ಏಳೂವರೆ ದಶಕಗಳ ಹಿಂದೆ ನಡೆದ ಹಿರೋಶಿಮಾ ಮತ್ತು ನಾಗಾಸಾಕಿ ಮೇಲಿನ ಅಣುಬಾಂಬ್ ದಾಳಿ ಕುರಿತ ವಿವರ ಇಲ್ಲಿದೆ. ಇದು ಯಪಿಎಸ್‌ಸಿ -ಕೆಪಿಎಸ್‌ಸಿ ಪರೀಕ್ಷೆಗಳ ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಮಾಹಿತಿಯಾಗಿದೆ.
–ಯು.ಟಿ. ಆಯಿಶ ಫರ್ಝಾನ
ಆಗಸ್ಟ್ 6 ಮತ್ತು 9, 1945 ರಂದು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕ ಅಣು ಬಾಂಬ್ ದಾಳಿಗಳನ್ನು ನಡೆಸಿತು. ಇದು ಜಗತ್ತಿನಲ್ಲಿ ನಡೆದ ಬಹಳದೊಡ್ಡ ಮಾನವಪ್ರೇರಿತ ದುರಂತ. ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಮಾನವರ ವಿರುದ್ಧ ಪರಮಾಣು ಬಾಂಬ್‌ಗಳನ್ನು ಬಳಸಲಾಗಿತ್ತು. ಹೀಗೆ ಲಕ್ಷಾಂತರ ಜನರ ಜೀವನಾಶದೊಂದಿಗೆ ದ್ವಿತೀಯ ಜಾಗತಿಕ ಯುದ್ಧಕ್ಕೆ ಅಂತ್ಯ ಹಾಡಲಾಯಿತು.
ಮೊದಲನೆಯ ಮಹಾಯುದ್ಧದ ಅಂತ್ಯದಲ್ಲೇ ಎರಡನೇ ಮಹಾಯುದ್ಧದ ಆರಂಭದ ಲಕ್ಷಣಗಳು ಗೋಚರಿಸಿದ್ದವು. ಆ ಸಂದರ್ಭದಲ್ಲಿ ಜಾಗತಿಕ ನಾಯಕರು ಒಂದಿಷ್ಟು ಮುತುವರ್ಜಿವಹಿಸಿ, ಶಾಂತಿ ಸಂಧಾನಗಳನ್ನು ಕೈಗೊಂಡಿದ್ದರೆ ಮತ್ತೊಂದು ಯುದ್ಧವನ್ನು ತಪ್ಪಿಸಬಹುದಾಗಿತ್ತು. ಆದರೆ ಮಿತಿಮೀರಿದ ಸಾಮ್ರಾಜ್ಯ ವಿಸ್ತರಣೆ, ಅತಿಯಾದ ರಾಷ್ಟ್ರೀಯತೆಯ ವ್ಯಾಮೋಹ ಮತ್ತು ಕೈಗಾರಿಕೆಗಳ ಮೇಲಿನ ಹಿಡಿತ ಸ್ಥಾಪನೆಯ ಹಂಬಲ, ವೈಜ್ಞಾನಿಕ ಸಂಶೋಧನೆಗಳ ಮೇಲೆ ಹಕ್ಕು ಸಾಧಿಸುವುದು ಸೇರಿದಂತೆ ಇತರೆ ಕಾರಣಗಳಿಂದಾಗಿ ಎರಡನೇ ಮಹಾಯುದ್ಧ ಆಸ್ಫೋಟವಾಯಿತು.
ಅಣುಬಾಂಬ್ ದಾಳಿಗೆ ಕಾರಣವೇನು ?
· ದ್ವಿತೀಯ ಜಾಗತಿಕ ಸಮರವು ಶತ್ರು ಪಡೆಗಳು ಮತ್ತು ಮಿತ್ರ ಪಡೆಗಳು ಎಂಬ ಜಗತ್ತಿನ ಎರಡು ಪ್ರಮುಖ ಮೈತ್ರಿಕೂಟಗಳ ನಡುವೆ ನಡೆದಿತ್ತು. ಶತ್ರು ಕೂಟ (ಆಕ್ಸಿಸ್ ಮೈತ್ರಿ) ಎಂದು ಕರೆಯುತ್ತಿದ್ದ ಗುಂಪಿನಲ್ಲಿ ಮೂರು ಪ್ರಮುಖ ಪಾಲುದಾರರಾಗಿ ಜರ್ಮನಿ, ಇಟಲಿ ಮತ್ತು ಜಪಾನ್ ದೇಶಗಳಿದ್ದವು. ಈ ದೇಶಗಳ ನೇತೃತ್ವವನ್ನು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್, ಇಟಲಿಯನ್ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ ಮತ್ತು ಜಪಾನಿನ ಚಕ್ರವರ್ತಿ ಹಿರೋಹಿಟೊ ವಹಿಸಿದ್ದರು.
· ಮಿತ್ರ ಕೂಟವನ್ನು ಗ್ರೇಟ್ ಬ್ರಿಟನ್, ಅಮೆರಿಕ(ಯುನೈಟೆಡ್ ಸ್ಟೇಟ್ಸ್) ಮತ್ತು ಸೋವಿಯತ್ ಯೂನಿಯನ್ ಪ್ರಧಾನವಾಗಿ ಪ್ರತಿನಿಧಿಸುತ್ತಿದ್ದವು.
· ಈ ದೇಶಗಳನ್ನು ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್, ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಮತ್ತು ಸೋವಿಯತ್ ಒಕ್ಕೂಟದ ಜೋಸೆಫ್ ಸ್ಟಾಲಿನ್ ನೇತೃತ್ವ ವಹಿಸಿದ್ದರು.
· ಈ ಹೋರಾಟದಲ್ಲಿ ಶತ್ರು ಕೂಟದ ಪತನವು 1943 ರಲ್ಲಿ ಪ್ರಾರಂಭವಾಯಿತು. ಇದರ ಪಾಲುದಾರ ದೇಶವಾದ ಇಟಲಿ ಮೊದಲು ಸೋಲೊಪ್ಪಿಕೊಂಡಿತು. ಜುಲೈ 1943 ರ ಕೊನೆಯಲ್ಲಿ ಇಟಲಿಯ ಫ್ಯಾಸಿಸ್ಟ್ ಪಕ್ಷದ ನಾಯಕ ಮತ್ತು ಸರ್ವಾಧಿಕಾರಿಯಾಗಿದ್ದ ಬೆನಿಟೊ ಮುಸೊಲಿನಿಯನ್ನು ಪದಚ್ಯುತಗೊಳಿಸಿ ಬಂಧಿಸಿದರು. ಸೆಪ್ಟೆಂಬರ್ 8, 1943 ರಂದು ಇಟಲಿ ಮಿತ್ರರಾಷ್ಟ್ರಗಳಿಗೆ ಶರಣಾಯಿತು.
· ಏಪ್ರಿಲ್ 30, 1945 ರಂದು ಹಿಟ್ಲರ್‌ನ ಆತ್ಮಹತ್ಯೆಯ ಬಳಿಕ ನಾಜಿ ಜರ್ಮನಿಯು ಮೇ 8-9 ರಂದು ಮಿತ್ರರಾಷ್ಟ್ರಗಳಿಗೆ ಬೇಷರತ್ತಾಗಿ ಶರಣಾಯಿತು.
· 1944 ಮತ್ತು 1945ರ ಅವಧಿಯಲ್ಲಿ ಅತಿ ದೊಡ್ಡ ಹೊಡೆತ ಬಿದ್ದಿದ್ದು ಜಪಾನ್ ಮೇಲೆ. ಅದು ವಶಪಡಿಸಿಕೊಂಡಿದ್ದ ಏಷ್ಯಾದ ಸೌತ್ ಸೆಂಟ್ರಲ್ ರಾಷ್ಟ್ರಗಳಾದ ಚೀನಾ, ಬರ್ಮಾದಲ್ಲಿ ಸೋಲು ಅನುಭವಿಸಿತು. ತನ್ನ ಜತೆಗಾರ ರಾಷ್ಟ್ರಗಳ ಸೋಲಿನ ನಂತರ, ಜಪಾನ್ ಏಕಾಂಗಿಯಾಗಿ ಈ ಯುದ್ಧದಲ್ಲಿ ಹೋರಾಡಬೇಕಾಯಿತು.
· ಚೀನಾದ ವಿರುದ್ಧ ಹನ್ನೆರಡು ವರ್ಷಗಳ ಕಾಲ ಜಪಾನ್ ಮಿಲಿಟರಿ ಆಕ್ರಮಣ ಮಾಡಿದ್ದು ಮತ್ತು ಅಮೆರಿಕದೊಂದಿಗೆ ಮೂರೂವರೆ ವರ್ಷ ಯುದ್ಧ ನಡೆಸಿದ್ದು(ಈ ಯುದ್ಧವು ಪರ್ಲ್ ಹಾರ್ಬರ್ ಮೇಲೆ ಅನಿರೀಕ್ಷಿತ ದಾಳಿಯಿಂದ ಪ್ರಾರಂಭವಾಯಿತು), ಇದರಿಂದ ಉಂಟಾದ ದ್ವೇಷ ಜಪಾನ್ ಸಂಪೂರ್ಣ ಶರಣಾಗಬೇಕೆನ್ನುವುದು ಅಮೆರಿಕದ ನಾಯಕರ ಆಗ್ರಹವಾಗಿತ್ತು.
· ಅಷ್ಟರಲ್ಲಾಗಲೇ ಅಣುವಿಜ್ಞಾನಿ ರಾಬರ್ಟ್ ಓಪನ್ ಹೈಮರ್ ತಯಾರಿಸಿದ್ದ ಬಾಂಬ್‌ಗಳು ಜೊತೆಗಿದ್ದವು. ಆ ಧೈರ್ಯದ ಮೇರೆಗೆ ಜಪಾನ್ ತಕ್ಷಣವೇ ಶರಣಾಗದಿದ್ದರೆ ಸಂಪೂರ್ಣ ವಿನಾಶವನ್ನು ಎದುರಿಸಬೇಕಾದೀತೆಂಬ ಎಚ್ಚರಿಕೆಗಳನ್ನು ಮಿತ್ರಕೂಟ ರಾಷ್ಟ್ರಗಳು ನೀಡಿದವು. ಆದರೆ ಪರಮಾಣು ಬಾಂಬ್‌ಗಳ ಬಗ್ಗೆ ಯಾವುದೇ ಸ್ಪಷ್ಟವಾದ ವಿವರಣೆಯನ್ನು ನೀಡಿರಲಿಲ್ಲ.
· ಇದನ್ನು ‘ಪಾಟ್ಸ್‌ಡ್ಯಾಮ್ ಘೋಷಣೆ’ ಎನ್ನಲಾಗಿದ್ದು ಜಪಾನ್ ಈ ಘೋಷಣೆಯನ್ನು ಸಾರ್ವಜನಿಕವಾಗಿ ತಿರಸ್ಕರಿಸಿತು. ಜುಲೈ 25, 1945 ರಂದು ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ (ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರ ಮರಣದೊಂದಿಗೆ ಏಪ್ರಿಲ್ 12, 1945 ರಂದು ಟ್ರೂಮನ್ ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರಾದರು) ಜಪಾನ್‌ನ ಮೇಲೆ ಆದಷ್ಟು ಬೇಗ ಪರಮಾಣು ದಾಳಿಯನ್ನು ಪ್ರಾರಂಭಿಸಲು ಆದೇಶ ನೀಡಿದರು.
ಆಗಸ್ಟ್ 6, 1945 ರಂದು ಏನಾಯಿತು ?
· ಆಗಸ್ಟ್ 6, 1945 ರಂದು ಹಿರೋಶಿಮಾದಲ್ಲಿ ಬೆಳಿಗ್ಗೆ ಸುಮಾರು 8.15 ರ ಹೊತ್ತಿಗೆ ನಾಗರಿಕರು ತಮ್ಮ ನಿತ್ಯದ ದಿನಚರಿಯಲ್ಲಿ ತೊಡಗಿದ್ದ ಸಮಯ. ತಮ್ಮ ಮೇಲೆ ಮನುಕುಲ ಕಂಡಿರದ ಭೀಕರ ದುರಂತವೊಂದು ಬಂದೆರಗಲಿದೆ ಎಂಬ ಕಿಂಚಿತ್ ಸುಳಿವು ಆ ಜನರಿಗೆ ಇರಲಿಲ್ಲ.
· ಎನೋಲಾ ಗೇ ಎಂಬ B-29 ಬಾಂಬರ್ ವಿಮಾನವು ಟಿನಿಯನ್ ದ್ವೀಪದಿಂದ ಹೊರಟು ಉತ್ತರಕ್ಕೆ ವಾಯವ್ಯದಿಂದ ಜಪಾನ್ ಕಡೆಗೆ ಸಾಗಿತು. ಬಾಂಬರ್‌ನ ಪ್ರಾಥಮಿಕ ಗುರಿ ಪ್ರಮುಖ ಸೇನಾ ಕೇಂದ್ರವಾದ ಹಿರೋಶಿಮಾ ನಗರವಾಗಿತ್ತು.
· ಸುಮಾರು 8.15ರ ವೇಳೆಗೆ ಎನೋಲಾ ಗೇ ತನ್ನ 9,700-ಪೌಂಡ್ ಯುರೇನಿಯಂ ಗನ್ ಮಾದರಿಯ ಬಾಂಬ್ ‘ಲಿಟಲ್ ಬಾಯ್‘ ಅನ್ನು ನಿರ್ದಯವಾಗಿ ಹಿರೋಶಿಮಾದ ಮೇಲೆ ಹಾಕಿತು. ಸ್ಫೋಟದ ತೀವ್ರತೆಯನ್ನು ಸುಮಾರು 15 ಕಿಲೋಟನ್‌ಗಳು (15,000 ಟನ್ ಟಿಎನ್‌ಟಿಗೆ ಸಮಾನ) ಎಂದು ಅಂದಾಜಿಸಲಾಗಿತ್ತು.
· ಅಂದಾಜಿನ ಪ್ರಕಾರ ಆರಂಭಿಕ ಸ್ಫೋಟ, ಶಾಖ ಮತ್ತು ವಿಕಿರಣ ಪರಿಣಾಮಗಳ ಪರಿಣಾಮವಾಗಿ ಸುಮಾರು 70 ಸಾವಿರ ಜನ ಮರಣ ಹೊಂದಿದರು. 1945ರ ಅಂತ್ಯದ ವೇಳೆಗೆ ವಿಕಿರಣಗಳು ಮತ್ತು ಇತರ ದೀರ್ಘಕಾಲದ ಪರಿಣಾಮಗಳಿಂದಾಗಿ, ಹಿರೋಶಿಮಾ ಸಾವಿನ ಸಂಖ್ಯೆ 1 ಲಕ್ಷಕ್ಕಿಂತ ಹೆಚ್ಚಿತ್ತು. ಐದು ವರ್ಷಗಳ ಸಾವಿನ ಒಟ್ಟು ಮೊತ್ತ 2 ಲಕ್ಷ ಮೀರಿರಬಹುದು ಎಂದು ಅಂದಾಜಿಸಲಾಗಿದೆ. ಕ್ಯಾನ್ಸರ್ ಮತ್ತು ಇತರ ವಿಕಿರಣಶೀಲ ರೋಗಗಳ ದೀರ್ಘಾವಧಿಯ ಪರಿಣಾಮಗಳು ಕೂಡಾ ಇದುವರೆಗೂ ಮುಂದುವರಿಯುತ್ತಿದೆ.
ಈ ಘಟನೆ ನಂತರ ಅಂದರೆ ಆಗಸ್ಟ್ 9, 1945 ರಂದು ನಾಗಾಸಾಕಿ ನಗರದ ಮೇಲೆ ಅಮೆರಿಕ ‘ಫ್ಯಾಟ್‌ಮ್ಯಾನ್‘ ಎಂಬ ಹೆಸರಿನ ಅಣು ಬಾಂಬ್ ಹಾಕಿತು. ಈ ಅಣು ಬಾಂಬ್ ಸ್ಫೋಟದಿಂದ ನಾಗಾಸಾಕಿ ನಗರದಲ್ಲಿ ಸುಮಾರು 80 ಸಾವಿರ ಮಂದಿ ಸಾವನ್ನಪ್ಪಿದರು.
ನಾಗಸಾಕಿ ಮೇಲಿನ ದಾಳಿಗೂ ಮುನ್ನ ಎಚ್ಚರಿಕೆ
· ಹಿರೋಶಿಮಾ ಮೇಲಿನ ಮಾರಣಾಂತಿಕ ಮತ್ತು ವಿನಾಶಕಾರಿ ದಾಳಿಯ ನಂತರ, ಪಾಟ್ಸ್‌ಡ್ಯಾಮ್ ಘೋಷಣೆಯ ಬೇಡಿಕೆಯಂತೆ ಜಪಾನ್ ಇನ್ನೂ ಕೂಡಾ ಬೇಷರತ್ತಾಗಿ ಶರಣಾಗಲು ನಿರಾಕರಿಸಿದರೆ, ಇದೇ ರೀತಿಯ ಮಾರಕ ಬಾಂಬ್‌ಗಳೊಂದಿಗೆ ಮತ್ತಷ್ಟು ದಾಳಿ ಮಾಡಲಾಗುತ್ತದೆ ಎಂದು ಅಮೆರಿಕಾದ ಟ್ರೂಮನ್ ಎಚ್ಚರಿಸಿದ್ದರು.
· ಎರಡು ದಿನಗಳ ನಂತರ ಆಗಸ್ಟ್ 8 ರಂದು ಸೋವಿಯತ್ ಒಕ್ಕೂಟವು ಜಪಾನ್ ಮೇಲೆ ಯುದ್ಧವನ್ನು ಘೋಷಿಸಿತು. ಅಲ್ಲದೇ ಮಂಚೂರಿಯಾದಲ್ಲಿ ಜಪಾನಿನ ಪಡೆಗಳ ಮೇಲೆ ದಾಳಿ ಮಾಡಿತು.
· 1945 ಆಗಸ್ಟ್ 15ರಂದು ಜಪಾನ್ ತನ್ನ ಸೋಲು ಒಪ್ಪಿಕೊಂಡಿತು. ಅಲ್ಲಿಗೆ ಏಷ್ಯಾದಲ್ಲೂ ಯುದ್ಧ ಮುಕ್ತಾಯವಾಯಿತು. ಅಂತಿಮವಾಗಿ, 2 ಸೆಪ್ಟೆಂಬರ್ 1945ರಂದು ಎರಡನೇ ಮಹಾಯುದ್ಧ ಅಧಿಕೃತವಾಗಿ ಅಂತ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.