ನವದೆಹಲಿ: ಜಾಗತಿಕವಾಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ ಏನಿದೆ? ಎಂಬುದರ ಬಗ್ಗೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಯುನೆಸ್ಕೊದ ಶಿಕ್ಷಣ ವಿಭಾಗ "Global State of Play" ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ‘ವಿಶ್ವದ ಬಹುತೇಕ ಶಾಲಾ ಮಕ್ಕಳು ಕನಿಷ್ಠ ದೈಹಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದೆ.
ಪ್ರಪಂಚದಾದ್ಯಂತ ಕೇವಲ ಶೇ. 7 ರಷ್ಟು ಶಾಲೆಗಳು ಮಾತ್ರ ಬಾಲಕ–ಬಾಲಕಿಯರಿಗೆ ದೈಹಿಕ ಶಿಕ್ಷಣದ ತರಗತಿಗಳಿಗೆ ಸಮಾನವಾದ ಸಮಯವನ್ನು ನೀಡಿವೆ. ಜಗತ್ತಿನ ಶೇ. 58 ರಷ್ಟು ದೇಶಗಳು ಮಾತ್ರ ಬಾಲಕಿಯರಿಗೆ ದೈಹಿಕ ಶಿಕ್ಷಣವನ್ನು ಕಡ್ಡಾಯಗೊಳಿಸಿವೆ ಎಂದು ವರದಿ ಹೇಳಿದೆ.
ಮೂರನೇ ಎರಡರಷ್ಟು ಪ್ರೌಢಶಾಲೆಗಳು ಹಾಗೂ ಅರ್ಧಕ್ಕಿಂತ ಹೆಚ್ಚು ಪ್ರಾಥಮಿಕ ಶಾಲೆಗಳು ಕನಿಷ್ಠ ವಾರದಲ್ಲಿ ಒಂದು ದಿನವನ್ನೂ ದೈಹಿಕ ಶಿಕ್ಷಣ ಕಲಿಕೆಗೆ ಮೀಸಲಿಟ್ಟಿಲ್ಲ. ಜಗತ್ತಿನ ಮೂರನೇ ಎರಡರಷ್ಟು ದೇಶಗಳು ತಮ್ಮ ಶಿಕ್ಷಣ ಬಜೆಟ್‌ನ ಕೇವಲ ಶೇ 2ರಷ್ಟನ್ನು ಮಾತ್ರ ದೈಹಿಕ ಶಿಕ್ಷಣಕ್ಕೆ ವಿನಿಯೋಗಿಸುವುದು ತೀರಾ ಆತಂಕಕಾರಿ. ಕೆಲ ದೇಶಗಳಲ್ಲಿ ಇದರ ಪ್ರಮಾಣ ಶೇ. 7 ಮೀರಿಲ್ಲ ಎಂದು ವರದಿ ಎತ್ತಿ ತೋರಿಸಿದೆ..
ಇದಕ್ಕಾಗಿ ಬಜೆಟ್‌ನಲ್ಲಿ ತೀರಾ ಕಡಿಮೆ ಹಣ ಮೀಸಲಿಡುವುದು ಮತ್ತು ಮಕ್ಕಳಿಗೆ ಸಮಯ ಮೀಸಲಿಡದೇ ಇರುವುದು ಮಕ್ಕಳು ದೈಹಿಕ ಶಿಕ್ಷಣದಿಂದ ವಂಚಿತರಾಗಲು ಕಾರಣವಾಗಿದೆ ಎಂದು ವಿಶ್ಲೇಷಿದೆ.
ವಿದ್ಯಾರ್ಥಿಗಳ ಕಲಿಕೆ ದೃಷ್ಟಿ ಮತ್ತು ಭವಿಷ್ಯದ ಕಾಳಜಿಯಿಂದ ದೈಹಿಕ ಶಿಕ್ಷಣಕ್ಕೆ ಸಮಾನವಾದ ಅವಕಾಶವನ್ನು ಕೊಡಬೇಕಿದೆ ಎಂದು ವರದಿ ಸಲಹೆ ನೀಡಿದೆ.
ಅಷ್ಟೇ ಅಲ್ಲದೇ, ದೇಶಗಳು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು, ಹೂಡಿಕೆಗೆ ಉತ್ತೇಜಿಸುವುದು ಮಾಡಬೇಕು. ಇದಕ್ಕಾಗಿ ಖಾಸಗಿ ಸಹಭಾಗಿತ್ವವನ್ನೂ ಬಳಸಿಕೊಳ್ಳಬೇಕು. ದೈಹಿಕ ಶಿಕ್ಷಕರಿಗೆ ನಿರಂತರ ತರಬೇತಿ ಹಾಗೂ ತರಗತಿಗಳಲ್ಲಿ ಹೆಚ್ಚಿನ ಸಮಯ ನೀಡುವುದರಿಂದ ಈ ಅಸಮತೋಲನವನ್ನು ನಿವಾರಿಸಿ ಶಾಲಾ ಹಂತದಲ್ಲೇ ಮಕ್ಕಳನ್ನು ಸದೃಢರನ್ನಾಗಿ ಬೆಳೆಸಬಹುದು ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.