ADVERTISEMENT

ಮುಂದಿನ ವರ್ಷ ‘ನೆಕ್ಸ್ಟ್‌’ ಪರೀಕ್ಷೆ

ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 3:10 IST
Last Updated 9 ಜೂನ್ 2023, 3:10 IST
   

ನವದೆಹಲಿ: ಅಂತಿಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್‌) ನಡೆಯುವ ಸಾಧ್ಯತೆ ಇದ್ದು, ದೆಹಲಿಯ ಏಮ್ಸ್‌ ಈ ಪರೀಕ್ಷೆಯನ್ನು ಸಂಘಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯ್ದೆ ಪ್ರಕಾರ ನೆಕ್ಸ್ಟ್‌ ಪರೀಕ್ಷೆ ನಡೆಸುವುದು ಕಡ್ಡಾಯ. ಇದರಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿ ಆರಂಭಿಸಲು ಹಾಗೂ ಮೆರಿಟ್‌ ಆಧಾರದ ಮೇಲೆ ಸ್ನಾತಕೋತ್ತರ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ. ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದವರು ಭಾರತದಲ್ಲಿ ವೃತ್ತಿ ಮಾಡಲು ಇಚ್ಛಿಸಿದರೆ ಸ್ಕ್ರೀನಿಂಗ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಿದೆ.

2020ರ ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆ ಜಾರಿಗೆ ಬಂದಿದೆ. ಇದರನ್ವಯ ಮೂರು ವರ್ಷದೊಳಗೆ ನೆಕ್ಸ್ಟ್ ಪರೀಕ್ಷೆಯನ್ನು ನಡೆಸಬೇಕಿದೆ. ಆದರೆ, ಕಳೆದ ವರ್ಷ ಕೇಂದ್ರ ಸರ್ಕಾರವು ಈ ಪರೀಕ್ಷೆಯನ್ನು 2024ರ ಸೆಪ್ಟೆಂಬರ್‌ವರೆಗೆ ಮುಂದೂಡಿ ಆದೇಶ ಹೊರಡಿಸಿತ್ತು. 

ADVERTISEMENT

ಪರೀಕ್ಷೆಯನ್ನು ವಿವರಣಾತ್ಮಕವಾಗಿ ಅಥವಾ ಬಹುಆಯ್ಕೆ ಮಾದರಿ ಪ್ರಶ್ನೆಗಳ ರೂಪದಲ್ಲಿ ನಡೆಸಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಪರೀಕ್ಷೆಗೆ ಸಿದ್ಧತೆ ನಡೆಸಲು  ವಿದ್ಯಾರ್ಥಿಗಳಿಗೆ ಸಮಯಾವಕಾಶ ನೀಡಲಾಗುತ್ತದೆ. ಪರೀಕ್ಷೆಗೂ ಮೊದಲು ಅಣಕು ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಆಯಾ ಕಾಲೇಜುಗಳಲ್ಲಿಯೇ ಎಂಬಿಬಿಎಸ್‌ ಅಂತಿಮ ವರ್ಷದ ಪರೀಕ್ಷೆ ನಡೆಯುತ್ತದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಬಿಇ)ಯು ನೀಟ್‌–ಪಿಜಿ ಹಾಗೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸ್ಕ್ರೀನಿಂಗ್ ಪರೀಕ್ಷೆಯನ್ನು ನಡೆಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.