ADVERTISEMENT

ಶತಮಾನದ ಶಾಲೆಗೆ ನವೀಕರಣದ ಸ್ಪರ್ಶ

ಎಸ್‌.ಸಂಪತ್‌
Published 8 ಆಗಸ್ಟ್ 2018, 19:30 IST
Last Updated 8 ಆಗಸ್ಟ್ 2018, 19:30 IST
ನವೀಕರಣಗೊಳ್ಳುತ್ತಿರುವ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್‌ನ ಕಟ್ಟಡ– ಚಿತ್ರ/ ಆನಂದ ಬಕ್ಷಿ
ನವೀಕರಣಗೊಳ್ಳುತ್ತಿರುವ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್‌ನ ಕಟ್ಟಡ– ಚಿತ್ರ/ ಆನಂದ ಬಕ್ಷಿ   

ಬೆಂಗಳೂರಿನಲ್ಲಿ ಶತಮಾನೋತ್ಸವ ಕಂಡಿರುವ ಚಾಮರಾಜಪೇಟೆಯ ಕೋಟೆ ಹೈಸ್ಕೂಲ್‌ ಕಟ್ಟಡಕ್ಕೆ ಕಾಯಕಲ್ಪ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. 1907ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವಧಿಯಲ್ಲಿ ನಿರ್ಮಾಣವಾದ ಬಾಲಕರ ಏಕೈಕ ಪ್ರೌಢಶಾಲೆ ಇದು. ಇದಕ್ಕೀಗ ಬರೋಬ್ಬರಿ 111 ವರ್ಷ.

ನೂರು ವರ್ಷಕ್ಕೂ ಹೆಚ್ಚುಕಾಲ ಸುಭದ್ರವಾಗಿದ್ದ ಈ ಕಟ್ಟಡದ ಕ್ರಮೇಣ ನಿರ್ವಹಣೆ ಕೊರತೆಯ ಕಾರಣ ಸೊರಗಿ ಶಿಥಿಲಗೊಳ್ಳತೊಡಗಿತ್ತು. ಗೋಡೆಯ ಗಾರೆ ಕಿತ್ತುಕೊಳ್ಳತೊಡಗಿತ್ತು. ಹೆಂಚಿನ ಮೇಲ್ಛಾವಣಿ ಹಾಳಾಗಿತ್ತು. ಮಳೆ ಬಂದರೆ ನೀರು ಸೋರಿ, ಕೊಠಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಮಳೆ ನೀರಿನ ಸ್ಪರ್ಶಕ್ಕೆ ಗೋಡೆಗಳಲ್ಲಿ ತೇವಾಂಶ ಹೆಚ್ಚಾಗಿ ಅವು ಶಿಥಿಲಗೊಳ್ಳ ತೊಡಗಿದವು.

ಶಾಲೆಯ ಶಿಕ್ಷಕರು ಹಾಗೂ ಇಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ಐದಾರು ವರ್ಷಗಳ ಸತತ ಪ್ರಯತ್ನದ ಫಲವಾಗಿ ಈ ಪಾರಂಪರಿಕ ಕಟ್ಟಡಕ್ಕೆ ಕಾಯಕಲ್ಪ ದೊರೆಯುತ್ತಿದ್ದು, ಅದರ ನವೀಕರಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

ADVERTISEMENT

ಅದಾಗ್ಯೂ, ಈ ನವೀಕರಣ ಕಾಮಗಾರಿಯನ್ನು ಸರ್ಕಾರ ಕೈಗೊಂಡಿಲ್ಲ. ಬದಲಿಗೆ ಸರ್ಕಾರದ ಅನುಮತಿ ಪಡೆದು ‘ಇಂಟ್ಯಾಕ್‌’ (ಇಂಡಿಯನ್‌ ನ್ಯಾಷನಲ್‌ ಟ್ರಸ್ಟ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರಲ್‌ ಹೆರಿಟೇಜ್‌) ಸಂಸ್ಥೆ ನಡೆಸುತ್ತಿದೆ. ಇದು ಅಂದಾಜು ₹ 2.40 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ಅದರ ಸಂಪೂರ್ಣ ವೆಚ್ಚವನ್ನು ಉದ್ಯಮಿ ಬಸಂತ್‌ ಪೊದ್ದಾರ್‌ ಅವರು ನೀಡಿದ್ದಾರೆ.

ನೈಜ ವಾಸ್ತುಶಿಲ್ಪಕ್ಕೆ ಧಕ್ಕೆಯಿಲ್ಲ: ಈ ಕಟ್ಟಡದ ನೈಜ ವಾಸ್ತುಶಿಲ್ಪ ಮತ್ತು ಸೌಂದರ್ಯಕ್ಕೆ ಧಕ್ಕೆಯಾಗದಂತೆ, ಹಿಂದೆ ಬಳಸಲಾಗಿದ್ದ ಗಾರೆ ವಿಧಾನದಲ್ಲಿಯೇ ಕಟ್ಟಡ ನವೀಕರಣ ಕಾರ್ಯ ನಡೆಸಲು ‘ಇಂಟ್ಯಾಕ್‌’ ಸಂಸ್ಥೆ ನಿರ್ಧರಿಸಿದೆ. ಈಗಾಗಲೇ ಮೈಸೂರಿನ ಓರಿಯಂಟಲ್‌ ಸಂಶೋಧನಾ ಸಂಸ್ಥೆಯ ಕಟ್ಟಡ, ಪುತ್ತೂರಿನ ಶಿವರಾಮ್‌ ಕಾರಂತರ ಬಾಲವನ ಸೇರಿದಂತೆ ಕೆಲ ಪಾರಂಪರಿಕ ಕಟ್ಟಡಗಳ ನವೀಕರಣ ಕಾಮಗಾರಿಯನ್ನು ಯಶಸ್ವಿಯಾಗಿ ನಡೆಸಿರುವ ಅನುಭವ ಈ ಸಂಸ್ಥೆಗಿದೆ.

‘ಪಾರಂಪರಿಕ ಕಟ್ಟಡಗಳ ನವೀಕರಣ ಕಾರ್ಯವನ್ನು ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿ ಮಾಡಬೇಕು. ಶತಮಾನಕ್ಕೂ ಹಳೆಯದಾದ ಈ ಶಾಲೆಯದ್ದು ಬಹುತೇಕ ಗಾರೆ ಕಟ್ಟಡ. ಹಾಗಾಗಿ ಸುಣ್ಣ, ಮರಳು ಮಿಶ್ರಣಗೊಳಿಸಿ ಗಾರೆಯ ಪ್ಲಾಸ್ಟರಿಂಗ್‌ ಅನ್ನೇ ಮಾಡಬೇಕು. ಈಗಾಗಲೇ ಶಿಥಿಲಗೊಳ್ಳುತ್ತಿದ್ದ ಪ್ಲಾಸ್ಟರಿಂಗ್‌ ತೆಗೆದು ಹೊಸದಾಗಿ ಗಾರೆ ಕೆಲಸ ಮಾಡಲಾಗುತ್ತಿದೆ’ ಎನ್ನುತ್ತಾರೆ ‘ಇಂಟ್ಯಾಕ್‌’ ಸಂಸ್ಥೆಯ ಬೆಂಗಳೂರು ಶಾಖೆಯ ಸಂಯೋಜಕ ಸಿ. ಅರವಿಂದ್‌.

‘ಕಟ್ಟಡದ ಕೆಲವೆಡೆ ತೊಲೆಗಳು (ಭೀಮ್‌) ಬಹುತೇಕ ಹಾಳಾಗಿವೆ, ಹೆಂಚುಗಳು ನಾಶಗೊಂಡಿವೆ. ಬಾಗಿಲು, ಕಿಟಕಿಗಳು ಮುರಿದಿವೆ. ಅವುಗಳನ್ನು ಬದಲಿಸಬೇಕು. ತೇವಾಂಶ ಹೆಚ್ಚಾಗಿ ಶಿಥಿಲಗೊಳ್ಳುತ್ತಿರುವ ಗೋಡೆಗಳನ್ನು ಸುಭದ್ರಗೊಳಿಸಬೇಕಿದೆ. ಗೋಡೆಗಳ ಬದಿಯಲ್ಲಿ ಮತ್ತು ಸಜ್ಜೆಗಳ ಮೇಲೆ ಬೆಳೆದಿರುವ ಗಿಡ, ಗಂಟೆಗಳನ್ನು ತೆರವುಗೊಳಿಸಿ ದುರಸ್ತಿಗೊಳಿಸಬೇಕಿದೆ’ ಎಂದು ಅವರು ವಿವರಿಸುತ್ತಾರೆ.

‘ಇದರ ಜತೆಗೆ ಶಾಲೆಗೆ ಅಗತ್ಯವಿರುವಂತೆ ಒಳಾಂಗಣ ವಿನ್ಯಾಸ ಮತ್ತು ವಿದ್ಯುತ್‌ ಸಂಪರ್ಕ ಒದಗಿಸುವ ಕಾರ್ಯವೂ ಆಗಬೇಕು. ಈಗಾಗಲೇ ಕಾಮಗಾರಿಗೆ ಚಾಲನೆ ಸಿಕ್ಕು ಮೂರು ತಿಂಗಳಾಗಿದೆ. ಒಂದು ಅಥವಾ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಅವರು ವಿಶ್ವಾಸದಿಂದ ಹೇಳುತ್ತಾರೆ.

ಅತ್ಯಾಧುನಿಕ ಸೌಲಭ್ಯ: ‘ಶಾಲೆಯ ಪ್ರಯೋಗಾಲಯ ಮತ್ತು ಗ್ರಂಥಾಲಯ ಕೊಠಡಿಗಳು ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಳ್ಳಲಿವೆ. ಅದರ ಜತೆಗೆ ಕಂಪ್ಯೂಟರ್‌ ಲ್ಯಾಬ್‌, ಲಾಂಗ್ವೆಜ್‌ ಲ್ಯಾಬ್‌, ಸೈನ್ಸ್‌ ಲ್ಯಾಬ್‌, ಸೋಷಿಯಲ್‌ ಸೈನ್ಸ್‌ ಲ್ಯಾಬ್‌ ಕೊಠಡಿಗಳು ಆಧುನಿಕ ರೀತಿಯಲ್ಲಿ ವಿನ್ಯಾಸಗೊಳ್ಳಲಿವೆ’ ಎಂದು ಶಾಲೆಯ ಉಪ ಪ್ರಾಂಶುಪಾಲ ಎಸ್‌.ಸಿ. ಚಂದ್ರಶೇಖರ್‌ ಮಾಹಿತಿ ನೀಡಿದರು. ಶಾಲೆಯಲ್ಲಿ ಒಟ್ಟು 22 ಕೊಠಡಿಗಳಿವೆ. ಅವುಗಳಲ್ಲಿ 9 ತರಗತಿ ಕೊಠಡಿಗಳು, ಎರಡು ಸಿಬ್ಬಂದಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯಗಳಿವೆ. ಅಲ್ಲದೆ ವಿ.ಎಸ್‌. ಕೃಷ್ಣ ಅಯ್ಯರ್‌ ಅವರ ಸಭಾಂಗಣ ಕೂಡ ಇದ್ದು, ಅಲ್ಲಿ ಮಲ್ಟಿ ಮೀಡಿಯಾ, ಡಿಜಿಟಲ್‌ ತರಗತಿಗಳು ನಡೆಯುತ್ತವೆ. ಮಳೆ ಬಂದರೆ ಸಾಕು ಇಲ್ಲಿನ ಕೊಠಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ಗೋಡೆಗಳು ಹಸಿಯಾಗುತ್ತಿದ್ದವು. ನವೀಕರಣದ ನಂತರ ಈ ಸಮಸ್ಯೆ ಇರುವುದಿಲ್ಲ ಎಂದು ವಿಶ್ವಾಸದಿಂದ ಹೇಳುತ್ತಾರೆ.

‘ಶಾಲೆಗೆ ಸೌರ ವಿದ್ಯುತ್‌ ಸಂಪರ್ಕ ಒದಗಿಸುವ ಉದ್ದೇಶವೂ ಇದೆ. ಶಾಲೆಯ ತಾರಸಿ ಮೇಲೆ ಸೌರ ಫಲಕಗಳನ್ನು ಅಳವಡಿಸಿ, ಹೆಚ್ಚುವರಿ ವಿದ್ಯುತ್‌ ಅನ್ನು ವಿದ್ಯುತ್‌ ಗ್ರಿಡ್‌ಗೆ ಪೂರೈಸುವ ಚಿಂತನೆಯೂ ಇದೆ. ಇದರಿಂದ ವಿದ್ಯುತ್‌ ಬಳಕೆ ಮೇಲೆ ರಿಯಾಯಿತಿಯೂ ದೊರೆಯಲಿದೆ. ಈ ಕುರಿತು ಇಂಟ್ಯಾಕ್‌ ಸಂಸ್ಥೆಯ ಪ್ರತಿನಿಧಿಗಳ ಜತೆ ಚರ್ಚಿಸಿದ್ದೇವೆ. ಇದರ ಜತೆಗೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನೂ ಮಾಡಿಕೊಂಡುವಂತೆ ಶಾಲೆಯು ಆ ಸಂಸ್ಥೆಯನ್ನು ಕೊರಿದೆ’ ಎಂದು ಅವರು ವಿವರಿಸಿದರು.

ಶಾಲೆ ಬಗ್ಗೆ ಒಂದಿಷ್ಟು...
ಮೂರುವರೆ ಎಕರೆ ಪ್ರದೇಶದಲ್ಲಿ ಇರುವ ಈ ಶಾಲೆ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಸರ್ಕಾರಿ ಶಾಲೆಗಳಲ್ಲಿ ಒಂದು. ಉತ್ತಮ ಆಟದ ಮೈದಾನವನ್ನೂ ಇದು ಹೊಂದಿದೆ. ಆಂಗ್ಲೊ ವರ್ನಾಕ್ಯುಲರ್‌ ಬಾಲಕರ ಶಾಲೆಯಾಗಿ 1907ರಲ್ಲಿ ಇದು ಪ್ರಾರಂಭವಾಯಿತು. 1940–42ರ ಅವಧಿಯಲ್ಲಿ ಕನ್ನಡ ಮಾಧ್ಯಮ ಆರಂಭವಾಯಿತು. ಬಾಲಕರ ಶಾಲೆಯಾಗಿದ್ದ ಇದರಲ್ಲಿ ಎರಡು ದಶಕದ ಹಿಂದೆ ಬಾಲಕಿಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. 1982ರಲ್ಲಿ ಇದೇ ಕಟ್ಟಡದಲ್ಲಿ ಪದವಿ ಪೂರ್ವ ಕಾಲೇಜು ಕೂಡ ಪ್ರಾರಂಭವಾಯಿತು. ಆದರೆ ವಿದ್ಯಾರ್ಥಿಗಳ ಕೊರತೆಯ ಕಾರಣ 2017ರ ಜೂನ್‌ನಲ್ಲಿ ಪಿ.ಯು ಕಾಲೇಜನ್ನು ಶಿವಾಜಿನಗರದ ಕಾಲೇಜಿನೊಂದಿಗೆ ವಿಲೀನಗೊಳಿಸಲಾಗಿದೆ.

111 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಹಲವು ಮಹನೀಯರು ಓದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಮಾಜಿ ಕ್ರಿಕೆಟಿಗ ಜಿ.ಆರ್‌.ವಿಶ್ವನಾಥ್‌, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿದ್ದ ವಿ.ಎಸ್‌.ಕೃಷ್ಣ ಅಯ್ಯರ್‌, ನಟ ಶಕ್ತಿ ಪ್ರಸಾದ್‌ ಸೇರಿದಂತೆ ಅನೇಕ ಮಹನೀಯರು ಇಲ್ಲಿ ಓದಿದ್ದಾರೆ. ಶಕ್ತಿ ಪ್ರಸಾದ್‌ ಅವರು ಈ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಒಂದು ಕಾಲದಲ್ಲಿ 2500 ವಿದ್ಯಾರ್ಥಿಗಳನ್ನು ಹೊಂದಿದ್ದ ಈ ಪ್ರತಿಷ್ಠಿತ ಶಾಲೆಯಲ್ಲಿ ಸಮಾಜದ ಎಲ್ಲ ವರ್ಗದ ಕುಟುಂಬಗಳ ಮಕ್ಕಳು ಪ್ರವೇಶ ಪಡೆಯುತ್ತಿದ್ದರು. ಆದರೆ ಈಗ ವಿದ್ಯಾರ್ಥಿಗಳ ಸಂಖ್ಯೆ 213 ಆಗಿದ್ದು, ಸಾಮಾನ್ಯವಾಗಿ ಬಡ ವರ್ಗದ ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ.

* 213 –‍ ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
*156– ಬಾಲಕರು
*57 –ಬಾಲಕಿಯರು
*1907 –ಶಾಲೆ ಆರಂಭವಾದ ವರ್ಷ
* ₹2.40 ಕೋಟಿ –ನವೀಕರಣಕ್ಕೆ ತಗಲುವ ಅಂದಾಜು ವೆಚ್ಚ

*


–ಸಿ.ಅರವಿಂದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.