ADVERTISEMENT

ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಮುರಳೀಧರ ಕುಲಕರ್ಣಿ
Published 16 ಏಪ್ರಿಲ್ 2019, 19:30 IST
Last Updated 16 ಏಪ್ರಿಲ್ 2019, 19:30 IST
aerospace 
aerospace    

ನಾನು ಬಿಎಸ್‌ಸಿ– ಪರಿಸರ ವಿಜ್ಞಾನ ಓದುತ್ತಿದ್ದೇನೆ. ಇದರಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿ ಮತ್ತು ಎಂಎಸ್‌ಸಿಯಲ್ಲಿ ಅದೇ ಕೋರ್ಸ್‌ ಮುಂದುವರಿಸಬೇಕೇ ಅಥವಾ ಬೇರೆ ಯಾವ ವಿಭಾಗಕ್ಕೆ ಸೇರಿಕೊಳ್ಳಬಹುದು?

ಮೇಘನಾ ಎಂ.ಬಿ., ಊರು ಬೇಡ

ಮೇಘನಾರವರೇ, ನೀವು ಈಗ ತೆಗೆದುಕೊಂಡಿರುವ ವಿಷಯಗಳಲ್ಲಿಯೇ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಬಹುದು. ನೀವು ತೆಗೆದುಕೊಂಡಿರುವ ವಿಷಯ- ಪರಿಸರ ವಿಜ್ಞಾನ ಈಗಿನ ಸಮಯಕ್ಕೆ ಬಹಳ ಸೂಕ್ತವಾಗಿದೆ. ನಿಮಗೆ ಇದರಲ್ಲಿ ನಿಜವಾದ ಆಸಕ್ತಿ ಇದ್ದಲ್ಲಿ, ಖಂಡಿತವಾಗಿ ಉಜ್ವಲ ಭವಿಷ್ಯವಿರುತ್ತದೆ. ಈ ಕ್ಷೇತ್ರದಲ್ಲಿ ಕೆಳಕಂಡ ವಿವಿಧ ಕಂಪನಿಗಳಲ್ಲಿ ಉದ್ಯೋಗಾವಕಾಶಗಳಿವೆ. ಎನ್ವಿರಾನ್ಮೆಂಟಲ್ ಎಂಜಿನಿಯರ್ಸ್, ಜರ್ನಲಿಸ್ಟ್, ಬಯೊಲೊಜಿಸ್ಟ್ಸ್ ವಿಜ್ಞಾನಿ.. ಹೀಗೆ ಅನೇಕ ಉದ್ಯೋಗಾವಕಾಶಗಳು ದೊರಕುತ್ತವೆ. ಮೈನಿಂಗ್ ಕಂಪನಿಗಳು, ಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆಗಳು, ಟೆಕ್ಸ್‌ಟೈಲ್‌ ಮತ್ತು ಡೈಯಿಂಗ್ ಉದ್ಯಮಗಳೂ ಪರಿಸರ ವಿಜ್ಞಾನಿಗಳಿಗೆ ಉತ್ತಮ ಉದ್ಯೋಗವನ್ನು ಕಲ್ಪಿಸಿ ಕೂಡುತ್ತವೆ. ಪರಿಸರ ರಕ್ಷಣೆಯಲ್ಲಿ ಅಧ್ಯಯನ ಮಾಡುವ ವಿಭಾಗದಲ್ಲಿ ಕೂಡ ಒಳ್ಳೆಯ ಉದ್ಯೋಗ ಅವಕಾಶಗಳಿರುತ್ತವೆ. ಪರಿಸರ ರಕ್ಷಣೆ ಮಾಡುವ ಎನ್.ಜಿ.ಒ ಸಂಸ್ಥೆಗಳು ಪಬ್ಲಿಕ್ ಸೆಕ್ಟರ್ ಆಂಡರ್‌ಟೇಕಿಂಗ್ ಮತ್ತು ಸರಕಾರಿ ಸಂಸ್ಥೆಗಳಲ್ಲಿ ಕೂಡ ಉದ್ಯೋಗಾವಕಾಶಗಳಿರುತ್ತವೆ.

ADVERTISEMENT

ನೀವು ಎಂಎಸ್‌ಸಿ ಪದವಿಯನ್ನು ಪಡೆದರೆ ನಿಮಗೆ ಹೆಚ್ಚಿನ ಅವಕಾಶ ದೊರಕುತ್ತದೆ. ಎಂಎಸ್‌ಸಿ ಮಾಡಿದ ಮೇಲೆ ನೀವು ಅಧ್ಯಾಪಕರೂ ಆಗಬಹುದು.

***

ಏರೋಸ್ಪೇಸ್‌ ಎಂಜಿನಿಯರಿಂಗ್‌ನಲ್ಲಿ ಅಂತಿಮ ವರ್ಷದ ಬಿ.ಟೆಕ್‌. ಪದವಿ ಓದುತ್ತಿದ್ದೇನೆ. ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಎಷ್ಟಿವೆ. ಈ ಪದವಿಯಿಂದ ಮುಂದೇನು ಮಾಡಬಹುದು?

→ಐಶ್ವರ್ಯ ಬಿ., ಊರು ಬೇಡ

ಐಶ್ವರ್ಯರವರೇ, ನೀವು ವಿಭಿನ್ನವಾದ ಎಂಜಿನಿಯರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿದ್ದೀರಾ. ಇದು ನಿಮ್ಮಲ್ಲಿರುವ ಅಂತರ್ಗತ ಆಸಕ್ತಿಯಿಂದ ಮಾಡಿರುವ ಆಯ್ಕೆ ಅಂತ ಭಾವಿಸುತ್ತೇನೆ. ಏರೋಸ್ಪೇಸ್ ಎಂಜಿನಿಯರ್‌ಗಳಿಗೆ ಡಿಸೈನ್, ಮ್ಯಾನುಫ್ಯಾಕ್ಚರಿಂಗ್, ಟೆಸ್ಟಿಂಗ್, ಮೆಂಟೆನನ್ಸ್, ಸೇಲ್ಸ್ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ. ಡಿಸೈನ್ ಕ್ಷೇತ್ರಕ್ಕೆ ಸಂಬಂಧಪಟ್ಟ ಕೆಲಸಗಳಿಗೆ ಬೇರೆ ಬೇರೆ ಸಾಫ್ಟ್‌ವೇರ್‌ಗಳ ಬಳಕೆ ಇದೆ. ಹಾಗಾಗಿ ನೀವು ಇದಕ್ಕೆ ಸಂಬಂಧಪಟ್ಟ ಸಾಫ್ಟ್‌ವೇರ್‌ ಪ್ರೋಗ್ರಾಮಿಂಗ್ ಬಗ್ಗೆ ಹೆಚ್ಚು ಜ್ಞಾನ ಪಡೆಯಬೇಕು. ಏರೋಸ್ಪೇಸ್ ಕ್ಷೇತ್ರದಲ್ಲಿರುವ ಹಲವಾರು ಖಾಸಗಿ ಮತ್ತು ಸರಕಾರಿ ಕಂಪನಿಗಳಲ್ಲಿ ಉದ್ಯೋಗಾವಕಾಶಗಳಿವೆ. ಸರಕಾರಿ ಕಂಪನಿಗಳಲ್ಲಿ ನೀವು ಉದ್ಯೋಗ ಪಡೆಯಬೇಕಾದರೆ ನೀವು ಗೇಟ್ ಪರೀಕ್ಷೆಯ ಮೂಲಕ ಹೋಗಬಹುದು. ಇನ್ನೂ ಹೆಚ್ಚಿನ ಭವಿಷಕ್ಕಾಗಿ ನೀವು ಎಂ.ಟೆಕ್ ಪದವಿಯನ್ನು ಪಡೆದು ವಿದೇಶದಲ್ಲಿಯೂ ಉದ್ಯೋಗಾವಕಾಶ ಪಡೆಯಬಹುದು

***

ನಾನು ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತ ಕನಾ೯ಟಕ ವಿಶ್ವವಿದ್ಯಾಲಯದಲ್ಲಿ ರೆಗ್ಯುಲರ್‌ ಬಿ.ಕಾಂ ಪದವಿ ಪಡೆದಿದ್ದೇನೆ. ಮುಂದೆ ನನ್ನ ಪದವಿಯ ಮೇಲೆ ಉದ್ಯೋಗ ಮಾಹಿತಿ ನೀಡಿ.

ರಮೇಶಕುಮಾರ ತಿಗಡಿ, ಸವದತ್ತಿ

ನೀವು ಬಿ.ಕಾಂ ಪದವಿಯನ್ನು ಮುಗಿಸಿದ ಕೂಡಲೇ ನಿಮಗೆ ಸಾಮಾನ್ಯವಾಗಿ ಹಲವಾರು ಕಂಪನಿಗಳಲ್ಲಿ ಅಕೌಂಟೆಂಟ್ ಕೆಲಸ ದೊರಕುತ್ತದೆ. ಸಿಎ ಆಫಿಸುಗಳಲ್ಲಿಯೂ ಕೆಲಸ ದೊರಕುತ್ತದೆ. ಖಾಸಗಿ ಬ್ಯಾಂಕುಗಳಲ್ಲಿ ಕ್ಲರಿಕಲ್ ಕೆಲಸ ಪಡೆಯುವುದಕ್ಕೆ ನೀವು ಪ್ರಯತ್ನ ಮಾಡಬಹುದು. ಇದಲ್ಲದೆ ಫೈನಾನ್ಸ್, ಇನ್ಶೂರೆನ್ಸ್ , ಸ್ಟಾಕ್ ಬ್ರೋಕಿಂಗ್ ಮತ್ತು ಅನೇಕ ಬಿಪಿಒ ಕಂಪನಿಗಳಲ್ಲಿಯೂ ಬಿ.ಕಾಂ ಪದವೀಧರರನ್ನು ಆಯ್ಕೆ ಮಾಡುತ್ತಾರೆ. ನಿಮ್ಮ ಸಂವಹನ ಕೌಶಲ ಚೆನ್ನಾಗಿದ್ದರೆ ವಿವಿಧ ರೀತಿಯ ಮಾರ್ಕೆಟಿಂಗ್ ಸಂಸ್ಥೆಗಳಲ್ಲಿಯೂ ಕೆಲಸ ಸಿಗುವ ಸಾಧ್ಯತೆ ಇದೆ.

***

ಮೈಸೂರಿನ ಕರ್ನಾಟಕ ಸ್ಟೇಟ್‌ ಓಪನ್‌ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. (2012) ಮಾಡಿದ್ದೇನೆ. ನಾನು ಪಿಯುಸಿ ಓದಿಲ್ಲ. ಐಟಿಐ ಓದಿದ್ದೇನೆ. ಸದ್ಯ ಸರ್ಕಾರಿ ನೌಕರಿ ಮಾಡುತ್ತಿದ್ದೇನೆ. ಕೆಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ನಾನು ಕೆಎಎಸ್‌ ಓದಲು ಅರ್ಹತೆ ಇದೆಯೇ?

ಪುನೀತ್‌ಕುಮಾರ್‌ ಸಿ., ಊರು ಬೇಡ

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ನೀವು ದೂರ ಶಿಕ್ಷಣದ ಮೂಲಕ ಗ್ರಾಜುಯೇಷನ್ ಮುಗಿಸಿದ ನಂತರ ಕೆಎಎಸ್‌ ಪರೀಕ್ಷೆಯನ್ನು ಬರೆಯಲು ಅರ್ಹರಾಗುತ್ತೀರಾ. ಮೈಸೂರು ವಿಶ್ವ ವಿದ್ಯಾಲಯವು ಯು. ಜಿ. ಸಿ. ಇಂದ ಮಾನ್ಯತೆ ಪಡೆದಿದೆ.

***

ನಾನು ಬಿಎಸ್‌ಸಿ ಅನುತ್ತೀರ್ಣನಾಗಿದ್ದೇನೆ. ಮುಂದೆ ಏನು ಮಾಡಬಹುದು ಹೇಳಿ.

ಹೆಸರು, ಊರು ಬೇಡ

ನಿಮಗೆ ಯಾವ ರೀತಿಯ ವೃತ್ತಿ ಸರಿ ಹೋಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಮೊದಲು ವೃತ್ತಿಪರ ಸಲಹೆಗಾರರನ್ನು ಭೇಟಿ ಮಾಡಿ. ಅವರು ನಿಮ್ಮ ಆಸಕ್ತಿ, ಅರ್ಹತೆ, ವ್ಯಕ್ತಿತ್ವ ಇವೆಲ್ಲವುಗಳನ್ನು ಪರಿಶೀಲಿಸಿ ನಿಮಗೆ ತಕ್ಕದಾದ ವೃತ್ತಿಪರ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡುತ್ತಾರೆ.

ನೀವು ಬಿ.ಎಸ್‌ಸಿ ಪದವಿಯನ್ನು ಇನ್ನೂ ಮುಗಿಸದೆ ಇರುವುದರಿಂದ ಯಾವುದಾದರೂ ವೊಕೇಷನಲ್ (ವೃತ್ತಿಪರ) ಕೋರ್ಸಿಗೆ ಸೇರಬಹುದು. ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಸರಿಹೋಗುವ ಕೋರ್ಸನ್ನು ಆಯ್ಕೆ ಮಾಡಿ. ಇದರಿಂದ ನಿಮ್ಮ ಕೌಶಲ ಹೆಚ್ಚಾಗಿ ನಿಮಗೆ ಕೆಲಸ ಪಡೆಯುವುದಕ್ಕೆ ಅನುಕೂಲವಾಗುತ್ತದೆ. ವೃತ್ತಿಪರ ಕೋರ್ಸ್‌ ಮುಗಿಸಿದ ಮೇಲೆ ನಿಮ್ಮದೇ ಆದ ಒಂದು ಉದ್ಯೋಗವನ್ನು ಪ್ರಾರಂಭ ಮಾಡಬಹುದು.

***

ನಾನು ಬಿಎಸ್‌ಸಿ ಓದುತ್ತಿದ್ದೇನೆ. ಮುಂದೆ ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಎಂಎಸ್‌ಸಿ ಮಾಡಿದರೆ ಅನುಕೂಲವಾಗಬಹುದೇ?

ಜ್ಯೋತಿ ಖಾವಶೆ, ಊರು ಬೇಡ

ನಿಮಗೆ ಸಂಖ್ಯೆಗಳಲ್ಲಿ, ಗಣಿತದಲ್ಲಿ ಮತ್ತು ಲೆಕ್ಕಾಚಾರಗಳಲ್ಲಿ ವಿಶೇಷ ಆಸಕ್ತಿ ಇದ್ದರೆ ಸ್ಟ್ಯಾಟಿಸ್ಟಿಕ್ಸ್ ಎಂಎಸ್‌ಸಿ ಮಾಡುವುದು ಒಳ್ಳೆಯ ಆಯ್ಕೆ. ಫೈನಾನ್ಸ್ ಮತ್ತು ಬ್ಯಾಂಕಿಂಗ್, ಇನ್ಶೂರೆನ್ಸ್, ಸಂಶೋಧನೆ ಸಂಸ್ಥೆಗಳು, ದೊಡ್ಡ ಕಂಪನಿಗಳ ಪ್ಲಾನಿಂಗ್ ಡಿವಿಶನ್‌ಗಳು, ಮಾರ್ಕೆಟ್ ರಿಸರ್ಚ್, ಕನ್ಸಲ್ಟೆನ್ಸಿ ಕಂಪೆನಿಗಳಲ್ಲಿ ಸ್ಟಾಟಿಸ್ಟಿಷಿಯನ್ ಆಗಿ ನಿಮಗೆ ಉದ್ಯೋಗಾವಕಾಶ ದೊರಕುತ್ತದೆ. ಈಗಷ್ಟೇ ಹೊಸದಾಗಿ ಅಸಿತ್ವಕ್ಕೆ ಬಂದಿರುವ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಕ್ಷೇತ್ರದಲ್ಲಿ ಬಹಳ ಸ್ಟಾರ್ಟ್ ಅಪ್ ಕಂಪನಿಗಳಿವೆ. ಈ ಸ್ಟಾರ್ಟ್ ಅಪ್ ಕಂಪನಿಗಳು ಸ್ಟ್ಯಾಟಿಸ್ಟಿಕ್ಸ್ ಪದವೀಧರರನ್ನು ಆಯ್ಕೆ ಮಾಡುತ್ತಾರೆ. ಚುನಾವಣೆಗೆ ಸಂಬಂಧಪಟ್ಟ ಹಲವಾರು ರಿಸರ್ಚ್ ಕಂಪನಿಗಳು ಸ್ಟಾಟಿಸ್ಟಿಷಿಯನ್ಸ್ ರನ್ನು ಆಯ್ಕೆ ಮಾಡುತ್ತಾರೆ.

ನೀವು ಭಾರತ ಸರ್ಕಾರದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಸರ್ವಿಸರ್ಸ್‌ಗೆ ಪ್ರವೇಶ ಪಡೆದು ಎ ಗ್ರೇಡ್ ಅಧಿಕಾರಿಯಾಗಬಹುದು. ಇದಕ್ಕೆ ಯು.ಪಿ.ಎಸ್.ಸಿ ಪರೀಕ್ಷೆ ಮೂಲಕ ಪ್ರವೇಶ ಪಡೆಯಬಹುದು.

ಇನ್ನೊಂದು ಸಲಹೆಯೆಂದರೆ ನಿಮ್ಮ ಎಂಎಸ್‌ಸಿ ಪದವಿಯ ಜತೆಯಲ್ಲಿ ಡೇಟಾ ಅನಲಿಟಿಕ್ಸ್ ನಲ್ಲಿ ಸಣ್ಣ ಅವಧಿಯ ಯಾವುದಾದರೂ ಕೋರ್ಸ್‌ ಅನ್ನು ಮಾಡಿದರೆ ಉತ್ತಮ.

***

ನಾನು ಸದ್ಯ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಟೂರಿಸಂ ಮತ್ತು ಅಡ್ಮಿನ್‌ಸ್ಟ್ರೇಶನ್‌ನಲ್ಲಿ ಪದವಿ (ಬಿಟಿಎ) ಓದುತ್ತಿದ್ದೇನೆ. ಓದು ಮುಗಿದ ನಂತರ ಕಾರ್ಗೊ ಮತ್ತು ಲಾಜಿಸ್ಟಿಕ್ಸ್‌, ಏರ್‌ಲೈನ್ಸ್‌ ಆ್ಯಂಡ್‌ ಏರ್‌ಪೋರ್ಟ್‌ ಹ್ಯಾಂಡ್ಲಿಂಗ್‌ ಅಥಾರಿಟಿ, ಹೊಟೇಲ್‌ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಯಾವುದಾದರೂ ಉದ್ಯೋಗಾವಕಾಶವಿದೆಯಾ? ಜೊತೆಗೆ ಮುಂದೆ ಓದಲು ವಿಶೇಷ ಕೋರ್ಸ್‌ಗಳಿವೆಯಾ?

ಹೆಸರು, ಊರು ಬೇಡ

ನಿಮಗೆ ಟ್ರಾವೆಲ್ ಮತ್ತು ಟೂರಿಸಂ ವಲಯದಲ್ಲಿ ಹೆಚ್ಚಿನ ಆಸಕ್ತಿ ಇದ್ದರೆ ಹಾಗೂ ಉತ್ತಮ ತರಬೇತಿ ಪಡೆದಿದ್ದರೆ, ನಿಮಗೆ ಅನೇಕ ಉದ್ಯೋಗಾವಕಾಶಗಳಿರುತ್ತವೆ. ಭಾರತ ದೇಶದಲ್ಲಿ ಈ ಕ್ಷೇತ್ರಗಳು ಬಹಳ ವೆಗವಾಗಿ ಬೆಳೆಯುತ್ತಿವೆ.

ನಿಮಗೆ ಏರ್‌ಲೈನ್ಸ್ ವಲಯದಲ್ಲಿ, ಪ್ರವಾಸೋದ್ಯಮ ಕ್ಷೇತ್ರಗಳಿಗೆ ಸಂಬಂಧಪಟ್ಟ ಕಂಪನಿಗಳಲ್ಲಿ, ಆನ್‌ಲೈನ್ ಟೂರಿಸಂ ಮತ್ತು ಟ್ರಾವೆಲ್ ವೆಬ್‌ಸೈಟ್‌ಗಳಲ್ಲಿ, ಹೋಟೆಲ್ ಮತ್ತು ರೆಸಾರ್ಟ್ಸ್ ಹಾಗೂ ಅಮ್ಯೂಸ್ಮೆಂ‌ಟ್ ಪಾರ್ಕುಗಳಲ್ಲಿ ಉತ್ತಮ ಉದ್ಯೋಗವಕಾಶಗಳಿರುತ್ತವೆ. ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಸೇಲ್ಸ್, ಮಾರ್ಕೆಟಿಂಗ್, ಆಪರೇಷನ್ಸ್ ವಿಭಾಗದಲ್ಲಿ ನಿಮಗೆ ಕೆಲಸ ದೊರಕುತ್ತದೆ. ನೀವು ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಯಾವುದಾದರೂ ಒಂದು ಕಂಪನಿಯಲ್ಲಿ ಇಂಟರ್ನ್‌ಶಿಪ್‌ಗೆ ಸೇರಿಕೊಂಡು ಅಲ್ಲಿಯ ಕಾರ್ಯನಿರ್ವಹಣೆ, ಕೆಲಸದ ಅನುಭವ ಹಾಗೂ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದು ನೀವು ಮುಂದಿನ ಉದ್ಯೋಗಕ್ಕೆ ಪ್ರಾಕ್ಟಿಕಲ್ ಜ್ಞಾನವನ್ನು ಪಡೆಯಬಹುದು. ಈ ಕ್ಷೇತ್ರದಲ್ಲಿ ಮುಂದುವರೆಯುವುದಕ್ಕೆ ನೀವು ಚೆನ್ನಾಗಿ ಮಾತನಾಡುವ ಸಾಮರ್ಥ್ಯ ಹೊಂದಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.