ADVERTISEMENT

ಎರಡೂವರೆ ವರ್ಷ ಕಳೆದರೂ ಮಸೂದೆ ರೂಪಿಸದ ಸರ್ಕಾರ:ಮಹಾರಾಣಿ ಕ್ಲಸ್ಟರ್‌ವಿ.ವಿಗೆ ಗ್ರಹಣ

ಆರ್‌.ಜೆ.ಯೋಗಿತಾ
Published 23 ಆಗಸ್ಟ್ 2018, 19:32 IST
Last Updated 23 ಆಗಸ್ಟ್ 2018, 19:32 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ ಇನ್ನು ಮೂರು ತಿಂಗಳೊಳಗೆ ಕಾರ್ಯಾರಂಭ ಮಾಡದಿದ್ದರೆ, ಯುಜಿಸಿಯಿಂದ ಬರಬೇಕಾಗಿರುವ ಬಾಕಿ ಅನುದಾನ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.

ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು 2015ರ ಡಿಸೆಂಬರ್ 1ರಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅನುಮೋದನೆ ನೀಡಿತ್ತು. ಎರಡೂವರೆ ವರ್ಷ ಕಳೆದರೂ ಅದಕ್ಕೊಂದು ಕಾಯ್ದೆ ರಚಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

‘ವಿಶ್ವವಿದ್ಯಾಲಯ ಕಾರ್ಯಾರಂಭಮಾಡದ ಬಗ್ಗೆ ಈಗಾಗಲೇ ಎರಡು ಬಾರಿ ಯುಜಿಸಿ ಅಸಮಾಧಾನ ವ್ಯಕ್ತಪಡಿಸಿದೆ. ಈ ವರ್ಷವೂ ಅದು ನೆರವೇರದಿದ್ದರೆ, ಬಾಕಿ ನೀಡಬೇಕಾಗಿರುವ ಅನುದಾನವನ್ನು ಯುಜಿಸಿ ತಡೆ ಹಿಡಿಯಬಹುದು’ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಮಹಾರಾಣಿ ಕಾಲೇಜಿನ ಜೊತೆ ಮಂಡ್ಯದ ಸರ್ಕಾರಿ ಕಾಲೇಜನ್ನು ಯುನಿಟರಿ ವಿಶ್ವವಿದ್ಯಾಲಯವನ್ನಾಗಿ ಘೋಷಿಸಲಾಗಿದೆ. ಅದು ಸಹ ಇನ್ನೂ ಶುರುವಾಗಿಲ್ಲ. ನೀಡಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ರಾಜ್ಯವನ್ನು ಕಪ್ಪುಪಟ್ಟಿಗೆ ಸೇರಿಸುವ ಸಂಭವವಿರುತ್ತದೆ. ಇದರಿಂದ ರಾಜ್ಯಕ್ಕೆ ಯುಜಿಸಿಯಿಂದ ಬರುವ ಭವಿಷ್ಯದ ಅನುದಾನಗಳೂ ಕಡಿತವಾಗಬಹುದು’ ಎಂದರು.

ಕರ್ನಾಟಕದ ಜೊತೆಗೆ 8 ಕಡೆಗಳಲ್ಲಿ ಕ್ಲಸ್ಟರ್ ವಿಶ್ವವಿದ್ಯಾಲಯಗಳನ್ನು ಘೋಷಿಸಲಾಗಿತ್ತು. ಈ ಪೈಕಿ ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ಗುಜರಾತ್‌, ಒಡಿಶಾಗಳಲ್ಲಿ ಪ್ರತ್ಯೇಕ ಕಾಯ್ದೆ ರೂಪಿಸಿ, ಕುಲಪತಿಗಳ ನೇಮಕ ಮಾಡಲಾಗಿದೆ. ಆದರೆ, ಇಲ್ಲಿ ಮಹಾರಾಣಿ ಕಾಲೇಜು ಇನ್ನೂ ಬೆಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿಯೇ ಇದೆ.

ಕ್ಲಸ್ಟರ್ ವಿಶ್ವವಿದ್ಯಾಲಯ ಸಾಮಾನ್ಯ ವಿಶ್ವವಿದ್ಯಾಲಯಗಳಂತೆ ಅಲ್ಲ. ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ರೂಸಾ) ನಿಯಮಗಳನ್ನೂ ಒಳಗೊಂಡಂತೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು. 2016ರ ಜೂನ್‌ನಲ್ಲಿ ಸವದತ್ತಿ ನೇತೃತ್ವದ ಸಮಿತಿ ಕರಡು ಮಸೂದೆ ಸಿದ್ಧಪಡಿಸಿ, ಕಾನೂನು ಇಲಾಖೆಗೆ ಸಲ್ಲಿಸಿತ್ತು. ಒಂದು ತಿಂಗಳಲ್ಲಿ ಅಲ್ಲಿಯೂ ಒಪ್ಪಿಗೆ ದೊರೆತಿತ್ತು. ವಿಧಾನಮಂಡಲದಲ್ಲಿ ಮಂಡಿಸುವ ಹೊತ್ತಿಗೆ ಉನ್ನತ ಶಿಕ್ಷಣ ಇಲಾಖೆಯ ಜವಾಬ್ದಾರಿ, ಆಗಷ್ಟೇ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಬಸವರಾಜ ರಾಯರಡ್ಡಿ ಅವರ ಹೆಗಲೇರಿತು.

‘ಕ್ಲಸ್ಟರ್‌ ವಿಶ್ವವಿದ್ಯಾಲಯ ಸ್ಥಾಪನೆಗೆ ‍ಪೂರಕವಾದ ಮಸೂದೆ ಮಂಡಿಸುವ ನಿರ್ಧಾರವನ್ನು ಕೈಬಿಟ್ಟ ಸಚಿವ ರಾಯರಡ್ಡಿ, 2017ರ ಸೆಪ್ಟೆಂಬರ್‌ನಲ್ಲಿ ‘ಸಮಗ್ರ ವಿಶ್ವವಿದ್ಯಾಲಯ ಮಸೂದೆ’ ರೂಪಿಸಿ, ಅದರಲ್ಲಿಯೇ ಕ್ಲಸ್ಟರ್‌ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸೇರಿಸಿದರು. 2018ರ ಫೆಬ್ರುವರಿಯಲ್ಲಿ ಈ ಮಸೂದೆಗೆ ವಿಧಾನಮಂಡಲ ಅನುಮೋದನೆ ನೀಡಿತು. ಆದರೆ, ಮಸೂದೆಗೆ ಅಂಕಿತ ಹಾಕಲು ಒಪ್ಪದ ರಾಜ್ಯಪಾಲರು, ಮಸೂದೆಯಲ್ಲಿದ್ದ ದೋಷಗಳನ್ನು ಸರಿಪಡಿಸುವಂತೆ ಸೂಚಿಸಿ, ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ.

‘ಮಸೂದೆಯನ್ನು ವಾಪಸ್‌ ಕಳುಹಿಸಿರುವುದರಿಂದ ಅದರ ನಿಬಂಧನೆಗೆ ಒಳಪಟ್ಟು ಕ್ಲಸ್ಟರ್‌ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕವಾಗಿ ಮಸೂದೆ ಜಾರಿಗೆ ತರಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಒಪ್ಪಿಗೆ ಪಡೆಯಬಹುದು. ಸೆಪ್ಟೆಂಬರ್‌ ಒಳಗೆ ಕಾಯ್ದೆ ರೂಪಿಸಿದರೆ, ಡಿಸೆಂಬರ್‌ನಲ್ಲಿ ಉಳಿದ ಅನುದಾನವನ್ನು ಯುಜಿಸಿ ನೀಡಲಿದೆ’ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ದೊರೆತಿರುವ ಅನುದಾನವೆಷ್ಟು?

ವಿಶ್ವವಿದ್ಯಾಲಯ ಸ್ಥಾಪನೆಗೆ ₹ 55 ಕೋಟಿ ಅನುದಾನ ಮೀಸಲಿಡಲಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇ 60ರಷ್ಟು ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಒದಗಿಸಬೇಕು. ಕೇಂದ್ರ ತನ್ನ ಪಾಲಿನ ಅನುದಾನದಲ್ಲಿ ಅರ್ಧದಷ್ಟು ಹಣವನ್ನು ಅಂದರೆ, ₹ 16.5 ಕೋಟಿಯನ್ನು 2016ರ ಜೂನ್ ಅಂತ್ಯದಲ್ಲಿ ಬಿಡುಗಡೆ ಮಾಡಿದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ತನ್ನ ಪಾಲಿನ ಅನುದಾನದಲ್ಲಿ ಶೇ 50ರಷ್ಟು ಅಂದರೆ, ₹ 11 ಕೋಟಿಯನ್ನು ಕಳೆದ ಮಾರ್ಚ್‌ನಲ್ಲಿ ಒದಗಿಸಿದೆ. ₹ 27.5 ಕೋಟಿಯಲ್ಲಿ ಹಾಸ್ಟೆಲ್‌ ಹಾಗೂ ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಇತ್ತೀಚೆಗೆ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ‘ಅನುದಾನ ಬಿಡುಗಡೆ ಮಾಡಿದ ಆರು ತಿಂಗಳೊಳಗೆ ಕಾನೂನು ರೂಪಿಸಿ, ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಿತ್ತು. ಒಂದು ವರ್ಷ ಕಳೆದರೂ ಏನೂ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ’ ಎಂದು ಅಸಮಾಧಾನ
ವ್ಯಕ್ತಪಡಿಸಿದೆ.

ಏನಿದು ಕ್ಲಸ್ಟರ್ ವಿಶ್ವವಿದ್ಯಾಲಯ?

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷರಾಗಿದ್ದ ಸ್ಯಾಮ್ ಪಿತ್ರೊಡಾ ಅವರು ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ 1,500 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದ್ದರು. ಅದರ ಭಾಗವಾಗಿ ಮಹಾರಾಣಿ ಕಲಾ, ವಾಣಿಜ್ಯ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು, ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ವಿ.ಎಚ್.ಡಿ. ಗೃಹ ವಿಜ್ಞಾನ ಕಾಲೇಜುಗಳನ್ನು ಸೇರಿಸಿ ‘ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ’ ಎಂದು ಘೋಷಿಸಲಾಗಿದೆ.

* ರಾಜ್ಯಪಾಲರು ವಾಪಸ್‌ ಕಳುಹಿಸಿರುವ ಮಸೂದೆಯನ್ನು ಸರಿಪಡಿಸಿ, ಶೀಘ್ರ ಸಲ್ಲಿಸಲಾಗುವುದು. ಎರಡು ವಾರದೊಳಗೆ ಕಾಯ್ದೆ ಜಾರಿಯಾಗಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ
-ರಾಜಕುಮಾರ ಖತ್ರಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.