ಆಡುವ ಮಕ್ಕಳಿಂದ ಹಿಡಿದು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳವರೆಗೂ ರೀಲುಗಳ ಹಿಂದೆ ಓಡುತ್ತಿದ್ದಾರೆ. ಮೊಬೈಲ್ ಫೋನ್ ಮುಟ್ಟಬೇಡ ಎಂದು ಹೇಳುತ್ತಿರುವ ಪಾಲಕರೂ ಈಗ ಒಂದರಿಂದ ಎರಡು ಫೋನ್‌ಗಳಿಗೆ ಬಡ್ತಿ ಪಡೆದಿದ್ದಾರೆ. ಬರೆದು, ಓದುವ ಪದ್ಧತಿಗೆ ಮಕ್ಕಳನ್ನು ಮರಳಿ ತರುವ ದೊಡ್ಡ ಸವಾಲು ಎದುರಿಸುವುದು ಹೇಗೆ?.
ಪಾಲಕರ ಶಿಕ್ಷರ ಸಭೆ ನಡೆದಿತ್ತು. ಮಕ್ಕಳಿಗೆ ಏನು ಹೇಳಿಕೊಡುತ್ತೀರಿ ಎಂಬ ಪ್ರಶ್ನೆಯನ್ನು ಪಾಲಕರೊಬ್ಬರು ಶಿಕ್ಷಕಿಯ ಮುಂದಿಟ್ಟರು. ಅದಕ್ಕೆ ಶಿಕ್ಷಕಿ ಪಠ್ಯದಲ್ಲಿರುವ ಪಾಠಗಳ ಹೆಸರು, ಕ್ರಾಫ್ಟ್, ಆರ್ಟ್, ಸಂಗೀತ, ನೃತ್ಯ, ದೈಹಿಕ ಕಸರತ್ತುಗಳ ಪಟ್ಟಿಯನ್ನು ನೀಡಿದರು. ಇದನ್ನು ಯುಟ್ಯೂಬ್ ಮೂಲಕವೂ ಕಲಿಯಬಹುದಲ್ಲಾ. ಇದನ್ನು ಹೊರತುಪಡಿಸಿ ಮಕ್ಕಳಿಗೆ ಬೇರೆ ಏನು ಹೇಳಿಕೊಡಲಾಗುತ್ತಿದೆ ಎಂಬ ಪಾಲಕರ ಪ್ರಶ್ನೆಗೆ ಶಿಕ್ಷಕಿ ಕ್ಷಣಕಾಲ ತಬ್ಬಿಬ್ಬಾದರು. ಆಗ ಪಾಲಕರು ತಮ್ಮ ಮಗುವಿಗೆ ಏನು ಕಲಿಸಬೇಕು ಎಂಬ ಸರಳ ಬೇಡಿಕೆಯ ಪಟ್ಟಿಯನ್ನು ಮುಂದಿಟ್ಟು, ’ಏನನ್ನು ಓದಬೇಕು, ಯಾವುದನ್ನು ಕಲಿಯಬೇಕು. ಏನು ಮಾಡಿದರೆ ಪುಸಕ್ತ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಓದುವತ್ತ ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ?’ ಎಂಬುದನ್ನು ಕಲಿಸಿ’ ಎಂದರು.
ಕೋವಿಡ್ ಕಾಲದಲ್ಲಿ ಕೈಹಿಡಿದ ಮೊಬೈಲ್ ಅನ್ನು ಇನ್ನೂ ಬಹುತೇಕರು ಕೆಳಗಿಟ್ಟಿಲ್ಲ. ಆಡುವ ಮಕ್ಕಳಿಂದ ಹಿಡಿದು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳವರೆಗೂ ರೀಲುಗಳ ಹಿಂದೆ ಓಡುತ್ತಿದ್ದಾರೆ. ಮೊಬೈಲ್ ಮುಟ್ಟಬೇಡ ಎಂದು ಹೇಳುತ್ತಿರುವ ಪಾಲಕರೂ ಈಗ ಒಂದು ಮೊಬೈಲ್‌ನಿಂದ ಎರಡು ಮೊಬೈಲ್‌ಗಳಿಗೆ ಬಡ್ತಿ ಪಡೆದಿದ್ದಾರೆ. ಇಂಥ ಸಂದರ್ಭದಲ್ಲಿ ಬರೆದು, ಓದುವ ಪದ್ಧತಿಗೆ ಮಕ್ಕಳನ್ನು ಮರಳಿ ತರುವ ದೊಡ್ಡ ಸವಾಲು ಶಿಕ್ಷಕರು ಹಾಗೂ ಪಾಲಕರ ಮೇಲಿದೆ.
ಇದು ಹೈಬ್ರಿಡ್ ಕಾಲ. ಇಲ್ಲಿ ಕಾಗದ, ಪೆನ್ನೂ ಬೇಕು. ಮೊಬೈಲ್ ಕೂಡಾ ಬೇಕು. ಆದರೆ ಯಾವುದನ್ನು ಹೆಚ್ಚು ಬಳಸಬೇಕು. ಯಾವುದರ ಬಳಕೆಗೆ ಮಿತಿ ಹೇರಬೇಕು ಎಂಬುದನ್ನು ತಾವೂ ಪಾಲಿಸಿ, ಮಕ್ಕಳಿಗೂ ಹೇಳುವ ಕೆಲಸವನ್ನು ಪಾಲಕರು ಹಾಗು ಶಿಕ್ಷಕರು ಮಾಡಬೇಕು ಎಂದು ಮನೋವೈದ್ಯ ಡಾ. ಮನೋಜ್ ಶರ್ಮಾ ಸಲಹೆ ನೀಡಿದ್ದಾರೆ.
‘ಕೋವಿಡ್ ಸಂದರ್ಭದಲ್ಲಿ ಮೊಬೈಲ್‌ನ ಲಭ್ಯತೆ ಎಲ್ಲಾ ವರ್ಗದ ಮಕ್ಕಳಿಗೆ ಸಾಧ್ಯವಾಯಿತು. ಕುಟುಂಬದ ಎಲ್ಲಾ ಸದಸ್ಯರೂ ಮೊಬೈಲ್‌ನಲ್ಲಿ ಮುಳುಗಿಬಿಟ್ಟರು. ಮೊಬೈಲ್ ಬಳಕೆ ತಾಂತ್ರಿಕವಾಗಿ ಮಕ್ಕಳ ಜ್ಞಾನವನ್ನು ಹೆಚ್ಚಿಸಿರಬಹುದು. ಪಾಠ ಕೇಳಲು ತರಗತಿಗೇ ಹೋಗಬೇಕೆಂದೇನೂ ಇಲ್ಲ, ಮೊಬೈಲ್‌ನಲ್ಲೇ ಬೇಕಾದ ಪಾಠ ಸಿಗಲಿದೆ ಎಂಬ ಮನಸ್ಥಿತಿ ಮಕ್ಕಳು ಹೇಳುತ್ತಿದ್ದಾರೆ. ಇದಕ್ಕೆ ಪಾಲಕರ ಸಮ್ಮತಿಯೂ ಸಿಕ್ಕಲ್ಲಿ ಮೊಬೈಲ್‌ನಲ್ಲಿ ಇನ್ನಷ್ಟು ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಂತಾಗಲಿದೆ’ ಎಂದೆನ್ನುತ್ತಾರೆ ಅವರು.
‘ಡಿಜಿಟಲ್ ಮೇಲಿನ ಅವಲಂಬನೆ ಪೂರ್ಣ ಪ್ರಮಾಣದಲ್ಲಿ ನಿರ್ಬಂಧಿಸುವುದೂ ಅಸಾಧ್ಯ. ಬಹಳಷ್ಟು ಮಕ್ಕಳು ಕಿಂಡಲ್ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಡಿಜಿಟಲ್ ಪರದೆಯ ಸಕಾರಾತ್ಮಕ ಅಂಶ. ಆದರೆ ಅನಗತ್ಯವಾಗಿ ಸಮಯ ಹಾಳು ಮಾಡುವ ಕೆಲವೊಂದು ಆನ್‌ಲೈನ್ ಕಂಟೆಂಟ್‌ಗಳ ವೀಕ್ಷಣೆಯ ದಾಸರಾಗುವುದು ನಿಜಕ್ಕೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಮಾರಕ‘ ಎನ್ನುವುದು ಅವರ ಆತಂಕ.
‘ಕಲಿಕೆಗಾಗಿಯೇ ಮಕ್ಕಳಿಗೆ ಮೊಬೈಲ್ ಕೊಡುವ ಪಾಲಕರು, ಅಂತರ್ಜಾಲದಲ್ಲಿ ಒಳಿತು, ಕೆಡಕು ಎರಡೂ ಲಭ್ಯ ಎಂಬುದನ್ನು ಅರಿಯಬೇಕಿದೆ. ನಂತರ ಮೊಬೈಲ್ ಬಳಕೆಯನ್ನು ಎಷ್ಟರ ಮಟ್ಟಿಗೆ ಸೀಮಿತಗೊಳಿಸಬೇಕು ಎಂಬುದನ್ನು ಪಾಲಕರೇ ನಿರ್ಧರಿಸಬೇಕು. ಜತೆಗೆ ತಾವೂ ಮೊಬೈಲ್‌ಗೆ ಅಂಟಿಕೊಳ್ಳದೇ, ಪತ್ರಿಕೆ, ನಿಯತಕಾಲಿಕೆಗಳನ್ನು ಓದುವುದು ಹಾಗೂ ಅದರಲ್ಲಿರುವ ಆಸಕ್ತಿದಾಯಕ ಸುದ್ದಿಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಮೊಬೈಲ್ ಹೊರತುಪಡಿಸಿಯೂ ದೊಡ್ಡದಾದ ಹಾಗೂ ಸುಂದರ ಜಗತ್ತು ಇದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಆ ದಾರಿಯಲ್ಲಿ ಅವರು ಸಾಗುವಂತೆ ಮಾಡುವ ದೊಡ್ಡ ಜವಾಬ್ದಾರಿ ಶಿಕ್ಷಕರು ಹಾಗೂ ಪಾಲಕರದ್ದಾಗಿದೆ’ ಎಂದು ಡಾ. ಶರ್ಮಾ ಸಲಹೆ ನೀಡಿದ್ದಾರೆ.
ಉಪವಾಸದಂತೆ ಮೊಬೈಲ್ ವ್ರತ ಅಗತ್ಯ
ದೇವರಿಗಾಗಿ ವಾರಕ್ಕೊಮ್ಮೆ ಉಪವಾಸವನ್ನು ಹಲವರು ಮಾಡುತ್ತಾರೆ. ಹಾಗೆಯೇ ಅತಿಯಾಗಿ ಪರದೆ ಮೇಲೆ ಅವಲಂಬಿತರಾಗಿರುವ ನಾವು ವಾರಕ್ಕೊಮ್ಮೆಯಾದರೂ ಮೊಬೈಲ್ ಬಳಸದ ವ್ರತ ಅನುಸರಿಸುವುದು ಸೂಕ್ತ. ಇದು ಕೇವಲ ಮಕ್ಕಳಿಗಾಗಿ ಮಾತ್ರವಲ್ಲ, ಮೊಬೈಲ್ ಹಾಗೂ ಡಿಜಿಟಲ್ ಪರದೆ ಮೇಲೆ ಹೆಚ್ಚು ಅವಲಂಬಿತರಾಗಿರುವ ಎಲ್ಲರಿಗೂ ಅತ್ಯಗತ್ಯ.
6ರಿಂದ 10ನೇ ವರ್ಷದ ಮಕ್ಕಳಿಗೆ ಮೊಬೈಲ್ ಮೂಲಕ ಕಲಿಕೆ ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಹೇಳಿದೆ. ಇದನ್ನು ಶಿಕ್ಷಕರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಮೊಬೈಲ್ ಆಧಾರಿತ ಹೋಮ್ ವರ್ಕ್ ಕೊಡುವುದರ ಬದಲು, ಕೌಶಲಭರಿತ ಕೆಲಸಗಳನ್ನು ನೀಡುವ ಮೂಲಕ ಅವರ ಮನೋವಿಕಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು.
ಮೊಬೈಲ್ ಅಥವಾ ಡಿಜಿಟಲ್ ಪರದೆಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ, ದೇಹದ ಭಾಗಗಳಲ್ಲಿ ಗೊತ್ತಿಲ್ಲದಂತೆ ಸ್ನಾಯು ಸೆಳೆತ ಆರಂಭವಾಗುತ್ತದೆ. ಅದು ನಂತರ ದೇಹದ ಇತರ ಭಾಗಗಳಿಗೂ ವಿಸ್ತರಿಸುತ್ತದೆ. ವೃತ್ತಿಯಲ್ಲಿರುವವರು ಅನುಭವಿಸುತ್ತಿರುವ ಈ ಸಮಸ್ಯೆ ಮಕ್ಕಳಿಗೂ ವಿಸ್ತರಿಸಿದರೆ ಅವರ ಬದುಕೇ ಮಂಕಾಗಲಿದೆ.
ನೀವು ಡಿಜಿಟಲ್ ವ್ಯಸನಕ್ಕೆ ತುತ್ತಾಗಿದ್ದೀರಾ...? ಒಮ್ಮೆ ಹೀಗೆ ಪರೀಕ್ಷಿಸಿಕೊಳ್ಳಿ
ಕಡುಬಯಕೆ– ಮೊಬೈಲ್ ನೋಡಬೇಕು ಎಂದು ನಿಯಂತ್ರಿಸಲಾಗದಷ್ಟು ಬಯಕೆ ಮೂಡುತ್ತಿದೆಯೇ?
ನಿಯಂತ್ರಣ– ಮೊಬೈಲ್ ನೋಡಲು ಹಾಕಿಕೊಂಡ ಮಿತಿಯನ್ನೇ ಮೀರಿ ನೋಡುವ ಬಯಕೆ ಹೆಚ್ಚುತ್ತಿದೆಯೇ?
ನಿಭಾಯಿಸುವುದು– ಸ್ನೇಹಿತರು ಇಲ್ಲ ಎಂಬ ನೆಪವೊಡ್ಡಿ ಮೊಬೈಲ್ ಬಳಕೆಯನ್ನೇ ಅವಲಂಬಿಸಿ ನಿಮ್ಮನ್ನು ನೀವು ನಿಭಾಯಿಸಿಕೊಳ್ಳುತ್ತಿದ್ದೀರಾ?
ಕಡ್ಡಾಯ– ಮೊಬೈಲ್ ಲಭ್ಯವಿದೆ ಎಂಬ ಕಾರಣದಿಂದ ಕಡ್ಡಾಯವಾಗಿ ಬಳಕೆ ಮಾಡುವ ನಿರ್ಧಾರ ಮಾಡಿದ್ದೀರಾ?
ಪರಿಣಾಮ– ಮೊಬೈಲ್ ಬಳಕೆಯ ವ್ಯತಿರಿಕ್ತ ಪರಿಣಾಮಗಳನ್ನು ಅರಿತೂ ಬಳಕೆ ಮಾಡುತ್ತಿದ್ದೀರಾ?
ಈ ಮೇಲಿನ ಐದರಲ್ಲಿ ನಾಲ್ಕು ಅಭ್ಯಾಸಗಳು ನಿಮ್ಮದಾಗಿದ್ದರೆ ಕೂಡಲೇ ಮನೋವೈದ್ಯರನ್ನು ಸಂಪರ್ಕಿಸಿ ಮೊಬೈಲ್ ದಾಸ್ಯದಿಂದ ಮುಕ್ತಿ ಹೊಂದುವುದು ಸೂಕ್ತ ಎಂಬುದು ಡಾ. ಮನೋಜ್ ಶರ್ಮಾ ಅವರ ಸಲಹೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.