ADVERTISEMENT

ಮಲ್ಟಿಮೀಡಿಯಾ ವ್ಯಾಪ್ತಿ ಅಗಾಧ ಉದ್ಯೋಗಕ್ಕೆ ವಿಪುಲ ಅವಕಾಶಗಳು

ಅರ್ಜುನ್ ಶೆಣೈ
Published 7 ನವೆಂಬರ್ 2019, 6:57 IST
Last Updated 7 ನವೆಂಬರ್ 2019, 6:57 IST
   

ಬಹುತೇಕ ಸೇವಾ ಕ್ಷೇತ್ರಗಳು, ಅದರಲ್ಲೂ ಮಾಧ್ಯಮ ಮತ್ತು ಸಂವಹನ ವಲಯಗಳು ಮಲ್ಟಿಮೀಡಿಯಾವನ್ನು ಹೆಚ್ಚಿನ ಮಟ್ಟದಲ್ಲಿ ಬಳಸುತ್ತಿವೆ. ಇದರಿಂದಾಗಿ ಈ ಕ್ಷೇತ್ರ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಜೊತೆಗೆ ಆಕರ್ಷಕ ವೇತನವಿರುವ ಉದ್ಯೋಗಗಳಿಂದಾಗಿ ಮಲ್ಟಿಮೀಡಿಯಾ ಕುರಿತ ಶಿಕ್ಷಣಕ್ಕೂ ಸದ್ಯ ಬಹು ಬೇಡಿಕೆಯಿದೆ.

ತೊಂಬತ್ತರ ದಶಕದವರೆಗೂ ಕೇವಲ ಅಕ್ಷರಗಳಿಗಷ್ಟೇ ಸೀಮಿತವಾಗಿದ್ದ ಮಾಹಿತಿ ತಂತ್ರಜ್ಞಾನ ಕೇವಲ ಮೂವತ್ತು ವರ್ಷಗಳಲ್ಲಿ ಕ್ರಾಂತಿಯನ್ನೇ ಹರಿಸಿದ್ದು ಸುಳ್ಳಲ್ಲ. ದಿನದಿಂದ ದಿನಕ್ಕೆ ಹಳತೆಲ್ಲ ಮೂಲೆಗೆ ಸೇರಿ ಹೊಸತನ್ನು ಕಾಣುವ ತಂತ್ರಜ್ಞಾನದ ಈ ಯುಗದಲ್ಲಿ ಮಾಹಿತಿ ಹಂಚಿಕೊಳ್ಳುವುದಕ್ಕೆ ಅಕ್ಷರಗಳೊಂದಿಗೆ ಚಿತ್ರ, ದೃಶ್ಯ, ಧ್ವನಿ, ಅನಿಮೇಶನ್‌ಗಳು ಜೊತೆಯಾಗಿ ಮಾಹಿತಿಯ ಮೆರಗನ್ನು ಹೆಚ್ಚಿಸಿವೆ.

ಮಲ್ಟಿಮೀಡಿಯಾ ಎಂದರೆ ಸರಳವಾಗಿ ಬಹುಮಾಧ್ಯಮ ಎನ್ನಬಹುದು. ಅಕ್ಷರಗಳ ರೂಪದಲ್ಲಿನ ಮಾಹಿತಿ, ಧ್ವನಿ, ಚಿತ್ರ, ದೃಶ್ಯ ಮತ್ತು ಅನಿಮೇಶನ್‌ಗಳ ಮಿಶ್ರಣ. ಒಂದೇ ಅರ್ಥದಲ್ಲಿ ವಿಷಯಗಳನ್ನು ಮುಟ್ಟಿಸುವ ನಾನಾ ವಿಧದ ಆಕರಗಳನ್ನೊಳಗೊಂಡ ಬುತ್ತಿ ಈ ಮಲ್ಟಿಮೀಡಿಯಾ.

ADVERTISEMENT

ಪ್ರಾಯೋಗಿಕವಾಗಿ ಮಲ್ಟಿಮೀಡಿಯಾ
ಮಾಹಿತಿಯನ್ನು ನೇರವಾಗಿ, ಸರಳವಾಗಿ, ಸಂಕ್ಷಿಪ್ತವಾಗಿ, ಅರ್ಥಪೂರ್ಣವಾಗಿ ತಲುಪಿಸುವ ಉತ್ತಮ ಮಾರ್ಗ ಈ ಮಲ್ಟಿಮೀಡಿಯಾ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಬಹಳಷ್ಟು ಮಾಹಿತಿಗಳು ವಿಡಿಯೊ ಮತ್ತು ಧ್ವನಿ ಅಥವಾ ವಿಡಿಯೊ ಮತ್ತು ಅಕ್ಷರಗಳ ಜೊತೆಯಲ್ಲಿ ಎಂಬುದನ್ನು ವಿಶ್ಲೇಷಿಸಿ ತಿಳಿಯುವ ಅಗತ್ಯವಿಲ್ಲ. ಈಗಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಗಳು ಗಂಟೆಗಟ್ಟಲೇ ಕೊರೆಯುವ ವಿಚಾರವನ್ನು ವಿದ್ಯಾರ್ಥಿಯ ಮನದೊಳಕ್ಕೆ ಅತಿಸುಲಭವಾಗಿ ಇಳಿಸುವ ಅನಿಮೇಟೆಡ್ ವಿಡಿಯೊಗಳು ಅತ್ಯಂತ ಜಟಿಲವೆಂದು ಭಾವಿಸಲಾಗುವ ವಿಜ್ಞಾನ, ಪರಿಸರ, ಭೂಗೋಳ, ತಾಂತ್ರಿಕ ಇನ್ನಿತರ ವಿಚಾರಗಳನ್ನು ಕುತೂಹಲಕಾರಿ ಎಂಬ ಮಟ್ಟಕ್ಕೆ ತಂದಿಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ನಾನಾ ಕ್ಷೇತ್ರಗಳಲ್ಲಿ ಸೆಮಿನಾರ್‌ಗಳನ್ನು ನೀಡುವ ಸಂದರ್ಭ ಉಪಯೋಗವಾಗುವ ಪವರ್‌ಪಾಯಿಂಟ್ ಪ್ರೆಸೆಂಟೇಶನ್‌ಗಳಲ್ಲಿ ಕೂಡ ಅಂಕಿ–ಅಂಶಗಳನ್ನು, ಅಕ್ಷರಗಳಲ್ಲಿ ಬರೆಯುತ್ತ ಸಾಗಿದರೆ ಜಟಿಲವೆನಿಸುವ ವಿಚಾರಗಳನ್ನು ಸರಳೀಕರಿಸುವ ವಿಶೇಷ ಶಕ್ತಿ ಮಲ್ಟಿಮೀಡಿಯಾಕ್ಕೆ ಇದೆ. ಇನ್ನು ರಚನಾತ್ಮಕವಾಗಿ ಗ್ರಾಹಕರ ಚಿತ್ತ ಸೆಳೆಯುವ ಜಾಹೀರಾತುಗಳು, ಉದ್ಯಮಲೋಕದ ಸ್ಪರ್ಧಾತ್ಮಕತೆಗೂ ಇದೇ ಮಲ್ಟಿಮೀಡಿಯಾವನ್ನು ನೆಚ್ಚಿಕೊಂಡಿವೆ. ದಿನಂಪ್ರತಿ ಬದಲಾಗುವ ಡೈನಮಿಕ್ ವೆಬ್‌ಸೈಟ್‌ಗಳು ಮತ್ತು ಅವುಗಳಲ್ಲಿ ಕಾಣಿಸುವ ಜಾಹೀರಾತುಗಳು ಬಹಳ ದೊಡ್ಡಮಟ್ಟಕ್ಕೆ ಮಲ್ಟಿಮೀಡಿಯಾವನ್ನೇ ಅವಲಂಬಿಸಿವೆ.

ಆ್ಯಪ್‌ಗೂ ಜೀವಾಳ
ಸ್ಮಾರ್ಟ್‌ಫೋನ್‌ಗಳ ಶರವೇಗದ ಬೆಳವಣಿಗೆ ಆ್ಯಪ್ ಮತ್ತು ಗೇಮ್‌ಗಳ ಅಭಿವೃದ್ಧಿಯನ್ನೂ ಜಾಸ್ತಿ ಮಾಡಿದೆ. ಸಾಮಾನ್ಯ ಜ್ಞಾನದಿಂದ ಹಿಡಿದು ನಿತ್ಯ ಉಪಯೋಗಿ ಸೌಂದರ್ಯ, ಆರೋಗ್ಯ, ಶಿಕ್ಷಣ, ಸಾರಿಗೆ, ಮನರಂಜನೆ, ಮಾಹಿತಿ ವಿನಿಮಯ, ಸಂಗೀತ ಇನ್ನಿತರ ಯಾವ ಕ್ಷೇತ್ರವನ್ನೂ ಬಿಡದೇ ಆ್ಯಪ್‌ಗಳು ಜನ್ಮತಾಳಿವೆ. ಈ ಎಲ್ಲ ಆ್ಯಪ್‌ಗಳಿಗೂ ಮಲ್ಟಿಮೀಡಿಯಾವೇ ಜೀವಾಳ. ಮೊದಲೆಲ್ಲ ಸಣ್ಣಮಕ್ಕಳಿಗಷ್ಟೇ ಎಂಬಂತಿದ್ದ ಅನಿಮೇಟೆಡ್ ಸಿನಿಮಾಗಳ ಪ್ರಪಂಚ ಇಂದು ವಯಸ್ಸಿನ ಹಂಗಿಲ್ಲದೇ ವಿಸ್ತಾರಗೊಂಡಿದೆ. ಮನರಂಜನೆ ಪಟ್ಟಿಯಲ್ಲಿ ಈಗ ಅತಿದೊಡ್ಡ ಸ್ಥಾನವಿರುವುದು ಅನಿಮೇಟೆಡ್ ಚಿತ್ರ ಮತ್ತು ಗೇಮ್‌ಗಳಿಗೆ ಎನ್ನಲು ಯಾವ ಆಧಾರವೂ ಬೇಕಿಲ್ಲ. ಮಲ್ಟಿಮೀಡಿಯಾವಿಲ್ಲದೇ ಇವುಗಳಿಗೆ ಯಾವ ಅರ್ಥವೂ ಇರಲಾರದು.

ಏನು ಓದಬಹುದು?
ಸಾಮಾನ್ಯವಾಗಿ ಯಾವುದೇ ತಂತ್ರಜ್ಞಾನ ವಿಷಯಗಳಲ್ಲಿ ಇರುವಂತೆ ಮಲ್ಟಿಮೀಡಿಯಾಕ್ಕೆ ಕೂಡ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹುದು. ಡಿಪ್ಲೋಮಾ ಸಾಮಾನ್ಯವಾಗಿ ಪಿಯುಸಿಯ ಬಳಿಕದ ಒಂದು ಅಥವಾ ಎರಡು ವರ್ಷದೊಳಗಿನ ಕೋರ್ಸ್ ಆಗಿರುತ್ತದೆ. ಪದವಿಯಲ್ಲಿ ಒಂದೋ ನಾಲ್ಕು ವರ್ಷಗಳ ಬ್ಯಾಚುಲರ್ ಇನ್ ಮಲ್ಟಿಮೀಡಿಯಾ (ಬಿ.ಎಂ.) ಓದಬಹುದು, ಇಲ್ಲವೇ ಮೂರು ವರ್ಷಗಳ ಬ್ಯಾಚುಲರ್ ಆಫ್ ಆರ್ಟ್ಸ್ ಕೋರ್ಸ್‌ ಕೂಡ ಮಾಡಬಹುದು. ಪದವಿಗೆ ಆಯ್ಕೆ ಮಾಡಿಕೊಂಡ ಕೋರ್ಸ್‌ಗೆ ಅನುಗುಣವಾಗಿ ಸ್ನಾತಕೋತ್ತರ ಪದವಿಯನ್ನು ಕೂಡ ಓದಬಹುದು. ಸರ್ಟಿಫಿಕೇಟ್ ಕೋರ್ಸ್‌ಗಳು ಪದವಿಯ ಬಳಿಕ ಮಾಡಬಹುದಾದ ಸಣ್ಣ ಅವಧಿಯ ಕೋರ್ಸ್‌ಗಳು.

ಈ ಎಲ್ಲ ಕೋರ್ಸ್‌ಗಳಲ್ಲಿಯೂ ವಿಷಯಗಳು ಸಾಮಾನ್ಯವಾಗಿ ಅನಿಮೇಶನ್, ಗ್ರಾಫಿಕ್ಸ್ ಡಿಸೈನ್, 3ಡಿ ಮಾಡೆಲಿಂಗ್, ಧ್ವನಿನಿರ್ಮಾಣ, ಗೇಮ್ ವಿನ್ಯಾಸ, ವೆಬ್ ಡೆವೆಲಪ್‌ಮೆಂಟ್ ಇನ್ನಿತರ ವಿಚಾರಗಳ ಮೇಲೆಯೇ ಇರುತ್ತದೆ. ಇಲ್ಲಿ ನಿರ್ದಿಷ್ಟ ವಿಷಯ ಆಯ್ಕೆ ಮಾಡಿಕೊಳ್ಳುವುದು ವಿದ್ಯಾರ್ಥಿಯ ಆಸಕ್ತಿಗೆ ಬಿಟ್ಟ ವಿಚಾರ. ಪ್ರಮುಖವಾಗಿ ಅಡೋಬ್ ಫೋಟೊಷಾಪ್, ಕೋರಲ್ ಡ್ರಾ, ಫ್ಲ್ಯಾಷ್‌, ಡ್ರೀಮ್‌ವೀವರ್, ಇಲ್ಲಸ್ಟ್ರೇಟರ್, ಇನ್‌ಡಿಸೈನ್, ಪೇಜ್‌ಮೇಕರ್‌ಗಳು ಈ ಸಂದರ್ಭದಲ್ಲಿ ವಿದ್ಯಾರ್ಥಿಯು ಕಲಿಯುವ ಪ್ರಮುಖ ತಂತ್ರಾಂಶಗಳು.

ಕೆಲಸ ಮತ್ತು ಹುದ್ದೆ ಏನು?
ಮಲ್ಟಿಮೀಡಿಯಾವನ್ನು ವೃತ್ತಿಯಾಗಿ ಆಯ್ದುಕೊಳ್ಳುವವರಲ್ಲಿ ಪ್ರಮುಖವಾಗಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಅತ್ಯಂತ ಅವಶ್ಯ. ಹೊಸ ಯೋಚನೆಗಳಿಗೆ ಇಲ್ಲಿ ಉದಾತ್ತವಾದ ಅವಕಾಶವಿರುತ್ತದೆ. ಆಯ್ದುಕೊಂಡ ಕೋರ್ಸ್‌ಗೆ ತಕ್ಕ ಉದ್ಯೋಗ ದೊರೆಯುತ್ತದೆ. ಗೇಮ್ ಡಿಸೈನರ್, ಆಡಿಯೊ ಎಂಜಿನಿಯರ್, ವೆಬ್ ಡಿಸೈನರ್, ಫ್ಲ್ಯಾಷ್‌ ಡೆವಲಪರ್ ಹೀಗೆ ಹತ್ತಾರು ಹುದ್ದೆಗಳಿವೆ. ಉದಾಹರಣೆಗೆ ಸೌಂಡ್ ಎಂಜಿನಿಯರ್‌ ತಮ್ಮ ಪ್ರಾಜೆಕ್ಟ್‌ಗೆ ಬೇಕಾಗುವ ಧ್ವನಿಗಳನ್ನು ಮತ್ತು ಎಫೆಕ್ಟ್‌ಗಳನ್ನು ರೂಪಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಗೇಮ್ ಡಿಸೈನರ್‌ ಹೊಸ ಗೇಮ್‌ಗೆ ಬೇಕಾಗುವ ಬಗೆಬಗೆಯ ವಿನ್ಯಾಸಗಳನ್ನು ತಯಾರಿಸುತ್ತಾನೆ ಇತ್ಯಾದಿ. ಕೇವಲ ಕಂಪನಿಗಳಲ್ಲಿ ಉದ್ಯೋಗ ಮಾತ್ರವಲ್ಲದೇ ಚಲನಚಿತ್ರ ನಿರ್ಮಾಣ, ಸುದ್ದಿವಾಹಿನಿ, ಟಿವಿ ಚಾನೆಲ್, ದೂರಸಂಪರ್ಕ, ಜಾಹೀರಾತು ಕ್ಷೇತ್ರಗಳಲ್ಲಿ ಕೂಡ ಸಾಕಷ್ಟು ಅವಕಾಶವಿದೆ.

ಭವಿಷ್ಯ, ಭದ್ರತೆ ಹೇಗೆ?
ಹಲವರಿಗೆ ಮಲ್ಟಿಮೀಡಿಯಾ ಕ್ಷೇತ್ರಕ್ಕೆ ಭವಿಷ್ಯವಿದೆಯೇ ಎಂಬ ಸಂಶಯ ಇದೆ. ಈಗೀಗ ತಂತ್ರಜ್ಞಾನಗಳೆಲ್ಲ ಮಾನವನ ಕಾರ್ಯಭಾರ ಹೊತ್ತಿರುವುದು ಇದಕ್ಕೆ ಮೂಲಕಾರಣವಿದ್ದೀತು. ನೆನಪಿರಲಿ, ಭವಿಷ್ಯದಲ್ಲಿ ತಂತ್ರಜ್ಞಾನದ ಸಾಧನಗಳು, ಮಾಧ್ಯಮಗಳು, ಪರಿಕರಗಳು ಬದಲಾಗಬಹುದೇ ಹೊರತು ಮನರಂಜನಾ ಕ್ಷೇತ್ರದ ಮೂಲಕಲ್ಪನೆಗಳಲ್ಲ. ಮೊದಲು ಸಣ್ಣ ಬೇಸಿಕ್ ಮೊಬೈಲ್‌ಗಳಲ್ಲಿ ಸ್ನೇಕ್ ಲ್ಯಾಡರ್ ಆಡುತ್ತಿದ್ದವರು ಈಗ ಸ್ಮಾರ್ಟ್‌ಫೋನ್‌ಗಳಲ್ಲಿ ತರಹೇವಾರಿ ಮಲ್ಟಿಪ್ಲೇಯರ್ ಗೇಮ್‌ಗಳನ್ನು ಆಡುತ್ತಿದ್ದಾರೆಯೇ ಹೊರತು ಕಾಲ ಸರಿದಂತೆ ಒಂದು ನಿರ್ದಿಷ್ಟ ಕ್ಷೇತ್ರ ಮಗುಚಿಹೋಗಿದೆ ಎನ್ನಲಾಗದು. ಅಷ್ಟೇ ಅಲ್ಲ, ಒಂದು ಲೆಕ್ಕಾಚಾರದ ಪ್ರಕಾರ ಇನ್ನು ಹತ್ತು ವರ್ಷಗಳಲ್ಲಿ ಮಲ್ಟಿಮೀಡಿಯಾ ಕ್ಷೇತ್ರಕ್ಕೆ ಬೇಡಿಕೆ ಶೇ 5– 10ರಷ್ಟು ಹೆಚ್ಚಲಿದೆ. ಪ್ರಯೋಗಾತ್ಮಕ ಕಲೆ, ಹೊಸತನ್ನು ಬಲುಬೇಗ ಸ್ವೀಕರಿಸುವ ಛಲದೊಂದಿಗೆ ಕಾಲದ ಜೊತೆಗೆ ಹೆಜ್ಜೆ ಹಾಕುವ ಮನೋಗುಣವಿದ್ದರೆ ಮಲ್ಟಿಮೀಡಿಯಾ ನಿಮ್ಮ ಬದುಕನ್ನು ಯಶಸ್ವಿಗೊಳಿಸುವುದರಲ್ಲಿ ಸಂಶಯ ಬೇಡ.

ಭಾರತದ ಕೆಲವು ಮಲ್ಟಿಮೀಡಿಯಾ ವಿದ್ಯಾಲಯಗಳು

* ಪಿಕಾಸೊ ಇಂಟರ್‌ನ್ಯಾಶನಲ್ ಅನಿಮೇಶನ್, ವಿಎಫ್‌ಎಕ್ಸ್, ಗೇಮಿಂಗ್ ಕಾಲೇಜು - ದೆಹಲಿ, ಲಕ್ನೋ, ಬೆಂಗಳೂರು

* ವರ್ಲ್ಡ್ ಯೂನಿವರ್ಸಿಟಿ ಆಫ್ ಡಿಸೈನ್ - ಹರಿಯಾಣ ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ ಟೆಲಿವಿಷನ್ - ನೋಯ್ಡಾ

* ಮಾಯಾ ಅಕಾಡೆಮಿ ಆಫ್ ಅಡ್ವಾನ್ಸಡ್ ಸಿನೆಮಾಟಿಕ್ಸ್ - ದೆಹಲಿ, ಮುಂಬೈ, ಪುಣೆ, ನಾಗ್ಪುರ

* ಅರೆನಾ ಅನಿಮೇಶನ್ - ದೆಹಲಿ, ಬೆಂಗಳೂರು, ನೋಯ್ಡಾ, ಮುಂಬಯಿ

* ಐಐಎಫ್‌ಎ ಮಲ್ಟಿಮೀಡಿಯ - ಬೆಂಗಳೂರು

* ಫ್ರೇಮ್‌ಬಾಕ್ಸ್ ಅನಿಮೇಶನ್ ಆಂಡ್ ವಿಶುವಲ್ ಎಫೆಕ್ಟ್ಸ್- ಮುಂಬೈ

* ಅಮಿಟಿ ಯೂನಿವರ್ಸಿಟಿ - ಮುಂಬೈ

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ - ಅಹ್ಮದಾಬಾದ್

* ವಿಐಟಿ ಯೂನಿವರ್ಸಿಟಿ - ವೆಲ್ಲೂರ್

(ಲೇಖಕರು ಕಂಪ್ಯೂಟರ್‌ ಉಪನ್ಯಾಸಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.