ಬೆಂಗಳೂರು: ‘ಮೂರು ವರ್ಷದ ಪದವಿ ಕೋರ್ಸ್ ಇದ್ದಾಗ ಕನ್ನಡ ಸೇರಿದಂತೆ ಭಾಷಾ ವಿಷಯಗಳನ್ನು ಎರಡು ವರ್ಷ ಬೋಧಿಸಲಾಗುತ್ತಿತ್ತು. ಹೊಸ ಶಿಕ್ಷಣ ನೀತಿಯಡಿ ನಾಲ್ಕು ವರ್ಷಗಳ ಪದವಿ ಕೋರ್ಸ್ ಅನುಷ್ಠಾನಗೊಳಿಸುತ್ತಿರುವುದರಿಂದ ಕನ್ನಡ ಒಳಗೊಂಡಂತೆ ಭಾಷಾ ವಿಷಯಗಳನ್ನು ಮೂರು ವರ್ಷಗಳ ಅವಧಿಗೆ ಪಠ್ಯ ಅಳವಡಿಸಬೇಕು’ ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ.
ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿದ್ದು, ಬಿ.ಎ. ವಿವೇಕ ರೈ, ಎಚ್.ಎಸ್. ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ಎಚ್.ಎಸ್. ರಾಘವೇಂದ್ರರಾವ್, ಬಸವರಾಜ ಕಲ್ಗುಡಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಬಾನು ಮುಷ್ತಾಕ್, ಜಿ. ರಾಮಕೃಷ್ಣ, ಕೆ. ಮರುಳಸಿದ್ದಪ್ಪ, ಎಲ್. ಹನುಮಂತಯ್ಯ, ಬಸವರಾಜ ಸಬರದ, ಬಂಜಗೆರೆ ಜಯಪ್ರಕಾಶ್, ಸರಜೂ ಕಾಟ್ಕರ್, ಶರೀಫಾ ಕೆ. ಹಾಗೂ ಸುಕನ್ಯಾ ಮಾರುತಿ ಅವರು ಒತ್ತಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
‘ನೂತನ ಶಿಕ್ಷಣ ನೀತಿ ಅನುಸಾರ ಪದವಿ ತರಗತಿಗಳಿಗೆ ಪಠ್ಯಕ್ರಮದ ಸ್ಥೂಲ ಸ್ವರೂಪವನ್ನು ಸೂಚಿಸಲು ನೇಮಿಸಲಾಗಿದ್ದ ಸಮಿತಿಯು ಭಾಷಾ ವಿಷಯಗಳನ್ನು ಕೇವಲ ಎರಡು ಸೆಮಿಸ್ಟರ್‌ಗಳಿಗೆ ಸೀಮಿತಗೊಳಿಸಿದೆ. ಇದರ ಬಗ್ಗೆ ವಿರೋಧ ವ್ಯಕ್ತವಾದಾಗ ತಾವು ‘ಕನ್ನಡ ಪಠ್ಯ ಕಡಿತವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದೀರಿ. ಆದರೆ, ಆ ಸ್ಪಷ್ಟನೆಯು ಇನ್ನೂ ಅಧಿಕೃತ ಆದೇಶವಾಗಿ ಹೊರಬಂದಿಲ್ಲ. ಭಾಷಾ ಪಠ್ಯ ವಿಷಯಗಳಿಗೆ ಸೂಕ್ತ ಸ್ಥಾನವನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
‘ಭಾಷಾ ವಿಷಯಗಳ ಪಠ್ಯಗಳೆಂದರೆ ಕೇವಲ ಕೌಶಲ್ಯ ಮತ್ತು ಸಂವಹನೆಯ ಸಾಧನಗಳಲ್ಲ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಅರಿವನ್ನು ಮೂಡಿಸುವ ಪಠ್ಯ ವಿಷಯಗಳೆಂದು ಭಾವಿಸಬೇಕು. ಅದಕ್ಕನುಗುಣವಾಗಿ ಯಾವುದೇ ವಿಶೇಷಾಧ್ಯಯನ ಮಾಡುವ ವ್ಯಾಸಂಗಿಗಳಿಗೆ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಅರಿವು ಮೂಡಿಸುವ ದೃಷ್ಟಿಯಿಂದ ಪಠ್ಯಕ್ರಮವನ್ನು ರೂಪಿಸಬೇಕು. ಮಾನವೀಯ ಮೌಲ್ಯಗಳ ವೃದ್ಧಿಗೆ ಭಾಷಾ ಪಠ್ಯಗಳು ಪೂರಕವಾಗಿರಬೇಕು. ಹೊಸ ನೀತಿಯ ಹೆಸರಿನಲ್ಲಿ ಭಾಷಾ ಕೌಶಲ್ಯಕ್ಕೆ ಸೀಮಿತ ಮಾಡಬಾರದು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.