆಚ್ಚಾಗಿದ್ದು ಮುಂದಿನ ವರ್ಷದ ಅಂತ್ಯದೊಳಗೆ
ಶೇ 90ರಷ್ಟು ಗ್ರಾಹಕ ಸೇವೆಗಳು ಮಷಿನ್‌ ಲರ್ನಿಂಗ್‌ ಮತ್ತು ಕೃತಕ ಬುದ್ಧಿಮತ್ತೆಯ ಮೇಲೆಯೇ ಅವಲಂಬಿಸಿವೆ ಎಂದು ಅಂದಾಜು ಮಾಡಲಾಗಿದೆ.

ಉದ್ಯೋಗಾವಕಾಶ

ಜೆ.ಪಿ.ಮಾರ್ಗನ್‌, ನೆಟ್‌ಫ್ಲಿಕ್ಸ್‌, ಫ್ಲಿಪ್‌ಕಾರ್ಟ್‌, ಅಮೆಜಾನ್, ಗೂಗಲ್, ಮೈಕ್ರೊಸಾಫ್ಟ್‌ನಂತಹ ಬಹು ದೊಡ್ಡ ಕಂಪನಿಗಳು ಸುಮಾರು ಎರಡು ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಮುಖ್ಯವಾಗಿ ಮಷಿನ್‌ ಲರ್ನಿಂಗ್‌ ಸ್ಟ್ರಾಟೆಜಿ, ಕ್ಲೌಡ್ ಮಷಿನ್‌ ಲರ್ನಿಂಗ್‌ ಎಂಜಿನಿಯರಿಂಗ್, ಮಷಿನ್‌ ಲರ್ನಿಂಗ್‌ ಸ್ಟುಡಿಯೊ ಮೊದಲಾದವುಗಳನ್ನು ಆರಂಭಿಸಿ ಬಹಳಷ್ಟು ಉದ್ಯೋಗ ಅವಕಾಶಗಳನ್ನು ಒದಗಿಸಿವೆ. ಮುಂದಿನ ದಿನಮಾನಗಳಲ್ಲಿ ಚಿಕ್ಕ ಚಿಕ್ಕ ಕಂಪನಿಗಳು ಇದೇ ನಿಟ್ಟಿನಲ್ಲಿ ಸಾಗಿ ಮಷಿನ್‌ ಲರ್ನಿಂಗ್‌ ಕ್ಷೇತ್ರದಲ್ಲಿ ಯುವ ಜನತೆಗೆ ಅತಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವಲ್ಲಿ ಎರಡು ಮಾತಿಲ್ಲ.

ಕನಿಷ್ಠ ಎಂಜಿನಿಯರಿಂಗ್‌ನಲ್ಲಿ (ಯಾವುದೇ ವಿಭಾಗದಲ್ಲಿ) ಪದವಿ ಅಥವಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಈ ಕೋರ್ಸ್‌ ಮಾಡಬಹುದು.

ವಿದ್ಯಾರ್ಥಿಗಳು ಮಷಿನ್ ಲರ್ನಿಂಗ್ ಕೋರ್ಸ್ ಕಲಿಯುವ ಸಂದರ್ಭದಲ್ಲಿ ಈ ಕೆಳಕಂಡ ವಿಷಯಗಳು ಕೋರ್ಸ್‌ನಲ್ಲಿ ಇವೆ ಎಂದು ಮುಂಚಿತವಾಗಿ ತಿಳಿದುಕೊಂಡರೆ ಒಳ್ಳೆಯದು.

  • ಬೇಸಿಕ್ಸ್ ಆಫ್ ಪೈತಾನ್, ಸ್ಪಾರ್ಕ್ ಮತ್ತು ಸ್ಟ್ಯಾಟಿಸ್ಟಿಕ್ಸ್.
  • ಡೀಪ್ ಲರ್ನಿಂಗ್ ಆಲ್ಗರಿದಮ್ಸ್
  • ಡೇಟಾ ಮಾಡೆಲಿಂಗ್ ವಿಥ್‌ ಪೈತಾನ್
  • ಫೀಚರ್ ಎಂಜಿನಿಯರಿಂಗ್
  • ಅಪ್ಲೈಡ್ ಮಷಿನ್ ಲರ್ನಿಂಗ್ ಮತ್ತು ಟೆಕ್ಸ್ಟ್ ಮೈನಿಂಗ್
  • ಡೇಟಾ ಸೈನ್ಸ್ ಎಕ್ಸ್‌ಪರ್ಟ್
  • ಬಿಲ್ಡ್ ಫೌಂಡೇಶನಲ್ ಎಂ.ಎಲ್. ಮಾಡೆಲ್ಸ್ ಇನ್ ಪೈತಾನ್
  • ಸ್ಟ್ಯಾಟಿಸ್ಟಿಕ್ಸ್, ಪ್ರೋಗ್ರಾಮಿಂಗ್ ಅಂಡ್ ಆಲ್ಗರಿದಮ್ಸ್
  • ಸೂಪರ್‌ವೈಸ್ಡ್ ಲರ್ನಿಂಗ್
  • ಅನ್‌ಸೂಪರ್‌ವೈಸ್ಡ್ ಲರ್ನಿಂಗ್
  • ಅಪ್ಲಿಕೇಶನ್ಸ್ ಆಫ್ ಮಷಿನ್ ಲರ್ನಿಂಗ್ ಲೈಕ್ ಫೇಸ್ ಡಿಟೆಕ್ಶನ್, ಸ್ಪೀಚ್ ರೆಕಗ್ನಿಶನ್
  • ಡಿಸ್ಕ್ರಿಪ್ಟಿವ್ ಅನಲೆಟಿಕ್ಸ್ - ಡೇಟಾ ವಿಶುವಲೈಜೇಶನ್ (ಯೂಸಿಂಗ್ ಪೈತಾನ್ )
  • ಡೇಟಾ ಇನ್‌ಸ್ಪೆಕ್ಶನ್ ಅಂಡ್ ಪ್ರೀ- ಪ್ರೊಸೆಸಿಂಗ್ ಟೆಕ್ನಿಕ್ಸ್

ಮಷಿನ್ ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಕಲಿಸುವ ಸರ್ಕಾರಿ ವಿದ್ಯಾಸಂಸ್ಥೆಗಳು

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಬೆಂಗಳೂರು
  • ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಶನ್ ಟೆಕ್ನಾಲಜಿ, ಬೆಂಗಳೂರು

(ಲೇಖಕರು ಸಹಾಯಕ ಅಧ್ಯಾಪಕರು, ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.