ADVERTISEMENT

ಪೆಟ್ರೋಲಿಯಂ ಸಂಗ್ರಹಾಗಾರಗಳು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 19:30 IST
Last Updated 19 ಅಕ್ಟೋಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇತ್ತೀಚೆಗೆ ಪೆಟ್ರೋಲಿಯಂ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರಗಳ ಒಕ್ಕೂಟದ (ಒಪೆಕ್+) ಪ್ರತಿನಿಧಿಗಳು ತೈಲ ಉತ್ಪಾದನೆ ಮತ್ತು ಪೂರೈಕೆಯನ್ನು ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುವುದಾಗಿ ಘೋಷಿಸಿವೆ.

ಒಪೆಕ್‌+ನ ಈ ನಿರ್ಧಾರದಿಂದ ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಸಮಸ್ಯೆ ಆಗಲಿದೆ. ಇನ್ನಷ್ಟು ಹಣದುಬ್ಬರಕ್ಕೆ ಕಾರಣವಾಗಿ ಆರ್ಥಿಕ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ಇದರ ಹಿನ್ನೆಲೆಯಲ್ಲಿ ಭಾರತವು ತನ್ನ ಆಯಕಟ್ಟಿನ ತೈಲ ಸಂಗ್ರಹಾಗಾರಗಳನ್ನು ಭರ್ತಿಮಾಡಿಕೊಳ್ಳುವುದು ಸೂಕ್ತ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೀಸಲು ತೈಲ ಸಂಗ್ರಹಾಗಾರಗಳು

ADVERTISEMENT

ಮೀಸಲು ತೈಲ ಸಂಗ್ರಹಾಗಾರಗಳು (ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಪ್ರೊಗ್ರಾಂ– SPRP)– ಇದು, ಕಚ್ಚಾ ತೈಲ ಪೂರೈಕೆಯಲ್ಲಿ ಏರುಪೇರಾದಾಗ ಅಥವಾ ಭವಿಷ್ಯದಲ್ಲಿ ತೈಲ ಬಿಕ್ಕಟ್ಟು ಎದುರಾದಾಗ, ಅದನ್ನು ನಿಭಾಯಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಉಪಕ್ರಮ. ಎರಡು ಹಂತಗಳಲ್ಲಿ ಈ ತೈಲ ಸಂಗ್ರಹಾಗಾರಗಳನ್ನು ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರ ತನ್ನ ವಿಶೇಷ ಉದ್ದೇಶದ ಘಟಕವಾದ (SPV - Special Purpose Vehicle) ಭಾರತೀಯ ಪೆಟ್ರೊಲಿಯಂ ಮೀಸಲು ದಾಸ್ತಾನು ನಿಯಮಿತದ( ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್– ISPRL) ಮೂಲಕ ಒಟ್ಟು 5.33 ಮಿಲಿಯನ್ ಮೆಟ್ರಿಕ್ ಟನ್‌ಗಳ (MMT) ಸಂಗ್ರಹ ಸಾಮರ್ಥ್ಯದ ಪೆಟ್ರೋಲಿಯಂ ಸಂಗ್ರಹಾಗಾರಗಳನ್ನು ಈ‌ ಕೆಳಗಿನ ಮೂರು ಸ್ಥಳಗಳಲ್ಲಿ ಸ್ಥಾಪಿಸಿದೆ. ಆ ವಿವರ ಇಲ್ಲಿದೆ.

ಹಂತ-2

l ಒಡಿಶಾದ ಚಂಡಿಖೋಲೆ (4 ಮಿ.ಮೆ.ಟನ್‌) ಮತ್ತು ಕರ್ನಾಟಕದ ಪಾದೂರ್ (2.5 ಮಿ.ಮೆ.ಟನ್‌) ನಲ್ಲಿ ಒಟ್ಟು 6.5 ಮಿ.ಮೆ.ಟನ್‌ ಗಳ ಸಂಗ್ರಹ ಸಾಮರ್ಥ್ಯದ ಇನ್ನೂ ಎರಡು ಪೆಟ್ರೋಲಿಯಂ ಸಂಗ್ರಹಾಗಾರಗಳನ್ನು ಸ್ಥಾಪಿಸಿದೆ.

l ನೈಸರ್ಗಿಕ ವಿಪತ್ತು ಅಥವಾ ಯುದ್ಧ ಸೇರಿದಂತೆ, ಕಚ್ಚಾ ತೈಲ ಪೂರೈಕೆಗೆ ಅಡ್ಡಿಯಾಗುವಂತಹ ಘಟನೆಗಳು ಸಂಭವಿಸಿದಾಗ, ಆ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಈ ಕಚ್ಚಾ ತೈಲದ ಬೃಹತ್ ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ.

l ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಸಂಗ್ರಹಾಗಾರದಲ್ಲಿರುವ ಪೆಟ್ರೋಲಿಯಂ ಉತ್ಪನ್ನವನ್ನು ಬಳಸಲಾಗುತ್ತದೆ. ಅವಶ್ಯಕತೆಗೆ ಅನುಗುಣ ವಾಗಿ ಈ ಆಯಕಟ್ಟಿನ ನಿಕ್ಷೇಪಗಳಿಂದ ತೈಲವನ್ನು ಹೊರತೆಗೆಯುವ ನಿರ್ಧಾರವನ್ನು ಭಾರತ ಸರ್ಕಾರ ಕೈಗೊಳ್ಳುತ್ತದೆ.

l ಐಎಸ್‌ಆರ್‌ಪಿಎಲ್‌ ಸಂಸ್ಥೆ ಈಕಚ್ಚಾ ತೈಲ ಸಂಗ್ರಹಾಗಾರಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುತ್ತಿದೆ.

l ವಿಶೇಷ ಉದ್ದೇಶದ ಘಟಕ(ಎಸ್‌ಪಿವಿ) ಐಎಸ್‌ಪಿಆರ್‌ಎಲ್‌ ಸಂಸ್ಥೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವ್ಯಾಪ್ತಿಯಲ್ಲಿರುವ ತೈಲ ಉದ್ಯಮ ಅಭಿವೃದ್ಧಿ ಮಂಡಳಿಯ (OIDB) ನಿಯಂತ್ರಣದಲ್ಲಿರುವ ಅಂಗಸಂಸ್ಥೆಯಾಗಿದೆ.

ಪೆಟ್ರೋಲಿಯಂ ನಿಕ್ಷೇಪಗಳ ಅವಶ್ಯಕತೆ

ಸಾರಿಗೆ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ತೈಲ ಅತ್ಯವಶ್ಯಕ ವಾಗಿ ಬೇಕಿದೆ. ಆದರೆ, ಪೆಟ್ರೋಲಿಯಂ ನಿಕ್ಷೇಪಗಳ ವಿಷಯದಲ್ಲಿ ಭಾರತ ಇನ್ನೂ ಸ್ವಾವಲಂಬಿಯಾಗಿಲ್ಲ. ಈ ಕಾರಣದಿಂದಾಗಿ ತೈಲ ಬಿಕ್ಕಟ್ಟು ಎದುರಾದಾಗ, ದೇಶದ ಆರ್ಥಿಕ ಪರಿಸ್ಥಿತಿ ಏರುಪೇರಾಗದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಈ ತೈಲ ಸಂಗ್ರಹಾಗಾರಗಳನ್ನು ಸ್ಥಾಪಿಸಲಾಗಿದೆ. ಹೆಚ್ಚಿನ ತೈಲ ರಫ್ತು ಮಾಡುವ ರಾಷ್ಟ್ರಗಳೆಲ್ಲವೂ ಮಧ್ಯಪ್ರಾಚ್ಯ ರಾಷ್ಟ್ರಗಳಾಗಿದ್ದು, ಇವೆಲ್ಲ ರಾಜಕೀಯ ಅಸ್ಥಿರತೆಯ ಪ್ರದೇಶವಾಗಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ಧ, ನೈಸರ್ಗಿಕ ವಿಕೋಪಗಳಂತಹ ಅವಘಡಗಳು ಸಂಭವಿಸಿದಾಗ, ದೇಶದ ಆಂತರಿಕ ತೈಲ ಅವಶ್ಯಕತೆಗಳನ್ನು ಪೂರೈಸಲು ಕಚ್ಚಾ ತೈಲ ಸಂಗ್ರಹಗಾರಗಳನ್ನು ಹೊಂದುವುದು ಈ ಕಾರ್ಯತಂತ್ರದ ಉದ್ದೇಶವಾಗಿದೆ.

ಉದಾಹರಣೆಗೆ 1990ರಲ್ಲಿ ಕೊಲ್ಲಿ ಯುದ್ಧ ನಡೆದಾಗ ಅದರ ಪರಿಣಾಮವನ್ನು ಪಶ್ಚಿಮ ಏಷ್ಯಾ ರಾಷ್ಟ್ರಗಳು ಅನುಭವಿಸಿದವು. ಆಗ, ಭಾರತವು ಇಂಧನದ ಬಿಕ್ಕಟ್ಟನ್ನು ಎದುರಿಸಿತು. ಅದೇ ವೇಳೆ ಭಾರತದದಲ್ಲಿದ್ದ ತೈಲ ನಿಕ್ಷೇಪಗಳು ಕೇವಲ ದೇಶದಲ್ಲಿನ ಮೂರು ದಿನಗಳ ಅವಶ್ಯಕತೆಯನ್ನು ಪೂರೈಸುವಷ್ಟೇ ಶಕ್ತವಾಗಿದ್ದವು. ಭಾರತವು ಆಗಿನ ಬಿಕ್ಕಟ್ಟನ್ನು ಯಶಸ್ವಿಯಾಗಿ ಎದುರಿಸಿದರೂ, ಅದನ್ನು ಒಂದು ಪಾಠ ಎಂಬಂತೆ ಸ್ವೀಕರಿಸಿತು.

l 2019-20ರಲ್ಲಿ ತೈಲ ಬಳಕೆಯ ಪ್ರಮಾಣವನ್ನು ಗಮನಿಸಿದಾಗ, ಕೇಂದ್ರ ಸರ್ಕಾರಿ ಸ್ವಾಮ್ಯದಲ್ಲಿರುವ ಪೆಟ್ರೋಲಿಯಂ ನಿಕ್ಷೇಪಗಳು ಭಾರತದ ಕಚ್ಚಾ ತೈಲದ ಅಗತ್ಯತೆಗಳಲ್ಲಿ, ಒಂಬತ್ತೂವರೆ ದಿನಗಳಿಗಾಗುವಷ್ಟು ತೈಲವನ್ನು ಮಾತ್ರ ಪೂರೈಸಬಹುದು ಎಂದು ಅಂದಾಜಿಸಲಾಗಿದೆ. ದೇಶದಲ್ಲಿನ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳ (OMCs)ಒಟ್ಟು ಶೇಖರಣಾ ವ್ಯವಸ್ಥೆಯು ದೇಶದ ಅವಶ್ಯಕತೆಯ 64.5 ದಿನಗಳಷ್ಟನ್ನು ಪೂರೈಸಲು ಶಕ್ತವಾಗಿದೆ. ಕೇಂದ್ರದ ಪ್ರಕಾರ ಇವೆರಡನ್ನೂ ಲೆಕ್ಕ ಹಾಕಿದರೆ ಭಾರತದಲ್ಲಿ ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸಂಗ್ರಹಣೆಯ ಒಟ್ಟು ರಾಷ್ಟ್ರೀಯ ಸಾಮರ್ಥ್ಯ 74 ದಿನಗಳದ್ದಾಗಿರುತ್ತದೆ.

lಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಶಿಫಾರಸುಗಳ ಪ್ರಕಾರ ಎಲ್ಲಾ ದೇಶಗಳು 90 ದಿನಗಳ ಆಮದು ಮೌಲ್ಯದ ಕಚ್ಚಾ ತೈಲ ದಾಸ್ತಾನುಗಳನ್ನು ಹೊಂದಿರಬೇಕು. ಆದ್ದರಿಂದ ನಾವು ಉದ್ದೇಶಿತ ಗುರಿಗಿಂತ ಬಹಳಷ್ಟು ಕೆಳಗಿದ್ದೇವೆ ಎನ್ನಬಹುದು.

l ಭಾರತದ ಕಚ್ಚಾ ತೈಲದ ಒಟ್ಟು ಬೇಡಿಕೆಯಲ್ಲಿ ಶೇ 83ರಷ್ಟನ್ನು ಆಮದು ಮೂಲಕ ಪಡೆಯಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಳಿತಗಳಾಗಿ, ರೂಪಾಯಿ ಮೌಲ್ಯ ಕುಸಿತವಾದಾಗ, ಆಮದು ಮೌಲ್ಯ ಹೆಚ್ಚಾಗುತ್ತದೆ. ಆದ್ದರಿಂದ ಅಂತಹ ಹಣಕಾಸಿನ ವೈಪರೀತ್ಯಗಳನ್ನು ಮತ್ತು ವಿತ್ತೀಯ ನಷ್ಟವನ್ನು ತಪ್ಪಿಸಲು ತೈಲ ಸಂಗ್ರಹಾಗಾರಗಳು ಅತ್ಯವಶ್ಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.