* ನಾನು ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು, ಏರೋನಾಟಿಕಲ್ ಎಂಜಿನಿಯರಿಂಗ್ ಮಾಡಬೇಕೆಂಬ ಮನಸ್ಸಿದೆ. ಇದಕ್ಕೆ ಭವಿಷ್ಯದಲ್ಲಿ ಒಳ್ಳೆಯ ಬೇಡಿಕೆಗಳಿವೆಯೇ ಹಾಗೂ ಯಾವ ರೀತಿಯ ಉದ್ಯೋಗಗಳು ದೊರಕುತ್ತವೆ ಎಂಬುದನ್ನು ತಿಳಿಸಿ.
ಹೆಸರು, ಊರು ಬೇಡ
ನೀವು ಏರೊನಾಟಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಶಿಕ್ಷಣ ಪಡೆದು ಉತ್ತೀರ್ಣರಾದರೆ, ಈ ಕ್ಷೇತ್ರದಲ್ಲಿ ಡಿಸೈನ್ ಮಾಡುವ ಅಥವಾ ರಿಸರ್ಚ್ ಮಾಡುವ ಕಂಪನಿಗಳಲ್ಲಿ ನಿಮಗೆ ಉದ್ಯೋಗಾವಕಾಶ ಇರುತ್ತದೆ. ಈ ಕ್ಷೇತ್ರದಲ್ಲಿ ಕಂಪನಿಗಳು ನಮ್ಮ ದೇಶದಲ್ಲಿ ಬಹಳ ಇವೆ. ವಿಮಾನಗಳ ತಯಾರಿಕೆ ಮತ್ತು ನಿರ್ವಹಣೆ ಮಾಡುವ ಕಂಪನಿಗಳಲ್ಲಿಯೂ ಅವಕಾಶಗಳಿರುತ್ತವೆ. ಈ ರೀತಿಯ ಕಂಪನಿಗಳು ಖಾಸಗಿ, ಸರ್ಕಾರಿ ವಲಯಗಳಲ್ಲಿಯೂ ಲಭ್ಯವಿರುತ್ತದೆ.
ನೀವಿನ್ನೂ ಎರಡನೇ ಪಿ.ಯು ವಿದ್ಯಾರ್ಥಿಯಾಗಿದ್ದು ಏರೊನಾಟಿಕಲ್ ಎಂಜಿನಿಯರಿಂಗ್ ಬಗ್ಗೆ ಅಧ್ಯಯನ ಮಾಡಬೇಕೆಂದು ತೀರ್ಮಾನಿಸಿದ್ದರೆ, ವೃತ್ತಿಪರರ ಮಾರ್ಗದರ್ಶನ ಪಡೆದು ಅದರಿಂದ ನಿಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಎಲ್ಲ ರೀತಿಯ ಎಂಜಿನಿಯರಿಂಗ್ ವಿಭಾಗದ ಕ್ಷೇತ್ರಗಳ ಪರಿಚಯ ಪಡೆದುಕೊಂಡ ಮೇಲೆ ನಿರ್ಧಾರ ತೆಗೆದುಕೊಳ್ಳಿ. ನೀವು ಆಯ್ಕೆ ಮಾಡಿಕೊಂಡಿರುವ ವಿಷಯದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಿ.
* ನಾನು ಬಿ.ಇ ಮುಗಿಸಿದ್ದು ಎಂಜಿನಿಯರ್ ಆಗಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿಕ್ಕಂದಿನಿಂದಲೂ ಪೊಲೀಸ್ ಆಗಲು ತುಂಬಾ ಆಸೆ ಇರುವುದರಿಂದ ಪಿಎಸ್ಐ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕುಟುಂಬದ ಆರ್ಥಿಕ ಸ್ಥಿತಿಯಿಂದ ನಾನು ಕೆಲಸಕ್ಕೆ ಹೋಗಿ ಕೊಂಡೆ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ದಿನವೂ ಕೆಲಸದಿಂದ ಬಂದು ರಾತ್ರಿ 10 ರಿಂದ 1–2 ಗಂಟೆಯವರೆಗೆ ಓದುತ್ತೇನೆ. ಕೋಚಿಂಗ್ ಕ್ಲಾಸಿಗೆ ಹೋಗಬೇಕೆಂಬ ಯೋಚನೆ ಇದೆಯಾದರೂ ಸ್ಪಷ್ಟತೆ ಇಲ್ಲ. ಆದರೆ ಈಗ ನನಗೆ, ನಾನು ಓದುತ್ತಿರುವುದು ಸಾಕಾಗುತ್ತಿಲ್ಲ ಎಂದು ಅನಿಸುತ್ತಿದೆ. ಓದಲು ಇನ್ನೂ ಹೆಚ್ಚು ಸಮಯ ಬೇಕು ಎಂದು ತಿಳಿದಿದೆ. ಆದರೆ ಇರುವ ಕೆಲಸವನ್ನು ಬಿಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಈ ನಡುವೆ ಕಡಿಮೆ ನಿದ್ದೆ ಮಾಡುವುದರಿಂದ ತುಂಬಾ ಒತ್ತಡ ಹೆಚ್ಚಾಗಿ ಕೆಲವು ಸಮಯ ತಾಳ್ಮೆ ಕಳೆದುಕೊಳ್ಳುತ್ತೇನೆ ಹಾಗೂ ಓದಿದ ವಿಷಯಗಳು ನೆನಪಿಗೆ ಬರುತ್ತಿಲ್ಲ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯವಿಟ್ಟು ಸಹಕರಿಸಿ. ನಿಮ್ಮ ಉತ್ತರಕ್ಕಾಗಿ ಕಾದಿರುತ್ತೇನೆ.
ಹೆಸರು ಬೇಡ, ಬೆಂಗಳೂರು, ವಯಸ್ಸು 25
ಸದ್ಯಕ್ಕೆ ನೀವು ಇರುವ ಕೆಲಸವನ್ನು ಬಿಡದೆ ನಿಮ್ಮಲ್ಲಿ ಹಣಕಾಸಿನ ವ್ಯವಸ್ಥೆ ಸಂಪೂರ್ಣವಾಗಿ ಸುಧಾರಿಸಿಕೊಳ್ಳುವವರೆಗೆ ಮುಂದುವರೆಸಿ. ಆಮೇಲೆ ಮುಂದಿನ ಪರೀಕ್ಷೆಗೆ ಪ್ರಯತ್ನಿಸುವುದು ಒಳ್ಳೆಯದು. ಇದರಿಂದ ನಿಮಗೆ ಮಾನಸಿಕವಾಗಿಯೂ ನೆಮ್ಮದಿ ಇರುವುದು, ಅನೇಕ ಶಿಕ್ಷಣ ಸಂಸ್ಥೆಗಳು ಉಚಿತವಾಗಿ ಪಿಎಸ್‌ಐ ಪರೀಕ್ಷೆಗೆ ತರಬೇತಿ ನೀಡುತ್ತವೆ.
ಯುಪಿಎಸ್‌ಸಿ ಪರೀಕ್ಷೆಯನ್ನೂ ನೀವು ಬರೆಯಬಹುದು. ನಿಮಗೆ ಈಗ ಕೇವಲ 25 ವರ್ಷಗಳಾಗಿರುವುದರಿಂದ ಪರೀಕ್ಷೆಗಳನ್ನು ಬರೆಯುವುದಕ್ಕೆ ತುಂಬಾ ಕಾಲಾವಕಾಶವಿದೆ. ಯುಪಿಎಸ್‌ಸಿ ಪರೀಕ್ಷೆಗೆ ಬಹಳ ಕಠಿಣ ಮತ್ತು ಬಹಳ ಪರಿಶ್ರಮ ಬೇಕಾಗುತ್ತದೆ. ಇವೆಲ್ಲವುಗಳಿಗೆ ನಿಮಗೆ ವಿಶೇಷ ತರಬೇತಿಯ ಅವಶ್ಯಕತೆ ಇರುತ್ತದೆ.
ಒಂದು ವೇಳೆ ನಿಮಗೆ ಯುಪಿಎಸ್‌ಸಿ ಪರೀಕ್ಷೆ ಪಾಸಾಗುವುದು ಕಷ್ಟವೆನಿಸಿದರೆ ಪೊಲೀಸ್ ಇಲಾಖೆಯಲ್ಲಿಯೇ ಉತ್ತಮ ದರ್ಜೆಗಾಗಿ ಕೆಎಎಸ್ ಪರೀಕ್ಷೆಯನ್ನು ತೆಗುದುಕೊಳ್ಳಬಹುದು.
* ನಾನು ಸಿವಿಲ್ ಎಂಜಿನಿಯರಿಂಗ್‌ನಲ್ಲಿ 2017ರಲ್ಲಿ ಬಿಇ ಮಾಡಿದ್ದು ಸರಾಸರಿ 9.0 ಗ್ರೇಡ್ ಪಡೆದಿದ್ದೇನೆ. ಇನ್ನೂ ಉದ್ಯೋಗ ಸಿಕ್ಕಿಲ್ಲ. ಐಟಿಐ ಸೇರಬೇಕೆಂಬ ಆಸೆ ಇದೆ. ಐಟಿಐ ನಲ್ಲಿ ಯಾವುದನ್ನು ಆರಿಸಿಕೊಳ್ಳಬಹುದು?
ಹೆಸರು, ಊರು ಬೇಡ
ನಿಮಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ವಿಶೇಷ ಪರಿಣತಿಯನ್ನು ಪಡೆಯುವ ಆಸಕ್ತಿ ಇದ್ದಲ್ಲಿ ನೀವು ನಿಮ್ಮ ಪ್ರದೇಶದಲ್ಲಿರುವ ಉದ್ಯೋಗ ಕಲಿಸಿ ಕೊಡುವ ಸಂಸ್ಥೆಗಳಿಗೆ ಭೇಟಿ ನೀಡಿ ಸಲಹೆ ಸಹಾಯವನ್ನು ಪಡೆಯಬಹುದು ಹಾಗೂ ಸರ್ಕಾರಿ ಉದ್ಯೋಗಾವಕಾಶಗಳಿಗೂ ಅರ್ಜಿ ಸಲ್ಲಿಸಬಹುದು. ನಿಮಗೆ ಇನ್ನೊಂದು ಆಯ್ಕೆ ಎಂದರೆ ಎಂ.ಟೆಕ್ ಮಾಡಿ ಅದರಲ್ಲಿ ಸಿವಿಲ್ ಎಂಜಿನಿಯರಿಂಗ್ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. ಆದರೆ ಎಂ.ಟೆಕ್ ಮಾಡುವುದಾದರೆ ಉತ್ತಮವಾದ ಶಿಕ್ಷಣ ಸಂಸ್ಥೆ ಮತ್ತು ಒಳ್ಳೆಯ ಉದ್ಯೋಗ ಕಲಿಸಿಕೊಡುವಂತಹುದ್ದನ್ನು ಆರಿಸಿಕೊಳ್ಳಬೇಕು
1. ನಿಮಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಆಸಕ್ತಿ ಇಲ್ಲದಿದ್ದಲ್ಲಿ ಎಂಬಿಎ ಮಾಡಬಹುದು.
2.ಮತ್ತೊಂದು ಆಯ್ಕೆ ಎಂದರೆ ನೀವು ಕಂಪ್ಯೂಟರ್ ಕೋರ್ಸ್ ಮಾಡಿ ಅದರಿಂದ ಪ್ರೋಗ್ರಾಮಿಂಗ್ ಉದ್ಯೋಗ ಪಡೆಯಬಹುದು
3. ಇನ್ನು ಐಟಿಐ ಕೋರ್ಸ್‌ಗಳನ್ನು ಮಾಡುವುದಾದರೆ ಎಲೆಕ್ಟ್ರಾನಿಕ್ ಇನ್‌ಫಾರ್ಮೇಶನ್ ಅಥವಾ ಕಂಪ್ಯೂಟರ್ ಕೋರ್ಸ್‌ಗಳನ್ನೂ ಮಾಡಬಹುದು.
4. ಎಲ್ಲದಕ್ಕಿಂತ ಮುಖ್ಯವಾಗಿ ನೀವು ಒಂದು ಒಳ್ಳೆಯ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸಿಕೊಡುವ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರವನ್ನು ಪಡೆಯಬೇಕು.
*ನಾನು ಈಗ ಬಿ.ಕಾಂ ಓದುತ್ತಾ ಇದ್ದೇನೆ. ನನ್ನ ಮುಂದಿನ ಕೋರ್ಸ್ ಎಂ.ಕಾಂ ಮಾಡಿದರೆ ಒಳ್ಳೆಯದೇ ಅಥವಾ ಎಂಬಿಎ ಮಾಡಿದರೆ ಒಳ್ಳೆಯದೇ ದಯವಿಟ್ಟು ತಿಳಿಸಿ.
ಚಂದ್ರು ಎಂ.ಕೆ., ಎಟಿಎನ್‌ಸಿಸಿ ಕಾಲೇಜ್, ಶಿವಮೊಗ್ಗ
ಮೊದಲಿಗೆ ನೀವು ಯಾವ ವೃತ್ತಿಯಲ್ಲಿ ಮುಂದುವರೆಯಬೇಕು ಎನ್ನುವುದರ ಬಗ್ಗೆ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಿ. ಈ ನಿರ್ಧಾರ ನಿಮ್ಮ ಆಸಕ್ತಿ, ಯೋಗ್ಯತೆ ಮತ್ತು ಸೂಕ್ತ ಉದ್ಯೋಗ ಅವಕಾಶಗಳನ್ನು ಒಳಗೊಂಡಿರುತ್ತದೆ. ಅದಕ್ಕನುಗುಣವಾಗಿ ಶಿವಮೊಗ್ಗದಲ್ಲಿಯೇ ಯಾವುದಾದರೂ ವೃತ್ತಿಪರ ಮಾರ್ಗದರ್ಶನ ಸಂಸ್ಥೆಯನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಿರಿ.
ನೀವು ಎಂಕಾಂ ಮಾಡಿದಲ್ಲಿ ಅಕೌಂಟ್ಸ್ ಬಗ್ಗೆ ನಿಮಗೆ ವಿಶೇಷ ಪರಿಣತಿ ದೊರೆಯುತ್ತದೆ, ಅದರಿಂದ ಖಾಸಗಿ ಕಂಪನಿಗಳಲ್ಲಿ ಅಕೌಂಟಿಂಗ್ ಕೆಲಸಗಳಿಗೆ ನಿಮಗೆ ಅವಕಾಶವಿರುತ್ತದೆ.
ನೀವು ಎಂಬಿಎ ಮಾಡಿದರೆ ನಿಮಗೆ ವ್ಯವಸ್ಥಾಪಕ ಹುದ್ದೆ ಅಥವಾ ಸೀನಿಯರ್ ಗ್ರೇಡ್ ಉದ್ಯೋಗಗಳಿಗೆ ಅವಕಾಶವಿರುತ್ತದೆ. ನಿಮಗೆ ಹಣಕಾಸು ವ್ಯವಹಾರ ಮತ್ತು ಅಕೌಂಟಿಂಗ್‌ನಲ್ಲಿ ಆಸಕ್ತಿ ಇದ್ದರೆ ಆಯಾ ಕ್ಷೇತ್ರಗಳಲ್ಲಿ ಸ್ಪೆಶಲೈಜೇಷನ್ ಎಂಬಿಎ ಮಾಡುವುದರಿಂದ ನಿಮಗೆ ಎಚ್.ಆರ್ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿಯೂ ಅವಕಾಶಗಳಿರುತ್ತವೆ. ನಿಮ್ಮ ಮುಂದಿನ ಉದ್ಯೋಗ ಅವಕಾಶಗಳು ನೀವು ಯಾವ ಕಾಲೇಜಿನಿಂದ ಪದವಿ ಪಡೆಯುತ್ತೀರಾ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಯಾವ ಉದ್ಯೋಗ ಆಯ್ಕೆ ಮಾಡುತ್ತೀರಾ ಎನ್ನುವುದರ ಮೇಲೆ ನಿಮ್ಮ ಪೋಸ್ಟ್ ಗ್ರಾಜುಯೇಷನ್ ಕೋರ್ಸ್ ಆಯ್ಕೆ ಮಾಡಿಕೊಳ್ಳಿ.
* ಎಂ.ಕಾಂ. ಓದುತ್ತಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಗೊಂದಲವಿದೆ. ಕೆಲವರು ಎನ್‌ಇಇಟಿ, ಕೆಲವರು ಎಸ್‌ಡಿಎ, ಎಫ್‌ಡಿಎ ಪರೀಕ್ಷೆ ತಗೋ ಎಂದರೆ ಇನ್ನು ಕೆಲವರು ಐಬಿಪಿಎಸ್‌ಗೆ ಕುಳಿತುಕೊ ಎನ್ನುತ್ತಾರೆ. ಏನು ಮಾಡಲಿ ಹೇಳಿ? ನನಗೆ ಸೇವಾ ಆಧಾರಿತ ಕೆಲಸದ ಮೇಲೆ ಆಸಕ್ತಿ ಇದೆ.
ಸುನೀತಾ, ಜಿಎಫ್‌ಜಿ ಕಾಲೇಜ್, ದಾವಣಗೆರೆ
ಮೊದಲಿಗೆ ನೀವು ಯಾವ ವೃತ್ತಿಯಲ್ಲಿ ಮುಂದುವರೆಯಬೇಕು ಎನ್ನುವುದರ ಬಗ್ಗೆ ಆಸಕ್ತಿ, ಅರ್ಹತೆ ಮತ್ತು ಸೂಕ್ತ ಉದ್ಯೋಗ ಅವಕಾಶಗಳನ್ನು ತಿಳಿದಿರಬೇಕು.
ನೀವು ಈ ಕೆಳಗಿನ ಸೂಕ್ತ ಪರೀಕ್ಷೆಗಳು ಮತ್ತು ಉದ್ಯೋಗ ಅವಕಾಶಗಳಿಗೆ ಅನುಗುಣವಾಗಿ ದಾವಣಗೆರೆಯಲ್ಲಿಯೂ ಯಾವುದಾದರೂ ವೃತ್ತಿಪರ ಮಾರ್ಗದರ್ಶನ ಸಂಸ್ಥೆಯನ್ನು ಸಂಪರ್ಕಿಸಿ .
1. ಟೀಚರ್/ಲೆಕ್ಚರರ್ - ಯು.ಜಿ.ಸಿ, ಎನ್ ಇ ಇ ಟಿ ಅಥವಾ ಎನ್ ಟಿ ಎ - ಯು.ಜಿ.ಸಿ- ಎನ್.ಇ.ಟಿ.
2. ಸರಕಾರಿ ಸಂಸ್ಥೆಗಳಲ್ಲಿ ಕ್ಲರಿಕಲ್ ಜಾಬ್ (ಎಫ್.ಡಿ.ಎ ಮತ್ತು ಎಸ್. ಡಿ. ಎ. )
3. ಬ್ಯಾಂಕಿಂಗ್ ಸೆಕ್ಟರ್ - ಐ.ಬಿ.ಪಿ.ಎಸ್
ನೀವು ಯಾವ ಕ್ಷೇತ್ರದಲ್ಲಿ ಉದ್ಯೋಗ ಬಯಸುತ್ತೀರಾ ಎನ್ನುವುದರ ಮೇಲೆ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಿ.
* ಸಿಎಸ್‌ಇ ಎಂಜಿನಿಯರಿಂಗ್‌ನಲ್ಲಿ ಮೂರನೇ ವರ್ಷ ಓದುತ್ತಿದ್ದೇನೆ. ಕೆಎಎಸ್ ಪರೀಕ್ಷೆಗೆ ಕೂರಲು ಆಸಕ್ತಿ ಇದೆ. ನಾನು ಎಂಜಿನಿಯರಿಂಗ್ ನಾಲ್ಕನೇ ವರ್ಷದಲ್ಲಿ ಕೆಎಎಸ್‌ಗೆ ಕೂರಬಹುದೇ? ಪ್ರಿಲಿಮ್ಸ್ ನಂತರ ಮೇನ್ಸ್‌ಗೆ ಎಷ್ಟು ಕಾಲಾವಕಾಶ ಇರುತ್ತದೆ. ಏಕೆಂದರೆ ಮೇನ್ಸ್‌ಗೆ ಡಿಗ್ರಿ ಸರ್ಟಿಫಿಕೇಟ್ ಅವಶ್ಯಕತೆ ಇರುತ್ತದೆ. ಹೇಗೆ ಸರಿಯಾದ ಕ್ರಮದಲ್ಲಿ ಓದಬೇಕಾಗುತ್ತದೆ?
ಹೆಸರು, ಊರು ಬೇಡ
ಪೂರ್ವಭಾವಿ ಕೆಎಎಸ್ ಪರೀಕ್ಷೆಗಳಿಗೆ ಫೈನಲ್ ವರ್ಷದ ಅಥವಾ ಸೆಮಿಸ್ಟರ್ ಪದವಿ ಪಡೆದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು ಸಾಮಾನ್ಯವಾಗಿ ಈ ಪರೀಕ್ಷೆಗಳು ಫೆಬ್ರುವರಿ ತಿಂಗಳಲ್ಲಿ ನಡೆಯುತ್ತವೆ. ಮುಖ್ಯ ಪರೀಕ್ಷೆಗೂ ಪೂರ್ವ ಭಾವಿ ಪರೀಕ್ಷೆಗಳಿಗೂ ಸಾಮಾನ್ಯವಾಗಿ 4–6 ತಿಂಗಳ ಕಾಲಾವಕಾಶವಿರುತ್ತದೆ. ಪ್ರಮುಖ ಪರೀಕ್ಷೆಗಳ ಹೊತ್ತಿಗೆ ನೀವು ಪದವೀಧರರಾಗಿರಬೇಕು. ಈ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಬಹಳ ಕ್ರಮಬದ್ಧವಾಗಿ ಸಿದ್ಧತೆಗಳು ಬೇಕು. ಸಾಮಾನ್ಯವಾಗಿ ವಿದ್ಯಾರ್ಥಿಗಳು ಒಂದೆರಡು ವರ್ಷದ ಸಿದ್ಧತೆಯನ್ನು ಮಾಡಿರುತ್ತಾರೆ.
ನೀವು ಯಾವುದಾದರೂ ಒಂದು ಒಳ್ಳೆಯ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಸಂಸ್ಥೆಯಲ್ಲಿ ನೋಂದಾಯಿಸಿಕೊಂಡು ನಿಮ್ಮ ಆಯ್ಕೆಯ ವಿಷಯಗಳ ಬಗ್ಗೆ ಮಾಹಿತಿ ಪಡೆದು ಕೆಲವು ಮಾದರಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿದರೆ ಒಳ್ಳೆಯದು. ಹಾಗೆಯೇ ನೀವು ನಿಮ್ಮ ಐಚ್ಚಿಕ ವಿಷಯದ ಬಗ್ಗೆಯೂ ಹೆಚ್ಚಿನ ಮಾಹಿತಿ ಪಡೆದುಕೊಂಡರೆ ನಿಮಗೆ ಸಹಾಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.