ADVERTISEMENT

ಬೆಂಗಳೂರು ನಗರ ವಿವಿಯಲ್ಲಿ ಹೊಸ ಪದವಿ ಕೋರ್ಸ್‌ಗಳು

ಎನ್‌ಇಪಿ ಪಠ್ಯಕ್ರಮ, ವಿಷಯ ಆಯ್ಕೆಗೆ ಮುಕ್ತ ಅವಕಾಶ

ಎ.ಎಂ.ಸುರೇಶ
Published 21 ಮೇ 2023, 23:30 IST
Last Updated 21 ಮೇ 2023, 23:30 IST
ಬೆಂಗಳೂರು ನಗರ ವಿಶ್ವವಿದ್ಯಾಲಯ
ಬೆಂಗಳೂರು ನಗರ ವಿಶ್ವವಿದ್ಯಾಲಯ   

ಬೆಂಗಳೂರು ನಗರ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಸೆಂಟ್ರಲ್‌ ಕಾಲೇಜು ಹಾಗೂ ಮಲ್ಲೇಶ್ವರದ ಮಹಿಳಾ ಮಹಾವಿದ್ಯಾಲಯದಲ್ಲಿ ’ಹೊಸ ಶಿಕ್ಷಣ ನೀತಿ (ಎನ್‌ಇಪಿ)’ ಅನ್ವಯ ಪದವಿ ಹಂತದಲ್ಲಿ ವಿಭಿನ್ನ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.‌ 2023–24ನೇ ಸಾಲಿನ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ವಿಭಜನೆಯಾಗಿ ಮೂರು ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದ ಬಳಿಕ, ಸೆಂಟ್ರಲ್‌ ಕಾಲೇಜು ಬೆಂಗಳೂರು ನಗರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ. ಈ ಐತಿಹಾಸಿಕ ಸೆಂಟ್ರಲ್‌ ಕಾಲೇಜಿನಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ, ಸ್ವಾತಂತ್ರ್ಯ ಹೋರಾಗಾರ ಸಿ.ವಿ.ರಾಜಗೋಪಾಲಚಾರಿ, ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರಂತಹ ಹಲವು ಗಣ್ಯರು ವ್ಯಾಸಂಗ ಮಾಡಿದ್ದಾರೆ.  

ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ  ವಿವಿ ವ್ಯಾಪ್ತಿಯ ಎರಡೂ ಕಾಲೇಜುಗಳಲ್ಲಿ ಕಳೆದ ವರ್ಷದಿಂದ ಪದವಿ ಹಂತದಲ್ಲಿ ಬೇಸಿಕ್‌/ಆನರ್ಸ್‌ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ವಿದೇಶಗಳಲ್ಲಿ ಈಗಾಗಲೇ ಇರುವ ಬಹುಶಿಸ್ತಿಯ ಅಧ್ಯಯನ ಮಾದರಿಯ ಕೋರ್ಸ್‌ಗಳನ್ನು ಮೊದಲ ಬಾರಿಗೆ ಇಲ್ಲಿ ಪರಿಚಯಿಸಲಾಗಿದೆ.

ADVERTISEMENT

ಹೊಸ ಮಾದರಿಯ ಶಿಕ್ಷಣ

ಪದವಿ ಹಂತದಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಬೇಸಿಕ್‌/ಆನರ್ಸ್‌ ಕೋರ್ಸ್‌ ಆರಂಭಿಸಲಾಗಿದೆ. ವಿದ್ಯಾರ್ಥಿಯು ಪದವಿಗೆ ಪ್ರವೇಶ ಪಡೆದ ನಂತರ ಅನಿವಾರ್ಯ ಕಾರಣಗಳಿಂದ ಕೋರ್ಸ್‌ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಮಧ್ಯದಲ್ಲೇ ಬಿಡಬಹುದು. ಒಂದು ವೇಳೆ ಕೆಲ ವರ್ಷಗಳ ನಂತರ ಮತ್ತೆ ಕೋರ್ಸ್‌ ಮುಂದುವರಿಸಲು ಬಯಸಿದರೆ ಅದಕ್ಕೂ ಅವಕಾಶವಿದೆ.

ಉದಾಹರಣೆಗೆ ಪ್ರಥಮ ವರ್ಷ ಪೂರ್ಣಗೊಳಿಸಿದ ಬಳಿಕ ಶಿಕ್ಷಣವನ್ನು ಮೊಟಕುಗೊಳಿಸಿದರೆ, ಪ್ರಥಮ ವರ್ಷ ಪೂರೈಸಿದ್ದಕ್ಕೆ ಸರ್ಟಿಫಿಕೇಟ್‌ ನೀಡಲಾಗುತ್ತದೆ. ದ್ವಿತೀಯ ವರ್ಷ ಮುಗಿದ ಬಳಿಕ ಡಿಪ್ಲೊಮಾ ಪ್ರಮಾಣ ಪತ್ರ, ತೃತೀಯ ವರ್ಷ ಪೂರ್ಣಗೊಳಿಸಿದರೆ ಪದವಿ ಪ್ರಮಾಣ ಪತ್ರ ನೀಡಲಾಗುತ್ತದೆ. ನಾಲ್ಕನೇ ವರ್ಷ ಪೂರ್ಣಗೊಂಡ ಬಳಿಕ ಆನರ್ಸ್‌ ಪದವಿ ನೀಡಲಾಗುತ್ತದೆ.

ಆನರ್ಸ್‌ ನಂತರ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯಬಹುದು. ಅಲ್ಲದೆ ಆನರ್ಸ್‌ನಲ್ಲಿ ಕನಿಷ್ಠ ಶೇಕಡ 75ರಷ್ಟು ಅಂಕಗಳನ್ನು ಪಡೆದಿದ್ದು, ಹೆಚ್ಚಿನ ಕ್ರೆಡಿಟ್‌ಗಳನ್ನು ಹೊಂದಿದ್ದರೆ ಸ್ನಾತಕೋತ್ತರ ಪದವಿ ಬದಲು ನೇರವಾಗಿ ಪಿಎಚ್‌.ಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಅಂತರರಾಷ್ಟ್ರೀಯ ಶಿಕ್ಷಣ ಕ್ರಮಕ್ಕೆ ಅನುಗುಣವಾಗಿ ಹೊಸ ಶಿಕ್ಷಣ ನೀತಿ ಇದೆ. ಕೋರ್ಸ್‌ಗೆ ಪ್ರವೇಶ ಪಡೆದ ನಂತರ ಮಧ್ಯದಲ್ಲಿ ಹೊರ ಹೋಗುವ ಮತ್ತು ವಾಪಸ್‌ ಬರುವ (ಬಹು ನಿರ್ಗಮನ ಮತ್ತು ಬಹು ಆಗಮನ ) ಅವಕಾಶ ಕಲ್ಪಿಸಿರುವುದರಿಂದ, ಈ ವ್ಯವಸ್ಥೆ ಹೆಚ್ಚು ವಿದ್ಯಾರ್ಥಿಸ್ನೇಹಿಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ.

ವಿಷಯಗಳ ಆಯ್ಕೆಗೆ ಅವಕಾಶ

ಕಲಾ ವಿಭಾಗದ ವಿದ್ಯಾರ್ಥಿಯು ವಿಜ್ಞಾನ ವಿಷಯಗಳನ್ನು ಕಲಿಯಲು ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಯು ಕಲಾ ವಿಷಯಗಳನ್ನು ಕಲಿಯಲು ಮುಕ್ತ ಅವಕಾಶ ಕಲ್ಪಿಸಿರುವುದು ಎನ್‌ಇಪಿಯ ಮತ್ತೊಂದು ವಿಶೇಷತೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಪ್ರವೇಶಾತಿ ಸಂಯೋಜಕ ಶಿವಕುಮಾರ್. 

ಉದಾಹರಣೆಗೆ ಬಿಎಸ್ಸಿ ವ್ಯಾಸಂಗ ಮಾಡುವ ವಿದ್ಯಾರ್ಥಿ, ವಿಜ್ಞಾನ ವಿಭಾಗದಲ್ಲಿ ಎರಡು ಕೋರ್‌ ವಿಷಯಗಳನ್ನು ಆಯ್ಕೆ ಮಾಡಿಕೊಂಡು, ಇನ್ನುಳಿದ ಎರಡು ವಿಷಯಗಳನ್ನು ನಾನ್‌ಕೋರ್‌ನಲ್ಲಿ (ಕಲಾ ವಿಭಾಗ) ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಅದೇ ರೀತಿ ಕಲಾ ವಿಭಾಗದ ವಿದ್ಯಾರ್ಥಿ ವಿಜ್ಞಾನ ವಿಷಯಗಳನ್ನು ಕಲಿಯಬಹುದು.

ಬಿಎಸ್ಸಿ ವಿದ್ಯಾರ್ಥಿ ಭೌತವಿಜ್ಞಾನ, ರಸಾಯನ ವಿಜ್ಞಾನದ ಜೊತೆಗೆ ಇತಿಹಾಸ, ಅರ್ಥಶಾಸ್ತ್ರ ಓದಲು ಬಯಸಿದರೆ, ಅದಕ್ಕೂ ಅವಕಾಶವಿದೆ. ಇದು ಉದಾಹರಣೆ ಅಷ್ಟೇ. ಇತಿಹಾಸ, ಅರ್ಥಶಾಸ್ತ್ರ ಅಲ್ಲದೆ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಇತ್ಯಾದಿ ವಿಷಯಗಳನ್ನು ಆಯ್ಕೆ ಮಾಡಿ ಕೊಳ್ಳಬಹುದು. ಇದರ ಜೊತೆಗೆ ಭಾಷಾ ವಿಷಯಗಳನ್ನು ಕಲಿಯಬೇಕಾಗಿದ್ದು, ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ, ಫ್ರೆಂಚ್‌, ಜರ್ಮನ್‌ ಭಾಷೆಗಳಲ್ಲಿ ಯಾವುದಾದರೂ ಎರಡನ್ನು ಆಯ್ಕೆ ಮಾಡಿಕೊಳ್ಳಬಹುದು.

ಸೆಂಟ್ರಲ್‌ ಕಾಲೇಜಿನಲ್ಲಿ ಬಿ.ಎ, ಬಿಎಸ್‌ಡಬ್ಲ್ಯು, ಬಿ.ಎಸ್ಸಿ, ಬಿಸಿಎ, ಬಿಕಾಂ, ಬಿಬಿಎ ಕೋರ್ಸ್‌ಗಳಿವೆ. ಬಿಎಸ್ಸಿ ವಿಭಾಗದಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಜೀವವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಗಣಿತ, ಕಂಪ್ಯೂಟರ್‌ ವಿಜ್ಞಾನ, ಪರಿಸರ ವಿಜ್ಞಾನ ಜೊತೆಗೆ ಫ್ಯಾಷನ್ ಆ್ಯಂಡ್ ಅಪರೆಲ್‌ ಡಿಸೈನ್‌, ಇಂಟೀರಿಯಲ್ ಡಿಸೈನ್ ಆ್ಯಂಡ್‌ ಡೆಕೊರೇಷನ್‌ ಕೋರ್ಸ್‌ಗಳೂ ಇವೆ.

ಮಹಿಳಾ ಕಾಲೇಜಿನಲ್ಲಿ..

ಮಲ್ಲೇಶ್ವರದ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿವಿಎ ಕೋರ್ಸ್‌ಗಳಿವೆ. ಬಿವಿಎನಲ್ಲಿ ಅನಿಮೇಷನ್‌, ಗ್ರಾಫಿಕ್‌ ಡಿಸೈನ್‌ಗೂ ಅವಕಾಶವಿದೆ. ಒಂದು ಕೋರ್ಸ್‌ನಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಇರಬೇಕು. ಒಂದು ವೇಳೆ ಅಷ್ಟು ಸಂಖ್ಯೆಯಲ್ಲಿ ಅರ್ಜಿಗಳು ಬರದೆ ಇದ್ದರೆ ಪ್ರಸಕ್ತ ಸಾಲಿನಲ್ಲಿ ಕೋರ್ಸ್‌ ಪ್ರಾರಂಭಿಸುವುದಿಲ್ಲ.

ಕಡಿಮೆ ಶುಲ್ಕ: ಖಾಸಗಿ ಕಾಲೇಜುಗಳಿಗೆ ಹೋಲಿಸಿದರೆ ಇಲ್ಲಿ ಶುಲ್ಕ ಕಡಿಮೆ ಇದೆ. ಕೋರ್ಸ್‌ಗೆ ಅನುಗುಣವಾಗಿ ಕನಿಷ್ಠ ₹15 ಸಾವಿರದಿಂದ ಗರಿಷ್ಠ ₹28 ಸಾವಿರ ಶುಲ್ಕವಿದೆ. ಖಾಸಗಿ ಕಾಲೇಜುಗಳಲ್ಲಿ ಸಿಗುವ ಸೌಲಭ್ಯಗಳಿಗಿಂತ ಹೆಚ್ಚಿನ ಸೌಲಭ್ಯಗಳು ಇಲ್ಲಿ ಲಭ್ಯ ಇವೆ. ವಿದೇಶಿ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ತಂತ್ರಜ್ಞಾನದ ವಿನಿಮಯಕ್ಕೆ ಅವಕಾಶವಿದೆ. 150 ವರ್ಷಗಳಷ್ಟು ಹಳೆಯದಾದ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ಗ್ರಂಥಾಲಯ, ಪ್ರಯೋಗಾಲಯಗಳನ್ನು ಉನ್ನತೀಕರಿಸಲಾಗಿದೆ ಎನ್ನುತ್ತಾರೆ ಪ್ರೊ.ಗಾಂಧಿ

ವಿದ್ಯಾರ್ಥಿಗಳು ಕಲಿಕೆಯ ಅವಧಿಯಲ್ಲೇ ಕೌಶಲಕ್ಕೆ ಒತ್ತು ನೀಡಿದರೆ ಕೋರ್ಸ್‌ ಮುಗಿದ ಬಳಿಕ ಉದ್ಯೋಗಾವಕಾಶ ಪಡೆಯಲು ಸುಲಭವಾಗಲಿದೆ. ಅಲ್ಲದೆ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. 14 ವಿದೇಶಿ ಭಾಷೆಗಳ ವಿಭಾಗವಿದೆ. ಕೋರ್ಸ್‌ ಜೊತೆಗೆ ವಿದೇಶಿ ಭಾಷೆ ಕಲಿಯುವುದರಿಂದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಅವಕಾಶಗಳು ಹೇರಳವಾಗಿರುತ್ತವೆ ಎನ್ನುತ್ತಾರೆ ಅವರು.

ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ವೆಬ್‌ಸೈಟ್‌ www.bcu.ac.in ಸಂಪರ್ಕಿಸಬಹುದು.

ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದ ಅತ್ಯುತ್ತಮ ಮೂಲ ಸೌಕರ್ಯಗಳು ಇಲ್ಲಿವೆ. ಅಲ್ಲದೆ ಸರ್ಕಾರಿ ಕಾಲೇಜು ಆಗಿರುವುದರಿಂದ ಶುಲ್ಕವೂ ಕಡಿಮೆ ಇದೆ. ಅಮೆರಿಕ ಕೆನಡಾ ಸೇರಿದಂತೆ ವಿದೇಶಗಳಲ್ಲಿನ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಅಲ್ಲಿನ ವಿ.ವಿಗಳ ಸಂಶೋಧನೆಯ ಲಾಭ ನಮ್ಮ ವಿದ್ಯಾರ್ಥಿಗಳಿಗೂ ಸಿಗಲಿದೆ.
-ಪ್ರೊ.ಲಿಂಗರಾಜ ಗಾಂಧಿ ಕುಲಪತಿ ಬೆಂಗಳೂರು ನಗರ ವಿಶ್ವವಿದ್ಯಾಲಯ
ಪ್ರೊ.ಲಿಂಗರಾಜ ಗಾಂಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.