ADVERTISEMENT

ಹದಿನಾರರ ಹರೆಯ, ಸಮ್ಮತಿಯ ಸಂಬಂಧಮುಗ್ಧತೆಗೆ ಮಾರಕವೇ ಪೋಕ್ಸೊ?

ಪೋಕ್ಸೊ ಕಾಯ್ದೆ

ಮಾನಸ ಬಿ.ಆರ್‌
Published 29 ಏಪ್ರಿಲ್ 2019, 19:45 IST
Last Updated 29 ಏಪ್ರಿಲ್ 2019, 19:45 IST
   

ಪ್ರೇಮ ಪತ್ರ ಬರೆಯುವುದು, ಗೆಳತಿಯನ್ನು ಪ್ರೀತಿಯಿಂದ ಮಾತನಾಡಿಸುವುದು, ಸಂದೇಶ ಕಳಿಸುವುದು ಇವೆಲ್ಲವೂ ಹದಿಹರೆಯದ ಸಹಜ ವ್ಯವಹಾರಗಳು. ಆದರೆ ಇವೆಲ್ಲವನ್ನೂ ‘ಪೋಕ್ಸೊ’ ಕಾಯ್ದೆ ಅಡಿಗೆ ತಂದು ಸಹಜತೆಯನ್ನು ಕೊಲ್ಲಲಾಗುತ್ತಿದೆ.

ಒಪ್ಪಿಗೆ ಮೇರೆಗೆ ನಡೆದ ಲೈಂಗಿಕ ಕ್ರಿಯೆಯನ್ನೂ ‘ಅಸಹಜ‘, ‘ಅತ್ಯಾಚಾರ’ ಎಂದು ಬಿಂಬಿಸಿ ಕಠಿಣ ಶಿಕ್ಷೆಗೆ ಗುರಿಮಾಡುವ ಹುನ್ನಾರಗಳು ನಡೆಯುತ್ತಿವೆ. ಪೋಕ್ಸೊ ಕಾಯ್ದೆಯಲ್ಲಿರುವ ಉತ್ತಮ ಅಂಶಗಳನ್ನು ಬದಿಗಿಟ್ಟು, ಅದರಲ್ಲಿರುವ ಕೆಲವು ಅನುಕೂಲಗಳನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ. ಕಾಲದ ಬದಲಾವಣೆಗಳಿಗೆ ತಕ್ಕಂತೆ ಪೋಕ್ಸೊ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂಬುದನ್ನು ಇತ್ತೀಚೆಗೆ ಮದ್ರಾಸ್ ಹೈಕೋರ್ಟ್‌ ನೀಡಿದ ಅಭಿಪ್ರಾಯ ಎತ್ತಿಹಿಡಿಯುತ್ತದೆ.

ಈ ಕುರಿತು ‘ಮೆಟ್ರೊ’ಗೆ ಕೆಲವು ತಜ್ಞರು ಹಾಗೂ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT
ರಾಜಲಕ್ಷ್ಮಿ ಅಂಕಲಗಿ,ವಕೀಲರು​

ಪೋಕ್ಸೊ ವ್ಯಾಪ್ತಿಗೆ ಬೇಡ

ಪರಸ್ಪರ ಒಪ್ಪಿಗೆ ಇದ್ದ ಲೈಂಗಿಕ ಕ್ರಿಯೆಯನ್ನು ಪೋಕ್ಸೊ ಕಾಯ್ದೆಯಿಂದ ಹೊರಗಿಡುವುದೇ ಒಳ್ಳೆಯದು. ನೀವು ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಎಂದು ಕೋರ್ಟ್‌ ಹೇಳುವುದಿಲ್ಲ. ಆದರೆ ಇಬ್ಬರ ಒಪ್ಪಿಗೆ ಇದ್ದಾಗ ಒಬ್ಬರಿಗೆ ಮಾತ್ರ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಹೇಳುತ್ತದೆ. ಕುಟುಂಬದ ಗೌರವಕ್ಕೆ ಕಟ್ಟು ಬಿದ್ದು ಬಾಲಕಿಯರಿಂದ ಸುಳ್ಳು ಹೇಳಿಸುವ ಪ್ರಕರಣಗಳು ಹೆಚ್ಚುತ್ತಿವೆ. ‘ಒಪ್ಪಿಗೆ’ ಎಂಬ ಪದಕ್ಕೆ ಸರಿಯಾದ ಅರ್ಥ ಕಂಡುಕೊಳ್ಳುವುದು ಮುಖ್ಯ. ಆಮಿಷ ಒಡ್ಡಿ, ಇಲ್ಲವೇ ಭಯ ಹುಟ್ಟಿಸಿ, ಬ್ಲಾಕ್‌ಮೇಲ್‌ ಮಾಡಿ ಅದನ್ನು ಒಪ್ಪಿಗೆ ಎಂದು ಹೇಳುವವರಿದ್ದಾರೆ. ತನಿಖೆ ಹಂತದಲ್ಲೇ ಎಲ್ಲವೂ ಸ್ಪಷ್ಟವಾಗಬೇಕು. ಕೋರ್ಟ್‌ಗೆ ಪ್ರಕರಣ ಬಂದ ಮೇಲೆ ವಿಚಾರಣೆಯಲ್ಲಿ ಎಲ್ಲವೂ ಮುಚ್ಚಿಹೋಗುವ ಸಾಧ್ಯತೆಗಳೇ ಹೆಚ್ಚು.

ಕವಿತಾ ರತ್ನ, ದಿ ಕನ್ಸರ್ನ್ಡ್‌ ಫಾರ್‌
ವರ್ಕಿಂಗ್‌ ಚೈಲ್ಡ್‌ ಸಂಸ್ಥೆಯ ನಿರ್ದೇಶಕರು

ಮೊಬೈಲ್‌ ಸಂದೇಶಗಳೇ ಸಾಕ್ಷಿಗಳಾಗುತ್ತಿವೆ

ಅತ್ಯಾಚಾರ ಮಾಡಿರುವ ಪ್ರಕರಣಗಳಿಗಿಂತ ಸಹಜ ಪ್ರೇಮ, ಪ್ರೀತಿ ಪ್ರಕರಣಗಳೇ‘ಪೋಕ್ಸೊ’ ಕಾಯ್ದೆ ಅಡಿ ಹೆಚ್ಚಾಗಿ ದಾಖಲಾಗಿವೆ. ಮಕ್ಕಳು ಮಾಡುವ ಸಂದೇಶಗಳು, ವಿಡಿಯೋಗಳು ಸಾಕ್ಷಿಯಾಗಿ ಕೋರ್ಟ್ ಮೆಟ್ಟಿಲೇರುತ್ತಿವೆ. ಅವರು ಸಹಜವಾಗಿ ನಡೆಸಿದ ಮಾತುಕತೆ ದೊಡ್ಡ ತಪ್ಪು ಎಂಬಂತೆ ಬಿಂಬಿತವಾಗುತ್ತವೆ. ನಿಜವಾದ ಆರೋಪಿಗಳು ಕಟಕಟೆ ಹತ್ತುತ್ತಿಲ್ಲ.

ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಸರಿಯಾಗಿದೆ. ಆಕೆಯ ಒಪ್ಪಿಗೆ ಇದೆ ಎಂದು ತಪ್ಪಿಸಿಕೊಳ್ಳುವವರನ್ನೂ ಕಡಿವಾಣ ಹಾಕಲು ವೈದ್ಯರ ಬಳಿ ಆಪ್ತ ಸಮಾಲೋಚನೆ ಮಾಡಿಸಬೇಕಿದೆ.

ಡಾ.ಪದ್ಮಿನಿ ಪ್ರಸಾದ್‌, ಲೈಂಗಿಕ ತಜ್ಞೆ

ಶಿಕ್ಷೆಗೆ ಬದಲಾಗಿ ಶಿಕ್ಷಣ ನೀಡಿ

16 ವರ್ಷದೊಳಗಿನ ಮಗುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಲೈಂಗಿಕ ಕಿರುಕುಳ ಎನ್ನಲಾಗುತ್ತದೆ. ಮದುವೆ ಕೂಡ ಆಗುವಂತಿಲ್ಲ. ಈಗ ಸಮಾಜ ಬದಲಾಗಿದೆ. ಈಗಿನ ಮಕ್ಕಳು 16 ವರ್ಷಕ್ಕೆ ದೈಹಿಕವಾದ ಸಾಮರ್ಥ್ಯಗಳನ್ನು ಪಡೆದುಕೊಂಡಿರುತ್ತಾರೆ. ಆದರೆ ಲೈಂಗಿಕ ಸಂಬಂಧಕ್ಕೆ ಇಷ್ಟು ಮಾತ್ರ ಸಾಲದು. ಮಾನಸಿಕ ಹಾಗೂ ಹಣಕಾಸಿನ ಸಾಮರ್ಥ್ಯ ಕೂಡ ಬೇಕು. 16 ವರ್ಷದ ನಂತರದ ಮಕ್ಕಳು ಒಪ್ಪಿಗೆ ಸಂಬಂಧ ಹೊಂದಿದಾಗ ಯಾಕೆ ಕಠಿಣ ಶಿಕ್ಷೆ ನೀಡಬೇಕು. ಇದನ್ನು ಪೋಕ್ಸೊಯಿಂದ ಹೊರಗಿಡುವುದೇ ಉತ್ತಮ.ಶಿಕ್ಷೆಗೆ ಬದಲಾಗಿ ಅವರಿಗೆ ಶಿಕ್ಷಣ ನೀಡುವುದು ಒಳಿತು. ಲೈಂಗಿಕ ಶಿಕ್ಷಣವೇ ಇದಕ್ಕೆಲ್ಲಾ ಮದ್ದು.

ಡಾ. ವಿನೋದ ಛೆಬ್ಬಿ,
ಲೈಂಗಿಕ ಹಾಗೂ ದಾಂಪತ್ಯ ಚಿಕಿತ್ಸಕರು

ಒಪ್ಪಿಗೆ ಇದ್ದ ಮೇಲೆ ವಯಸ್ಸುಮುಖ್ಯ ಅಲ್ಲ

ಪರಸ್ಪರ ಒಪ್ಪಿಗೆ ಸಂಬಂಧವನ್ನು ಕೋರ್ಟ್‌ ಇತ್ಯರ್ಥ ಮಾಡವಂತೆ ಇರಬಾರದು. ವೈದ್ಯರು ಅವರಿಗೆ ಸರಿಯಾದ ಮಾರ್ಗ ತೋರಬೇಕು. ಮನೆಯ ಹಿರಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು.

ಮಕ್ಕಳಿಗೆ ನಾವು ಮದುವೆಯಾಗುವ ವಯಸ್ಸಾಗಿದೆ ಎಂದು ಹೇಳುತ್ತೇವೆಯೇ ಹೊರತು, ಲೈಂಗಿಕ ಕ್ರಿಯೆ ನಡೆಸುವ ವಯಸ್ಸು ಆಗಿದೆ ಎಂದು ಹೇಳುವುದಿಲ್ಲ. ಲೈಂಗಿಕ ಕ್ರಿಯೆಗೆ ಸರಿಯಾದ ವಯಸ್ಸು ಯಾವುದು ಎಂದು ಅವರಿಗೆ ಹೇಗೆ ಗೊತ್ತಾಗಲು ಸಾಧ್ಯ?

ವಿದ್ಯಾರ್ಥಿಗಳ ಅಭಿಪ್ರಾಯ

ಒಪ್ಪಿತ ಸಂಬಂಧ ತಪ್ಪಲ್ಲ

ಯಾರು ನಮ್ಮ ನಿಜವಾದ ಹಿತೈಷಿಗಳು ಎಂದು ಅರ್ಥಮಾಡಿಕೊಳ್ಳಬಹುದು.16 ವರ್ಷಕ್ಕೆ ಸಾಕಷ್ಟು ತಿಳಿವಳಿಕೆ ಬಂದಿರುತ್ತದೆ. ಆದ್ದರಿಂದ ಆ ನಂತರದ ಒಪ್ಪಿತ ಸಂಬಂಧ ತಪ್ಪಲ್ಲ. ಈಗಿನ ಹಡುಗ ಹುಡುಗಿಯರು ಮೊದಲು ಡೇಟಿಂಗ್ ಮಾಡುತ್ತಾರೆ. ನಂತರ ರಿಲೇಶನ್‌ಪಿಪ್‌ಗೆ ಹೋಗುತ್ತಾರೆ.

–ಚೇತನ್‌, ಈಸ್ಟ್‌ ಪಾಯಿಂಟ್‌ ಹೈಯರ್‌ ಎಜುಕೇಷನ್‌, ಅವಲಹಳ್ಳಿ

ಸೇಫ್‌ ಅಲ್ಲ

ವಯಸ್ಸು ಎಷ್ಟೇ ಆಗಿದ್ದರೂ, ಮದುವೆಯಾಗದೇ ಸಂಬಂಧದ ಬಗ್ಗೆ ಯೋಚನೆ ಮಾಡುವುದು ಸೇಫ್‌ ಅಲ್ಲ. ಅದರಿಂದ ಅಪಾಯವೇ ಹೆಚ್ಚು. ಕೋರ್ಟ್‌ನಲ್ಲಿ, ಒಪ್ಪಿತ ಸಂಬಂಧ ಅಲ್ಲ ಎಂದು ಹೇಳಿಬಿಟ್ಟರೆ ನಮ್ಮ ಗತಿ ಏನು?

–ನಾಗೇಂದ್ರ, ಬಾಲಾಜಿ ಕಾನೂನು ಕಾಲೇಜು

ಸಹಜ ಪ್ರೀತಿ ನರಳುವುದು ಬೇಡ

ಯಾರಿಗೂ ತೊಂದರೆಯಾಗದ ಒಪ್ಪಿತ ಸಂಬಂಧಗಳು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸಿಲುಕುವುದು ಸರಿಯಲ್ಲ. ಪೋಕ್ಸೊದಿಂದ ಸಹಜ ಪ್ರೀತಿಯನ್ನೂ ನರಳಿಸುವ ಕೆಲಸ ಮಾಡಲಾಗುತ್ತಿದೆ.

–ವಿನಯ್‌, ಸರ್ವೋದಯ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.