ADVERTISEMENT

ಒಂದಾನೊಂದು ಕಾಲದಲ್ಲಿ.. ಮಕ್ಕಳಲ್ಲಿ ಕಥೆ ಓದುವ, ಬರೆಯುವ ವಾಚಿಸುವ ಹವ್ಯಾಸ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 19:30 IST
Last Updated 27 ಮಾರ್ಚ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಲೆಗಳಲ್ಲಿ ಶಿಕ್ಷಕರು ‘ಒಂದೂರಲ್ಲಿ.. ಒಂದಾನೊಂದು ಕಾಲದಲ್ಲಿ’ ಅಂತ ಕಥೆ ಹೇಳೋಕೆ ಶುರು ಮಾಡಿದರೆ ಸಾಕು, ಮಕ್ಕಳ ಮುಖ ಅರಳುತ್ತದೆ. ಗಲಾಟೆ ಮಾಡುತ್ತಿದ್ದವರೆಲ್ಲ ಗಂಭೀರವಾಗಿ ಕೂತು, ‘ಮುಂದೇನಾಯ್ತು ಹೇಳಿ’ ಅಂತ ಕೇಳೋಕೆ ಶುರು ಮಾಡ್ತಾರೆ.

ಕಥೆಗಳೆಂದರೆ ಹಾಗೆ. ಅದಕ್ಕೆ ವಯಸ್ಸಿನ ಭೇದವಿಲ್ಲ. ಶಾಲೆಗಳಲ್ಲಿ ಅದೆಷ್ಟೊ ಶಿಕ್ಷಕರು ಕಥೆಗಳ ಮೂಲಕವೇ ಪಠ್ಯಗಳನ್ನು ಮಕ್ಕಳಿಗೆ ದಾಟಿಸುವ ಪ್ರಯತ್ನ ಮಾಡುತ್ತಾರೆ. ಪಠ್ಯಕ್ಕೆ ಹೊಂದುವಂತಹ ನೈಜ ಘಟನೆಗಳು, ಪುರಾಣಗಳ ತುಣುಕುಗಳನ್ನು ಉಪಕಥೆಗಳ ರೂಪದಲ್ಲಿ ನಿರೂಪಣೆ ಮಾಡುತ್ತಾರೆ. ಕೆಲವೊಮ್ಮೆ ಮಕ್ಕಳಿಂದಲೂ ಕಥೆ ಹೇಳಿಸಿ, ಅವರ ಮನದಲ್ಲಿ ಪಠ್ಯದ ವಿಷಯ ಅಚ್ಚೊತ್ತುವಂತೆ ಮಾಡುತ್ತಾರೆ.

ಹೌದು, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ, ಕಥೆ ಓದುವ ಹವ್ಯಾಸ ಬೆಳೆಸಬೇಕು. ಕಥೆಗಳು ಮಕ್ಕಳಲ್ಲಿರುವ ಕಲ್ಪನಾಶಕ್ತಿಯನ್ನು ವಿಸ್ತರಿಸಲು ನೆರವಾಗುತ್ತವೆ. ಹಾಗಾಗಿ, ಬಿಡುವಿನ ವೇಳೆಯಲ್ಲಿ ಮಕ್ಕಳ ಕೈಗೆ ಕಥೆ ಪುಸ್ತಕಗಳನ್ನಿಟ್ಟು, ಓದುವಂತೆ ಪೋಷಕರು ಮತ್ತು ಶಿಕ್ಷಕರು ಉತ್ತೇಜಿಸಬೇಕು.

ADVERTISEMENT

ಕಥೆ ಓದುವ ಹವ್ಯಾಸ ಆರಂಭ ಹೇಗೆ?

ಪುಟ್ಟ ಮಕ್ಕಳಾದರೆ, ಚಿತ್ರಗಳ ಮೂಲಕ ಕಥೆಗಳನ್ನು ಓದಿಸಬೇಕು. ಈ ವಿಧಾನ ಮಕ್ಕಳಿಗೆ ಬೇಗ ರುಚಿಸುತ್ತದೆ. ಹಾಗೆಯೇ ಕಥೆಯತ್ತ ಆಕರ್ಷಿತರಾಗುತ್ತಾರೆ. ಮಕ್ಕಳಿಗೆ ಒಮ್ಮೆ ಈ ಚಿತ್ರಕಥೆಗಳನ್ನು ಹೇಗೆ ಓದಬೇಕೆಂದು ತಿಳಿಸಿ ಕೊಡಿ. ಮುಂದೆ ಅವರೇ ಚಿತ್ರಗಳನ್ನು ತೋರಿಸುತ್ತಾ ಕಥೆ ಹೇಳುತ್ತಾರೆ. ಅಷ್ಟೇ ಅಲ್ಲ, ತಮ್ಮ ಪಠ್ಯಗಳಲ್ಲಿರುವ ವಿಷಯಗಳನ್ನಿಟ್ಟುಕೊಂಡೇ ಕಥೆ ರೂಪಿಸಲು ಪ್ರಯತ್ನಿಸಲೂಬಹುದು.

ಮುಂದಿನ ಹಂತ, ಚಿತ್ರ ರಹಿತ ಕಥೆಗಳನ್ನು ಓದುವ ಅಭ್ಯಾಸ ಮಾಡಿಸುವುದು. ಆರಂಭದಲ್ಲಿ ಸರಳವಾಗಿರುವ ಸಣ್ಣ ಸಣ್ಣ ನೀತಿಕಥೆಗಳನ್ನು ಓದಿಸಿ. ಅವುಗಳ ಅರ್ಥವನ್ನು ಮನಮುಟ್ಟುವಂತೆ ಹೇಳಿ. ಮಕ್ಕಳಿಗೆ ಸಣ್ಣ ಕಥೆಗಳು ಅರ್ಥವಾಗುತ್ತದೆ ಎಂದು ನಿಮಗೆ ಎನ್ನಿಸಿದರೆ, ಮುಂದೆ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟವಾಗುವ ಮಕ್ಕಳ ಕಥೆಗಳನ್ನು ಓದಿ ಹೇಳಿ. ನಂತರ ಅವುಗಳನ್ನು ಮಕ್ಕಳಿಂದ ಓದಿಸಿ. ಒಂದೆರಡು ಬಾರಿ ಮಕ್ಕಳ ಜೊತೆಯಲ್ಲೇ, ನೀವೂ ಕಥೆ ಓದಿ. ಆನಂತರದಲ್ಲಿ ವಿಭಿನ್ನ ರೀತಿಯ ಕಥೆಗಳ ಓದಿನತ್ತ ಆಸಕ್ತಿ ಬೆಳೆಯುತ್ತದೆ.

ಮಕ್ಕಳಿಗೆ ಜನಪದ ಕಥೆಗಳು ಬಹಳ ಇಷ್ಟವಾಗುತ್ತವೆ. ಇಂಥ ಕಥೆಗಳನ್ನು ಅಜ್ಜ, ಅಜ್ಜಿಯರು ಸೊಗಸಾಗಿ ಹೇಳುತ್ತಾರೆ. ಜನಪದ ಕಥೆಗಳನ್ನು ಕೇಳುವುದರಿಂದ ಮಕ್ಕಳಲ್ಲಿ ನೆಲ–ಮೂಲ ಸಂಸ್ಕೃತಿಯ ಅರಿವು ಮೂಡುತ್ತದೆ.

ಕಥೆಗಳ ವಾಚನ, ರಚನೆ

ಮಕ್ಕಳಲ್ಲಿ ಕಥೆಗಳನ್ನು ಆಲಿಸುವ, ಓದುವ ಅಭ್ಯಾಸದ ಜೊತೆಗೆ ಜೊತೆಗೆ, ಕಥೆ ವಾಚಿಸುವ ಹಾಗೂ ರಚಿಸುವ ಹವ್ಯಾಸ ಬೆಳೆಸಬೇಕು. ತಾನು ಓದಿದ, ದೃಶ್ಯ ಮಾಧ್ಯಮಗಳಲ್ಲಿ ನೋಡಿದ ಸನ್ನಿವೇಶಗಳನ್ನು ತನ್ನದೇ ಮಾತುಗಳಲ್ಲಿ ಹೇಳುವುದಕ್ಕೆ ಅವರಿಗೆ ವೇದಿಕೆ ಕಲ್ಪಿಸಬೇಕು. ಕಥೆಯಲ್ಲಿನ ಪಾತ್ರಗಳನ್ನು ಅನುಭವಿಸಿ, ಭಾವಾಭಿನಯದೊಂದಿಗೆ ಹೇಳುವ ಕೌಶಲ ಬೆಳೆಸಬೇಕು. ಮನೆಯಲ್ಲಿರುವ ಹಿರಿಯರು ಮಕ್ಕಳು ಹೇಳುವ ಕಥೆಗಳನ್ನು ಕೇಳಿಸಿಕೊಂಡು, ಅದಕ್ಕೆ ಪ್ರತಿಕ್ರಿಯಿಸಬೇಕು. ಆಗ ಮಕ್ಕಳಿಗೂ ಕಥೆ ಹೇಳುವ ಉತ್ಸಾಹ ಹೆಚ್ಚುತ್ತದೆ. ಶಾಲೆಗಳಲ್ಲೂ ಕಥಾ ಅಭಿವ್ಯಕ್ತಿಗೆ ಅವಕಾಶ ನೀಡುವುದರಿಂದ ಮಕ್ಕಳ ಸಭಾಕಂಪನ ದೂರವಾಗುತ್ತದೆ.

ಮಕ್ಕಳು ನಿರಂತರವಾಗಿ ಕಥೆಗಳನ್ನು ಓದುತ್ತಿದ್ದರೆ, ಮುಂದೊಂದು ದಿನ ‘ನಾನೂ ಒಂದು ಕಥೆ ಬರೆಯುತ್ತೇನೆ’ ಎನ್ನಬಹುದು. ಮಕ್ಕಳಲ್ಲಿನ ಈ ಬೆಳವಣಿಗೆಯನ್ನು ಪೋಷಕರು, ಶಿಕ್ಷಕರು ಗಮನಿಸಬೇಕು. ಕಥೆ ಬರೆಯುವ ಆಸಕ್ತಿ ಚಿಗುರೊಡೆದ ಮಕ್ಕಳಿಗೆ, ನೀವು ನೋಡಿದ ಘಟನೆಗಳನ್ನು, ದೈನಂದಿನ ಅನುಭವಗಳು, ತನ್ನೂರಿನ ವಿವಿಧ ಆಚರಣೆಗಳನ್ನು ಆಧರಿಸಿ ಕಥೆ ಬರೆಯಿರಿ ಎಂದು ಪ್ರೇರೇಪಿಸಬೇಕು. ಆಗ ಕಥೆ ಬರೆಯುವ ಅಭ್ಯಾಸ ರೂಢಿಯಾಗುತ್ತದೆ.

ಪೌರಾಣಿಕ ಕಥೆಗಳು, ಹಾಡ್ಗತೆಗಳು

ಪೌರಾಣಿಕ ಕಥೆಗಳು ಮಕ್ಕಳಿಗೆ ಬಲು ಇಷ್ಟ. ಸ್ಥಳೀಯ ಪರಿಸರದ ಕಥೆಗಳನ್ನು ಬರೆಯಲು ಉತ್ತೇಜಿಸಬೇಕು. ಇದೇ ರೀತಿ ‘ಪುಣ್ಯಕೋಟಿ’, ‘ಮುಂಗುಸಿ–ಹಾವಿನ’ ಹಾಡ್ಗತೆ(ಹಾಡಿನ ಮೂಲಕ ಕಥೆ ಹೇಳುವುದು)ಗಳು ದೀರ್ಘಕಾಲ ಮನಸ್ಸಿನಲ್ಲಿ ಉಳಿದಿವೆ. ಇಂಥ ಹಾಡ್ಗತೆಗಳ ಮೂಲಕವೂ ಮಕ್ಕಳನ್ನು ಕಥಾಲೋಕಕ್ಕೆ ಕರೆದೊಯ್ಯಬಹುದು.

ಶಾಲೆಗಳಲ್ಲಿ ಬಿಡುವಿನ ಅವಧಿಯಲ್ಲಿ ಮಕ್ಕಳಿಗೆ ಮುಕ್ತವಾಗಿ ಕಥೆ ಹೇಳಲು ಅವಕಾಶ ಕೊಡಿ. ಕಥಾ ಗೋಷ್ಠಿಗಳು, ಸಣ್ಣ ಕಥೆಗಳ ಸ್ಪರ್ಧೆಗಳನ್ನು ಏರ್ಪಡಿಸಬಹುದು. ಅಲ್ಲಿ ಸಂಗ್ರಹವಾದ ಕಥೆಗಳನ್ನು ‘ಗೋಡೆ ಪತ್ರಿಕೆ’ ಮಾಡಿ ಪ್ರಕಟಿಸಬಹುದು. ಇಲ್ಲವೇ, ಸಂಕಲನ ರೂಪದಲ್ಲೂ ಪ್ರಕಟಿಸಬಹುದು. ಇದು ಮಕ್ಕಳಲ್ಲಿನ ಸಾಹಿತ್ಯ ಅಭಿರುಚಿ ಉದ್ದೀಪನಗೊಂಡು, ಶೈಕ್ಷಣಿಕ ಬೆಳವಣಿಗೆಗೂ ಸಹಾಯವಾಗುತ್ತದೆ.

ಈಗ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪರೀಕ್ಷೆಗಳು (10ನೇ ತರಗತಿ ಹೊರತುಪಡಿಸಿ) ಮುಗಿದಿವೆ. ಬೇಸಿಗೆ ರಜೆಯೂ ಆರಂಭವಾಗಿದೆ. ಮಕ್ಕಳಿಗೆ ಕಥೆ ಹೇಳಲು, ಕಥೆ ಬರೆಯುವಂತೆ ಉತ್ತೇಜಿಸಲು ಇದು ಸಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.