ADVERTISEMENT

ಉತ್ತರಿಸುವ ಪ್ರಶ್ನೆಗಳ ಸಂಖ್ಯೆಪೂರ್ವನಿರ್ಧಾರ ಸರಿಯೇ?

ಅರುಣ ಬ ಚೂರಿ
Published 3 ಡಿಸೆಂಬರ್ 2019, 19:30 IST
Last Updated 3 ಡಿಸೆಂಬರ್ 2019, 19:30 IST
ಆನ್‌ಲೈನ್‌ ಮೂಲಕ ನಡೆಸಲಾಗುವ ಪರೀಕ್ಷೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು
ಆನ್‌ಲೈನ್‌ ಮೂಲಕ ನಡೆಸಲಾಗುವ ಪರೀಕ್ಷೆಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು    

ಪರೀಕ್ಷೆಗೆ ಕೆಲವೇ ಕೆಲವು ದಿನಗಳು ಬಾಕಿ ಇರುವ ಈ ಅತ್ಯಮೂಲ್ಯ ಸಮಯದಲ್ಲಿ ಪರೀಕ್ಷಾ ಫಲಿತಾಂಶದ ಬಗ್ಗೆ ಯೋಚಿಸುವುದು ಹಾಗೂ ಉತ್ತರಿಸಬೇಕಿರುವ ಪ್ರಶ್ನೆಗಳ ಸಂಖ್ಯೆಗಳ ಬಗ್ಗೆ ಪೂರ್ವ ನಿರ್ಧಾರ ಕೈಗೊಳ್ಳುವುದು ಕೂಡ ತಪ್ಪು. ನೀವು ಅಗತ್ಯಕ್ಕೆ ತಕ್ಕಂತೆ ಗಂಭೀರವಾಗಿ ಅಧ್ಯಯನ ನಡೆಸಿದರೆ ನಿಮಗೆ ಬರಲಿರುವ ಪ್ರಶ್ನೆಪತ್ರಿಕೆ ಸುಲಭವಾಗಲಿ ಅಥವಾ ಸುಲಭದಿಂದ ಮಧ್ಯಮವಾಗಿರಲಿ ಅದರ ಬಗ್ಗೆ ಯೋಚನೆ ಅನಗತ್ಯ. ಪರೀಕ್ಷೆ ವಿವಿಧ ದಿನಗಳಲ್ಲಿ ಹಾಗೂ ಶಿಫ್ಟ್‌ಗಳಲ್ಲಿ ಜರುಗುವುದರಿಂದ ಒಂದು ವೇಳೆ ಯಾವುದಾದರೂ ಒಂದು ಶಿಫ್ಟ್‌ಗೆ ಪ್ರಶ್ನೆಪತ್ರಿಕೆ ಕಷ್ಟಕರ ಇದ್ದರೆ ಅಂಕಗಳನ್ನು ಸಾಮಾನ್ಯೀಕರಣಗೊಳಿಸುವರು (ನಾರ್ಮಲೈಜ್‌) ಎಂಬುದು ನೆನಪಿರಲಿ.

ಇನ್ನು ಕೆಲವು ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವ ಮುನ್ನವೇ ತಾವು ಉತ್ತರಿಸಬೇಕಿರುವ ಪ್ರಶ್ನೆಗಳ ಸಂಖ್ಯೆಗಳ ಬಗ್ಗೆ ನಿರ್ಧರಿಸಿರುತ್ತಾರೆ. ಉದಾಹರಣೆಗೆ ಕನಿಷ್ಠ 75, ಕನಿಷ್ಠ 78.. ಇತ್ಯಾದಿ.

ಕಟ್‌ಆಫ್‌ ಲೆಕ್ಕಾಚಾರ ಫಲ ನೀಡದು

ADVERTISEMENT

ಈ ನಿರ್ಧಾರ ತೆಗೆದುಕೊಳ್ಳುವಾಗ ಅವರು ಕಳೆದ ವರ್ಷದ ಕಟ್‌ಆಫ್‌ನ ಅವಲೋಕನ ಕೂಡ ನಡೆಸಿರುತ್ತಾರೆ. ಆದರೆ ಇದು ಎಲ್ಲ ಸಮಯದಲ್ಲೂ ಫಲ ನೀಡದು. ಕಟ್‌ಆಫ್ ತೀರ್ಮಾನವಾಗುವುದು ಆಯಾ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಗಳು ಮತ್ತು ಸಲ್ಲಿಸಿದ ಅರ್ಜಿಗಳ ಸಂಖ್ಯೆಗಳು ಹಾಗೂ ಪ್ರಶ್ನೆಪತ್ರಿಕೆಯ ಮಟ್ಟ (ಸುಲಭ, ಮಧ್ಯಮ ಅಥವಾ ಕಠಿಣ) ಇತ್ಯಾದಿ ಅಂಶಗಳ ಮೇಲೆ. ಈ ಎಲ್ಲಾ ಅಂಶಗಳು ಆ ವರ್ಷದ ಕಟ್‌ಆಫ್ ತೀರ್ಮಾನವಾಗುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ.

ಉದಾಹರಣೆಗೆ ಪ್ರಶ್ನೆಪತ್ರಿಕೆ ಮಟ್ಟ ಮಧ್ಯಮವಾಗಿದ್ದು 70 ಪ್ರಶ್ನೆಗಳನ್ನು ದಾಟಿ ಹೆಚ್ಚು ಉತ್ತರಿಸಲು ಬಹುತೇಕ ಕಷ್ಟಸಾಧ್ಯ ಎಂದಿಟ್ಟುಕೊಳ್ಳಿ. ಆದರೆ ನೀವು 70 ಪ್ರಶ್ನೆಗಳಿಗೆ ಉತ್ತರಿಸಿದ ನಂತರ ನಿಮ್ಮ ಪೂರ್ವ ನಿರ್ಧಾರ ಪೂರ್ತಿಗೊಳ್ಳಲು ಇನ್ನೂ ಐದು ಪ್ರಶ್ನೆಗಳಿಗೆ ಉತ್ತರಿಸಿದ್ದೀರಿ ಹಾಗೂ ನಂತರ ಉತ್ತರಿಸಿದ ಎಲ್ಲ 5 ಉತ್ತರಗಳು ತಪ್ಪಾಗಿವೆ ಎಂದುಕೊಳ್ಳಿ. ಹಾಗೇ ಮೊದಲು ಉತ್ತರಿಸಿದ 70 ಉತ್ತರಗಳಲ್ಲಿ ಮೂರು ತಪ್ಪಾಗಿವೆ ಎಂದಿಟ್ಟುಕೊಳ್ಳಿ. ಒಟ್ಟಿನಲ್ಲಿ ನೀವು ಉತ್ತರಿಸಿದ 75ರಲ್ಲಿ 8 ತಪ್ಪು ಹಾಗೂ 67 ಸರಿ. ಹೀಗಾಗಿ

75Q - 8W = 67Q × 1M = 67M
ತಪ್ಪು = 8Q × - 0.25M = -2M
ಒಟ್ಟಿನಲ್ಲಿ ಪಡೆದ ಅಂಕಗಳು = 65M

ಅಲ್ಲದೇ ಪ್ರಶ್ನೆಪತ್ರಿಕೆ ಮಧ್ಯಮ ಹಂತದಲ್ಲಿದ್ದ ಕಾರಣ ಸಾಮಾನ್ಯೀಕರಣಗೊಳಿಸಿದ ನಂತರ ನಿಮ್ಮ ಅಂಕ 67 ಎಂದುಕೊಳ್ಳಿ. ಈಗ ಕಟ್ ಆಫ್ 67.5/68 M ಎಂದುಕೊಂಡರೆ ಇಂತಹ ಸಂದರ್ಭದಲ್ಲಿ ಸ್ವಾಭಾವಿಕವಾಗಿ ಸ್ಪರ್ಧೆಯಿಂದ ಕಡಿಮೆ ಅಂತರದಿಂದ ಹೊರಗುಳಿಯುವಿರಿ. ಪ್ರತಿವರ್ಷ ಸ್ಪರ್ಧೆಯಿಂದ ಹೊರಗೆ ಉಳಿಯುತ್ತಿರುವವರಲ್ಲಿ ಇಂತಹ ಅಭ್ಯರ್ಥಿಗಳೂ ಸಾಕಷ್ಟಿದ್ದಾರೆ. ಅಲ್ಲದೇ ಇನ್ನು ಕೆಲವರು ಪರೀಕ್ಷಾ ಸಮಯದಲ್ಲಿ ಒಂದೇ ಪ್ರಶ್ನೆಯ ಮೇಲೆ ಹೆಚ್ಚು ಸಮಯ ವ್ಯಯಿಸುತ್ತಾರೆ. ಕಾರಣ ಇಷ್ಟು ಸುಲಭ ಪ್ರಶ್ನೆಗೆ ನನ್ನಿಂದ ಉತ್ತರಿಸಲು ಸಾಧ್ಯವಿಲ್ಲವೇ ಎಂಬ ಅವರ ಅಹಂ ಒಂದೇ ಪ್ರಶ್ನೆ ಮೇಲೆ ಅವರನ್ನು ಹೆಚ್ಚು ಸಮಯ ವ್ಯಯಿಸುವಂತೆ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡುತ್ತದೆ. ಅಭ್ಯರ್ಥಿಗಳು ಖಂಡಿತ ಇದಕ್ಕೆ ಅವಕಾಶ ಮಾಡಿಕೊಡಬಾರದು. ಪ್ರಶ್ನೆಗೆ ಉತ್ತರ ಗೊತ್ತಾಗದಿದ್ದರೂ ಮಾರ್ಕ್ ಮಾಡಿ ಮುನ್ನಡೆಯಬೇಕು.

ಇನ್ನು ಮೇಲಿನ ಉದಾಹರಣೆ ಮುಂದುವರಿಸುತ್ತಾ ಒಂದು ವೇಳೆ ನೀವು ಪ್ರಶ್ನೆಪತ್ರಿಕೆ ಮಧ್ಯಮ ಮಟ್ಟದಲ್ಲಿದೆ ಎಂಬುದನ್ನು ಅರಿತು ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಸೀಮಿತ ಕಾಲಾವಧಿಯಲ್ಲಿ ಉತ್ತರಿಸಿದ್ದೀರಿ ಎಂದುಕೊಳ್ಳಿ. ಉದಾಹರಣೆಗೆ ಕೇವಲ 70ಕ್ಕೆ ಮಾತ್ರ ನಿಮ್ಮ ಉತ್ತರಗಳನ್ನು ಸೀಮಿತಗೊಳಿಸಿದ್ದೀರಿ ಎಂದುಕೊಂಡರೆ, ಆಗ

70Q -3W = 67Q × 1M = 67M
ತಪ್ಪು = 3Q × -0.25 = -0. 75M
ಒಟ್ಟಿನಲ್ಲಿ ಪಡೆದ ಅಂಕಗಳು = 66.25M

ಅಲ್ಲದೆಯೇ ಪ್ರಶ್ನೆಪತ್ರಿಕೆ ಮಟ್ಟ ಮಧ್ಯಮ ಇದ್ದ ಕಾರಣ ಸಾಮಾನ್ಯೀಕರಣಗೊಂಡ ನಂತರ ನೀವು ಗಳಿಸಿದ ಅಂಕಗಳು 68.25 (ಉದಾಹರಣೆ ಮಾತ್ರ). ಇದಲ್ಲದೇ ಯಾವುದಾದರೊಂದು ವಿಭಾಗದಲ್ಲಿ ಪಡೆದ ಅಂಕಗಳು ಹಾಗೂ ಉತ್ತರಿಸಿದ ಅಂಕ ಸಮವಿದ್ದಾಗ (ಉದಾಹರಣೆಗೆ 33/33 ಅಥವಾ 34/34 ಅಥವಾ 32/32) ನಿಖರತೆಗೂ ಸಹ ಅಂಕಗಳನ್ನು ಪಡೆದು ನಿಮ್ಮ ಒಟ್ಟು ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು. ಆದ್ದರಿಂದ ಪರೀಕ್ಷೆಗೆ ಹತ್ತಿರವಿರುವ ಈ ಸಮಯದಲ್ಲಿ ಫಲಿತಾಂಶದ ಬಗ್ಗೆ ಯೋಚಿಸುವುದು ಅನಗತ್ಯ.

ಚಿಂತೆ ಬಿಡಿ

ಇನ್ನು ‘ರುಮಿನೇಶನ್’ ಬಗ್ಗೆ ನಿಮಗೆ ಹೇಳಲೇಬೇಕು. ಹೀಗೆಂದರೆ ದುಃಖ ಅಥವಾ ಋಣಾತ್ಮಕ ಆಲೋಚನೆಗಳ ಬಗ್ಗೆ ನಿರಂತರವಾಗಿ ಯೋಚಿಸುವ ಪ್ರಕ್ರಿಯೆ ಎಂದರ್ಥ. ಈ ಅಭ್ಯಾಸ ನಿಮ್ಮ ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ. ಇದು ಖಿನ್ನತೆಯನ್ನು ತೀವ್ರಗೊಳಿಸುತ್ತದೆ ಮತ್ತು ಭಾವನೆಗಳ ಬಗ್ಗೆ ಯೋಚಿಸುವ ಮತ್ತು ಪ್ರತಿಕ್ರಿಯಿಸುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಋಣಾತ್ಮಕವಾಗಿ ಚಿಂತಿಸದಿರಿ ಹಾಗೂ ಪ್ರತಿನಿತ್ಯ ಮಾನಸಿಕ ಆರೋಗ್ಯಕ್ಕೆ ವಿವಿಧ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.

ಅಭ್ಯಾಸ ಹಾಗೂ ಆರೋಗ್ಯ

ಪರೀಕ್ಷೆಗೆ ಅಗತ್ಯವಿರುವ ಎಷ್ಟೇ ಸಿದ್ಧತೆ ನಡೆಸಿದರೂ ಅದನ್ನು ಎದುರಿಸಲು ಬೇಕಿರುವುದು ದೈಹಿಕ ಹಾಗೂ ಮಾನಸಿಕ ಆರೋಗ್ಯ. ಈ ಸಮಯದಲ್ಲಿ ಆರೋಗ್ಯದ ಕಾಳಜಿ ಅತ್ಯಗತ್ಯ.

ನಿರ್ಜಲೀಕರಣದಿಂದ ದೂರವಿರಲು ಪ್ರತಿ ಅರ್ಧ ಗಂಟೆಗೊಮ್ಮೆ ನೀರು ಕುಡಿಯಿರಿ.

ಪ್ರತಿದಿನ 10– 15 ನಿಮಿಷಗಳ ಕಾಲ ಧ್ಯಾನ ಮಾಡಿರಿ. ಇದು ಮಾನಸಿಕ ಆರೋಗ್ಯ, ಏಕಾಗ್ರತೆ ಹಾಗೂ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ.

ದಿನನಿತ್ಯ ರಾತ್ರಿ ನಿಗದಿತ ಸಮಯ ನಿದ್ದೆಗೆ ಮೀಸಲಿರಿಸಿ.

ರಾತ್ರಿ ಅಧ್ಯಯನದಿಂದ ಸಂಪೂರ್ಣ ದೂರವಿರಿ.

ಅಭ್ಯಾಸದ ಮಧ್ಯೆ ಒತ್ತಡ ನಿವಾರಣೆಗಾಗಿ ಯಾವುದಾದರೊಂದು ವಿಧಾನವನ್ನು ಅಳವಡಿಸಿಕೊಳ್ಳಿ.

ಉದಾಹರಣೆಗೆ ಗೆಳೆಯರೊಂದಿಗೆ ಮಾತುಕತೆ, ಬೆಳಗಿನ ಜಾವ ಜಾಗಿಂಗ್ ಹೋಗುವುದು, 10– 15 ನಿಮಿಷಗಳ ಕಾಲ ನೆಚ್ಚಿನ ಶೋಗಳ ವೀಕ್ಷಣೆ, 10– 15 ನಿಮಿಷಗಳ ಕಾಲ ಕ್ರಿಕೆಟ್ ಆಡುವುದು

ಟಿ.ವಿ.ಯಲ್ಲಿ ಚರ್ಚೆಗಳನ್ನು ವೀಕ್ಷಿಸುವುದು

ಈ ಸಮಯದಲ್ಲಿ ನಾವು ಸೇವಿಸುವ ಆಹಾರ ಕೂಡ ಅತಿ ಮುಖ್ಯ. ಪ್ರೊಟೀನ್‌ಯುಕ್ತ ಆಹಾರ, ಹಸಿರು ತರಕಾರಿಗಳು ಹಾಗೂ ಹಣ್ಣುಗಳನ್ನು ಸೇವಿಸಿರಿ,

ಒಂದು ಪರೀಕ್ಷೆ ನಿಮ್ಮ ಮಿತಿ ನಿರ್ಧರಿಸಲಾರದು. ಇದು ಅಂತ್ಯವಲ್ಲ, ಕೇವಲ ಒಂದು ಪರೀಕ್ಷೆಯಾದ್ದರಿಂದ ಸಮಾಧಾನದಿಂದ ಪರೀಕ್ಷೆ ಎದುರಿಸಿ. ಆಲ್ ದಿ ಬೆಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.