ADVERTISEMENT

MCA: ಉದ್ಯೋಗಕ್ಕೆ ಕೌಶಲವೂ ಅಗತ್ಯ!

ಹರೀಶ್ ಶೆಟ್ಟಿ ಬಂಡ್ಸಾಲೆ
Published 19 ಫೆಬ್ರುವರಿ 2020, 6:02 IST
Last Updated 19 ಫೆಬ್ರುವರಿ 2020, 6:02 IST
College Students
College Students   

ಎಂಬಿಎ ಮಾಡಲು ಯಾವುದು ಒಳ್ಳೆಯ ವಿಧಾನ– ದೂರ ಶಿಕ್ಷಣ ಅಥವಾ ನಿಯಮಿತವಾಗಿ ಕಾಲೇಜಿಗೆ ಹೋಗುವುದೋ? ಹಾಗೆಯೇ ಎಂಬಿಎ ಮಾಡಲು ಯಾವ ಕಾಲೇಜ್‌ ಒಳ್ಳೆಯದು?

ಸುಹಾಸ್‌ ಜಯಣ್ಣ,ಹಾಸನ

ಸುಹಾಸ್, ವೃತ್ತಿ ಕ್ಷೇತ್ರದಲ್ಲಿರುವ ಬೇಡಿಕೆ ಮತ್ತು ಉದ್ಯೋಗದಾತರ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ದೂರ ಶಿಕ್ಷಣಕ್ಕಿಂತ ಕಾಲೇಜಿಗೆ ಹೋಗಿ ಓದುವುದೇ ಉತ್ತಮ. ಸಾಮಾನ್ಯವಾಗಿ ಉದ್ಯೋಗದಾತರು ರೆಗ್ಯುಲರ್ ಮಾದರಿಯಲ್ಲಿ ಓದಿರುವ ಅಭ್ಯರ್ಥಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ.

ADVERTISEMENT

ಇನ್ನು ಯಾವ ಕಾಲೇಜಿನಲ್ಲಿ ಓದಬೇಕು ಎನ್ನುವ ವಿಚಾರದ ಬಗ್ಗೆ ಹೇಳುವುದಾದರೆ ನಾವು ಶಿಕ್ಷಣ ಪಡೆಯುವಾಗ ಆದಷ್ಟು ಉತ್ತಮ ರ‍್ಯಾಂಕಿಂಗ್ ಹೊಂದಿರುವ ಕಾಲೇಜಿನಲ್ಲಿ ಮಾಡಲು ಪ್ರಯತ್ನಿಸಬೇಕು. ಆಗ ನಮ್ಮ ಕಲಿಕಾ ಅನುಭವವು ಉತ್ತಮ ಮಟ್ಟದಲ್ಲಿರುತ್ತದೆ ಮತ್ತು ನಮ್ಮ ವಿದ್ಯಾಭ್ಯಾಸದ ನಂತರ ಉದ್ಯೋಗಾವಕಾಶಗಳು ಕೂಡ ಉತ್ತಮವಾಗಿ ಲಭಿಸುತ್ತವೆ. ಅಂತರ್ಜಾಲದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ರೇಮ್ ವರ್ಕ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ (www.nirfindia.org) ಭಾರತದ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್ ಅನ್ನು ಪರಿಶೀಲಿಸಿ. ಆ ಪ್ರಕಾರ ಉತ್ತಮ ರ‍್ಯಾಂಕಿಂಗ್ ಇರುವ ಕಾಲೇಜುಗಳನ್ನು ಪಟ್ಟಿ ಮಾಡಿಕೊಂಡು ಅವುಗಳ ವೆಬ್‌ಸೈಟ್‌ ಅನ್ನು ಪರಿಶೀಲಿಸಿ. ಅಲ್ಲಿ ದಾಖಲಾತಿ ಪಡೆಯಲು ಪದವಿಯಲ್ಲಿ ಎಷ್ಟು ಅಂಕ ಹೊಂದಿರಬೇಕು, ಯಾವ ಪ್ರವೇಶಾತಿ ಪರೀಕ್ಷೆಯನ್ನು ಎದುರಿಸಬೇಕು, ಅರ್ಹತೆ ಏನು ಎಂದು ತಿಳಿದುಕೊಂಡು ಆ ಪ್ರಕಾರ ತಯಾರಿ ಮಾಡಿಕೊಳ್ಳಿ. ನಿಮ್ಮ ಇತರ ಪರಿಸ್ಥಿತಿ ಮತ್ತು ಅನುಕೂಲಗಳನ್ನು ಗಮನದಲ್ಲಿಟ್ಟುಕ್ಕೊಂಡು ನಿಮ್ಮ ಪರಿಮಿತಿಯ ಒಳಗೆ ಸಾಧ್ಯವಾದಷ್ಟು ಒಳ್ಳೆಯ ಸಂಸ್ಥೆಯನ್ನು ಆಯ್ದುಕೊಳ್ಳಿ.

ಅನಿವಾರ್ಯ ಕಾರಣಗಳಿಂದ ಕಾಲೇಜಿನಲ್ಲಿ ಓದಲು ಆಗದಿದ್ದಲ್ಲಿ ದೂರ ಶಿಕ್ಷಣದಲ್ಲಿ ಓದಿಕೊಳ್ಳಬಹುದು. ಆದರೆ ಆ ಸಮಯದಲ್ಲಿ ಅದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತ, ಹೆಚ್ಚಿನ ಅನುಭವ ಮತ್ತು ಜ್ಞಾನ ಸಂಪಾದಿಸಿದಲ್ಲಿ ಉತ್ತಮ ಕೆಲಸಗಳಿಗೆ ಪ್ರಯತ್ನಿಸಲು ಸಾಧ್ಯವಾಗುತ್ತದೆ. ದೂರ ಶಿಕ್ಷಣದಲ್ಲಿ ಓದಿ ಉತ್ತಮ ಸಾಧನೆ ಮಾಡಿದವರಿದ್ದಾರೆ. ಆದರೆ ಅದಕ್ಕೆ ಹೆಚ್ಚಿನ ಶ್ರಮ ಹಾಕಬೇಕು. ಈ ಸಂಬಂಧ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನಕ್ಕೆ ಹಾಸನ ಜಿಲ್ಲೆಯ ಉದ್ಯೋಗ ವಿನಿಮಯ ಕಚೇರಿಯ ವೃತ್ತಿ ಮಾರ್ಗದರ್ಶಕರು ಅಥವಾ ಕೌನ್ಸೆಲರ್ ಅವರನ್ನು ಸಂಪರ್ಕಿಸಿ ಸಹಾಯ ಪಡೆಯಿರಿ. ಶುಭಾಶಯ.

***

ನಾನು ಎಂಸಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಎಂಸಿಎಗೆ ಉದ್ಯೋಗ ಸಿಗುವುದಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ನನಗೆ ಉತ್ತಮ ಅಂಕಗಳು ಸಿಕ್ಕಿವೆ. ಈ ಬಗ್ಗೆ ಸ್ವಲ್ಪ ಮಾಹಿತಿ ನೀಡಿ.

⇒ದೀಪಿಕಾ ಬಿ.,ಊರು ಬೇಡ

ದೀಪಿಕಾ, ಎಂಸಿಎ ಮಾಡಿದವರಿಗೆ ಕೆಲಸ ಸಿಗುವುದಿಲ್ಲ ಎಂಬ ಮಾತು ನಿಜವಲ್ಲ. ಅಂತಹ ಪರಿಸ್ಥಿತಿ ಏನೂ ಇಲ್ಲ ಮತ್ತು ಜನರ ಈ ಮಾತಿಗಾಗಿ ನೀವು ಭಯಪಡಬೇಕಾಗಿಲ್ಲ. ಎಲ್ಲಾ ಶಿಕ್ಷಣಕ್ಕೂ ಸೂಕ್ತ ಕೆಲಸ ಇದ್ದೇ ಇರುತ್ತದೆ. ನಾವು ಹುಡುಕಬೇಕು, ಅರ್ಜಿ ಸಲ್ಲಿಸಬೇಕು, ಕೆಲಸ ಸಿಗಲು ಬೇಕಾಗಿರುವ ಕೌಶಲವನ್ನು ಬೆಳೆಸಿಕೊಳ್ಳಬೇಕು. ಕೆಲವೊಮ್ಮೆ ಅತ್ಯಂತ ಬೇಡಿಕೆಯ ಕೋರ್ಸ್‌ ಅನ್ನು ಮಾಡಿಯೂ ಕೆಲಸ ದೊರಕದವರಿದ್ದಾರೆ. ಹಾಗೆಯೇ ಅತ್ಯಂತ ವಿರಳವಾದ ಕೋರ್ಸ್‌ ಅನ್ನೂ ಮಾಡಿ ಕೆಲಸ ಗಿಟ್ಟಿಸಿಕೊಂಡವರು ಇದ್ದಾರೆ. ಇದೆಲ್ಲ ನಮ್ಮ ಸಂಪರ್ಕ ಮತ್ತು ಪ್ರಯತ್ನದ ಮೇಲೆ ನಿರ್ಧಾರವಾಗಿರುತ್ತದೆ.

ಶೀಘ್ರವಾಗಿ ಮತ್ತು ಸೂಕ್ತ ಕೆಲಸವನ್ನು ಪಡೆಯಲು ನೀವು ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

lಕಂಪ್ಯೂಟರ್ ಲ್ಯಾಂಗ್ವೇಜ್ ಅಥವಾ ಪ್ರೋಗ್ರಾಮಿಂಗ್‌ಗೆ ಸಂಬಂಧಿಸಿದ ಕೌಶಲಗಳನ್ನು ನೀವು ಚೆನ್ನಾಗಿ ಕರಗತ ಮಾಡಿಕೊಂಡಿರಬೇಕು, ಅಗತ್ಯವಿದ್ದಲ್ಲಿ ಆ ಕೌಶಲಕ್ಕೆ ಸಂಬಂಧಿಸಿದ ಸರ್ಟಿಫಿಕೇಶನ್ ಕೋರ್ಸ್‌ ಅನ್ನು ಕೂಡ ಮಾಡಿಕೊಳ್ಳಿ.

lಕೆಲಸ ಸಿಗುವುದು ತಡವಾದರೆ ಸಮಯ ವ್ಯರ್ಥ ಮಾಡದೆ, ಯಾವುದಾದೂ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್ ಅಥವಾ ತರಬೇತಿಗೆ ಸೇರಿ. ಅದು ಮುಂದೆ ಉದ್ಯೋಗಾವಕಾಶಗಳನ್ನು ಪಡೆಯುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ.

lಮೊದಲ ಕೆಲಸದ ಬಗ್ಗೆ ಹೆಚ್ಚು ಸೆಲೆಕ್ಟಿವ್ ಆಗಿರಬೇಡಿ. ಸಂಬಳ, ಸೌಲಭ್ಯ, ಸ್ಥಳ, ಕಂಪನಿಯ ಹೆಸರು ಇತ್ಯಾದಿ ವಿಷಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಅನುಭವ ಮತ್ತು ಕಲಿಕೆಯ ಉದ್ದೇಶದಿಂದ ನಿಮ್ಮ ಕ್ಷೇತ್ರದಲ್ಲಿ ಕೆಲಸಕ್ಕೆ ಸೇರಿಕೊಳ್ಳಿ. ಒಮ್ಮೆ ಅನುಭವ ಸಿಕ್ಕ ನಂತರ ಈ ಎಲ್ಲಾ ಆಯ್ಕೆಗಳ ಬಗ್ಗೆ ಹೆಚ್ಚು ಯೋಚಿಸಿ ಮುಂದುವರೆಯಬಹುದು.

ಕೆಲಸ ಸಿಗುವುದು ಕೇವಲ ನಮ್ಮ ಸಾಮರ್ಥ್ಯ ಮಾತ್ರವಲ್ಲದೆ ನಮ್ಮ ಸಂಪರ್ಕಗಳನ್ನೂ ಅವಲಂಬಿಸಿರುತ್ತದೆ. ಹೆಚ್ಚು ಜನರ ಸಂಪರ್ಕ ಇದ್ದಾಗ ಹೆಚ್ಚು ಅವಕಾಶಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಹೀಗಾಗಿ ನಿಮ್ಮ ಶಿಕ್ಷಕರು, ನಿಮ್ಮ ಸ್ನೇಹಿತರು, ಸಂಬಂಧಿಕರು, ನಿಮ್ಮ ಕಾಲೇಜಿನಲ್ಲಿ ಓದಿ ಈಗ ಉದ್ಯೋಗಿಗಳಾಗಿರುವವರು, ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರರು – ಎಲ್ಲರ ಸಂಪರ್ಕದಲ್ಲಿರಿ ಮತ್ತು ನೀವು ಕೆಲಸ ಹುಡುಕುತ್ತಿರುವುದರ ಬಗ್ಗೆ ಅವರಿಗೆ ತಿಳಿಸಿರಿ. ಹಾಗೆಯೇ, ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮತ್ತು ಎಂಸಿಎ ಆದವರನ್ನು ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳುವ ಖಾಸಗಿ ಕಂಪನಿಗಳ ಪಟ್ಟಿಯನ್ನು ತಯಾರಿಸಿ, ಆ ಕಂಪನಿಗಳ ವೆಬ್‌ಸೈಟ್‌ ಅನ್ನು ನಿಯಮಿತವಾಗಿ ಪರಿಶೀಲಿಸುತ್ತ ಇರಿ. ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವ ಎಲ್ಲಾ ಜಾಬ್ ಪೋರ್ಟಲ್‌ಗಳಲ್ಲೂ ನೋಂದಣಿ ಮಾಡಿಕೊಂಡು ಕೆಲಸ ಹುಡುಕುತ್ತ ಇರಿ. ಅಲ್ಲಲ್ಲಿ ನಡೆಯುವ ಉದ್ಯೋಗ ಮೇಳ, ಜಾಬ್ ಡ್ರೈವ್‌ಗಳಲ್ಲಿ ಭಾಗವಹಿಸಿ.

lಇಷ್ಟೆಲ್ಲ ಆಗಿಯೂ ನಿಮಗೆ ಕೆಲಸ ದೊರಕದಿದ್ದರೆ ನಿಮ್ಮ ಪದವಿಯ ಆಧಾರದ ಮೇಲೆ ನೀವು ಬರೆಯಬಹುದಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಹೊಂದುವ ಪರೀಕ್ಷೆಗಳಿಗೆ ತಯಾರಿ ಮಾಡಿಕೊಂಡು ಎದುರಿಸಬಹುದು. ನಾಗರಿಕ ಸೇವೆಗಳು, ಕ್ಲರ್ಕ್‌ ಹುದ್ದೆ, ಶಿಕ್ಷಣ ಕ್ಷೇತ್ರ, ಬ್ಯಾಂಕಿಂಗ್ ಕ್ಷೇತ್ರ, ಎಸ್ಎಸ್‌ಸಿ.. ಹೀಗೆ ಅನೇಕ ಕ್ಷೇತ್ರಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬಹುದು.

ಸತತ ಪರಿಶ್ರಮ ಮತ್ತು ಸಂಪರ್ಕದಿಂದ ಸೂಕ್ತ ಕೆಲಸ ಪಡೆಯಬಹುದು. ಜನರ ಮಾತುಗಳನ್ನು ಪರಿಗಣಿಸುವ ಸಮಯದಲ್ಲಿ ಉದ್ಯೋಗ ಕ್ಷೇತ್ರಕ್ಕೆ ನಮಗೆ ನಾವೇ ಹೇಗೆ ತಯಾರಾಗಬೇಕು ಎಂದು ಯೋಚಿಸಿ ಸಿದ್ಧತೆ ಮಾಡಿಕೊಂಡಲ್ಲಿ ಹೆಚ್ಚು ಸನ್ನದ್ಧರಾಗಬಹುದು. ಶುಭಾಶಯ.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.